ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುದಾನ ವ್ಯರ್ಥವಾಗದಂತೆ ಯೋಜನೆ ರೂಪಿಸಿ

Last Updated 9 ಅಕ್ಟೋಬರ್ 2012, 4:30 IST
ಅಕ್ಷರ ಗಾತ್ರ

ಹಿರಿಯೂರು: ಅರಣ್ಯ ಇಲಾಖೆ ಅಧಿಕಾರಿ ಸರ್ಕಾರದಿಂದ ಬಿಡುಗಡೆಯಾಗುವ ಅನುದಾನ ವ್ಯರ್ಥವಾಗದಂತೆ ಸಕಾಲದಲ್ಲಿ ಕ್ರಿಯಾ ಯೋಜನೆ ತಯಾರಿಸಿ, ಅನುಮೋದನೆ ಪಡೆದು ಕಾಮಗಾರಿಯನ್ನು ಪ್ರಾರಂಭಿಸಬೇಕು ಎಂದು ಸೋಮವಾರ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ರಮೇಶ್ ಆಗ್ರಹಿಸಿದರು.

ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಪ್ರತೀ ಪಂಚಾಯ್ತಿಗೆ ರೂ 19 ಲಕ್ಷ  ಅನುದಾನ ಬರುತ್ತದೆ. ಸಾಮಾಜಿಕ ಮತ್ತು ರೆಗ್ಯುಲರ್ ಅರಣ್ಯಾಧಿಕಾರಿ ಜತೆಯಾಗಿ ಕ್ರಿಯಾ ಯೋಜನೆ ರೂಪಿಸಿ. ನಾಲ್ಕು ಪಂಚಾಯ್ತಿಗಳಲ್ಲಿ `ಮರ ಉದ್ಯಾನ~ ನಿರ್ಮಾಣಕ್ಕೆ ಮುಂದಾಗಿ. ತಾಲ್ಲೂಕಿನಲ್ಲಿ ಹಸಿರು ಮೂಡಿಸುವ ಕೆಲಸ ನಡೆಸಿ ಎಂದು ಅವರು ಸೂಚಿಸಿದರು.

ಸಾಮಾಜಿಕ ಅರಣ್ಯಾಧಿಕಾರಿ ಶ್ರೀನಿವಾಸ್ ಮಾತನಾಡಿ, ರಂಗೇನಹಳ್ಳಿಯಿಂದ ಹರಿಯಬ್ಬೆ ಗ್ರಾಮದವರೆಗೆ 10 ಕಿ.ಮೀ. ದೂರ ರಸ್ತೆಬದಿಯಲ್ಲಿ ಬೇವು, ಹೊಂಗೆ ಸಸಿ ನೆಡಲಾಗಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ಸಸಿ ನೆಡುವ ಕಾರ್ಯಕ್ರಮದ ಜತೆಗೆ ಮಣ್ಣು ಸವಕಳಿ ತಡೆ, ಮಳೆ ನೀರು ಹಿಂಗಿಸುವ ಕಾಮಗಾರಿಗಳಿಗೆ ಒತ್ತು ನೀಡಲಾಗುವುದು ಎಂದು ವಿವರಿಸಿದರು.

ಜೈವಿಕ ತಂತ್ರಜ್ಞಾನ ಪ್ರಯೋಗಾಲಯ: ನಗರರದಲ್ಲಿರುವ  ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಜೈವಿಕ ತಂತ್ರಜ್ಞಾನ ಪ್ರಯೋಗಾಲಯ ಆರಂಭಿಸಲು ರೂ 1 ಕೋಟಿ ಮಂಜೂರಾಗಿದ್ದು, ಅನುದಾನ ಬಿಡುಗಡೆ ಆಗಬೇಕಿದೆ. ಈರುಳ್ಳಿ ಸಂಗ್ರಹಣಾ ಘಟಕ ಸ್ಥಾಪನೆಗೆ ಯಾವುದೇ ಅರ್ಜಿ ಬಂದಿಲ್ಲ. 10 ಗುಂಟೆ ಪ್ರದೇಶದಲ್ಲಿ ಶೇಡ್‌ನೆಟ್ ನಿರ್ಮಾಣ ಮಾಡಲು ರೂ 3 ಲಕ್ಷ  ಸಬ್ಸಿಡಿ ನೀಡಲಾಗುತ್ತದೆ. 2012-13ನೇ ಸಾಲಿಗೆ ಸೂಕ್ಷ್ಮ ನೀರಾವರಿ ಯೋಜನೆಗೆ 15 ಕಡತ ಕಳಿಸಿದ್ದು, ಅನುದಾನ ಬರಬೇಕಿದೆ ಎಂದು ಇಲಾಖೆ ಅಧಿಕಾರಿ ಡಾ.ಸವಿತಾ ಹೇಳಿದರು.

ಬೇಕಿಲ್ಲದಾಗ ಬಂದ ಮಳೆ
ತಾಲ್ಲೂಕಿನಲ್ಲಿ ಸೆಪ್ಟೆಂಬರ್ ಅಂತ್ಯದವರೆಗೆ ವಾಡಿಕೆ ಮಳೆ 300 ಮಿ.ಮೀ. ಬರಬೇಕಿತ್ತು. ಆದರೆ, 336 ಮಿ.ಮೀ. ಮಳೆಯಾಗಿದೆ. ಏಪ್ರಿಲ್‌ನಲ್ಲಿ 23.6 ಮಿ.ಮೀ. ವಾಡಿಕೆ ಮಳೆಯ ಪೈಕಿ 122.13 ಮಿ.ಮೀ. ಬಂದಿದೆ. ತದನಂತರ ಮೇ ತಿಂಗಳಿಂದ ಜುಲೈ ಅಂತ್ಯದವರೆಗೆ ವಾಡಿಕೆ ಮಳೆಗಿಂತ ತುಂಬಾ ಕಡಿಮೆ ಮಳೆಯಾಗಿದೆ. ಆಗಸ್ಟ್‌ನಲ್ಲಿ  41.90 ವಾಡಿಕೆ ಮಳೆ ಬದಲು 90.40 ಮಿ.ಮೀ. ಬಂದಿದೆ.

ಸೆಪ್ಟೆಂಬರ್‌ನಲ್ಲಿ 74.60 ಬದಲು 64.30 ಮಿ.ಮೀ. ಮಳೆಯಾಗಿದೆ. ಮುಂಗಾರು ಬಿತ್ತನೆ ಸಂಪೂರ್ಣ ವಿಫಲವಾಗಿದೆ. ನವಂಬರ್ ಮೊದಲ ವಾರದವರೆಗೆ ಜೋಳ, ಕಡಲೆ, ಸೂರ್ಯಕಾಂತಿಯನ್ನು ಹಿಂಗಾರು ಬೆಳೆಯಾಗಿ ಬಿತ್ತನೆ ಮಾಡಬಹುದು. ಇಲಾಖೆಗೆ 765 ತಾಡಪಾಲುಗಳು ಬಂದಿದ್ದು, ಸಬ್ಸಿಡಿ ಕಳೆದು ರೂ 1200  ದರ ನಿಗದಿ ಪಡಿಸಿದೆ. ಬಿತ್ತನೆಗೆ ಲಘು ಪೋಷಕಾಂಶ ಇಲಾಖೆ ಪೂರೈಸಲಿದೆ.
 
ಸುವರ್ಣ ಭೂಮಿ ಯೋಜನೆಯಡಿ 1,396 ಗುರಿ ಜನರಿಗೆ ಹಣ ನೀಡುವ ಉದ್ದೇಶ ಇದ್ದು, 1,267 ಜನರಿಗೆ ಹಣ ವಿತರಿಸಲಾಗಿದೆ ಎಂದು ಕೃಷಿ ಅಧಿಕಾರಿ ಡಾ.ಶ್ರೀನಿವಾಸ ರೆಡ್ಡಿ ತಿಳಿಸಿದಾಗ, ರಸಗೊಬ್ಬರದ ತೊಂದರೆಯಾಗದಂತೆ, ಹೆಚ್ಚಿನ ದರಕ್ಕೆ ಮಾರದಂತೆ ಕ್ರಮ ಕೈಗೊಳ್ಳಬೇಕು ಎಂದು ಇಒ ರಮೇಶ್ ಸೂಚಿಸಿದರು.

ಮಳೆ ಕಡಿಮೆ ಬಿದ್ದಿರುವ ಪ್ರಯುಕ್ತ ರೇಷ್ಮೆ ಕೃಷಿಯಲ್ಲಿ ಗುರಿ ಸಾಧನೆ ಮಾಡಲು ಸಾಧ್ಯವಾಗಿಲ್ಲ ಎಂದು ಇಲಾಖೆ ಅಧಿಕಾರಿ ಸಿ. ಹರ್ಷ ತಿಳಿಸಿದರೆ, ಕೈಗಾರಿಕೆ ಇಲಾಖೆ ವತಿಯಿಂದ ಆದಿವಾಲ ಮತ್ತು ಪಟ್ರೆಹಳ್ಳಿಗಳಲ್ಲಿ ಹಗ್ಗ ತಯಾರಿಸುವವರಿಗೆ ಬಡ್ಡಿ ಸಹಾಯಧನ ನೀಡಲಾಗಿದೆ ಎಂದು ಆ ಇಲಾಖೆ ಅಧಿಕಾರಿ ಮಾಹಿತಿ ನೀಡಿದರು.
ಶಿಶು ಅಭಿವೃದ್ಧಿ ಇಲಾಖೆಯಲ್ಲಿ 291 ಕೇಂದ್ರಗಳಿಗೆ ಸ್ವಂತ ಕಟ್ಟಡಗಳಿದ್ದು, 160ಕ್ಕೆ ಕಟ್ಟಡಗಳು ಆಗಬೇಕಿದೆ.
 
73ಕ್ಕೆ ನಿವೇಶನಗಳಿಲ್ಲ. ಹೂವಿನಹೊಳೆ, ಹರಿಶ್ಚಂದ್ರಘಾಟ್ ಬಡಾವಣೆಯಲ್ಲಿನ ಶಿಶುಪಾಲನಾ ಕೇಂದ್ರಗಳು ಸ್ಥಗಿತವಾಗಿವೆ. 42 ಕೇಂದ್ರಗಳ ಕಟ್ಟಡಗಳು ಶಿಥಿಲವಾಗಿದ್ದು, ಅನುದಾನ ಬೇಕಿದೆ ಎಂದು ಇಲಾಖೆ ಅಧಿಕಾರಿ ರುದ್ರಮುನಿ ವಿವರಿಸಿದಾಗ, ಈಗಾಗಲೇ ತಾ.ಪಂ.ನಿಂದ 39 ಕಟ್ಟಗಳಿಗೆ ಅನುದಾನ ನೀಡಲಾಗಿದೆ. ಸ್ತ್ರೀಶಕ್ತಿ ಸಂಘಗಳಿಗೆ ನೀಡುವ ಸಬ್ಸಿಡಿ ಹಣ ಕೆಲವೇ ಸಂಘಗಳಿಗೆ ಸೀಮಿತವಾಗದಂತೆ ನೋಡಿಕೊಳ್ಳಬೇಕು ಎಂದು ರಮೇಶ್ ಸೂಚಿಸಿದರು.

ಹಿಂದುಳಿದ ವರ್ಗಗಳ ಇಲಾಖೆಯಡಿಯಲ್ಲಿ 16 ವಿದ್ಯಾರ್ಥಿನಿಲಯಗಳಿದ್ದು,  7ಕ್ಕೆ ಸ್ವಂತ ಕಟ್ಟಡಗಳಿಲ್ಲ.  ಹಿರಿಯೂರಿನ ಹರಿಶ್ಚಂದ್ರಘಾಟ್ ಬಡಾವಣೆಯಲ್ಲಿ 2 ಹಾಸ್ಟೆಲ್ ನಿರ್ಮಾಣಕ್ಕೆ 28 ಗುಂಟೆ ಭೂಮಿ ಮಂಜೂರಾಗಿದೆ. ಮಸ್ಕಲ್ ಗ್ರಾಮದಲ್ಲಿ ಭೂ ಮಂಜೂರಾತಿ ಪ್ರಸ್ತಾವ ಹೋಗಿದೆ. ವೇಣುಕಲ್ಲುಗುಡ್ಡ ಗ್ರಾಮದಲ್ಲಿರುವ ಆಶ್ರಮ ಶಾಲೆಯಲ್ಲಿ ಕೇವಲ 8 ಮಕ್ಕಳಿದ್ದಾರೆ ಎಂದು ಇಲಾಖೆ ಅಧಿಕಾರಿ ತಿಳಿಸಿದಾಗ ಆಶ್ರಮ ಶಾಲೆಗೆ ಹೆಚ್ಚು ಮಕ್ಕಳು ದಾಖಲಾಗುವಂತೆ ಪ್ರಯತ್ನಿಸಬೇಕು. ಆಗದಿದ್ದಲ್ಲಿ ಬೇರೆ ಕಡೆಗೆ ಸ್ಥಳಾಂತರಿಸಿ. ಸ್ವಚ್ಛತೆ ಕೊರತೆ ಬಗ್ಗೆ ದೂರುಗಳು ಬರುತ್ತಿದ್ದು ಸರಿಪಡಿಸಿ ಎಂದು ಅಧಿಕಾರಿ ಹೇಳಿದರು.

ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಎಚ್.ಆರ್. ತಿಮ್ಮಯ್ಯ ಮಾತನಾಡಿ, ಹುಚ್ಚವ್ವನಹಳ್ಳಿ ಸಮೀಪ 2.5 ಎಕರೆ ವಿಸ್ತೀರ್ಣದಲ್ಲಿ ಕೃಷಿ ಹೊಂಡ ನಿರ್ಮಿಸಿದ್ದು, ಜಲಾನಯನ ಇಲಾಖೆಯಿಂದ ರಿವಿಟ್‌ಮೆಂಟ್ ಮಾಡಿದರೆ ಸುತ್ತಮುತ್ತಲ ಹಳ್ಳಿಗರಿಗೆ ಅನುಕೂಲವಾಗುತ್ತದೆ. ಅದೇ ಗ್ರಾಮದಲ್ಲಿ ವೇದಾವತಿ ನದಿ ಸಮೀಪ ಮೂರು ತಿಂಗಳ ಹಿಂದೆ ಕೊಳವೆಬಾವಿ ಕೊರೆಸಿದ್ದು, ಐದೂವರೆ ಇಂಚು ಸಿಹಿ ನೀರು ಬರುತ್ತಿದೆ. ಅಲ್ಲಿಂದ ನೀರು ಪೂರೈಕೆ ಮಾಡಿ ಎಂದರೂ ಸಂಬಂಧಿಸಿದ ಇಲಾಖೆ ಅಧಿಕಾರಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದಾಗ, ತಕ್ಷಣ ಅಲ್ಲಿಂದ ನೀರು ಪೂರೈಸುವಂತೆ ರಮೇಶ್ ತಾಕೀತು ಮಾಡಿದರು.ಪಂಚಾಯ್ತಿ ಅಧ್ಯಕ್ಷೆ ಕೆ. ಗಿರಿಜಮ್ಮ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT