ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುದಾನ ಬಿಡುಗಡೆಗೆ ಆಗ್ರಹಿಸಿ ಪ್ರತಿಭಟನೆ

Last Updated 7 ಜನವರಿ 2012, 19:30 IST
ಅಕ್ಷರ ಗಾತ್ರ

ಹುಮನಾಬಾದ್: ವಿವಿಧ ವೃತ್ತಿ ವಿಷಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಶೇ 22.75 ಅನುದಾನದಡಿ ಹಣ ಬಿಡುಗಡೆ ಮಾಡುವುದು ಮತ್ತು ಇತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಭಾರತ್ ವಿದ್ಯಾರ್ಥಿ ಫೆಡರೇಷನ್ ಸದಸ್ಯರು ಶುಕ್ರವಾರ ಇಲ್ಲಿನ ತಾಲ್ಲೂಕು ಪಂಚಾಯಿತಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿದರು.

ಜೂನ್ 26, 2011ಅನ್ವಯ ವೃತ್ತಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಶೇ 22.75 ಅನುದಾನದಡಿ ಹಣ ಬಿಡುಗಡೆ ಮಾಡಲು ಎಲ್ಲ ಗ್ರಾಮ ಪಂಚಾಯಿತಿಗಳಿಗೂ ಸೂಚಿಸಲಾಗಿತ್ತು. ಅದನ್ನು ತಪ್ಪದೆ ಪಾಲಿಸುವುದಾಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಪತ್ರವನ್ನು ನೀಡಿದ್ದರು. ಆದರೆ ವಿದ್ಯಾರ್ಥಿಗಳ ಪರೀಕ್ಷೆ ಸಮೀಪಿಸಿದ ವಿಷಯ ಗೊತ್ತಿದ್ದರೂ ಈವೆರೆಗೂ ಅನುದಾನ ಬಿಡುಗಡೆ ಮಾಡಿಲ್ಲ ಎಂದು ವಿದ್ಯಾರ್ಥಿ ಮುಖಂಡರು ದೂರಿದರು.

ಶುಲ್ಕ ಪಾವತಿಸಿಲ್ಲ ಎಂಬ ಕಾರಣಕ್ಕಾಗಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಪ್ರವೇಶಪತ್ರ ಬಾರದೇ ಇರುವುದರಿಂದ 420 ವಿದ್ಯಾರ್ಥಿಗಳ ಬದುಕು ಬೀದಿಪಾಲಾಗಿದೆ ಎಂದು ಮನವಿಪತ್ರದಲ್ಲಿ ನೋವು ತೋಡಿಕೊಳ್ಳಲಾಗಿದೆ. ಮನವಿಪತ್ರ ಸ್ವೀಕರಿಸುವುದಕ್ಕೆ ಕಚೇರಿ ವ್ಯವಸ್ಥಾಪಕ ಹಾಗೂ ಸದಸ್ಯರು ಮುಂದೆ ಬಂದಾಗ ತಿರಸ್ಕರಿಸಿ, ಕಾರ್ಯನಿರ್ವಾಹಕ ಅಧಿಕಾರಿ ಸ್ಥಳಕ್ಕೆ ಬರುವವರೆಗೆ ಪ್ರತಿಭಟನೆ ಮುಂದುವರೆಸುವುದಾಗಿ ಪ್ರತಿಭಟನಾ ನಿರತರು ಎಚ್ಚರಿಸಿದರು.

ಜನವಾದಿ ಮಹಿಳಾ ಸಂಘಟನೆ ಜಿಲ್ಲಾ ಅಧ್ಯಕ್ಷೆ ಅಂಬುಬಾಯಿ ಮಾಳಗೆ, ಭಾರತ ವಿದ್ಯಾರ್ಥಿ ಫೆಡರೇಷನ್ ತಾಲ್ಲೂಕು ಅಧ್ಯಕ್ಷ ಅಮಿತ ಸಜ್ಜನ್, ಮಹಿಳಾ ಪ್ರತಿನಿಧಿ ಸರಸ್ವತಿ, ಕೂಲಿ ಕಾರ್ಮಿಕರ ಸಂಘದ ಇಸಾಮುದ್ದೀನ್, ದೇವಾನಂದ ಗಾಯಕವಾಡ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಇದಕ್ಕೂ ಮುನ್ನ ಪ್ರವಾಸಿ ಮಂದಿರದಿಂದ ತಾಲ್ಲೂಕು ಪಂಚಾಯಿತಿ ಕಚೇರಿಗೆ ರ‌್ಯಾಲಿ ಮೂಲಕ ಆಗಮಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT