ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಕಂಪ ಬೇಡ, ಆತ್ಮವಿಶ್ವಾಸ ತುಂಬಿ

*ಅಂಗವಿಕಲರ ಮನದಾಳದ ಮಾತು *ಜಿಲ್ಲೆಯಲ್ಲಿ 31,411 ಮಂದಿ ಅಂಗವಿಕಲರು *ಸ್ವಾವಲಂಬಿ ಜೀವನಕ್ಕೆ ಸಹಾಯ ಹಸ್ತ ನೀಡಿ
Last Updated 3 ಡಿಸೆಂಬರ್ 2013, 7:07 IST
ಅಕ್ಷರ ಗಾತ್ರ

ಮಂಡ್ಯ: ತಾತ್ಸಾರದ ನೋಟ... ಅಸಡ್ಡೆಯ ಮಾತು... ಕಚೇರಿಗಳಿಗೆ ಅಲೆದಾಟ... ಅಂಗವಿಕಲನಾಗಿರುವ ಇವನೇನು ಮಾಡಿಯಾನು ಎಂಬ ಪ್ರಶ್ನೆ...!

ಮೇಲಿನ ಅಂಶಗಳಿಂದಾಗಿ ನಮ್ಮಲ್ಲಿದ್ದ ಆತ್ಮವಿಶ್ವಾಸ ಕಳೆದುಹೋಗಿದೆ ಎನ್ನುತ್ತಾರೆ ಜಿಲ್ಲೆಯಲ್ಲಿರುವ ಅಂಗವಿಕಲರು.

ಸಹಾಯ ಮಾಡದಿದ್ದರೆ ಪರವಾಗಿಲ್ಲ. ಆತ್ಮವಿಶ್ವಾಸ ತುಂಬುವ ಮಾತುಗಳನ್ನಾಡಿದರೆ ಸಾಕು, ನಮ್ಮ ಅಂಗವೈಕಲ್ಯ ಮರೆತು ಹೋಗುತ್ತದೆ. ಆಗ ನಾವೂ ಇತರರಂತೆ ಮುನ್ನುಗ್ಗಬಹುದು. ಒಂದಷ್ಟು ಸಾಧನೆಯನ್ನು ಮಾಡುವ ಮೂಲಕ ಸ್ವಾವಲಂವಭಿ ಜೀವನವನ್ನು ಸಾಗಿಸಬಹುದು ಎನ್ನುವುದು ಅವರ ಮನದಾಳದ ಅನಿಸಿಕೆ.

ಶೇ 75ಕ್ಕಿಂತ ಹೆಚ್ಚು ಅಂಗವಿಕಲತೆ ಹೊಂದಿದವರಿಗೆ ಪ್ರತಿ ತಿಂಗಳು ₨ 1200 ಹಾಗೂ ಶೇ 75ಕ್ಕಿಂತ ಕಡಿಮೆ ಅಂಗವಿಕಲತೆ ಹೊಂದಿದವರಿಗೆ ₨ 400 ನೀಡಲಾಗುತ್ತದೆ. ಈ ತಾರತಮ್ಯದಿಂದಾಗಿ ಅಂಗವಿಕಲರಿಗೆ ಅನ್ಯಾಯವಾಗುತ್ತಿದೆ ಎಂಬುದು ಅವರ ದೂರು.
ಶೇ 74ರಷ್ಟು ಅಂಗವಿಕಲತೆ ಇದ್ದವನಿಗೂ 1,200 ರೂಪಾಯಿ ನೀಡುವುದಿಲ್ಲ. ಇದರಿಂದಾಗಿ ಹೆಚ್ಚು ಅಂಗವಿಕಲತೆಯ ಪ್ರಮಾಣ ಪಡೆಯಲು ಪೈಪೋಟಿ ಆರಂಭವಾಗಿದೆ. ಪರಿಣಾಮ ನಕಲಿಯ ಕೆಲವೂ ಅಂಗವಿಕಲರೂ ಸೇರ್ಪಡೆಯಾಗಿದ್ದಾರೆ.

ಮಾಸಾಶನ ಪಡೆಯಲು ವೈದ್ಯಕೀಯ ಪ್ರಮಾಣಪತ್ರ ಪಡೆಯಬೇಕು. ಇದಕ್ಕಾಗಿ ಈಗ ಮಧ್ಯವರ್ತಿಗಳು ಹುಟ್ಟಿಕೊಂಡಿದ್ದಾರೆ. ಹಣ ನೀಡಿದರೆ ವೈದ್ಯಕೀಯ ಪ್ರಮಾಣ ಪತ್ರವನ್ನು ಕೊಡಿಸುತ್ತಾರೆ. ಇಲ್ಲದಿದ್ದರೆ, ಅಲೆದಾಟ ತಪ್ಪುವುದಿಲ್ಲ.

ಸರ್ಕಾರಿ ಕಚೇರಿಗಳಿಗೆ ಅಡೆತಡೆ ರಹಿತವಾಗಿ ಹೋಗಲು ಅನುಕೂಲವಾಗುವಂತೆ ರ್‌ಯಾಂಪ್‌ಗಳನ್ನು ನಿರ್ಮಿಸಬೇಕು ಎಂದು ಸುಪ್ರೀಂಕೋರ್ಟ್‌ ಹೇಳಿದೆ. ಆದರೆ, ಜಿಲ್ಲೆಯ ಬಹಳಷ್ಟು ಸರ್ಕಾರಿ ಕಚೇರಿಗಳಿಗೆ ಈ ಸೌಲಭ್ಯವಿಲ್ಲ. ಕೆಲವು ಕಚೇರಿಗಳು ಮೊದಲ ಅಂತಸ್ತಿನಲ್ಲಿವೆ. ಮೇಲೆ ಹತ್ತಿ ಅಧಿಕಾರಿಗಳನ್ನು ಭೇಟಿಯಾಗಲು ಹರಸಾಹಸ ಪಡಬೇಕಾಗುತ್ತದೆ.

ಜಿಲ್ಲಾ ಅಂಗವಿಕಲರ ಪುನರ್‌ವಸತಿ ಕೇಂದ್ರವಿದೆ. ಆದರೆ, ಅದಕ್ಕೆ ಯಾವುದೇ ಅನುದಾನವಿಲ್ಲ. ಬೇರೆ, ಬೇರೆ ಇಲಾಖೆಯಲ್ಲಿ ಅಂಗವಿಕಲರಿಗಾಗಿ ಇರುವ ಶೇ 3ರಷ್ಟು ಅನುದಾನವನ್ನು ಕೆಂದ್ರಕ್ಕೆ ನೀಡುವಂತೆ ಮನವಿ ಮಾಡಲಾಗಿತ್ತು. ಹಾಗಾಗಿ ಅದಕ್ಕೆ ಸ್ವಲ್ಪ ಜೀವ ಬಂದಿದೆ. ಅದನ್ನು ಇನ್ನಷ್ಟು ಬಲಗೊಳಿಸಬೆಕು ಎನ್ನುತ್ತಾರೆ ರಾಜ್ಯ ಅಂಗವಿಕಲರ ಒಕ್ಕೂಟದ ರಾಜ್ಯ ಅಧ್ಯಕ್ಷ ಹಾಗೂ ಜಿಲ್ಲಾ ಘಟಕದ ಅಧ್ಯಕ್ಷರೂ ಆಗಿರುವ ಚೆಲುವರಾಜು.

ಸರ್ಕಾರದಿಂದ ಮಾಸಾಶನ ಸಿಗುವುದು ಆರಂಭವಾದ ಮೇಲೆ ಅಂಗವಿಕಲರಿಗೆ ಒಂದಷ್ಟು ಸಹಾಯವಾಗುತ್ತಿದೆ. ಆದರೆ, ಅದರ ಮೇಲೆಯೇ ಜೀವನ ಸಾಗಿಸಲು ಸಾದ್ಯವಾಗದು. ಸ್ವಯಂ ಉದ್ಯೋಗ ಕೈಗೊಳ್ಳಲು ಅನುವು ಮಾಡಿಕೊಡಬೇಕು. ಅದರಿಂದ ಶಾಶ್ವತವಾಗಿ ಜೀವನಕ್ಕೊಂದು ನೆಲೆ ಕಂಡುಕೊಳ್ಳಬಹುದು ಎನ್ನುತ್ತಾರೆ ಅವರು.

ಸರ್ಕಾರ ಹಾಗೂ ಅಧಿಕಾರಿಗಳ ಮಟ್ಟದಲ್ಲಿ ಟ್ರೈಸೈಕಲ್, ಮಾಸಾಶನ ನೀಡಿದರೆ ಪುನರ್‌ವಸತಿ ಕಲ್ಪಿಸಿದಂತೆ ಎಂದುಕೊಂಡಿದ್ದಾರೆ. ಶಾಶ್ವತ ಸ್ವಾವಲಂಭಿಯಾಗಿಸುವ ಯೋಜನೆಗಳು ಇಲ್ಲ. ಆ ನಿಟ್ಟಿನಲ್ಲಿ ಒಕ್ಕೂಟ ಹೋರಾಟ ಮಾಡುತ್ತಿದೆ ಎಂದರು.

1995ರಲ್ಲಿ ಸಮಾನ ಅವಕಾಶ, ಹಕ್ಕು ಸಂರಕ್ಷಣೆ ಮತ್ತು ಪೂರ್ಣ ಭಾಗವಹಿಸುವಿಕೆ ಎಂಬ ಕಾಯ್ದೆಯನ್ನು ಅಂಗವಿಕಲರಿಗಾಗಿ ಜಾರಿಗೊಳಿಸಲಾಗಿದೆ. ಆದರೆ, ಇಂದಿಗೂ ಅದು ಪೂರ್ಣಪ್ರಮಾಣದಲ್ಲಿ ಜಾರಿಯಾಗಿಲ್ಲ. ಉದ್ಯೋಗದಲ್ಲಿಯೂ ಸಾಕಷ್ಟು ಕಡೆಗಳಲ್ಲಿ ಮೀಸಲಾತಿ ನೀಡುವುದೇ ಇಲ್ಲ ಎಂದು ದೂರುತ್ತಾರೆ.

ಸ್ವಯಂ ಉದ್ಯೋಗ ಕೈಗೊಳ್ಳುವ ದೃಷ್ಟಿಯಿಂದ ಸಾಲಕ್ಕೆ ಅರ್ಜಿ ಹಾಕಿ ಮೂರು ವರ್ಷ ಕಳೆದಿದೆ. ಆದರೆ, ಇಂದಿಗೂ ಸಾಲ ಸಿಕ್ಕಿಲ್ಲ ಎನ್ನುತ್ತಾರೆ ಅಂಗವಿಕಲ ಅನಂತಕುಮಾರ ಕೋಣಸಾಲೆ.

ಅಂಗವಿಕಲರನ್ನು ಕುಟುಂಬದ ಸದಸ್ಯರಿಂದ ಹಿಡಿದು ಬಹುತೇಕರು ನಿರ್ಲಕ್ಷ್ಯದಿಂದ ಕಾಣುತ್ತಾರೆ. ಪರಿಣಾಮ ಆತ್ಮವಿಶ್ವಾಸ ಕಳೆದುಕೊಂಡು ಬದುಕು ಸಾಗಿಸುವಂತಾಗುತ್ತದೆ. ಅನುಕಂಪಕ್ಕಿಂತ ಪ್ರೋತ್ಸಾಹದ ಅವಶ್ಯಕತೆ ಹೆಚ್ಚಾಗಿದೆ ಎನ್ನುವುದು ಸಿ.ಕೆ. ಕೃಷ್ಣ ಅವರ ಮಾತು.

ಅಧಿಕಾರಿಗಳೇ ಇಲ್ಲ: ಅಂಗವಿಕಲ ಮತ್ತು ಹಿರಿಯ ನಾಗರಿಕರ ಸಬಲೀಕರಣ ಕಲ್ಯಾಣಾಧಿಕಾರಿ ಹುದ್ದೆ ಮಂಡ್ಯದಲ್ಲಿ ಖಾಲಿ ಇದೆ. ಪ್ರಭಾರಿಯಾಗಿ ಅದನ್ನು ಬೇರೆಯವರಿಗೆ ವಹಿಸಿಕೊಡಲಾಗಿದೆ.

ಜಿಲ್ಲೆಯಲ್ಲಿ ಅಷ್ಟೇ ಅಲ್ಲ, ರಾಜ್ಯದ 20 ಜಿಲ್ಲೆಗಳಲ್ಲಿ ಈ ಹುದ್ದೆ ಖಾಲಿ ಇದೆ. ಪ್ರಭಾರ ಅಧಿಕಾರಿಗಳ ಮೇಲೆಯೇ ಕೆಲಸ ನಡೆಸಲಾಗುತ್ತಿದೆ. ಹೀಗಾಗಿ ಅವರಿಗೂ ಸಂಪೂರ್ಣವಾಗಿ ಈ ಕೆಲಸದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದು ಅಂಗವಿಕಲರ ಬಗೆಗೆ ಸರ್ಕಾರಕ್ಕೆ ಇರುವ ತಾತ್ಸಾರವನ್ನು ತೋರಿಸುತ್ತದೆ.

ರಾಜ್ಯದಲ್ಲಿರುವ ಅಂಗವಿಕಲರ ಪೈಕಿ ಶೇ 80ಕ್ಕೂ ಹೆಚ್ಚು ಜನರಿಗೆ ಮದುವೆಯಾಗಿಲ್ಲ. ಅರಿವಿನ ಕೊರತೆಯಿಂದಾಗಿ ಮದುವೆಯಾಗಲು ಯಾರೂ ಮುಂದೆ ಬರುವುದಿಲ್ಲ. ಈ ಕುರಿತು ಜಾಗೃತಿ ಮೂಡಿಸುವ ಅವಶ್ಯಕತೆ ಇದೆ.

ಜಿಲ್ಲೆಯಲ್ಲಿ 31,411 ಮಂದಿ ಅಂಗವಿಕಲರು
ಮಂಡ್ಯ:
ಜಿಲ್ಲೆಯಲ್ಲಿ 31,411 ವಿವಿಧ ಬಗೆಯ ಅಂಗವಿಕಲರಿದ್ದಾರೆ. 18,006 ಮಂದಿ ದೈಹಿಕವಾಗಿ, 3,347 ಮಂದಿ ಅಂಧರು, 4,726 ಮಂದಿ ಶ್ರವಣ ದೋಷವುಳ್ಳವರು, 3,821 ಮಂದಿ ಬುದ್ದಿ ಮಾಂದ್ಯರು, 513 ಮಂದಿ ಮಾನಸಿಕ ಅಸ್ವಸ್ಥರು, 191 ಮಂದಿ ಕುಷ್ಠರೋಗ ನಿವಾರಿತ ಅಂಗವಿಕಲರು ಹಾಗೂ 797 ಮಂದಿ ಬಹುವಿಧ ಅಂಗವಿಕಲರಿದ್ದಾರೆ. 19,283 ಮಂದಿ ಪುರುಷರು ಹಾಗೂ 12,128 ಮಂದಿ ಮಹಿಳೆಯರು ಇದ್ದಾರೆ.

ಯೋಜನೆಗಳೇನು? : ಶೇ 75ಕ್ಕಿಂತ ಹೆಚ್ಚು ಅಂಗವಿಕಲತೆ ಇದ್ದರೆ 1,200 ರೂ ಹಾಗೂ ಶೇ 75ಕ್ಕಿಂತ ಕಡಿಮೆ ಇದ್ದರೆ 400 ರೂಪಾಯಿ ಮಾಸಾಶನ ನೀಡಲಾಗುತ್ತದೆ. ಎಸ್ಸೆಸ್ಸೆಲ್ಸಿ ನಂತರ ಯಾವುದೇ ವ್ಯಾಸಂಗ ಮಾಡಿದರೂ, ಕಾಲೇಜಿನ ಶುಲ್ಕ ಪಾವತಿಸಲಾಗುತ್ತದೆ. ಬಸ್‌ ಪಾಸ್‌, ಬುದ್ದಿಮಾಂದ್ಯ ಮಕ್ಕಳಿಗೆ ಒಂದು ಲಕ್ಷ ರೂಪಾಯಿವರೆಗೆ ವಿಮೆ, ಉಚಿತ ಸಾಧನೆ ಸಲಕರಣೆ ವಿತರಣೆ, ದ್ವಿಚಕ್ರ ವಾಹನ ಖರೀದಿಗೆ ಶೇ 50 ಸರ್ಕಾರದಿಂದ ಸಹಾಯಧನ ನೀಡುವುದು ಸೇರಿದಂತೆ ಹಲವಾರು ಯೋಜನೆಗಳಿವೆ. ಅಂಧ, ಬುದ್ದಿಮಾಂದ್ಯ, ಕಿವುಡ, ಮೂಕ ಮಕ್ಕಳಿಗಾಗಿ ಜಿಲ್ಲೆಯಲ್ಲಿ ಐದು ಶಾಲೆಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT