ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಕರಣೀಯ ಹೆಜ್ಜೆ

Last Updated 4 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಸಂಗಾತಿಯನ್ನು ಕಳೆದುಕೊಂಡ ಕಾರಣಕ್ಕೆ ಲೌಕಿಕ ಬದುಕಿನಿಂದ ಬಲವಂತವಾಗಿ ವಿಮುಖವಾಗಿ ಮೌನವಾಗಿ ಸಂಕಟ ಅನುಭವಿಸುತ್ತಿರುವ ಮಹಿಳೆಯರಲ್ಲಿ ಸಾಮಾಜಿಕವಾಗಿ ಆತ್ಮಸ್ಥೈರ್ಯ ತುಂಬುವಂಥ ಶ್ಲಾಘನೀಯ ಕೆಲಸವನ್ನು ಮಂಗಳೂರಿನ ಕುದ್ರೋಳಿ ಗೋಕರ್ಣನಾಥೇಶ್ವರ ದೇವಾಲಯದ ಆಡಳಿತ ಮಂಡಲಿ ನವರಾತ್ರಿಯ ಈ ಸಂದರ್ಭದಲ್ಲಿ ಮಾಡಿದೆ.

ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಅವರು ನಡೆಸಿದ ಈ ಮಂಗಳ ಕಾರ್ಯ, ಪತಿಯನ್ನು ಕಳೆದುಕೊಂಡ ನಿಮಿತ್ತ ಸಾಮಾಜಿಕವಾಗಿ ಪರಿತ್ಯಕ್ತರಂತೆ ಬಾಳುತ್ತಿದ್ದ ಮಹಿಳೆಯರಲ್ಲಿ ಭರವಸೆಯ ಬೆಳಕನ್ನು ಮೂಡಿಸುವಂಥದ್ದಾಗಿದೆ.

ವಿಧವೆ ಎಂಬ ಕಾರಣಕ್ಕೆ ಯಾವುದೇ ಮಂಗಳಕಾರ್ಯಗಳಲ್ಲಿ ಭಾಗವಹಿಸಲಾಗದಂತೆ ವಿಧಿಸಿದ ಸಾಮಾಜಿಕ ನಿಷೇಧವನ್ನು ತೊಡೆದು ಹಾಕಲು ಮುಂದಾದ ಕುದ್ರೋಳಿಯ ಗೋಕರ್ಣನಾಥೇಶ್ವರ ಕ್ಷೇತ್ರ ಈ ದೃಷ್ಟಿಯಿಂದ ಎಲ್ಲ ಧಾರ್ಮಿಕ ಕೇಂದ್ರಗಳಿಗೆ ಮಾದರಿಯಾಗಿದೆ.

ವಿಧವೆಯರಿಗೆ ಬಳೆ, ಹೂವು, ಅರಿಶಿನ ಕುಂಕುಮ ಮೊದಲಾದ ಮಂಗಳ ದ್ರವ್ಯಗಳನ್ನು ನೀಡಿ ಅವರು ದೇವರ ತೇರನ್ನು ಎಳೆಯುವಂತೆ ಮಾಡಿದ ಈ ಕ್ರಮ, ದಲಿತರು ಮತ್ತು ಹಿಂದುಳಿದ ವರ್ಗಗಳಲ್ಲಿ ಸಂಘಟನೆ, ಸಾಕ್ಷರತೆ ಮತ್ತು ಸ್ವಾವಲಂಬಿ ಬದುಕಿನ ಛಲವನ್ನು ಬಿತ್ತಿದ ಸಮಾಜ ಸುಧಾರಕ ನಾರಾಯಣ ಗುರುಗಳ ಬೋಧನೆಗೆ ಅನುಗುಣವಾಗಿಯೇ ಇದೆ.

ಹಿಂದೂ ಧಾರ್ಮಿಕತೆ ಮತ್ತು ಸಂಪ್ರದಾಯ ಪಾಲನೆಯ ಹೆಸರಿನಲ್ಲಿ ದಲಿತರು ಮತ್ತು ಶೂದ್ರರ ಜೊತೆಯಲ್ಲಿ ಎಲ್ಲ ವರ್ಗದ ಮಹಿಳೆಯರನ್ನೂ ಅಸ್ಪೃಶ್ಯರಂತೆ ದೂರವೇ ಇರಿಸಿರುವ ರಾಜ್ಯದ ಬಹುತೇಕ ಧಾರ್ಮಿಕ ಕೇಂದ್ರಗಳ ಮಧ್ಯೆ ಗೋಕರ್ಣನಾಥೇಶ್ವರ ಕ್ಷೇತ್ರ ಈ ಪುರೋಗಾಮಿ ಕಾರ್ಯದ ಮೂಲಕ ಪ್ರಜ್ವಲಿಸುವ ಶಕ್ತಿಕೇಂದ್ರವಾಗಿದೆ.

ಸಮಾಜದಲ್ಲಿ ನೆಲೆಯೂರಿರುವ ಧಾರ್ಮಿಕ ಅಂಧ ಶ್ರದ್ಧೆ, ಮೂಢನಂಬಿಕೆಗಳನ್ನು ತೊಡೆಯಲು ಧಾರ್ಮಿಕ ಕೇಂದ್ರಗಳಲ್ಲಿ ಹೆಚ್ಚು ಪ್ರಯತ್ನಗಳು ನಡೆದಿಲ್ಲ. ಚಿತ್ರದುರ್ಗ ಬೃಹನ್ಮಠದ ಶ್ರೀ ಮುರುಘಾ ಶರಣರು ಸೂರ್ಯಗ್ರಹಣ, ಚಂದ್ರಗ್ರಹಣಗಳ ಕಾಲದಲ್ಲಿ ಆಹಾರ ಸ್ವೀಕಾರ, ಅಮಾವಾಸ್ಯೆ, ರಾಹುಕಾಲಗಳಲ್ಲಿ ವಿವಾಹ ಕಾರ್ಯಗಳನ್ನು ನಡೆಸುತ್ತ ಜನರಲ್ಲಿ ವೈಚಾರಿಕತೆ ಮತ್ತು ವೈಜ್ಞಾನಿಕತೆಯನ್ನು ಬೋಧಿಸುತ್ತಿದ್ದರೂ ಹೆಚ್ಚಿನ ಧಾರ್ಮಿಕ ಕೇಂದ್ರಗಳು ಜನರ ಮೌಢ್ಯವನ್ನು ಆಧರಿಸಿದ ಆಚರಣೆಗಳನ್ನು ಧಾರ್ಮಿಕ ಶ್ರದ್ಧೆಯ ಹೆಸರಿನಲ್ಲಿ ಉತ್ತೇಜಿಸುತ್ತಿವೆ.
 
ಧಾರ್ಮಿಕ ಕೇಂದ್ರಗಳಲ್ಲಿನ ಪರಂಪರಾಗತ ಆಚರಣೆಗಳನ್ನು ಪ್ರಶ್ನಿಸಲಾಗದೆಂದು ಪ್ರತಿಪಾದಿಸುತ್ತ ಸರ್ಕಾರದ ನಿಯಂತ್ರಣಕ್ಕೆ ಒಳಪಟ್ಟ ಮುಜರಾಯಿ ದೇವಾಲಯಗಳಲ್ಲೂ ಸಾಮಾಜಿಕ ಅಸಮಾನತೆಯನ್ನು ಬಿಂಬಿಸುವ ಪಂಕ್ತಿಭೇದದಂಥ ಅನಿಷ್ಟಗಳು ಮುಂದುವರಿಯುವಂತಾಗಿದೆ.

ಜನರ ನಂಬಿಕೆಯನ್ನು ಗೌರವಿಸುವ ನೆಪದಲ್ಲಿ ಎಂಜಲೆಲೆಯ ಮೇಲೆ ಹೊರಳಾಡುವಂಥ ಅಸಹ್ಯಕರ ಮಡೆಸ್ನಾನದಂತಹ ಹರಕೆ ಪದ್ಧತಿಗಳು ಉಳಿದುಕೊಂಡಿವೆ. ಹರಕೆ ಹೊತ್ತವರ ನಂಬಿಕೆಯನ್ನು ಗೌರವಿಸುವ ನೆಪದಲ್ಲಿ ಅಸಹ್ಯಕರವೂ ಅನಾರೋಗ್ಯಕರವೂ ಆದ ಹರಕೆ ವಿಧಾನಗಳನ್ನು ಸಮರ್ಥಿಸುವ ಪುರೋಹಿತಶಾಹಿ ಮನಃಸ್ಥಿತಿ ಧಾರ್ಮಿಕ ಕೇಂದ್ರಗಳಲ್ಲಿ ಸುಧಾರಣೆ ತರುವುದಕ್ಕೆ ಅಡ್ಡಿಯಾಗಿದೆ.

ಜನರ ಮೂಢನಂಬಿಕೆ ಮತ್ತು ಅಂಧಶ್ರದ್ಧೆಯನ್ನು ಬಂಡವಾಳವಾಗಿಸಿಕೊಂಡ ರಾಜ್ಯದ ಹೆಚ್ಚಿನ ಧಾರ್ಮಿಕ ಕ್ಷೇತ್ರಗಳಿಗಿಂತ ಭಿನ್ನವಾದ ಸಾಮಾಜಿಕ ಜಾಗೃತಿಯ ದಿಟ್ಟ ಹೆಜ್ಜೆಯನ್ನು ಗೋಕರ್ಣನಾಥೇಶ್ವರ ಕ್ಷೇತ್ರ ಇರಿಸಿದೆ.
 
ಪತಿಯನ್ನು ಕಳೆದುಕೊಂಡ ಕಾರಣಕ್ಕೆ ಸನಾತನಿಗಳ ದೃಷ್ಟಿಯಲ್ಲಿ ಅಶುಭ, ಅಮಂಗಳಕರವೆಂದು ಪರಿತ್ಯಕ್ತರಾಗಿದ್ದ ಮಹಿಳೆಯರನ್ನು ಮಂಗಳದ್ರವ್ಯಗಳಿಂದ ಸತ್ಕರಿಸಿದ ಕ್ಷೇತ್ರದ ಚಿಂತನೆ ಮಹಿಳಾ ಸಬಲೀಕರಣದಲ್ಲಿ ಮಹತ್ವದ್ದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT