ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುದಾನ ಸಮರ್ಪಕ ಬಳಕೆಯಾಗುತ್ತಿಲ್ಲ: ಹೆಗ್ಡೆ

Last Updated 23 ಜನವರಿ 2012, 6:25 IST
ಅಕ್ಷರ ಗಾತ್ರ

ಮೈಸೂರು: `ಸರ್ಕಾರವು ಅಭಿವೃದ್ಧಿ ಕಾರ್ಯಗಳಿಗಾಗಿ ಬಿಡುಗಡೆ ಮಾಡುವ ಅನುದಾನ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪುವುದಿಲ್ಲ~ ಎಂದು ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ ಹೇಳಿದರು.

ಜೆ.ಕೆ. ಮೈದಾನದ ಎಂಎಂಸಿ ಅಮೃತಮಹೋತ್ಸವ ಭವನದಲ್ಲಿ ಭಾನುವಾರ ಲಯನ್ಸ್ ಪ್ರಾಂತೀಯ ಸೇವೋತ್ಸವ ದಲ್ಲಿ ಸನ್ಮಾನ ಸ್ವೀಕರಿಸಿದ ಅವರು ಮಾತನಾಡಿದರು.

`2006-07ರ ಅವಧಿಯಲ್ಲಿ ಲೆಕ್ಕಪರಿಶೋಧನಾ ಇಲಾಖೆ ನೀಡಿದ ವರದಿಯಲ್ಲಿ ಪ್ರಕಾರ ಕೇಂದ್ರದಿಂದ ಎಂಟು ಮೂಲಸೌಲಭ್ಯ ಅಭಿವೃದ್ಧಿ ಯೋಜನೆಗಳಿಗಾಗಿ ಬಿಡುಗಡೆ ಯಾದ 51000 ಕೋಟಿ ರೂಪಾಯಿಗೆ ಇದುವರೆಗೆ ಲೆಕ್ಕವೇ ಸಿಕ್ಕಿಲ್ಲ. ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರು, ರಸ್ತೆ, ಶೌಚಾಲಯ ಮತ್ತಿತರ ಕಾಮಗಾರಿ ಗಳಿಗೆ ಈ ಹಣ ಮಂಜೂರಾಗಿತ್ತು~ ಎಂದು ತಿಳಿಸಿದರು.

`ಸರ್ಕಾರಗಳು ಗ್ರಾಮೀಣ ಪ್ರದೇಶ ಗಳಿಗೆ ಸೌಲಭ್ಯಗಳನ್ನು ನೀಡುವಲ್ಲಿ ಹಿಂದೆ ಬೀಳುತ್ತಿವೆ. ಆದರೆ ಲಯನ್ಸ್‌ನಂತಹ ಸಂಸ್ಥೆಗಳು ಉತ್ತಮ ಕೆಲಸ ಮಾಡುತ್ತಿವೆ. ಸಮಾಜದ ಅಭಿವೃದ್ಧಿಗೆ ಶ್ರಮ ವಹಿಸುತ್ತಿವೆ. ಈ ನಿಟ್ಟಿನಲ್ಲಿ ಸರ್ಕಾರಗಳೂ ಕಾರ್ಯ ನಿರ್ವಹಿಸಿದರೆ ಉತ್ತಮ ಅಭಿವೃದ್ಧಿ ಸಾಧ್ಯ~ ಎಂದರು.

ಸರ್ ಎಂವಿ. ಪ್ರಧಾನಿಯಾಗುತ್ತಿದ್ದರು: `ಸರ್ ಎಂ.ವಿಶ್ವೇಶ್ವ ರಯ್ಯನವರು ಈಗ ಬದುಕಿದ್ದರೆ ಖಂಡಿತವಾಗಿಯೂ ದೇಶದ ಪ್ರಧಾನಮಂತ್ರಿಯಾಗುತ್ತಿದ್ದರು. ಅವರಿಂದಾಗಿ ಭಾರತ ಅಭಿವೃದ್ಧಿಯ ಉತ್ತುಂಗ ಶಿಖರವನ್ನು ತಲುಪುತಿತ್ತು~ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಶಂಕರ ಬಿದರಿ ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿದ ಅವರು, `ದೇಶಕ್ಕೆ ಅತ್ಯಂತ ಪ್ರಾಚೀನ ಸಂಸ್ಕೃತಿ ಇದ್ದರೂ ಸುಮಾರು ಸಾವಿರ ವರ್ಷಗಳ ಕಾಲ ಸಣ್ಣಪುಟ್ಟ ದೇಶಗಳ ದಾಸ್ಯದಲ್ಲಿ ನಾವಿದ್ದೆವು. ಇದಕ್ಕೆ ನಮ್ಮಲ್ಲಿ ಏಕತೆಯ ಕೊರತೆಯೇ ಕಾರಣವಾಗಿತ್ತು. ಆಗ ಪ್ರಾಂತ, ಸಂಸ್ಥಾ ನಗಳಲ್ಲಿ ಭಾರತವು ಹಂಚಿಹೋಗಿತ್ತು. ಆದ್ದರಿಂದ ಸರ್. ಎಂ.ವಿ. ಮೈಸೂರು ಸಂಸ್ಥಾನದ ದಿವಾನರಾಗಲು ಮಾತ್ರ ಸಾಧ್ಯವಾಯಿತು. ಅವರಂತಹ ಅಪ್ರತಿಮ ಮೇಧಾವಿ ಸಮಗ್ರ ಭಾರತ ದಲ್ಲಿ ಜನಿಸಿದ್ದರೆ ಖಚಿತವಾಗಿ ಪ್ರಧಾನಿ ಯಾಗುತ್ತಿದ್ದರು~ ಎಂದು ಹೇಳಿದರು.

`ಭಾಷೆಗಳಿಗಾಗಿ, ಗಡಿಗಳಿಗಾಗಿ ದ್ವೇಷ ಸಾಧಿಸುವುದನ್ನು ಮೊದಲು ಬಿಡಬೇಕು. ನಾವೆಲ್ಲರೂ ಭಾರತೀಯರು ಎಂಬುದನ್ನು ಮನಗಂಡು ಒಂದಾಗಿ ಬಾಳಬೇಕು. ಪ್ರತಿಯೊಂದು ಭಾಷೆಗೂ ಗೌರವ ಸಲ್ಲಿಸೋಣ. ಆದರೆ ಅದಕ್ಕಾಗಿ ಗುದ್ದಾಟ ಬೇಡ. ಅವಕಾಶಗಳು ಇರುವ ಸಂದರ್ಭದಲ್ಲಿ ಸದ್ಬಳಕೆ ಮಾಡಿಕೊಳ್ಳ ದಿದ್ದರೆ ಅಪರಾಧವಾ ಗುತ್ತದೆ~ ಎಂದು ನುಡಿದರು.

`ಹಲವು ಭಾಷೆ, ಸಂಸ್ಕೃತಿ, ವೈರುಧ್ಯಗಳು ಇರುವ ಈ ದೇಶದಲ್ಲಿ ಭ್ರಷ್ಟಾಚಾರ ಮತ್ತು ದೋಷಗಳು ಸಹಜ. ಅದರೊಳಗೆ ಉತ್ತಮವಾದ ಸಾಧನೆಯನ್ನು ಮೆರೆಯುವ ಮೂಲಕ ದೇಶದ ಅಭಿವೃದ್ಧಿಗೆ ಶ್ರಮಿಸಬೇಕು.

ಕಾನೂನನ್ನೂ ಮೀರಿ ಭ್ರಷ್ಟತೆ ಬೆಳೆದಾಗ ದೇಶದ ಸಮಗ್ರತೆಗೆ ಕುತ್ತು ಬರುತ್ತದೆ. ಅದನ್ನು ತಪ್ಪಿಸಲೆಂದೇ ಸಂತೋಷ ಹೆಗ್ಡೆ ಮತ್ತು ಅಣ್ಣಾ ಹಜಾರೆಯವರು ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ~ ಎಂದರು.

`ಅಕ್ರಮ ಸಂಪನ್ಮೂಲ ಕ್ರೂಢೀಕರಿ ಸುತ್ತಿರುವ ಜನರನ್ನು ನೋಡಿದರೆ ಅಸಹ್ಯವಾಗುತ್ತಿದೆ. ಅವರಿಗೆ ಅದೆಷ್ಟು ಹಣ ಬೇಕು. ಅವರ ಮನೆಗಳಲ್ಲಿ ಇನ್ನು ಮುಂದೆ  ಹುಟ್ಟುವ ಮಕ್ಕಳು, ಮೊಮ್ಮಕ್ಕಳು ಅಂಗವಿಕಲರಾಗಿ ಹುಟ್ಟು ವರೇ? ತಮ್ಮ ಕೈಗಳಿಂದ ದುಡಿಯುವ ಸಾಮರ್ಥ್ಯವಿಲ್ಲದ ಮಕ್ಕಳು ಜನಿಸುವರೇ? ಅಂತಹವರಿಗಾಗಿ ಅಕ್ರಮ ಸಂಪತ್ತು ಕೂಡಿಡುತ್ತಿದ್ದಾರೆಯೇ?~ ಎಂದು ಕಟುವಾಗಿ ಪ್ರಶ್ನಿಸಿದರು.

`ಈ ದೇಶದ ಇತಿಹಾಸದ ಪುಟಗಳನ್ನು ತಿರುವಿದರೆ ಅಕ್ರಮ ಸಂಪತ್ತು ಗಳಿಸಿದ ಅಥವಾ ಆಗರ್ಭ ಶ್ರೀಮಂತರನ್ನು ಪೂಜಿಸಿದ ಉದಾಹರಣೆಗಳು ಸಿಗುವುದಿಲ್ಲ. ಅದೇ ದೇಶ ಸಮಾಜಕ್ಕಾಗಿ ತ್ಯಾಗ ಮತ್ತು ಸೇವೆಯ ಹಾದಿ ಹಿಡಿದ ಮಹಾತ್ಮ ಗಾಂಧೀಜಿ, ಸ್ವಾಮಿ ವಿವೇಕಾನಂದ, ಸುಭಾಸಚಂದ್ರ ಬೋಸ್, ಸರ್ದಾರ್ ವಲ್ಲಭಾಯ್‌ಪಟೇಲ್ ಅವರಂತಹವರ ಚಿತ್ರಗಳನ್ನು ಇಂದಿಗೂ ನಮ್ಮ ಮನೆ ಮತ್ತು ಮನದಲ್ಲಿ ಇಟ್ಟು ಪೂಜಿಸುತ್ತೇವೆ. ಅಂತಹ ಗೌರವಯುತ ಬದುಕು ಬಾಳಲು ಎಲ್ಲರೂ ಮುಂದಾಗಬೇಕು. ಅದೇ ನಾವು ಭಾರತಮಾತೆಯ ಋಣ ತೀರಿಸುವ ಹಾದಿ~ ಎಂದು ಹೇಳಿದರು.

ಕಾರ್ಯಕ್ರಮವನ್ನು ಶ್ರೀಂಗಾರಿ ಸಂಜೀವ ಶೆಟ್ಟಿ ಉದ್ಘಾಟಿಸಿದರು. ಲಯನ್ಸ್ ಪ್ರಾಂತೀಯ ಅಧ್ಯಕ್ಷ ಎಂ. ಸಂಜೀವಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಸಂಸ್ಥಾಪಕ ಡಾ. ಆರ್. ಬಾಲಸುಬ್ರಹ್ಮಣ್ಯ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT