ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಿಷ್ಟಪದ್ಧತಿ ತೊಲಗಬೇಕು

Last Updated 3 ಜನವರಿ 2012, 5:55 IST
ಅಕ್ಷರ ಗಾತ್ರ

ಡಂಬಳ: ಸಾಮಾಜಿಕ ಅನಿಷ್ಟ ಪದ್ಧತಿ ಯಾಗಿರುವ ಮಡೆಸ್ನಾನವನ್ನು ವಿರೋಧಿಸಿ ಸಮಾಜ ಪರಿವರ್ತನೆ ಮಾಡಬೇಕಾಗಿದ್ದ ಕೆಲ ಮಠಾಧೀಶರು, ಮಂತ್ರಿಗಳು ಪ್ರೋತ್ಸಾಹ ನೀಡುತ್ತಿರುವುದು ದುರ್ದೈವದ ಸಂಗತಿ ಎಂದು ತೋಂಟದಾರ್ಯ ಮಠದ ಡಾ. ಸಿದ್ಧಲಿಂಗ ಸ್ವಾಮೀಜಿ ಹೇಳಿದರು.

ಸ್ಥಳೀಯ ತೋಂಟದಾರ್ಯ ಕಲಾ ಭವನದಲ್ಲಿ ಇತ್ತೀಚೆಗೆ ಮದರ್ಧನಾರೀಶ್ವರ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆ ಹಾಗೂ ಜಾತ್ರಾ ಮಹೋತ್ಸವದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಜಾತ್ಯತೀತ ರಾಷ್ಟ್ರ ನಿರ್ಮಾಣ ಮಾಡುವಲ್ಲಿ ಮಠಾಧೀಶರು, ರಾಜಕಾರಣಿಗಳು, ಸಾಮಾಜಿಕ ಕಾರ್ಯಕರ್ತರು ಶ್ರಮಿಸಬೇಕು ಸಲಹೆ ನೀಡಿದರು.

ಕಳೆದ ಐದನೂರು ವರ್ಷಗಳಿಂದಲೂ ಜಾತಿ ವ್ಯವಸ್ಥೆಯಿಂದ ಮೇಲ್ವರ್ಗದವರ ಶೋಷಣೆ ನಡೆಯುತ್ತಿದೆ. ಜಾತಿ, ಪಾಪದ ವ್ಯವಸ್ಥೆ, ಮೂಢನಂಬಿಕೆಗಳನ್ನು ಸೃಷ್ಟಿಸಿ, ಪ್ರಾಣಿ ಬಲಿ, ಬೆತ್ತಲೆ ಸೇವೆ, ನರಬಲಿ, ಅನಿಷ್ಟ ಪದ್ಧತಿಗಳನ್ನು ಆಚರಣೆ ಮಾಡಿ ಕೆಳವರ್ಗದವರು ಮೌಢ್ಯಗಳನ್ನು ಆಚರಿಸುವಂತೆ ಕುಮ್ಮಕ್ಕು ನೀಡಲಾಗುತ್ತಿರುವುದು ದುರಂತದ ಸಂಗತಿ ಎಂದರು. 

ಈ ಹಿಂದೆ ಹಾವನೂರ ವರದಿಯನ್ನೇ ಬೆಂಕಿಹಚ್ಚಿ ಸುಟ್ಟಂತಹ ಭೀಮಣ್ಣ ಖಂಡ್ರೆಯನ್ನು ಅಖಿಲ ಭಾರತ ವೀರಶೈವ ಮಹಾಸಭಾದಿಂದ ಹೊರಹಾಕಿರುವುದು ಸರಕಾರದ ಉತ್ತಮ ಕಾರ್ಯ ಹಾಗೂ ಸತ್ಯದ ಜಯ ಎಂದರು. ಜಾತಿ ವ್ಯವಸ್ಥೆ ದೂರ ಮಾಡುವಲ್ಲಿ ಬಾಲ್ಕಿ ಹಿರೇಮಠದ ಸ್ವಾಮೀಜಿ ಹಿಂದುಳಿದವರಿಗೂ ಲಿಂಗದೀಕ್ಷೆ ನೀಡಿ ಬಸವಣ್ಣನ ಆರಾಧನೆ ಮಾಡುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಬಾಲ್ಕಿ ಮಠ ಕನ್ನಡ ಭಾಷೆ, ವಚನ ಸಾಹಿತ್ಯ, ಕಲೆ, ಸಂಸ್ಕೃತಿ ಸೇರಿದಂತೆ ನಾಡಿಗೆ ಅಪಾರ ಕೊಡುಗೆ ನೀಡಿದೆ ಎಂದು ಹೇಳಿದರು.

ಜಾತ್ರೆಗಳು ಜನಪರವಾಗಿಸಿ ಜಾತಿ, ಮತ ದೂರವಾಗಿಸಿ ರೊಟ್ಟಿ ದಾಸೋಹ ಸೇರಿದಂತೆ ಜ್ಞಾನ ಸಂಪತ್ತು ಹೆಚ್ಚಿಸಿ ನೆಲ-ಜಲ-ಕಲೆ ಸಾಹಿತ್ಯದ ತೇರು ಎಳೆಯುವಂತಾಗಬೇಕು ಎಂದು ಹೇಳಿದರು.

ಜಿ.ವಿ. ಹಿರೇಮಠ ಅವರು 2011ರ ಜಾತ್ರಾ ಮಹೋತ್ಸವದ ಅಡಾವೆ ಪತ್ರಿಕೆ ಓದಿದರು. ಪ್ರಸಕ್ತ ಸಾಲಿನ ಜಾತ್ರಾ ಮಹೋತ್ಸವದ ಅಧ್ಯಕ್ಷರಾಗಿ ಎನ್.ಟಿ. ಪ್ಯಾಟಿ, ಉಪಾಧ್ಯಕ್ಷರಾಗಿ ಬಸವಂತಪ್ಪ ಮರಿಬಸಪ್ಪ ಪಟ್ಟಣಶೆಟ್ರ, ಕಾರ್ಯದರ್ಶಿಯಾಗಿ ಷಣ್ಮುಖ ಪಟ್ಟಣಶೆಟ್ರ ಅವರನ್ನು ನೇಮಕ ಮಾಡಲಾಯಿತು.

ಈ ಸಂದರ್ಭದಲ್ಲಿ ಮರಿತೆಮ್ಮಪ್ಪ ಆಡಮ್ಮನವರ, ವಿ.ಎಸ್. ಯರಾಶಿ, ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಎಸ್. ಬಂಡಿ, ಗೋಣಿಬಸಪ್ಪ ಕೊರ್ಲಹಳ್ಳಿ, ಡಿ.ಬಿ. ಡೋಲಿ, ಮಹ್ಮದಗೌಸ್ ತಾಂಬೋಟಿ, ಚನ್ನಪ್ಪ ಪ್ಯಾಟಿ, ಈಶಣ್ಣ ಪಟ್ಟಣಶೆಟ್ಟರ, ಶೇಖಪ್ಪ ಬುಗಟಿ, ಮರಿಯಪ್ಪ ಸಿದ್ದಣ್ಣವರ, ಕೆ.ಎನ್. ದೊಡ್ಡಮನಿ, ಕುಬೇರ ಬಂಡಿ, ಚಂದ್ರಶೇಖರಪ್ಪ ಗಡಗಿ ಮತ್ತಿತರರು ಹಾಜರಿದ್ದರು.

ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ
ಗದಗ: ವಿಶ್ವರಾಧ್ಯ ಜನಕಲ್ಯಾಣ ಪ್ರತಿಷ್ಠಾನ ವತಿಯಿಂದ `ಸ್ಕಂದ-ಗೋತ್ರ ಪುರುಷ~ ವಿಷಯ ಕುರಿತು ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣವನ್ನು ಬೆಂಗಳೂರಿನ  ಗುಬ್ಬಿ ತೋಟದಪ್ಪ ಧರ್ಮಸಂಸ್ಥೆ ಶತಮಾನೋತ್ಸವ ಸ್ಮಾರಕ ಸಭಾಂಗಣದಲ್ಲಿ ಇದೇ 6 ರಿಂದ 8 ರವರೆಗೆ ಏರ್ಪಡಿಸಲಾಗಿದೆ ಎಂದು ವಾರಣಾಸಿಯ ಜಂಗಮವಾಡಿ ಮಠದ ಜಗದ್ಗುರು ವಿಶ್ವಾರಾಧ್ಯ ಜನಕಲ್ಯಾಣ ಪ್ರತಿಷ್ಠಾನದ ಡಾ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು ಜ.6ರಂದು ನಡೆಯಲಿರುವ ವಿಚಾರ ಸಂಕಿರಣವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಗೋವಿಂದ ಕಾರಜೋಳ ಉದ್ಘಾಟಿಸಲಿದ್ದು, ಮಾಜಿ ಸಿಎಂ ಯಡಿ ಯೂರಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT