ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಕರಣೆಯ ಹಾಡು: ರತ್ನಮಾಲಾ ಆಕ್ರೋಶ

Last Updated 13 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ದಾವಣಗೆರೆ: ಅಹಂಕಾರದ ಧೋರಣೆಯಿಂದ ಸುಗಮ ಸಂಗೀತ ಕ್ಷೇತ್ರ ಖಂಡಿತಾ ಬೆಳೆಯುವುದಿಲ್ಲ. ಒಂದೆರಡು ಹಾಡಿಗೆ ಸಂಗೀತ ಸಂಯೋಜನೆ ಮಾಡಿದ ತಕ್ಷಣ `ನಾನು~ ಎಂಬ ಅಹಂಕಾರ ತೋರುತ್ತಾರೆ. ಇಂದಿನ ಪೀಳಿಗೆಗೆ ಹಿರಿಯ  ಸಂಗೀತಗಾರರ ಬಗ್ಗೆ ಗೌರವವೇ ಇಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರವೃತ್ತಿಯಂತೂ ಕೇಳುವುದೇ ಬೇಡ...

ಹೀಗೆ ಮೌನ ಮುರಿದು ಆಕ್ರೋಶದ ಕಟ್ಟೆ ಒಡೆದು ಮಾತು ಹರಿಸಿದವರು ಖ್ಯಾತ ಸುಗಮ ಸಂಗೀತ ಗಾಯಕಿ ರತ್ನಮಾಲಾ ಪ್ರಕಾಶ್. ನಗರದಲ್ಲಿ ನಡೆಯುತ್ತಿರುವ `ಗೀತೋತ್ಸವ -2012~ರ ಎರಡನೇ ದಿನವಾದ ಸೋಮವಾರ `ಸುಗಮ ಸಂಗೀತದ ಇತಿಮಿತಿಗಳು - ಹೊಸ ಸಾಧ್ಯತೆಗಳು~ ಕುರಿತ ವಿಚಾರಗೋಷ್ಠಿಯಲ್ಲಿ ಅವರು ಅಸಮಾಧಾನ ಹೊರಹಾಕಿದರು.

ಇತ್ತೀಚೆಗೆ ಸ್ವರ ಸಂಯೋಜನೆಗೊಂಡ ಒಂದಾದರೂ ಹಾಡುಗಳು ಕೇಳುಗರ ಮನಸ್ಸಿನಲ್ಲಿ ಉಳಿಯುತ್ತವೆಯೇ? ಇತ್ತೀಚೆಗೆ ಬಂದ ಯಾರಾದರೂ ಸಿ. ಅಶ್ವತ್ಥ್, ಮೈಸೂರು ಅನಂತಸ್ವಾಮಿ, ರಾಜು ಅನಂತಸ್ವಾಮಿ ಅವರನ್ನು ಆವಾಹಿಸಿಕೊಂಡಿದ್ದೇನೆ. ಅವರ ಸಮಕಾಲೀನ ತಾನು ಎಂದು ಹೇಳಿಕೊಳ್ಳುವವರು ತಾಕತ್ತಿದ್ದರೆ ಸಾವಿರ ಜನರನ್ನು ಸೇರಿಸಿ ಕಾರ್ಯಕ್ರಮ ನೀಡಲಿ. ಜನರು ಅವರನ್ನು ಸ್ವೀಕರಿಸಿದರೆ ನಾನು ಇಂದಿನಿಂದಲೇ ಹಾಡುವುದನ್ನು ನಿಲ್ಲಿಸುತ್ತೇನೆ ಎಂದು ಸವಾಲೆಸೆದರು.

ಎಷ್ಟೋ ಹೊಸ ಕಲಾವಿದರು. ತಮ್ಮ ಹಾಡುಗಳನ್ನೇ ಅನುಕರಿಸುತ್ತಾ ಹೊಟ್ಟೆ ಹೊರೆದುಕೊಳ್ಳುತ್ತಿದ್ದಾರೆ. ಇದೂ ಅವರಿಗೆ ಪ್ರಯೋಜನವಾಗಿದೆ ಇರಲಿ ಬಿಡಿ. ಹಾಗೆಂದು, ಹಿರಿಯ ಗಾಯಕರನ್ನು ಮೂಲೆಗುಂಪಾಗಿಸುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಎಲ್ಲ ಅಕಾಡೆಮಿಗಳು ಸ್ವಾರ್ಥಕ್ಕಾಗಿಯೇ ಹುಟ್ಟಿಕೊಂಡಿವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಂದೆ ಹೋಗಿ ನಾವು ಕೈಯೊಡ್ಡುವುದೂ ಸಾಧ್ಯವಿಲ್ಲ. ನಮಗೆ ದುಡ್ಡು ಮಾಡಬೇಕು ಎಂಬ ಉದ್ದೇಶವಿಲ್ಲ. ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಡಾ.ನರಹಳ್ಳಿ ಬಾಲಸುಬ್ರಮಣ್ಯ ಮಾತನಾಡಿ, ಸುಗಮ ಸಂಗೀತ ಕಲಾವಿದರಿಗೆ ಸಾಂಸ್ಕೃತಿಕ ಜವಾಬ್ದಾರಿ ಮುಖ್ಯ. ಅವರ ಆಯ್ಕೆ ಯಾವತ್ತೂ ಶ್ರೇಷ್ಠವಾದದ್ದೇ ಆಗಿರಬೇಕು.  ಕರ್ನಾಟಕದ ಸುಗಮ ಸಂಗೀತಕ್ಕೆ ಇರುವ ಪರಂಪರೆ ಜಗತ್ತಿನ ಎಲ್ಲಿಯೂ ಇಲ್ಲ. ಈ ಪ್ರಕಾರಕ್ಕೆ ಜನಸಮುದಾಯದ ಮೇಲೆ ಪ್ರಭಾವ ಬೀರುವ ಶಕ್ತಿಯಿದೆ.  ಅಲ್ಲದೇ, ಕಲಾವಿದರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT