ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುದಾನ ರೂ.1.50 ಕೋಟಿ ಬಿಡುಗಡೆ

Last Updated 26 ಫೆಬ್ರುವರಿ 2011, 8:05 IST
ಅಕ್ಷರ ಗಾತ್ರ

ಉಡುಪಿ: ತಾಲ್ಲೂಕಿನ ವಿವಿಧೆಡೆಗಳಲ್ಲಿ ಹೂಳು ತುಂಬಿದ್ದ ಕೆರೆ, ಮದಗಗಳ ಅಭಿವೃದ್ಧಿಗಾಗಿ ಜಲ ಮರು ಪೂರಣ ಯೋಜನೆಯಡಿಯಲ್ಲಿ ರಾಜ್ಯ ಸರ್ಕಾರ ರೂ.1.50 ಕೋಟಿ ಅನುದಾನ ಬಿಡುಗಡೆ ಮಾಡಿದೆ ಎಂದು ಉಡುಪಿ ಪಂಚಾಯತ್‌ರಾಜ್ ಇಲಾಖೆಯ ಎಂಜಿನಿಯರಿಂಗ್ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಡಿ.ವಿ. ಹೆಗ್ಡೆ ತಿಳಿಸಿದ್ದಾರೆ.ಗುರುವಾರ ಬೈಕಾಡಿ ಗಾಂಧಿನಗರದಲ್ಲಿರುವ ಮದಗದ ಅಭಿವೃದ್ಧಿ ಕಾಮಗಾರಿಯನ್ನು ಮಾಧ್ಯಮದವರೊಂದಿಗೆ ವೀಕ್ಷಿಸಿದ ಬಳಿಕ ಅವರು ಈ ಮಾಹಿತಿ ನೀಡಿದರು.

ಇದೀಗ ಎಲ್ಲ 25 ಕೆರೆ ಹಾಗೂ ಮದಗಗಳ ಹೂಳೆತ್ತುವ ಹಾಗೂ ಅಭಿವೃದ್ಧಿ ಪಡಿಸುವ ಕಾಮಗಾರಿಗಳು ಸಾಕಷ್ಟು ವೇಗದಿಂದ ಸಾಗುತ್ತಿವೆ. ಹೀಗಾಗಿ ಸುತ್ತಲಿನ ಪರಿಸರದಲ್ಲಿನ ಗ್ರಾಮಗಳಲ್ಲಿ ಅಂತರ್ಜಲವನ್ನು ವೃದ್ಧಿಸಿ ಬಾವಿಗೆ ನೀರನ್ನು ಒದಗಿಸಬಹುದಾಗಿದೆ ಎಂದು ಅವರು ಹೇಳಿದರು.ಗಾಂಧಿನಗರದಲ್ಲಿರುವ ಸುಮಾರು 7.5ಎಕರೆ ಜಾಗದಲ್ಲಿದ್ದ ಕೆರೆ ಸಂಪೂರ್ಣ ಹೂಳಿನಿಂದ ತುಂಬಿ ಹೋಗಿತ್ತು. ಈಗ ಅದರಲ್ಲಿನ 3.5ಎಕರೆ ಹೂಳನ್ನು ಸುಮಾರು 9 ಲಕ್ಷ ರೂ. ವೆಚ್ಚದಲ್ಲಿ ತೆಗೆಸಿ ಅಭಿವೃದ್ಧಿಪಡಿಸಲಾಗುತ್ತಿದೆ. ಸುಮಾರು ಶೇ.40ರಷ್ಟು ಕಾಮಗಾರಿಗಳು ಪೂರ್ಣಗೊಂಡಿವೆ ಎಂದು ಅವರು ವಿವರಿಸಿದರು.

ಈ ಸಂದರ್ಭ ಜಿ.ಪಂ. ಮತ್ತು ಪಂಚಾಯತ್‌ರಾಜ್ ಇಲಾಖೆಯ ಎಂಜಿನಿಯರಿಂಗ್ ವಿಭಾಗದ ವಿವಿಧ ಕಾಮಗಾರಿಗಳ ವಿವರ ನೀಡಿದರು.  ತೆಂಕನಿಡಿಯೂರು ಗ್ರಾ.ಪಂ.ವ್ಯಾಪ್ತಿಯ ತೆಂಕನಿಡಿಯೂರು ಗ್ರಾಮಕ್ಕೆ ಸುವರ್ಣ ಗ್ರಾಮೋದಯ ಯೋಜನೆ ಅಡಿಯಲ್ಲಿ ರೂ.81.40 ಲಕ್ಷ ವೆಚ್ಚದಲ್ಲಿ 4.6 ಕಿಮೀ ಉದ್ದಕ್ಕೆ ಡಾಂಬರೀಕರಣ ಮಾಡಲಾಗಿದೆ. 106 ಮೀಟರ್ ಉದ್ದಕ್ಕೆ ಕಾಂಕ್ರೀಟೀಕರಣ, ಹಾಗೂ ಚರಂಡಿ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ ಎಂದರು.

 ತಾಲ್ಲೂಕಿನ ಉಪ್ಪೂರು ಉಗ್ಗೆಲ್‌ಬೆಟ್ಟು ಗರಡಿ ರಸ್ತೆಯನ್ನು ರೂ.37 ಲಕ್ಷದಲ್ಲಿ 2 ಕಿಮೀವರೆಗೆ ನಬಾರ್ಡ್ ಯೋಜನೆಯಡಿ ವಿಸ್ತರಿಸಲಾಗುತ್ತಿದೆ. ಅವುಗಳಲ್ಲಿ 1.45 ಕಿಮೀ ಉದ್ದಕ್ಕೆ ಪೇವರ್ ಫಿನಿಶ್ ಡಾಮರೀಕರಣ, ಮೋರಿ ರಚನೆ ಸೇರಿದಂತೆ ಅಗತ್ಯದ ಕಾಮಗಾರಿ ನಿರ್ವಹಿಸಲಾಗಿದೆ ಎಂದರು. ಈ ರಸ್ತೆ ನಿರ್ಮಾಣದಿಂದ ಉಗ್ಗೇಲ್‌ಬೆಟ್ಟು ಜನರಿಗೆ ಮತ್ತು ಗರಡಿಗೆ ಸುಮಾರು ಸುತ್ತಿ ಬಳಸಿ ಬರುವ ಮಾರ್ಗ ಈಗ ಹತ್ತಿರವಾದಂತಾಗಿದೆ.

ವಾರಂಬಳ್ಳಿ ಗ್ರಾ.ಪಂ.ವ್ಯಾಪ್ತಿಯ ಸಾಲಿಕೇರಿ ಹೊನ್ನಾಳ ರಸ್ತೆಯು 2.50 ಕೀಮೀ ಉದ್ದವಿದ್ದು ರಾ.ಹೆ.-17ಕ್ಕೆ ಸಮಾನಾಂತರವಾಗಿದೆ. ಇದನ್ನು ರೂ.18 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಉದ್ಯಾವರ ಗ್ರಾ.ಪಂ.ವ್ಯಾಪ್ತಿಯ ಸಂಪಿಗೆ ನಗರ ಗಣಪತಿ ದೇವಸ್ಥಾನ ರಸ್ತೆ ಒಂದು ಕಿಮೀ ಇದ್ದು ರೂ.20.90 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿದೆ.

ಮುಖ್ಯಮಂತ್ರಿಗಳ ಗ್ರಾಮೀಣ ಅಭಿವೃದ್ಧಿ ಯೋಜನೆಯಡಿಯಲ್ಲಿ ತಾಲ್ಲೂಕಿನ ಹೇರೂರುಕೃಷಿ ಕೇಂದ್ರ ರಸ್ತೆಯು 2.30 ಕಿಮೀ ಉದ್ದವಿದ್ದು ಈ ರಸ್ತೆಯ ಎಲ್ಲ ಕಡೆಗಳಲ್ಲಿ ರೂ.17 ಲಕ್ಷ ವೆಚ್ಚದಲ್ಲಿ ಅಗ–ತ್ಯವಿದ್ದಲ್ಲಿ ಕಾಂಕ್ರೀಟೀಕರಣ ಹಾಗೂ ಪೇವರ್ ಫಿನಿಶ್ ಮಾಡಲಾಗಿದೆ ಎಂದರು.ಕಾಮಗಾರಿ ಪರಿಶೀಲನಾ ಸಂದರ್ಭದಲ್ಲಿ ಜಿ.ಪಂ.ನ ಸಹಾಯಕ ಎಂಜಿನಿಯರ್ ವಿಜಯಾನಂದ ನಾಯಕ್, ಹಿರಿಯ ಎಂಜಿನಿಯರ್ ಸೋಮನಾಥ್ ಹಾಗೂ ಸಹಾಯಕ ಎಂಜಿನಿಯರ್ ಚೆನ್ನಪ್ಪ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT