ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಮತಿ ನೀಡದಿರಲು ಪರಿಸರಾಸಕ್ತರ ಒತ್ತಾಯ

Last Updated 2 ಮೇ 2012, 5:55 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಬಾಬಾಬುಡನ್ ಗಿರಿ ಶ್ರೇಣಿಯ ಅತ್ಯಂತ ಸೂಕ್ಷ್ಮ ಪ್ರದೇಶದಲ್ಲಿ ರೆಸಾರ್ಟ್‌ಗಳ ನಿರ್ಮಾಣಕ್ಕೆ ಖಾಸಗಿ ಭೂಮಿಯನ್ನು ಅನ್ಯಕ್ರಾಂತ ಮಾಡಿ ಅನುಮತಿ ನೀಡುವುದಕ್ಕೆ ತಕ್ಷಣ ಪೂರ್ಣವಿರಾಮ ಹಾಕಬೇಕು ಎಂದು ಪರಿಸರಾಸಕ್ತರು ಜಿಲ್ಲಾಡಳಿತ ಒತ್ತಾಯಿಸಿದ್ದಾರೆ.

ಈಗಾಗಲೇ ಗಿರಿಶ್ರೇಣಿಯಲ್ಲಿ ಖಾಸಗಿ ಭೂಮಿಗಳಲ್ಲಿ, ಕಾಫಿ ತೋಟಗಳಲ್ಲಿ ಬೃಹತ್ ರೆಸಾರ್ಟ್‌ಗಳ ನಿರ್ಮಾಣಕ್ಕೆ ಸಿದ್ಧತೆ ತ್ವರಿತಗತಿಯಿಂದ ಸಾಗಿದೆ. ಬಹುತೇಕ ರೆಸಾರ್ಟ್‌ಗಳಿಗೆ ಸೂಕ್ತ ಅನುಮತಿ ಇಲ್ಲ.

ಅನ್ಯಕ್ರಾಂತ ವಾಗಿರುವ ಭೂಮಿಯಲ್ಲಿ ನಿರ್ಮಾಣ ಕಾರ್ಯ ಮಾಡುವಾಗಲೂ ನಿರ್ದಿಷ್ಟ ಮಾನದಂಡ ಅನುಸರಿಸದೆ ಕಾನೂನು ಉಲ್ಲಂಘನೆ ನಡೆಯುತ್ತಿದೆ ಎಂದು ಭದ್ರಾ ವೈಲ್ಡ್‌ಲೈಫ್ ಕನ್ಸರ್‌ವೇಷನ್ ಟ್ರಸ್ಟ್ ಮುಖ್ಯಸ್ಥ ಡಿ.ವಿ.ಗಿರೀಶ್, ವೈಲ್ಡ್‌ಕ್ಯಾಟ್-ಸಿ ಆಡಳಿತ ಟ್ರಸ್ಟಿ ಶ್ರೀದೇವ್ ಹುಲಿಕೆರೆ ಮತ್ತು ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಸ.ಗಿರಿಜಾಶಂಕರ ಆರೋಪಿಸಿದ್ದಾರೆ.

ಪಶ್ಚಿಮಘಟ್ಟದಲ್ಲಿರುವ ಬಾಬಾಬುಡನ್‌ಗಿರಿ ಶ್ರೇಣಿ ಅತ್ಯಂತ ಸೂಕ್ಷ್ಮ ಪ್ರದೇಶ, ಭದ್ರಾ ನದಿಯ ಜಲಾನಯನ ಪ್ರದೇಶ, ಜತೆಗೆ ನೂರಾರು ಹಳ್ಳಗಳ ಉಗಮಸ್ಥಾನ, ಎಲ್ಲಕ್ಕಿಂತ ವಿಶೇಷವಾಗಿ ದಟ್ಟವಾದ ಶೋಲಾಕಾಡುಗಳನ್ನು ತನ್ನ ಮಡಚುಗಳಲ್ಲಿ ಹೊಂದಿದೆ.
 
ದಿಬ್ಬಗಳಲ್ಲಿರುವ ವಿಶಾಲ ಹುಲ್ಲುಗಾವಲು ಮಳೆ ನೀರು ಹೀರುಕಗಳಾಗಿ, ಮಣ್ಣಿನ ಸವಕಳಿಗೆ ತಡೆಯಾಗಿ ವರ್ತಿಸುತ್ತವೆ. ಈ ಗಿರಿಶ್ರೇಣಿಯಾದ್ಯಂತ ವಿನಾಶದಂಚಿನಲ್ಲಿರುವ ಪಕ್ಷಿಗಳಾದ ಬಿಳಿ ಹೊಟ್ಟೆಯ ಶಾರ್ಟ್‌ವಿಂಗ್, ದ್ವಿಚರಿಯಾದ ನಿಕ್ಟ್ರಾ ಬ್ಯಾಟ್ರಿಕಸ್ ದತ್ತಾತ್ರೇಯನ್ಸಿಸ್, ಕಪ್ಪೆ ಸಂತತಿ, ಉರಗಗಳಲ್ಲಿ ಅಪರೂಪದ ಮಲಬಾರ್ ಪಿಟ್‌ವೈಪರ್ ಹಾವುಗಳು, ಸಸ್ಯಗಳಲ್ಲಿ ಅಪರೂಪದ ಅಪ್ಪುಗಿಡಗಳು, ಹನ್ನೆರಡು ವರ್ಷಕ್ಕೊಮ್ಮೆ ಹೂಬಿಡುವ ಸ್ಟ್ರೋಬಿಲಾಂತೆಸ್ ಸೆಸೈಲಿಸ್ ಅಥವಾ ಗುರಿಗೆ ಎಂದು ಕರೆಯುವ ಹೂವಿನ ಗಿಡಗಳನ್ನು ಹೊತ್ತು ನಿಂತಿದೆ. ಇಂತಹ ಪರಿಸರ ಸೂಕ್ಷ್ಮತೆ ಗಮನದಲ್ಲಿಟ್ಟುಕೊಂಡು ಈ ಗಿರಿಶ್ರೇಣಿಯಲ್ಲಿ ಖಾಸಗಿ ಅಥವಾ ಸರ್ಕಾರಿ ಭೂಮಿಯಲ್ಲಿ ರೆಸಾರ್ಟ್ ನಿರ್ಮಿಸಲು ತಡೆಹಾಕದಿದ್ದರೆ ಆ ಪ್ರದೇಶದ ಸೂಕ್ಷ್ಮತೆಗೆ ಇದು ಅಪಾಯಕಾರಿಯಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ರೆಸಾರ್ಟ್‌ಗಳು ಖಾಸಗಿ ಭೂಮಿಯಲ್ಲಿ ಕಾನೂನು ಚೌಕಟ್ಟು ಮೀರಿ ನಿರ್ಮಿಸಿರುವುದಕ್ಕೆ ಸೂಕ್ತ ಉದಾಹರಣೆಗಳೂ ಇವೆ. ಜಾಗರ ಹೋಬಳಿಯ ಇನಾಂ ದತ್ತಾತ್ರೇಯ ಪೀಠದ ಸರ್ವೇ ನಂ. 148/1/2/3 ಪ್ರದೇಶದಲ್ಲಿ ಮೆ.ಸಟೋರಿ ಇಕೊ ಅಡ್ವೆಂಚರ್ ರೆಸಾರ್ಟ್ ಸಂಸ್ಥೆ, ರೆಸಾರ್ಟ್ ನಿರ್ಮಾಣಕ್ಕೆ ಮುಂದಾಗಿದೆ.

ನಿರ್ಮಾಣ ಕಾರ್ಯ ಮಾಡಲು ಅರ್ಧ ಎಕರೆ ಜಾಗದಲ್ಲಿ ಭೂ ಸಮತಟ್ಟಿಗಾಗಿ ಮಣ್ಣು ತೆಗೆದಿದೆ. ಇಳಿಜಾರು ಪ್ರದೇಶದಲ್ಲಿ ಈ ಪ್ರಮಾಣದಲ್ಲಿ ಮಣ್ಣು ಕೆತ್ತನೆ ಗಿರಿಶ್ರೇಣಿಗೆ ಮಾರಕವಾಗುತ್ತದೆ. ಮಣ್ಣು ಸವಕಳಿ ವಿಪರೀತವಾಗಬಹುದು ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ.

ಅನುಮತಿ ಇಲ್ಲದ ಪ್ರದೇಶದಲ್ಲಿ ಕಾಟೇಜ್ ಮತ್ತು ಕಟ್ಟಡಗಳ ನಿರ್ಮಾಣವಾಗಿದೆ. ರೆಸಾರ್ಟ್‌ಗೆ ನೀರು ಅಗಾಧ ಪ್ರಮಾಣದಲ್ಲಿ ಬೇಕಾಗುತ್ತದೆ. ನೈಸರ್ಗಿಕವಾಗಿ ಹರಿಯುವ ಝರಿಯಿಂದಲೇ ನೀರು ಪಡೆಯಬೇಕಾಗಿದೆ. ಈ ರೀತಿ ಆ ನೀರಿನ ಬಳಕೆಯಾದರೆ ಭದ್ರಾ ಪಾತ್ರಕ್ಕೆ ಹೋಗುವ ನೀರಿನ ಪ್ರಮಾಣ ಕಡಿತಗೊಳ್ಳುವ ಅಪಾಯ, ಜತೆಗೆ ತಗ್ಗಿನ ಹಳ್ಳಿಗಳಿಗೆ ಅವಶ್ಯ ನೀರಿನ ಪ್ರಮಾಣ ಸಹ ಕಡಿತಗೊಳ್ಳಬಹುದೆಂದು ಶಂಕೆ ವ್ಯಕ್ತಪಡಿಸಿದ್ದಾರೆ.

ಈ ಗಿರಿಶ್ರೇಣಿಯ ಕಾಡುಗಳು ಅರಣ್ಯ ಕಾನೂನು ಪ್ರಕಾರ ಒಂದು ಸಾಂದ್ರತೆ (1ಡೆನ್‌ಸಿಟಿ) ಇರುವ ಶೋಲಾ ಅರಣ್ಯಗಳಾಗಿವೆ. ಇದಕ್ಕೆ ಅತ್ಯಂತ ಹೆಚ್ಚಿನ ರಕ್ಷಣೆಯನ್ನು ಅದರ ಪರಿಸರ ಪ್ರಾಮುಖ್ಯತೆ ಹಿನ್ನೆಲೆಯಲ್ಲಿ ನೀಡಬೇಕಾಗಿದೆ. ಇಲ್ಲಿ ಯಾವುದೇ ರೀತಿ ಅರಣ್ಯೇತರ ಚಟುವಟಿಕೆ ನಡೆಸಿದರೂ ಒಂದು ಹೆಕ್ಟೇರ್‌ಗೆ 75 ಲಕ್ಷ ರೂ. ದಂಡ ಕಾನೂನು ಅನ್ವಯ ವಿಧಿಸಬಹುದಾಗಿದೆ. ಆ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ ಅಧಿಕೃತವಾಗಿ ಸರ್ವೇ ಕಾರ್ಯ ಕೈಗೊಂಡಿರುವ ಜಂಟಿ ಮೋಜಣಿಯಲ್ಲಿ 2.05 ಎಕರೆ ವಿಸ್ತೀರ್ಣದಲ್ಲಿ ಒತ್ತುವರಿಯಾಗಿರುವುದನ್ನು ಉಲ್ಲೇಖಿಸಲಾಗಿದೆ.

ಅರಣ್ಯ ಇಲಾಖೆ ಸಹ ಜಿಲ್ಲಾಧಿಕಾರಿಗಳಿಗೆ, ಇಲಾಖೆಯ ಹಿರಿಯ ಅಧಿಕಾರಿಗಳಿಗೆ ತಮ್ಮ ಅಭಿಪ್ರಾಯ ಲಿಖಿತ ನೀಡಿ `ಇದು ಅತ್ಯಂತ ಸೂಕ್ಷ್ಮ ಪ್ರದೇಶವಾಗಿದೆ. 1632 ಮೀಟರ್ ಎತ್ತರವಿ ರುವ ಇಳಿಜಾರು ಪ್ರದೇಶವಾಗಿದೆ. ಹಲವು ನೀರಿನ ಮೂಲಗಳು ಇಲ್ಲಿವೆ. ಈ ಹಿನ್ನೆಲೆಯಲ್ಲಿ ಯಾವುದೇ ನಿರ್ಮಾಣ ಕಾರ್ಯ ಮಾಡಿದಲ್ಲಿ ಪರ್ವತ ಶ್ರೇಣಿಯ ಸೂಕ್ಷ್ಮತೆಗೆ ಹಾನಿಯುಂಟಾಗುತ್ತದೆ~ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ರೆಸಾರ್ಟ್ ನಿರ್ಮಾಣಕ್ಕೆ ನೀಡಿರುವ ಅನುಮತಿ ರದ್ದುಗೊಳಿಸಬೇಕು. ಉಲ್ಲಂಘನೆ ಯಾಗಿರುವ ಕಡೆ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಪಶ್ಚಿಮಘಟ್ಟ ಜೀವಂತ ಉಳಿಯಲು ಹಸಿರು ಹೊದಿಕೆ ಮುಖ್ಯ. ಕಾಂಕ್ರಿಟ್ ಕಾಡಿನ ನಿರ್ಮಾಣ ಗಿರಿ ಶ್ರೇಣಿಯ ಅವಸಾನಕ್ಕೆ ಆಹ್ವಾನ ನೀಡಿದಂತೆ. ಮುಂದೆ ಸಹ ಖಾಸಗಿ ಪ್ರದೇಶವೂ ಸೇರಿದಂತೆ ಈ ಸೂಕ್ಷ್ಮ ಪ್ರದೇಶದಲ್ಲಿ ರೆಸಾರ್ಟ್‌ಗಳಿಗೆ ಯಾವುದೇ ರೀತಿ ಅನುಮತಿ ನೀಡಬಾರದು ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT