ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಿಲ್ ಲಾಡ್ ಜೊತೆ ರೆಡ್ಡಿನಂಟು ಏನು?

Last Updated 25 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬಳ್ಳಾರಿ:  ಮಾಜಿ ಸಚಿವ ಜಿ. ಜನಾರ್ದನರೆಡ್ಡಿ ಒಡೆತನದ ಓಬಳಾಪುರಂ ಮೈನಿಂಗ್ ಕಂಪೆನಿ (ಓಎಂಸಿ) ನಡೆಸಿದೆ ಎನ್ನಲಾದ ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸುತ್ತಿರುವ ಸಿಬಿಐ, ರೆಡ್ಡಿ ಆಪ್ತರಾಗಿರುವ ಪ್ರಮುಖರನ್ನು ವಿಚಾರಣೆಗೆ ಒಳಪಡಿಸುತ್ತಿದ್ದು, ಕಾಂಗ್ರೆಸ್ ಮುಖಂಡ ಅನಿಲ್ ಲಾಡ್ ಜತೆ ಈ ಮೊದಲು ರೆಡ್ಡಿ ಹೊಂದಿರುವ ನಂಟಿನ ಕುರಿತೂ ಮಹತ್ವದ ಮಾಹಿತಿ ಸಂಗ್ರಹಿಸುತ್ತಿದೆ ಎನ್ನಲಾಗಿದೆ.

ಅಕ್ರಮ ಅದಿರು ಸಾಗಣೆ ಮತ್ತು ರಿಸ್ಕ್ ಟ್ರಾನ್ಸ್‌ಪೋರ್ಟ್‌ನಲ್ಲಿ ನೆರವು ನೀಡಿರುವ ಸಂಡೂರಿನ ಎಸ್‌ಟಿಡಿ ಮಂಜುನಾಥ, ಹೊಡಪೇಟೆಯ ಖಾರದಪುಡಿ ಮಹೇಶ ಮತ್ತು ಸ್ವಸ್ತಿಕ್ ನಾಗರಾಜ್ ಅವರ ಮನೆಗಳ ಮೇಲೆ ಕಳೆದ ಸೋಮವಾರ ದಾಳಿ ನಡೆಸಿದ್ದ ಸಿಬಿಐ, ಅವರೆಲ್ಲರಿಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿತ್ತು.

ನೋಟಿಸ್ ತಲುಪಿದ ಮಾರನೇ ದಿನವೇ ಎಸ್‌ಟಿಡಿ ಮಂಜುನಾಥ, ಮೂರು ದಿನಗಳ ಬಳಿಕ ಸ್ವಸ್ತಿಕ್ ನಾಗರಾಜ್ ಹೈದರಾಬಾದ್‌ಗೆ ಖುದ್ದಾಗಿ ತೆರಳಿ, ಸಿಬಿಐ ಅಧಿಕಾರಿಗಳ ಪ್ರಶ್ನೆಗಳಿಗೆ ಉತ್ತರಿಸಿ ಬಂದಿದ್ದಾರೆ.
ಆದರೆ, ರೆಡ್ಡಿ ಹೊಂದಿದ್ದ ಹಣಕಾಸಿನ ವ್ಯವಹಾರಗಳನ್ನು ಕಂಪ್ಯೂಟರ್‌ನಲ್ಲಿ ದಾಖಲಿಸಿದ್ದ ಖಾರದಪುಡಿ ಮಹೇಶ ಈವರೆಗೆ ವಿಚಾರಣೆಗೆ ಹಾಜರಾಗದೆ ನಾಪತ್ತೆಯಾಗಿದ್ದಾರೆ.

ಲಾಡ್ ಕುರಿತು ಪ್ರಶ್ನೆ:  ಸೆ.20ರಂದು ಹೈದರಾಬಾದ್‌ನ ಸಿಬಿಐ ಕಚೇರಿಗೆ ತೆರಳಿದ್ದ ಎಸ್‌ಟಿಡಿ ಮಂಜುನಾಥ ಅವರನ್ನು ಅಕ್ರಮ ಗಣಿಗಾರಿಕೆ ಕುರಿತು ಪ್ರಶ್ನಿಸಿರುವ ಅಧಿಕಾರಿಗಳು, `ಜನಾರ್ದನರೆಡ್ಡಿ ಪರಿಚಯ ಹೇಗಾಯ್ತು?, ನೀವು ಅನಿಲ್ ಲಾಡ್ ಜತೆಗಿನ ನಂಟನ್ನು ಕಳೆದುಕೊಂಡಿದ್ದು ಏಕೆ?, ರೆಡ್ಡಿಗೂ ಅನಿಲ್ ಲಾಡ್ ನಡುವೆ ವ್ಯಾವಹಾರಿಕ ಸಂಬಂಧವಿತ್ತೇ?~ ಎಂಬ ಪ್ರಶ್ನೆಗಳನ್ನೆಲ್ಲ ಕೇಳಿ ವಿವರ ಪಡೆದಿದ್ದಾರೆ.

ವಾಸ್ತವವಾಗಿ, `ಸಚಿವರಾಗುವುದಕ್ಕೆ ಮುನ್ನ ಜನಾರ್ದನರೆಡ್ಡಿ ಅವರು ಅನಿಲ್ ಲಾಡ್ ಜತೆಗೂಡಿ ಗಣಿಗಾರಿಕೆ ನಡೆಸಿದ್ದರು~ ಎಂಬ ಮಾಹಿತಿ ಪಡೆದಿರುವ ಸಿಬಿಐ, ಜನಾರ್ದನರೆಡ್ಡಿ ಗಣಿ ವ್ಯವಹಾರ ಆರಂಭಿಸುವ ಸಂದರ್ಭ ಸಂಡೂರಿನ ಲಾಡ್ ನಂಟನ್ನು ಹೊಂದಿದ್ದರೇ? ಎಂಬುದನ್ನೂ ಪರಿಶೀಲಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಏತನ್ಮಧ್ಯೆ, ತಮ್ಮೆದುರು ಹಾಜರಾದ ಹೊಸಪೇಟೆಯ ಸ್ವಸ್ತಿಕ್ ನಾಗರಾಜ್ ಅವರನ್ನು ಸತತ ಎರಡು ದಿನಗಳ ಕಾಲ ವಿಚಾರಣೆಗೆ ಒಳಪಡಿಸಿರುವ ಅಧಿಕಾರಿಗಳು, ಮಹತ್ವದ ಮಾಹಿತಿಗಳನ್ನು ಕಲೆ ಹಾಕಿದ್ದಾರೆ.

ಆದರೆ, ಖಾರದಪುಡಿ ಮಹೇಶ್ ಮಾತ್ರ ನೋಟಿಸ್ ನೀಡಿದ್ದರೂ ಈವರೆಗೆ ಹೈದರಾಬಾದ್‌ಗೆ ತೆರಳಿ ವಿಚಾರಣೆಗೆ ಒಳಪಡುವ ಗೋಜಿಗೂ ಹೋಗಿಲ್ಲ. ಅಲ್ಲದೆ, ಸಿಬಿಐ ತೀವ್ರ ಶೋಧ ನಡೆಸುತ್ತಿರುವ ರೆಡ್ಡಿ ಆಪ್ತ ಸಹಾಯಕ ಅಲಿಖಾನ್ ಕೂಡ ಈವರೆಗೆ ಕಣ್ಮರೆಯಾಗಿದ್ದು, ದೇಶ ಬಿಟ್ಟು ಹೋಗಿದ್ದಾನೆ ಎನ್ನಲಾಗಿದೆ.

ಮುಂದುವರಿದ ತಪಾಸಣೆ:  ನಗರದಲ್ಲಿರುವ ಓಬಳಾಪುರಂ ಮೈನಿಂಗ್ ಕಂಪೆನಿಯ ಕಚೇರಿಯ ಮೇಲೆ ಭಾನುವಾರ ಬೆಳಿಗ್ಗೆ ದಾಳಿ ನಡೆಸಿರುವ ಸಿಬಿಐ ತಂಡ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದೆ.

ಡಿಐಜಿ ನೇತೃತ್ವದಲ್ಲಿ ಆಗಮಿಸಿರುವ ಸಿಬಿಐನ ಮೂರು ತಂಡಗಳು ನಗರದಲ್ಲಿ ಬೀಡು ಬಿಟ್ಟಿದ್ದು, ಒಂದು ತಂಡ ಬೆಳಿಗ್ಗೆ ಜನಾರ್ದನರೆಡ್ಡಿ ಅವರ ನಿವಾಸದ ಬಳಿ ಇರುವ ಓಎಂಸಿ ಕಚೇರಿಗೆ ತೆರಳಿ ಕೆಲವು ಮಹತ್ವದ ಮಾಹಿತಿ ಒಳಗೊಂಡಿರುವ ಹಾರ್ಡ್ ಡಿಸ್ಕ್ ಹಾಗೂ ಕೆಲವು ದಾಖಲೆಗಳನ್ನು ವಶಪಡಿಸಿಕೊಂಡು ತೆರಳಿದ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT