ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುದಾನಕ್ಕೆ ಒತ್ತಾಯ: ಧರಣಿ

Last Updated 7 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಬಜೆಟ್‌ನಲ್ಲಿ ಘೋಷಣೆ ಮಾಡಿರುವಂತೆ ಶಾಲಾ ಕಾಲೇಜುಗಳಿಗೆ ಶೀಘ್ರವೇ ಅನುದಾನ ನೀಡಬೇಕು ಎಂದು ಒತ್ತಾಯಿಸಿ ರಾಜ್ಯ ಶಿಕ್ಷಕರ ಸಂಘಗಳ ಒಕ್ಕೂಟದ ಸದಸ್ಯರು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಆರು ದಿನಗಳಿಂದ ಧರಣಿ ನಡೆಸುತ್ತಿದ್ದಾರೆ.

ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಕೆ.ಸಿ.ಪುಟ್ಟಸಿದ್ದಶೆಟ್ಟಿ ಮಾತನಾಡಿ, `1994-95ನೇ ಸಾಲಿಗೂ ಮುಂಚೆ ಪ್ರಾರಂಭಿಸಿರುವ ಶಾಲಾ ಕಾಲೇಜುಗಳಿಗೆ `ಅನುದಾನ' ನೀಡುವುದಾಗಿ ಸರ್ಕಾರ 2007ರ ಬಜೆಟ್‌ನಲ್ಲಿ ಘೋಷಿಸಿತ್ತು. ಅದರಂತೆ 1150 ಶಾಲಾ-ಕಾಲೇಜುಗಳಿಗೆ ಅನುದಾನ ಸಿಕ್ಕಿದೆ. ಆದರೆ, ಇನ್ನುಳಿದ 600 ಶಿಕ್ಷಣ ಸಂಸ್ಥೆಗಳಿಗೆ ಅನುದಾನ ಮಂಜೂರಾಗಬೇಕಿದೆ.

ಈ ಪೈಕಿ 89 ಪ್ರೌಢಶಾಲೆಗಳು, 96 ಪ್ರಾಥಮಿಕ ಶಾಲೆಗಳು ಮತ್ತು 12 ಪದವಿ ಪೂರ್ವ ಕಾಲೇಜುಗಳ ಪ್ರಸ್ತಾವನೆಗಳು ಶಿಕ್ಷಣ ಇಲಾಖೆಯಲ್ಲಿ ಕೊಳೆಯುತ್ತಿವೆ. ಈ  ಅನುದಾನದ ನಿರೀಕ್ಷೆಯಲ್ಲೇ ಸಾವಿರಾರು ಶಿಕ್ಷಕರು ಹಾಗೂ ಇತರೆ ಸಿಬ್ಬಂದಿ ಹಲವು ವರ್ಷಗಳಿಂದ ಪುಕ್ಕಟೆಯಾಗಿ ದುಡಿಯುತ್ತಿದ್ದಾರೆ' ಎಂದು ಆರೋಪಿಸಿದರು.

`ಶಿಕ್ಷಕರ ಬೇಡಿಕೆಗಳಿಗೆ ಸ್ಪಂದಿಸುವಂತೆ ಒತ್ತಾಯಿಸಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ಮುಖಂಡರು, ಕಾರ್ಯಕರ್ತರು ಪ್ರತಿಭಟನಾ ಸ್ಥಳಕ್ಕೆ ಬಂದು ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಆದರೂ, ಸರ್ಕಾರ ಕಣ್ತೆರೆಯದಿರುವುದು ಖಂಡನೀಯ. ಕೂಡಲೇ ಮುಖ್ಯಮಂತ್ರಿಗಳು ಮತ್ತು ಶಿಕ್ಷಣ ಸಚಿವರು ಮಧ್ಯಪ್ರವೇಶ ಮಾಡಿ ಸಮಸ್ಯೆಗಳನ್ನು ಬಗೆಹರಿಸಬೇಕು' ಎಂದು ಒತ್ತಾಯಿಸಿದರು.

`ಆರ್ಥಿಕ ಇಲಾಖೆ ಇಲ್ಲದ ಆಕ್ಷೇಪಣೆಗಳನ್ನು ಮುಂದು ಮಾಡಿ ಅನುದಾನವನ್ನು ತಡೆಹಿಡಿದಿದೆ. ಅದರ ಅಗತ್ಯ ಹಾಗೂ ಅನಿವಾರ್ಯಗಳನ್ನು ಇಲಾಖೆಗೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಈ ಧರಣಿ ನಡೆಸಲಾಗುತ್ತಿದೆ.

ತರಗತಿಗಳನ್ನು ಬಹಿಷ್ಕರಿಸಿ ಹೋರಾಟದ ತೀವ್ರತೆ ಹೆಚ್ಚಿಸಿದರೆ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತದೆ.

ಸಮಸ್ಯೆಗಳನ್ನು ಲಘುವಾಗಿ ಪರಿಗಣಿಸಿದರೆ ಮುಂದಿನ ಅನಾಹುತಗಳಿಗೆ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ' ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT