ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಮಾವೇಶದಲ್ಲಿ ಕಾಗೇರಿ ಭರವಸೆ

Last Updated 11 ಫೆಬ್ರುವರಿ 2012, 19:50 IST
ಅಕ್ಷರ ಗಾತ್ರ

ಬೆಂಗಳೂರು: `ಅನುದಾನಿತ ಶಾಲಾ ಶಿಕ್ಷಕರಿಗೂ ಅಂತರ ಜಿಲ್ಲಾ ವರ್ಗಾವಣೆ ವೇಳೆ ಕಾಲಮಿತಿ ಬಡ್ತಿ ನೀಡಲು ಪ್ರಯತ್ನಿಸಲಾಗುವುದು~ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.
ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕವು ನಗರದ ಶಿಕ್ಷಕರ ಸದನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶೈಕ್ಷಣಿಕ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

`ಅಂತರ ಜಿಲ್ಲೆ ವರ್ಗಾವಣೆ ಸಂದರ್ಭದಲ್ಲಿ ಸರ್ಕಾರಿ ಶಾಲಾ ಶಿಕ್ಷಕರಿಗೆ ಕಾಲಮಿತಿ ಬಡ್ತಿ ನೀಡಲಾಗುತ್ತಿದೆ. ಅದೇ ರೀತಿ ಜಿಲ್ಲೆಯಿಂದ ಜಿಲ್ಲೆಗೆ ವರ್ಗಾವಣೆಯಾದ ಅನುದಾನಿತ ಶಾಲಾ ಶಿಕ್ಷಕರಿಗೆ 10, 15 ಹಾಗೂ 20 ವರ್ಷಗಳ ವಿಶೇಷ ಬಡ್ತಿ ನೀಡುವ ಸಂಬಂಧ ಚಿಂತನೆ ನಡೆದಿದೆ~ ಎಂದರು.

`ಶಿಕ್ಷಕರು ಹಾಗೂ ವಿದ್ಯಾರ್ಥಿಗಳ 1: 30 ಅನುಪಾತವನ್ನು ಅನುದಾನಿತ ಶಾಲೆಗಳಲ್ಲೂ ಜಾರಿಗೊಳಿಸುವ ಕುರಿತು ಚರ್ಚೆ ನಡೆದಿದೆ. ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾದರೆ ಹೆಚ್ಚುವರಿ ಶಿಕ್ಷಕರನ್ನು ಬೇರೆ ಕೆಲಸಗಳಿಗೆ ನಿಯೋಜಿಸುವುದು ಅನಿವಾರ್ಯವಾಗುತ್ತದೆ. ಹಾಗಾಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ಶಿಕ್ಷಕರು ಹಾಗೂ ಆಡಳಿತ ಮಂಡಳಿ ಗಮನ ಹರಿಸಬೇಕು~ ಎಂದು ಹೇಳಿದರು.

`ಬೆಂಗಳೂರಿನಲ್ಲಿ ಶಾಲೆಗಳು ಬೆಳಿಗ್ಗೆ 9.30ಕ್ಕೆ ಆರಂಭವಾಗುವ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಯಥಾ ಪ್ರಕಾರ ಬೆಳಿಗ್ಗೆ 9.30ಕ್ಕೆ ಶಾಲೆಗಳು ಕಾರ್ಯಾರಂಭವಾಗಲಿದ್ದು, ಈ ಬಗ್ಗೆ ಯಾವುದೇ ಗೊಂದಲ ಬೇಡ~ ಎಂದು ಸ್ಪಷ್ಟಪಡಿಸಿದರು.

`ಪಂಡಿತ್ ದೀನ ದಯಾಳ್ ಉಪಾಧ್ಯಾಯ ಚಿರಸ್ಮರಣೆ ದಿನದಂದು ಅವರ ಆದರ್ಶಗಳನ್ನು ಪಾಲಿಸುವತ್ತ ಎಲ್ಲರೂ ಗಮನ ಹರಿಸಬೇಕಿದೆ. ವೈಚಾರಿಕ ತಳಹದಿಯ ರಾಜಕೀಯ ಪಕ್ಷವನ್ನು ರೂಪಿಸಿದ ಮಹಾನ್ ಚೇತನ ಅವರು. ಸಾರ್ವಜನಿಕ ಜೀವನದಲ್ಲಿರುವವರು ತಮ್ಮ ಜವಾಬ್ದಾರಿಯನ್ನು ಅರಿತು ನಡೆದುಕೊಳ್ಳಲು ಉಪಾಧ್ಯಾಯರಂತಹ ಹಿರಿಯರ ಸ್ಮರಣೆ ಹಾಗೂ ಅವರ ತತ್ವ ಪರಿಪಾಲನೆ ಅಗತ್ಯ~ ಎಂದರು.

`ಶಿಕ್ಷಣ ಕ್ಷೇತ್ರ ವಾಣಿಜ್ಯೀಕರಣವಾಗುತ್ತಿದೆ ಎಂಬ ಆರೋಪವಿದೆ. ಹಾಗೆಯೇ ಮಕ್ಕಳ ಮೇಲೆ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ ತೀವ್ರವಾಗಿದೆ. ಆ ಹಿನ್ನೆಲೆಯಲ್ಲಿ ಶಿಕ್ಷಣವು ವಾಣಿಜ್ಯಮಯವಾಗದೆ, ಸೇವಾ ಕ್ಷೇತ್ರವಾಗಿರುವಂತೆ ಎಚ್ಚರ ವಹಿಸಬೇಕಿದೆ. ಮಕ್ಕಳಲ್ಲಿ ದೇಶೀಯ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸಬೇಕಿದೆ~ ಎಂದು ಹೇಳಿದರು.

ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವೆ 1:30ರ ಅನುಪಾತ ವ್ಯವಸ್ಥೆ ಜಾರಿಯಾಗಬೇಕು. ವರ್ಗಾವಣೆಯಾದ ಅನುದಾನಿತ ಶಾಲೆಗಳ ಶಿಕ್ಷಕರಿಗೂ ಕಾಲಮಿತಿ ಬಡ್ತಿ ನೀಡಬೇಕು. ಆರನೇ ವೇತನ ಆಯೋಗವನ್ನು ಶೀಘ್ರವಾಗಿ ಅನುಷ್ಠಾನಗೊಳಿಸಬೇಕು ಎಂಬುದು ಸೇರಿದಂತೆ ಒಟ್ಟು 19 ಬೇಡಿಕೆಗಳನ್ನು ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಟಿ. ರವಿಕುಮಾರ್ ವಾಚಿಸಿದರು.ಇದೇ ಸಂದರ್ಭದಲ್ಲಿ ಉತ್ತಮ ಆಡಳಿತ ಮಂಡಳಿಗಳು, ಉತ್ತಮ ಶಿಕ್ಷಕರು ಹಾಗೂ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.

ವಿಧಾನ ಪರಿಷತ್ ಸದಸ್ಯ ಅಶ್ವತ್ಥ ನಾರಾಯಣ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಆರ್.ಕೆ. ನಲ್ಲೂರು ಪ್ರಸಾದ್, ಸುಮಂಗಲಿ ಸೇವಾಶ್ರಮದ ಎಸ್.ಜಿ. ಸುಶೀಲಮ್ಮ, ಶಿಕ್ಷಣ ಮತ್ತು ಶಿಕ್ಷಣ ಸಂಸ್ಥೆಗಳ ಪ್ರಕೋಷ್ಠದ ಸಂಚಾಲಕ ಎಂ. ನೀಲಯ್ಯ, ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಸ್. ಪ್ರಕಾಶಮೂರ್ತಿ, ಉಪಾಧ್ಯಕ್ಷ ಡಾ.ಕೆ. ಹನುಮಂತಪ್ಪ, ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಚ್. ಮೋಹನ್‌ಗೌಡ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT