ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಿಶ್ಚಿತತೆ: ಚಿನ್ನ ಇನ್ನಷ್ಟು ದುಬಾರಿ?

Last Updated 17 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಮಧ್ಯಪ್ರಾಚ್ಯದಲ್ಲಿನ ರಾಜಕೀಯ ಅನಿಶ್ಚಿತತೆಯ ಕಾರಣಕ್ಕೆ ಚಿನ್ನದ ಬೆಲೆ ಏರಿಕೆಯಾಗುವ ಸಾಧ್ಯತೆಗಳಿದ್ದರೂ, ಅದರಿಂದ ಭಾರತೀಯರ ಚಿನ್ನದ ಖರೀದಿ ಆಸಕ್ತಿ ಕಡಿಮೆಯಾಗಲಾರದು ಎಂದು ವಿಶ್ವ ಚಿನ್ನ ಮಂಡಳಿ (ಡಬ್ಲ್ಯುಜಿಸಿ) ಅಭಿಪ್ರಾಯಪಟ್ಟಿದೆ.

ಭಾರತದಲ್ಲಿನ ಚಿನ್ನದ ಬೇಡಿಕೆಯು ಈ ವರ್ಷ ಸಕಾರಾತ್ಮಕವಾಗಿಯೇ ಇರಲಿದೆ. ಕಳೆದ ವರ್ಷದಷ್ಟು ಅಥವಾ ಅದಕ್ಕಿಂತ ಕೊಂಚ ಹೆಚ್ಚಿಗೆ ಇರಬಹುದು ಎಂದು `ಡಬ್ಲ್ಯುಜಿಸಿ~ಯ ಮಧ್ಯಪ್ರಾಚ್ಯ ಮತ್ತು ಭಾರತದ  ವ್ಯವಸ್ಥಾಪಕ ನಿರ್ದೇಶಕ ಅಜಯ್ ಮಿತ್ರಾ ಹೇಳಿದ್ದಾರೆ.

ಚಿನ್ನದ ವಹಿವಾಟಿಗೆ ಸಂಬಂಧಿಸಿದ ವರದಿ ಬಿಡುಗಡೆ ಮಾಡಿ ಅವರು ಮಾತನಾಡುತ್ತಿದ್ದರು. ಇಸ್ರೇಲ್ ಮತ್ತು ಇರಾನ್ ಮಧ್ಯೆ ಉದ್ಭವಿಸಿರುವ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆಯಲ್ಲಿ, `ಸುರಕ್ಷಿತ ಸ್ವರ್ಗ~ ಎಂದು ಪರಿಗಣಿಸಿರುವ ಚಿನ್ನದಲ್ಲಿ  ಹಣ ತೊಡಗಿಸಲು ಹೂಡಿಕೆದಾರರು ಮುಂದಾಗಲಿದ್ದಾರೆ. ಇದರಿಂದ ಚಿನ್ನಕ್ಕೆ ಬೇಡಿಕೆ ಹೆಚ್ಚಬಹುದು ಎಂದು ನಿರೀಕ್ಷಿಸಲಾಗಿದೆ. ಸದ್ಯಕ್ಕೆ ದೇಶಿ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಂಗಳಿಗೆ ್ಙ 28,340ರ ಆಸುಪಾಸಿನಲ್ಲಿ ಇದೆ.

ಇಟಿಎಫ್ ಜನಪ್ರಿಯತೆ: ಭೌತಿಕ ರೂಪದಲ್ಲಿ ಚಿನ್ನ ಖರೀದಿಸದೇ   ಆನ್‌ಲೈನ್‌ನಲ್ಲಿ ಯೂನಿಟ್ ಲೆಕ್ಕದಲ್ಲಿ ಚಿನ್ನ ಖರೀದಿಸುವ (ಇಟಿಎಫ್) ಪ್ರವೃತ್ತಿಯೂ ಇತ್ತೀಚೆಗೆ ಹೆಚ್ಚು ಜನಪ್ರಿಯವಾಗುತ್ತಿದೆ. ಇಂತಹ ಹೂಡಿಕೆಯಲ್ಲಿ ಉದ್ದಿಮೆ ಸಂಸ್ಥೆಗಳು ಶೇ 50ರಷ್ಟು ಪಾಲು ಹೊಂದಿವೆ. ತಮ್ಮ ಬಳಿಯ ಹೆಚ್ಚುವರಿ ಹಣವನ್ನು ಕಾರ್ಪೊರೇಟ್ ಸಂಸ್ಥೆಗಳು ಹೆಚ್ಚಿನ ಲಾಭದ ಉದ್ದೇಶಕ್ಕೆ `ಇಟಿಎಫ್~ನಲ್ಲಿ ತೊಡಗಿಸುತ್ತಿವೆ. 2012ರಲ್ಲಿಯೂ ಈ ಪ್ರವೃತ್ತಿ ಮುಂದುವರೆಯಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT