ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಿವಾಸಿ ಕನ್ನಡಿಗರಿಂದ ನಾಟಕ ಪ್ರದರ್ಶನ

Last Updated 14 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಕಲೆ, ಕಲಾಸಕ್ತಿ ಮತ್ತು ನಾಟಕದ ಗೀಳು ಹಚ್ಚಿಕೊಂಡವರಿಗೆ ಅದರ ಗೀಳು ಅಷ್ಟು ಸುಲಭವಾಗಿ ಬಿಡುವುದಿಲ್ಲ. ಈಗ ಅಮೆರಿಕದಲ್ಲಿ ನೆಲೆಸಿದ್ದರೂ ನಾಟಕದ ಪ್ರೀತಿಯನ್ನು ಕಲಾವಿದ ವಲ್ಲೆಶ ಶಾಸ್ತ್ರಿ ಉಳಿಸಿಕೊಂಡು ಬಂದಿದ್ದಾರೆ. ವೃತ್ತಿಯಲ್ಲಿ ಅವರು ಕಂಪ್ಯೂಟರ್ ಕನ್ಸಲ್ಟೆಂಟ್.

ಮೊದಲಿನಿಂದಲೂ ನಾಟಕದಲ್ಲಿ ಆಸಕ್ತಿ ಇದ್ದ ಅವರು ಅಮೆರಿಕದಲ್ಲಿ ಹೋಗಿ ನೆಲೆಸಿದರೂ ಅಲ್ಲಿರುವ ಕನ್ನಡಿಗರಿಗಾಗಿ ಮತ್ತು ಅಮೆರಿಕೆಯಲ್ಲಿ ಕನ್ನಡದ ಕಂಪನ್ನು ಹಬ್ಬಿಸುವ ದೃಷ್ಟಿಯಿಂದ ತಮ್ಮದೇ ಆದ ಹವ್ಯಾಸಿ ನಾಟಕ ತಂಡವನ್ನು ರಚಿಸಿ ನಾಟಕಗಳನ್ನು ಪ್ರದರ್ಶಿಸುತ್ತ ಬಂದಿದ್ದಾರೆ.

ಮೊದಮೊದಲು ಲಾಸ್ ಏಂಜಲೀಸ್ ಕನ್ನಡ ಸಂಘದ ಹಲವಾರು ಕಾರ್ಯಕ್ರಮಗಳಿಗೆ ನಾಟಕಗಳು, ಪ್ರಹಸನಗಳನ್ನು ನೀಡುತ್ತ ಬಂದ ಸ್ನೇಹಿತರ ಗುಂಪಿಗೆ ನಾಟಕದ ಗೀಳನ್ನು ಹಚ್ಚಿಸಿದ ಶಾಸ್ತ್ರಿ ಅವರು ಅದಕ್ಕೊಂದು ರೂಪು ನೀಡಿ  `ರಂಗಧ್ವನಿ' ಸಂಸ್ಥೆಯನ್ನು ಹುಟ್ಟುಹಾಕಿದರು.

ವಲ್ಲೆಶ ಶಾಸ್ತ್ರಿ ಪ್ರೌಢಶಾಲೆಯಲ್ಲಿದ್ದಾಗಲೇ ಹತ್ತಿದ ನಾಟಕದ ಗೀಳು ಬೆಂಗಳೂರು ಬಂದಾಗಲೂ ಬಿಡಲಿಲ್ಲ. ಅಲ್ಲಿಂದ ಬೆಂಗಳೂರಿನಲ್ಲಿ `ಬೆನಕ' ತಂಡದ ಸಂಗ. ಅಲ್ಲಿ ಸಾಕಷ್ಟು ಕಲಿತರು. ನಂತರ ಮಧ್ಯಪ್ರಾಚ್ಯ ದೇಶಗಳಿಗೆ ಹೊರಟು ನಿಂತಾಗ ನಾಟಕದ ಚಟುವಟಿಕೆಗಳು ಸ್ವಲ್ಪ ವೇಳೆ ಸ್ಥಗಿತವಾಗಿತ್ತು.

ಅಲ್ಲಿಂದ ಮುಂದೆ ಅಮೆರಿಕೆಗೆ ಪಯಣ. ಅಲ್ಲಿ ಹೋಗಿ ನೆಲೆಸಿದಾಗ, ಅಮೆರಿಕ ಕನ್ನಡಿಗರ ಕನ್ನಡಾಭಿಮಾನವು ಕೈ ಬಿಟ್ಟಿದ್ದ ನಾಟಕದ ಗೀಳನ್ನು ಮತ್ತೆ ಹತ್ತಲು ಪ್ರೇರಕವಾಯಿತು. ಅಲ್ಲಿಂದ ಅವರ ಆಸಕ್ತಿಯ ನಾಟಕ ಅಭಿರುಚಿಗೆ ಜೀವಂತಿಕೆ ಬಂದಿತು. ಅಲ್ಲಿಂದ ಅನೇಕ ನಾಟಕಗಳನ್ನು ಪ್ರಸ್ತುತ ಪಡಿಸುತ್ತ ಬಂದಿದ್ದಾರೆ.
ಶಾಸ್ತ್ರಿ ಅವರು ಸ್ಥಾಪಿಸಿದ `ರಂಗಧ್ವನಿ' ನಾಟಕ ತಂಡವು ಇಲ್ಲಿಯವರೆಗೆ `ಹಾಲಿವುಡ್‌ನಲ್ಲಿ ಯಮ', `ಯಮನ ಕಾಲ್ ಸೆಂಟರ್', `ಕೃಷ್ಣ ಸಂಧಾನ', `ಜೋಕುಮಾರಸ್ವಾಮಿ', `ಪಶ್ಚಾತ್ತಾಪ', `ತಿರುಗೇಟು' ನಾಟಕಗಳನ್ನು ಅಮೆರಿಕೆದ ಹಲವಾರು ನಗರಗಳಲ್ಲಿ ಮತ್ತು ಕನ್ನಡ ಸಮ್ಮೇಳನಗಳಲ್ಲಿ ಪ್ರದರ್ಶಿಸುತ್ತ ಬಂದಿದೆ.

`ರಂಗಧ್ವನಿ' ನಾಟಕ ತಂಡದಲ್ಲಿರುವ ಸದಸ್ಯರೆಲ್ಲರೂ ಹವ್ಯಾಸಿ ಕಲಾವಿದರು. ತಮ್ಮ ಕೆಲಸ ಕಾರ್ಯಗಳ ಮಧ್ಯೆಯೂ ನಾಟಕಕ್ಕೆ ಸಮಯವನ್ನು ಹೊಂದಿಸಿಕೊಂಡು, ಅಭ್ಯಾಸ ಮತ್ತು ಪ್ರದರ್ಶನದಲ್ಲಿ ಆಸಕ್ತಿಯಿಂದ ಭಾಗವಹಿಸುತ್ತಾರೆ.

`ಮೊದಲಿಗೆ ಇದ್ದ ನಾಟಕದ ಗೀಳು ಎಲ್ಲೋ ಕೈ ತಪ್ಪಿ ಹೋಗಿದೆ ಎಂಬ ನೋವು ನನ್ನ ಕಾಡುತ್ತಿತ್ತು. ಅಮೆರಿಕದಲ್ಲಿ ಹೋಗಿ ನೆಲೆಸಿದ ನಂತರ ನಮ್ಮ ನಾಡಿನಿಂದ ಮತ್ತು ನಮ್ಮವರಿಂದ ದೂರ ಹೋದ ಅನುಭವವಾಗುತ್ತಿತ್ತು. ನನ್ನಂತೆಯೇ ಕನ್ನಡಾಭಿಮಾನವನ್ನು ಹೊಂದಿದ ಅನೇಕರು ನನಗೆ ಸಿಕ್ಕಿದರು. ಆಗ, ನನ್ನ ನಾಟಕಕ್ಕೆ ಮರುಜೀವ ನೀಡುವ ಯೋಚನೆ ಮಾಡಿದೆ. ನನ್ನಂತೆಯೇ ರಂಗಭೂಮಿ, ನಾಟಕ, ಬಣ್ಣ ಎಂದು ಗೀಳು ಹಚ್ಚಿಸಿ ಈ `ರಂಗಧ್ವನಿ' ನಾಟಕ ತಂಡವನ್ನು ಕಟ್ಟಿದೆ. ಈಗ ನಮ್ಮ ಕೆಲಸದ ಮಧ್ಯೆಯೂ ನಾಟಕವನ್ನು ಅಭ್ಯಾಸ ಮಾಡುತ್ತ ನಾಟಕವನ್ನು ಪ್ರದರ್ಶಿಸುತ್ತಿರುವುದು ಸಂತಸ ತಂದಿದೆ' ಎಂದು ವಲ್ಲೆಶ ಶಾಸ್ತ್ರಿ ಹರ್ಷ ವ್ಯಕ್ತಪಡಿಸಿದರು.

ಈಗ ಈ ಅನಿವಾಸಿ ಕನ್ನಡಿಗರ `ರಂಗಧ್ವನಿ' ತಂಡ ನಗರದಲ್ಲಿ ನಾಟಕಗಳನ್ನು ಪ್ರದರ್ಶಿಸಲಿದೆ. ಜೇಮ್ಸ  ಹಾರ್ಡೀಚೇಸ್ ಅವರ ಇಂಗ್ಲಿಷ್ ಕಥೆ `ಛ್ಟಿಛಿ ಜಿ ಚ್ಝಡಿ  ಟ್ಟಜ್ಚಿಛಿ ಠಿಜ' ಆಧರಿಸಿದ `ತಿರುಗೇಟು' ಹಾಗೂ ಇಂದಿನ ಐಟಿ ಮತ್ತು ಬಿಟಿ ಯುಗಕ್ಕೆ ಯಮನೂ ಹೊರತಲ್ಲ ಎಂದು ಬಿಂಬಿಸುವ ಹಾಸ್ಯ ನಾಟಕ `ಯಮನ ಕಾಲ್ ಸೆಂಟರ್' ಈ ಎರಡೂ ನಾಟಕಗಳು ಪ್ರದರ್ಶಿತವಾಗಲಿವೆ. ಈ ಎರಡೂ ನಾಟಕಗಳನ್ನು ವಲ್ಲೆಶ ಶಾಸ್ತ್ರಿ ನಿರ್ದೇಶಿಸಿದ್ದಾರೆ. ಸ್ಥಳ: ಕೆ.ಎಚ್.ಕಲಾಸೌಧ, ರಾಮಾಂಜನೇಯ ಗುಡ್ಡ, ಗವಿಪುರ ಬಡಾವಣೆ. ಪ್ರದರ್ಶನ: ಡಿ. 15 ಮತ್ತು 16.
ಸಮಯ: ಸಂಜೆ 4-ತಿರುಗೇಟು, ಸಂಜೆ 7-ಯಮನ ಕಾಲ್ ಸೆಂಟರ್. ಪ್ರವೇಶ ದರ- 200 ರೂಪಾಯಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT