ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಅನುಭವ ಮಂಟಪ ಜಗತ್ತಿನ ಮೊದಲ ಸಂಸತ್ತು'

Last Updated 16 ಜುಲೈ 2013, 6:35 IST
ಅಕ್ಷರ ಗಾತ್ರ

ವಿಜಾಪುರ: `ಅಣ್ಣ ಬಸವಣ್ಣನವರ ಅನುಭವ ಮಂಟಪ ವಿಶ್ವದ ಮೊದಲ ಸಂಸತ್ತು ಆಗಿತ್ತು. ಆ ಅನುಭವ ಮಂಟಪದ ಮೂಲಕ ಅವರು ಚಿಂತನ- ಮಂಥನ ನಡೆಸಿದ್ದರು' ಎಂದು ಇಂಡಿಯಾ ರಿಜರ್ವ್ ಬಟಾಲಿಯನ್ ಕಮಾಂಡೆಂಟ್ ಕೆ.ಎಂ. ಗಂಗಾಧರಪ್ಪ ಹೇಳಿದರು.

ಆಹೇರಿಯ ಬಸವೇಶ್ವರ ವೇದಿಕೆ ಹಾಗೂ ಸೋಲಾಪುರ ಬಂಕಲಗಿಯ ಮಲ್ಲಿಕಾರ್ಜುನ ಕಲಾ ಸಾಹಿತ್ಯ ಸಂಸ್ಕೃತಿ ವೇದಿಕೆಯವರು ಬಸವಣ್ಣ ಹಾಗೂ ಡಾ.ಫ.ಗು. ಹಳಕಟ್ಟಿ ಅವರ ಜನ್ಮ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಕವಿ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಬಸವಣ್ಣನವರು ಸಮಾಜದಲ್ಲಿ ಸಮಾನತೆ ತರಲು ಜಾತಿ, ವರ್ಣ, ವರ್ಗ ರಹಿತ ಸಮಾಜದ ತಳಹದಿಯಲ್ಲಿ ಕಲ್ಯಾಣ ರಾಜ್ಯ ಸ್ಥಾಪಿಸಲು ಮುಂದಾಗಿ ದ್ದರು. ತಮ್ಮ ವಚನಗಳ ಮೂಲಕ  ವಿಶ್ವಕ್ಕೆ ಆ ಸಂದೇಶ ರವಾನಿಸಿದರು ಎಂದರು.

ಮುಖ್ಯ ಅತಿಥಿಯಾಗಿದ್ದ ಬಿ.ಎಲ್.ಡಿ.ಇ. ಸಂಸ್ಥೆಯ ಎಸ್.ಬಿ. ಕಲಾ ಮತ್ತು ಕೆ.ಸಿ.ಪಿ. ವಿಜ್ಞಾನ ಕಾಲೇಜಿನ ಇತಿಹಾಸ ಪ್ರಾಧ್ಯಾಪಕ ಡಾ.ಸುರೇಶ ಬಿ. ಬಿರಾದಾರ, 12ನೇ ಶತಮಾನ ಶರಣರ ಜಾಗೃತಿಯ ಯುಗವಾಗಿತ್ತು. ಆಗ ಸಮಾಜದಲ್ಲಿ ತಾಂಡವವಾಡುತ್ತಿದ್ದ ಮೂಢನಂಬಿಕೆ, ಜಾತೀಯತೆಯನ್ನು ಹೋಗಲಾಡಿಸಲು ಅವರೆಲ್ಲ ಶ್ರಮಿಸಿದರು ಎಂದರು.

ಅಧ್ಯಕ್ಷತೆ ವಹಿಸಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸೋಮಶೇಖರ ವಾಲಿ,  ಈ ಜಿಲ್ಲಾ ಮಟ್ಟದ ಕವಿ ಸಮ್ಮೇಳನದಲ್ಲಿ ಪ್ರತಿಯೊಂದು ಕವನ ಪರಿಪೂರ್ಣವಾಗಿದ್ದವು. ಬಸವಣ್ಣನವರು ಮತ್ತು ಡಾ.ಫ.ಗು. ಹಳಕಟ್ಟಿ ಅವರ ಕುರಿತು ಇನ್ನಷ್ಟು ಅಧ್ಯಯನ ನಡೆಸಿ ಕವನ ರಚಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಸೌಮ್ಯ ಕಲ್ಲೂರ ಉದ್ಘಾಟಿಸಿದರು. ಆಹೇರಿ ಬಂಥನಾಳ ವಿರಕ್ತಮಠದ ಚಿಲ್ಲಾಲಿಂಗ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

ಸಿಕಾಬ್ ಮಹಿಳಾ ಕಾಲೇಜಿನ ಉಪನ್ಯಾಸಕ ಯು.ಎನ್. ಕುಂಟೋಜಿ, ಕಸಾಪ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಖಾದ್ರಿ ಇನಾಮದಾರ, ಇಂಡಿ ಕಸಾಪ ಅಧ್ಯಕ್ಷ ಡಾ. ಕಾಂತು ಇಂಡಿ, ಚಂದ್ರಶೇಖರ ದೇವರಡ್ಡಿ, ಮಹಾದೇವ ಕುರೆ, ಪ.ಗು. ಸಿದ್ದಾಪುರ, ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಜಿ. ಯಾದವಾಡ  ಪಾಲ್ಗೊಂಡಿದ್ದರು.

ಬಸವ ವೇದಿಕೆ ಅಧ್ಯಕ್ಷ ಬಂಡೆಪ್ಪ ತೇಲಿ ಸ್ವಾಗತಿಸಿದರು.  ಸುಭಾಸ ಕಾರ್ಯಕ್ರಮ ನಿರೂಪಿಸಿದರು. ಶರಣಗೌಡ ಪಾಟೀಲ ವಂದಿಸಿದರು. ವಿಶ್ವಕರ್ಮ ಸಮಾಜದ ಮುಖಂಡರ ಸಂತಸ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಬಜೆಟ್‌ನಲ್ಲಿ ವಿಶ್ವಕರ್ಮ ಅಭಿವೃದ್ಧಿ ನಿಗಮ ಸ್ಥಾಪನೆಗೆ 5 ಕೋಟಿ ರೂಪಾಯಿ ಒದಗಿಸಿರುವುದಕ್ಕೆ ವಿಶ್ವಕರ್ಮ ಸಮಾಜದ ಮುಖಂಡರಾದ  ಎಸ್.ಎಸ್. ಬಡಿಗೇರ, ಶಿವಶಂಕರ ಎಸ್. ಬಡಿಗೇರ, ಮೌನೇಶ ಪತ್ತಾರ, ಶಶಿಧರ ಪಂಚಾಕ್ಷರಿ, ಬಸವರಾಜ ಪತ್ತಾರ, ಸಿದ್ದರಾಮ ಬಡಿಗೇರ, ಶ್ರೀಧರ ಪಂಚಾಕ್ಷರಿ, ಮೋಹನ ಬಡಿಗೇರ ಸಂತಸ ವ್ಯಕ್ತಪಡಿಸಿದ್ದಾರೆ.

ಜೆಡಿಎಸ್ ಟೀಕೆ: ರಾಜ್ಯದ ಜನತೆ ಉತ್ತಮ ಬಜೆಟ್ ನಿರೀಕ್ಷಿಸಿದ್ದರು. ಆದರೆ, ಈ ಬಜೆಟ್ ಗೊತ್ತು ಗುರಿ ಇಲ್ಲದೆ ಮುಂಬರುವ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟು ಕೊಂಡು ಮಂಡಿಸಿದ ಬಜೆಟ್ ಆಗಿದೆ. ಮುಖ್ಯಮಂತ್ರಿಗಳು ಸಮಾನ ದೃಷ್ಟಿ ಕಾಣುವಲ್ಲಿ ವಿಫಲರಾಗಿದ್ದಾರೆ ಎಂದು ಜೆಡಿಎಸ್ ಜಿಲ್ಲಾ ಘಟಕದ ಮಹಾ ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ಹಿರೇಮಠ ಟೀಕಿಸಿದ್ದಾರೆ.

ಕೃಷಿಗೆ ಮಹತ್ವ ನೀಡಿಲ್ಲ: ಸಿದ್ದ ರಾಮಯ್ಯನವರು ಮಂಡಿಸಿರುವ ಬಜೆಟ್‌ನಲ್ಲಿ ಕೃಷಿಗೆ ಹೆಚ್ಚು ಒತ್ತು ನೀಡಿಲ್ಲ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡ ಭೀಮಶಿ ಕಲಾದಗಿ ದೂರಿದ್ದಾರೆ.

ನಗರ ಸಭೆಯನ್ನು ಮಹಾನಗರ ಪಾಲಿಕೆಯನ್ನಾಗಿ ಮೇಲ್ದರ್ಜೆಗೆ ಏರಿಸಿ ರುವುದು. ರೈತರಿಗೆ ಶೇ.1ರ ಬಡ್ಡಿ ದರದಲ್ಲಿ ರೂ. 3 ಲಕ್ಷಕ್ಕೂ ಹೆಚ್ಚು ಸಾಲ ಸೌಲಭ್ಯ ಕಲ್ಪಿಸಿರುವುದು ಸ್ವಾಗತಾರ್ಹ. ಆದರೆ, ಜಿಲ್ಲೆಯಲ್ಲಿ ಹೆಚ್ಚಿನ ನೀರಾವರಿ ಯೋಜನೆಯನ್ನು ಕೈಗೆತ್ತಿಕೊಂಡಿಲ್ಲ ಎಂದು ಅಣ್ಣಾರಾಯ ಇಳಗೇರಿ, ಜಿ.ಎಸ್. ಇಂಗಳಗಿ, ರಾಮಣ್ಣ ಶಿರಾಗೋಳ, ಖಾಜಾಸಾಬ ಕೋಲಾರ, ರಾಮಚಂದ್ರ ರೂಢಗಿ, ಬಾಬುಗೌಡ ಪಾಟೀಲ ತಿಳಿಸಿದ್ದಾರೆ.

ಅಕ್ರಮ ಮರಳು ಗಣಿಗಾರಿಕೆ ತಡೆಗೆ ಡಿಸಿ ಆದೇಶ
ವಿಜಾಪುರ
: ಜಿಲ್ಲೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ ಹಾಗೂ ಮರಳು ಸಾಗಾಣಿಕೆ ತಡೆಗೆ ಜಿಲ್ಲಾಡಳಿತ ಬಿಗಿ ಕ್ರಮ ಕೈಗೊಂಡಿದ್ದು, ಮರಳು ಅಕ್ರಮಗಳ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಮರಳು ನಿರ್ವಹಣಾ ಸಮಿತಿಯ ಸದಸ್ಯರಿಗೆ ಆದೇಶ ನೀಡಿದ್ದಾರೆ.

ಜುಲೈ 9 ರಂದು ಹೊರಡಿಸಿರುವ ಆದೇಶದಲ್ಲಿ ಸರ್ಕಾರ ಅಕ್ರಮ ಮರಳು ಗಣಿಗಾರಿಕೆ ಹಾಗೂ ಸಾಗಾಣಿಕೆ ಮಾಡುವವರ ವಿರುದ್ಧ ಕ್ರಮಕೈಗೊಳ್ಳಲು ಜಿಲ್ಲಾ ಮಟ್ಟದಲ್ಲಿ ಇರುವ ಜಿಲ್ಲಾ ಮರಳು ಮಾನಿಟರಿಂಗ್ ಸಮಿತಿಯ ಸದಸ್ಯರಿಗೆ ಅಧಿಕಾರ ನೀಡಿದ್ದು, ಇದರನ್ವಯ ಜಿಲ್ಲೆಯಲ್ಲಿ ಮರಳು ಸಾಗಾಣಿಕೆ ಮಾಡುವ ವಾಹನವನ್ನು ತಡೆದು, ದಾಖಲೆಗಳನ್ನು ಪರಿಶೀಲಿಸಿ, ಅಕ್ರಮ  ಎಂದು ಕಂಡು ಬಂದರೆ ಅಂಥವರ ವಿರುದ್ಧ ದೂರು ದಾಖಲಿಸಲು ಹಾಗೂ ಗರಿಷ್ಠ 1ಲಕ್ಷರೂ. ವರೆಗೆ ದಂಡ ವಿಧಿಸಲು ಜಿಲ್ಲಾಧಿಕಾರಿಗಳು ಸಮಿತಿಯ ಸದಸ್ಯರಿಗೆ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT