ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುದಿನವೂ `ಸಪ್ತಸ್ವರ' ಮೇಳ...

ನಾದದ ಬೆನ್ನೇರಿ...
Last Updated 20 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಅದು ಪ್ರಶಾಂತ ವಾತಾವರಣದಲ್ಲಿರುವ ವಿಶಿಷ್ಟ ಸಂಗೀತ ಶಾಲೆ. ಗಿಡಮರಗಳಿಂದ ಕೂಡಿದ ಸುಂದರ ಕೈತೋಟದ ಮಧ್ಯೆ ಇರುವ ಆ ಕಟ್ಟಡದ ಮಹಡಿ ಏರಿದರೆ ಅಲ್ಲಿದೆ ನಾದೋಪಾಸನೆಗಾಗಿಯೇ ಇರುವ ಸಂಗೀತ ವಿದ್ಯಾಲಯ.  ಕೊಠಡಿಯೊಳಗೆ ಕಾಲಿಟ್ಟರೆ ಸರಸ್ವತಿಯ ಭಾವಚಿತ್ರ, ವಾಗ್ಗೇಯಕಾರರ ತೈಲಚಿತ್ರ, ಹರಿದಾಸರ ವರ್ಣಚಿತ್ರಗಳ ಜತೆಗೆ ತಂಬೂರಿಯ ನಾದ ಕೇಳಿದಾಗ ಸಂಗೀತದ ವಾತಾವರಣ ಮನಸ್ಸಿಗೆ ತಂಪೆರೆಯುತ್ತದೆ. ಇಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತವೂ ಇದೆ, ಸುಗಮ ಸಂಗೀತಕ್ಕೂ ಆದ್ಯತೆಯಿದೆ. ಸುಮಾರು ಐವತ್ತಕ್ಕೂ ಹೆಚ್ಚು ಮಕ್ಕಳು ಇಲ್ಲಿ ವಿವಿಧ ಬ್ಯಾಚ್‌ಗಳಲ್ಲಿ ಸಂಗೀತ ಕಲಿಯುತ್ತಾರೆ. ರಾಗಾಧಾರಿತ ಸಿನಿಮಾ ಗೀತೆಗಳನ್ನೂ ಹಾಡಿ ಖುಷಿ ಪಡುತ್ತಾರೆ. ಇದು `ಸಪ್ತಸ್ವರ ಸಂಗೀತ ವಿದ್ಯಾಲಯ'ದ ವಿಶೇಷತೆ.

ಕಳೆದ ಹನ್ನೊಂದು ವರ್ಷಗಳಿಂದ ಇಲ್ಲಿ ಸಂಗೀತ ತರಗತಿ ನಡೆಯುತ್ತಿದೆ. ಬನ್ನೇರುಘಟ್ಟ ರಸ್ತೆ ಅರಕೆರೆ ಸಮೀಪದ ಶಾಂತಿನಿಕೇತನ ಬಡಾವಣೆಯಲ್ಲಿದೆ ಈ ಸಪ್ತಸ್ವರ ಸಂಗೀತ ವಿದ್ಯಾಲಯ. ಸಂಗೀತ ಸಂಯೋಜಕಿ ಮತ್ತು ಸಂಘಟಕಿಯಾಗಿರುವ ವಿದುಷಿ ಗೀತಾ ಸತ್ಯಮೂರ್ತಿ ಈ ಸಂಸ್ಥೆಯ ಸಂಸ್ಥಾಪಕಿ.

ವಿದುಷಿ ಗೀತಾ ಸತ್ಯಮೂರ್ತಿ ಆಕಾಶವಾಣಿ ಕಲಾವಿದೆ. ವಿದ್ವತ್ ಪರೀಕ್ಷೆಯಲ್ಲಿ ಚಿನ್ನದ ಪದಕ ಪಡೆದ ಇವರು ವಿದ್ವಾನ್ ಆರ್.ಆರ್. ಕೇಶವಮೂರ್ತಿ ಅವರ ಬಳಿ ಶಾಸ್ತ್ರೀಯ ಸಂಗೀತ ಮತ್ತು ಗಾಯಕ ಎಚ್.ಕೆ. ನಾರಾಯಣ ಅವರ ಬಳಿ ಸುಗಮ ಸಂಗೀತ ಕಲಿತವರು. ಆರಂಭದ ಸಂಗೀತ ಶಿಕ್ಷಣವನ್ನು ಬಳ್ಳಾರಿ ಸಹೋದರರು ವಿದ್ವಾನ್ ಡಿ. ಸುಬ್ಬರಾಮಯ್ಯ ಅವರಿಂದ ಕಲಿತರು.

ಹಾಗೆ ನೋಡಿದರೆ ಗೀತಾ ಸತ್ಯಮೂರ್ತಿ ಅವರು ವೃತ್ತಿಯಲ್ಲಿ ಕೆನರಾ ಬ್ಯಾಂಕ್ ಉದ್ಯೋಗಿಯಾಗಿದ್ದವರು. ಸುಮಾರು 25 ವರ್ಷ ಸೇವೆ ಸಲ್ಲಿಸಿದ ಬಳಿಕ ಸ್ವಯಂ ನಿವೃತ್ತಿ ಪಡೆದು ಸಂಪೂರ್ಣವಾಗಿ ಸಂಗೀತದಲ್ಲಿ ತೊಡಗಿಸಿಕೊಂಡಿದ್ದಾರೆ. ಕಳೆದ 11 ವರ್ಷಗಳ ಹಿಂದೆ ಸಂಗೀತ ವಿದ್ಯಾಲಯವನ್ನೂ ಸ್ಥಾಪಿಸಿ ನಿತ್ಯವೂ `ಸ್ವರ ತಪಸ್ಸು' ಮಾಡುತ್ತಾರೆ. ಹೀಗಾಗಿ ಇಲ್ಲಿ ಅನುದಿನವೂ ಸಪ್ತಸ್ವರಗಳ ನಿನಾದ ಮೊಳಗುತ್ತಿರುತ್ತದೆ.

ಆರ್ಯಭಟ ಪ್ರಶಸ್ತಿ, `ರಂಗ ಪ್ರಪಂಚ' ಪ್ರಶಸ್ತಿ, ಸ್ವರಲಿಪಿ ಪ್ರತಿಷ್ಠಾನ ಪ್ರಶಸ್ತಿ, ಮನ್ಸೂರ್ ರತ್ನ ಪ್ರಶಸ್ತಿ ಗಳಿಸಿದ್ದು ಇವರ ಹೆಮ್ಮೆ. ಇವರು ಹಾಡಿದ ದಾಸರ ಪದಗಳ ಸೀಡಿ ಬಹಳಷ್ಟು ಜನಪ್ರಿಯವಾಗಿದೆ. ಆಕಾಶವಾಣಿ, ದೂರದರ್ಶನಗಳಲ್ಲಿ ಅನೇಕ ಕಛೇರಿಗಳನ್ನು ನೀಡಿರುವ ಇವರಿಗೆ ಬೆಂಗಳೂರು ಅಲ್ಲದೆ ಹೊರರಾಜ್ಯಗಳಲ್ಲಿಯೂ ಸಂಗೀತ ಕಛೇರಿ ನೀಡಿದ ಅನುಭವ ಇದೆ.

ಕೆಲವು ಸಂಗೀತ ಶಾಲೆಗಳು ಹಿಂದೂಸ್ತಾನಿ ಸಂಗೀತಕ್ಕೆ ಮಾತ್ರ ಸೀಮಿತವಾದರೆ ಇನ್ನು ಕೆಲವು ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಮಾತ್ರ ಸೀಮಿತವಾಗಿರುತ್ತವೆ. ಕೆಲವು ಶಾಲೆಗಳಲ್ಲಿ ಗಾಯನ ಜತೆಗೆ ವಾದನ ಪಾಠವೂ ಲಭ್ಯವಿರುತ್ತದೆ. ಆದರೆ ಸಪ್ತಸ್ವರ ಸಂಗೀತ ವಿದ್ಯಾಲಯದಲ್ಲಿ ಶಾಸ್ತ್ರೀಯ ಸಂಗೀತದ ಜತೆಗೆ ಸುಗಮ ಸಂಗೀತ ಪಾಠವೂ ಮಕ್ಕಳಿಗೆ ಸಿಗುತ್ತದೆ. ಎರಡೂ ಪ್ರಕಾರಗಳನ್ನು ಗೀತಾ ಅವರೇ ಹೇಳಿಕೊಡುತ್ತಾರೆ. ಶಾಸ್ತ್ರೀಯ ಸಂಗೀತದ ರಾಗ, ತಾಳ ಜ್ಞಾನ ಚೆನ್ನಾಗಿ ಕಲಿಸಿದ ಮೇಲೆ ಸುಗಮ ಸಂಗೀತದ ಪಾಠ ಮಾಡುತ್ತಾರೆ. ಹೀಗಾಗಿ ಇಲ್ಲಿನ ಮಕ್ಕಳಿಗೆ ಸರಳೆ ವರಸೆ, ಜಂಟಿ ವರಸೆ, ದಾಟುವರಸೆ, ಅಲಂಕಾರಗಳೂ ಸಲೀಸು, ಪುತಿನ, ಬೇಂದ್ರೆ, ಮೈಸೂರು ಅನಂತಸ್ವಾಮಿ ಅವರ ಸುಮಧುರ ಗೀತೆಗಳೂ ಕಂಠಪಾಠ. ಶಾಸ್ತ್ರೀಯ ಮತ್ತು ಲಘು ಶಾಸ್ತ್ರೀಯ ಎರಡನ್ನೂ ಒಂದೇ ಕಡೆ ಕಲಿಯುವ ಸುಯೋಗ..!

`ಐದು ವರ್ಷದ ಮಗುವಿನಿಂದ ಹಿಡಿದು ಅರುವತ್ತೈದು ವರ್ಷದ ಹಿರಿಯರವರೆಗಿನ ಶಿಷ್ಯಂದಿರು ಇಲ್ಲಿ ಸಂಗೀತ ಕಲಿಯುತ್ತಾರೆ. ಇಲ್ಲಿ ಕಲಿತ ಎಲ್ಲ ಮಕ್ಕಳು ಸರ್ಕಾರ ನಡೆಸುವ ಸಂಗೀತದ ವಿವಿಧ ಹಂತದ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಿದ್ದಾರೆ. ಸ್ವತಂತ್ರ ಕಛೇರಿ ನೀಡುವಷ್ಟರ ಮಟ್ಟಿಗೆ ಬೆಳೆದಿದ್ದಾರೆ. ಇದು ನನಗೆ ತೃಪ್ತಿ ತಂದಿದೆ' ಎಂದು ಹೇಳಿಕೊಳ್ಳುತ್ತಾರೆ ವಿದುಷಿ ಗೀತಾ.

ಮನೆಯಂಗಳದಲ್ಲಿ ಸಪ್ತಸ್ವರ ಸುಧೆ
`ಮನೆಯಂಗಳದಲ್ಲಿ ಸಪ್ತಸ್ವರ ಸುಧೆ' ಶೀರ್ಷಿಕೆಯಲ್ಲಿ ತಿಂಗಳಿಗೊಮ್ಮೆ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಪ್ರತಿ ತಿಂಗಳೂ ಒಬ್ಬ ಸಂಗೀತಗಾರರನ್ನು ತಿಂಗಳ ಅತಿಥಿಯಾಗಿ ಆಹ್ವಾನಿಸಿ ಅವರಿಂದ ಇಲ್ಲಿನ ಮಕ್ಕಳಿಗೆ ತಿಂಗಳಿಗೊಂದು ಹೊಸ ಹಾಡು ಕಲಿಸುವ ವಿಶಿಷ್ಟ ಕಾರ್ಯಕ್ರಮ ನಡೆಯುತ್ತದೆ. ಅತ್ಯಂತ ಉತ್ಸಾಹದಿಂದ ಕಲಿಯುವ ಮಕ್ಕಳು ಇನ್ನೂ ಹೊಸತನ್ನು ಬಯಸುತ್ತಾರೆ. ಇದು ಬಹಳ ವಿಶಿಷ್ಟ ಕಾರ್ಯಕ್ರಮವಾಗಿದ್ದು ಉತ್ತಮ ಪ್ರತಿಕ್ರಿಯೆಯೂ ಬರುತ್ತಿದೆ' ಎಂದು ವಿವರಿಸುತ್ತಾರೆ ಅವರು. 

`ಇಲ್ಲಿ ಕಲಿತ ಮಕ್ಕಳಿಗೆ ತಿಂಗಳಿಗೊಮ್ಮೆ ವೇದಿಕೆಯಲ್ಲಿ ಹಾಡುವ ಅವಕಾಶವೂ ಇದೆ. ಸಂಗೀತ ಕಾರ್ಯಾಗಾರ, ಶಿಬಿರಗಳೂ ಈ ವಿದ್ಯಾಲಯದ ಚಟುವಟಿಕೆಗಳಲ್ಲಿ ಸೇರಿದೆ.

ಆಯಾ ಕಾಲಕ್ಕೆ ತಕ್ಕುದಾದ ಹಾಡುಗಳನ್ನು ಸಹ ಇಲ್ಲಿ ಹೇಳಿಕೊಟ್ಟು, ಆಯಾಯ ಸಂದರ್ಭಗಳಲ್ಲಿ ಹಾಡಲಾಗುತ್ತದೆ. ಸ್ವಾತಂತ್ರ್ಯ ದಿನಾಚರಣೆಗೆ ದೇಶಭಕ್ತಿಗೀತೆ, ಗುರುವಂದನೆ, ಸರಸ್ವತಿ ಪೂಜೆ ಸಮಯಕ್ಕಾಗಿಯೇ ವಿಶೇಷ ಗೀತೆ, ತ್ಯಾಗರಾಜ-ಪುರಂದರದಾಸರ ಆರಾಧನಾ ಸಮಯದಲ್ಲಿ ಈ ಕೀರ್ತನಕಾರರೇ ರಚಿಸಿದ ದೇವರನಾಮ, ರಾಜ್ಯೋತ್ಸವ ಸಂದರ್ಭದಲ್ಲಿ ನಾಡು-ನುಡಿ ಗೀತೋತ್ಸವಕ್ಕಾಗಿ ಕನ್ನಡ ಗೀತೆ, ಫೆಬ್ರುವರಿಯಲ್ಲಿ ವಾರ್ಷಿಕ ಸಪ್ತಸ್ವರ ಸಂಗೀತೋತ್ಸವ.. ಇವೇ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಹೀಗೆ ವರ್ಷವಿಡೀ ಮಕ್ಕಳು ಚಟುವಟಿಕೆಯಿಂದ ಇರುವಂತೆ ಪ್ರೇರೇಪಿಸುವುದು ಈ ಸಂಗೀತ ಶಾಲೆಯ ಮತ್ತೊಂದು ವಿಶೇಷ' ಎಂದು ವಿವರಿಸುತ್ತಾರೆ ಅವರು.

ಈ ತಿಂಗಳಾರಂಭದಲ್ಲಿ ಸಪ್ತಸ್ವರ ಸಂಗೀತ ವಿದ್ಯಾಲಯದ ವಾರ್ಷಿಕ ಸಂಗೀತ ಸಂಭ್ರಮ ನಡೆಯಿತು. ವಿದ್ಯಾಲಯದ ಮಕ್ಕಳು ಕರ್ನಾಟಕ ಶಾಸ್ತ್ರೀಯ ಸಂಗೀತದ ಜತೆಗೆ ಭಾವಗೀತೆ, ಭಕ್ತಿಗೀತೆ, ದೇಶಭಕ್ತಿಗೀತೆ, ನಾಡಗೀತೆಗಳನ್ನು ಹಾಡಿದರು. ವರ್ಷವಿಡೀ ಸಂಗೀತ ತರಗತಿಗಳಲ್ಲಿ ಕಲಿತದ್ದನ್ನು ಮಕ್ಕಳು ಕೊಂಚವೂ ಅಳುಕಿಲ್ಲದೆ ಪ್ರಸ್ತುತಪಡಿಸಿದಾಗ ನೆರೆದವರೂ ತಲೆದೂಗಿದರು. ಮಕ್ಕಳ ಸಾಧನೆಯನ್ನು ಮೆಚ್ಚಿದರು ಎನ್ನುತ್ತಾರೆ ವಿದುಷಿ ಗೀತಾ.

ಸಂಸ್ಥೆಯ ಧ್ಯೇಯೋದ್ದೇಶಗಳು
`ಶಾಸ್ತ್ರೀಯ ಸಂಗೀತದ ಭದ್ರ ಬುನಾದಿಯೊಂದಿಗೆ ಶ್ರುತಿ, ಲಯಗಳ ಅರಿವು ಮೂಡಿಸಿ ವೇದಿಕೆಯಲ್ಲಿ ಹಾಡಲು ಮಾರ್ಗದರ್ಶನ ನೀಡುವುದು. ವಾಗ್ಗೇಯಕಾರರ, ಸಂಗೀತಗಾರರ ಬಗ್ಗೆ ವಿಷಯಗಳನ್ನು, ಜೀವನ ಚರಿತ್ರೆಯನ್ನು ತಿಳಿಸಿ ಸಂಗೀತ ಜ್ಞಾನ ಹೆಚ್ಚಿಸುವುದು, ಭಾರತೀಯ ಸಂಸ್ಕೃತಿ, ಕಲಾ ಪ್ರಕಾರಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅಭಿಮಾನ, ಒಲವು ಮೂಡಿಸುವ ಪ್ರಯತ್ನಗಳನ್ನು ಸಂಗೀತದ ಮೂಲಕ ಮಾಡುವುದು, ಕನ್ನಡ ನಾಡಿನ ಹಿರಿಮೆ, ಇಲ್ಲಿನ ಶ್ರೇಷ್ಠ ಕವಿಗಳ ಬಗ್ಗೆ, ಭಾಷೆಯ ಬಗ್ಗೆ ಕವಿತೆಯ ಭಾವಾರ್ಥ ವಿವರಿಸುವ ಮೂಲಕ ಕನ್ನಡ ಸಾಹಿತ್ಯದ ಬಗ್ಗೆಯೂ ಅರಿವು ಮೂಡಿಸುವುದು, ನಾಡಿನ ಪ್ರಸಿದ್ಧ ಸಂಗೀತಗಾರರ ಪರಿಚಯ, ಅವರ ರಾಗ ಸಂಯೋಜನೆಯ ಗೀತೆಗಳನ್ನು ವಿದ್ಯಾರ್ಥಿಗಳಿಗೆ ಅಭ್ಯಾಸ ಮಾಡಿಸುವುದು, ಪಕ್ಕವಾದ್ಯಗಳೊಂದಿಗೆ ವೇದಿಕೆಯಲ್ಲಿ ಹಾಡುವ ಅವಕಾಶಗಳನ್ನು ವಿದ್ಯಾರ್ಥಿಗಳಿಗೆ ಆಗಾಗ ನೀಡುವುದು ಈ ಸಂಸ್ಥೆಯ ಮಹತ್ವದ ಧ್ಯೇಯೋದ್ದೇಶಗಳಲ್ಲಿ ಸೇರಿವೆ' ಎಂದು ವಿವರ ನೀಡುತ್ತಾರೆ.

ವಿಳಾಸ: ಗೀತಾ ಸತ್ಯಮೂರ್ತಿ, ಸಪ್ತಸ್ವರ ಸಂಗೀತ ವಿದ್ಯಾಲಯ, ನಂ. 307ಬಿ, 12ನೇ ಮುಖ್ಯರಸ್ತೆ, ಶಾಂತಿನಿಕೇತನ ಬಡಾವಣೆ, ಅರಕೆರೆ, ಬನ್ನೇರುಘಟ್ಟ ರಸ್ತೆ, ಬೆಂಗಳೂರು-76. ಫೋನ್: 9845581130.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT