ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುವಾದ ಎನ್ನುವುದು ಗಾಳಿಪಟದ ಹಾಗೆ...

Last Updated 22 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಅನುವಾದ ಕಾರ್ಯ ಕೈಗೆತ್ತಿಕೊಳ್ಳಲು ಪ್ರೇರಣೆ ಮೂಡಿದ್ದು ಹೇಗೆ?
ಇಂಗ್ಲಿಷ್ ಸಾಹಿತ್ಯದಲ್ಲಿ 1955ರಲ್ಲಿ ಮೈಸೂರಿನಲ್ಲಿ ಎಂ.ಎ., ಮಾಡಿದ್ದೆ. ಆಗ ಕೆ.ವಿ.ಪುಟ್ಟಪ್ಪ (ಕುವೆಂಪು) ಅವರು ಮೈಸೂರು ವಿ.ವಿ. ಕುಲಪತಿಗಳಾಗಿದ್ದರು. ನಾನು ಎಂ.ಎ., ಮುಗಿಸಿದ್ದು ರಾಮಚಂದ್ರಶರ್ಮರೊಡನೆ ಮದುವೆ ಆದ ಮರು ವರ್ಷ. ವಿದ್ಯಾರ್ಥಿ ದೆಸೆಯಲ್ಲಿದ್ದ ಆ ಸಂದರ್ಭದಲ್ಲೇ  ಶರ್ಮರ `ಸಂಗಮ~ (ಕಾನ್‌ಫ್ಲುಯೆನ್ಸ್) ಕಥೆಯನ್ನು ಅನುವಾದಿಸಿದ್ದೆ.
 
ಆ ಕತೆ ಶರ್ಮರ ಆಯ್ದ ಕಥೆಗಳ ಅನುವಾದದ ಸಂಗ್ರಹವಾದ `ಹೋಮ್ ಅಂಡ್ ಅವೇ~ ಸಂಕಲನದಲ್ಲಿದೆ. ಆದರೆ ಅದು ಸುಮ್ಮನೆ ಅನುವಾದ ಮಾಡಿದ್ದು. ಈಗಿನಷ್ಟು ನಾನಾಗ ಅನುವಾದದಲ್ಲೇ ಮುಳುಗಿರಲಿಲ್ಲ. 1958ರಲ್ಲಿ ಇಥಿಯೋಪಿಯಾಗೆ ಹೋದೆವು.
 
ನಾನು ಮತ್ತು ಶರ್ಮ ಇಬ್ಬರೂ ಒಂದೇ ಶಾಲೆಯಲ್ಲಿ ಶಿಕ್ಷಕರಾಗಿದ್ದೆವು. ನಂತರ ಲಂಡನ್ ಸೇರಿದಂತೆ ಇಂಗ್ಲೆಂಡ್‌ನ ವಿವಿಧ ಊರುಗಳು, ಜಾಂಬಿಯಾ, ಮಲಾವಿಗಳಲ್ಲಿ ವಿವಿಧ ಹಂತಗಳ ಶಾಲೆಗಳಲ್ಲಿ ಇಂಗ್ಲಿಷ್ ಕಲಿಸುತ್ತಿದ್ದೆ. ಅಲ್ಲಿದ್ದಾಗಲೆಲ್ಲಾ ಕನ್ನಡ ಸಾಹಿತ್ಯದ ಸಾಂಗತ್ಯ ಇದ್ದೇ ಇತ್ತು.

ಹೊರರಾಷ್ಟ್ರಗಳಲ್ಲಿ 25ಕ್ಕೂ ಹೆಚ್ಚಿನ ವರ್ಷಗಳ ವಾಸ ಸಾಕೆನಿಸಿ 1986ರಲ್ಲಿ ಬೆಂಗಳೂರಿಗೆ ವಾಪಸ್ ಬಂದೆವು. ಸಾಹಿತಿ ಮಿತ್ರರ ಒಡನಾಟ ಶುರುವಾಯಿತು. ಅನುವಾದ ಕಾರ್ಯ ಶುರುವಾದದ್ದೂ ಆಗಲೇ. ಪೆಂಗ್ವಿನ್ ಪ್ರಕಾಶನದ ಡೇವಿಡ್ ಡೇವಿಡಾರ್ ಅವರು ಪೂರ್ಣಚಂದ್ರ ತೇಜಸ್ವಿ ಅವರ `ಕರ್ವಾಲೊ~ ಅನುವಾದಿಸಲು 1990ರಲ್ಲಿ ನನ್ನನ್ನು  ಕೇಳಿದರು. ನನಗೆ ಖುಷಿಯಾಯಿತು.

ಅದು ನನ್ನ ಅನುವಾದ ಕಾರ್ಯಕ್ಷೇತ್ರದಲ್ಲಿ ಮೊದಲ ಹೆಜ್ಜೆ ಎನ್ನಬಹುದು. ಅನುವಾದಕಾರ್ಯವನ್ನು ಗಂಭೀರವಾಗಿ ತೆಗೆದುಕೊಳ್ಳಲು ಇದು ನಾಂದಿಯಾಯಿತು. ಅದೇ ಪುಸ್ತಕದಲ್ಲೇ ತೇಜಸ್ವಿಯವರ ಮತ್ತೊಂದು ಕೃತಿ `ನಿಗೂಢ ಮನುಷ್ಯರು~ (ಮೆನ್ ಆಫ್ ಮಿಸ್ಟರಿ) ಅನುವಾದವೂ ಇದೆ. ಈ ಕೃತಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ. ವೈದೇಹಿ, ಚಿತ್ತಾಲರ ಕಥೆಗಳ ಅನುವಾದಗಳಿಗೆ ದೆಹಲಿಯ `ಕಥಾ~ ಪ್ರಶಸ್ತಿ ಸಿಕ್ಕಿದೆ.

ಈವರೆಗೆ ಮಾಡಿರುವ ಅನುವಾದಗಳು ಯಾವುವು?
ನನ್ನದು ಅದೃಷ್ಟ ಅನಿಸುತ್ತೆ. ನನಗೆ ಅನುವಾದ ಮಾಡಲು ಅವಕಾಶ ಸಿಕ್ಕಿದ ಎಲ್ಲಾ ಕೃತಿಗಳೂ ಗಂಭೀರವಾದ, ಪರಿಗಣಿಸಬೇಕಾದ ಸಾಹಿತ್ಯ ಕೃತಿಗಳೇ ಆಗಿವೆ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ `ಚಿಕವೀರ ರಾಜೇಂದ್ರ~ (1992), ಕುವೆಂಪು ಅವರ `ಕಾನೂರು ಹೆಗ್ಗಡಿತಿ ಸುಬ್ಬಮ್ಮ~ (ದಿ ಹೌಸ್ ಆಫ್ ಕಾನೂರು) ಹಾಗೂ ಯಶವಂತ ಚಿತ್ತಾಲರ ಸಣ್ಣ ಕಥೆಗಳ (`ದಿ ಬಾಯ್ ಹೂ ಟಾಕ್ಡ್ ಟು ಟ್ರೀಸ್) ಅನುವಾದಕ್ಕೆ ಪತಿ  ಶರ್ಮರೂ ಜೊತೆಯಾಗಿದ್ದರು.

ಶರ್ಮರ ಕಥೆಗಳ ಸಂಕಲನ `ಹೋಮ್ ಅಂಡ್ ಅವೆ~ ಹಾಗೂ `ಫ್ರಮ್ ಕಾವೇರಿ ಟು ಗೋದಾವರಿ~ ಎಂಬ ಸಮಕಾಲೀನ ಕನ್ನಡ ಕಥೆಗಳ ಅನುವಾದದ ಸಂಕಲನಕ್ಕೆ ನಾವಿಬ್ಬರೂ ಬೇರೆ ಬೇರೆ ಕಥೆಗಳನ್ನು ಅನುವಾದ ಮಾಡಿದ್ದೇವೆ.  ಶಿವರಾಮ ಕಾರಂತರ `ಮರಳಿ ಮಣ್ಣಿಗೆ~ (`ರಿಟರ್ನ್ ಟು ಅರ್ತ್~ ), ಶ್ರೀರಂಗರ `ಕೇಳು ಜನಮೇಜಯ~ (ಲಿಸನ್ ಜನಮೇಜಯ), ಚಂದ್ರಶೇಖರ ಕಂಬಾರರ `ಹುಲಿಯ ನೆರಳು~ (ದಿ ಷ್ಯಾಡೊ ಆಫ್ ದಿ ಟೈಗರ್) ಹಾಗೂ `ಸಾಂಬಶಿವ ಪ್ರಹಸನ~ - ಇವು ನನ್ನ  ಇತರ ಅನುವಾದ ಕೃತಿಗಳಲ್ಲಿ ಪ್ರಮುಖವಾದವು.

ವೀರಪ್ಪ ಮೊಯ್ಲಿ ಅವರ `ರಾಮಾಯಣ ಮಹಾನ್ವೇಷಣಂ~ ಕೃತಿಯ 1ರಿಂದ 18ರವರೆಗಿನ ಅಧ್ಯಾಯಗಳನ್ನು ಅನುವಾದಿಸಿದ್ದೇನೆ. ಹಂಪಿ ವಿಶ್ವವಿದ್ಯಾಲಯ ಪ್ರಕಟಿಸಿರುವ `ಸ್ಟ್ರಿಂಗ್ಸ್ ಅಂಡ್ ಸಿಂಬಲ್ಸ್~ ಸಂಪಾದಿತ ಕೃತಿಯಲ್ಲಿ ಜನಪದ ಪದ್ಯಗಳ ಅನುವಾದಗಳಿವೆ. ಹಲವು ಸಾಹಿತ್ಯ ಪ್ರಕಾರಗಳ ಸಂಪಾದಿತ ಸಂಕಲನಗಳಲ್ಲೂ ಬಿಡಿಬಿಡಿಯಾದ ಅನುವಾದಗಳು ಸೇರಿವೆ. ಪೆಂಗ್ವಿನ್, ಸೀಗಲ್, ಸಾಹಿತ್ಯ ಅಕಾಡೆಮಿ, ಕಥಾ, ರೂಪ, ಹಂಪಿ ವಿಶ್ವವಿದ್ಯಾಲಯ ಮುಂತಾದವರು ನನ್ನ ಅನುವಾದ ಕೃತಿಗಳ ಪ್ರಮುಖ ಪ್ರಕಾಶಕರು.

ಇಂಗ್ಲಿಷ್‌ನಂತಹ ಭಿನ್ನ ಜಾಯಮಾನದ ಭಾಷೆಗೆ ಕನ್ನಡ ಕೃತಿಗಳ ಅನುವಾದದ  ಸಂದರ್ಭದಲ್ಲಿ ಎದುರಿಸಿದ ಸವಾಲುಗಳು ಎಂತಹವು?
ಅನುವಾದ ಎಂದರೆ ನನಗೆ ತುಂಬಾ ಆಸೆ. ಸೃಜನಶೀಲವಾಗಿ ಬರೆಯುವಾಗ ನಿಮ್ಮ ಮನಸ್ಸಿಗೆ ಬಂದದ್ದು ಬರೆದುಕೊಂಡು ಹೋಗ್ತೀರಿ. ಆದರೆ ಅನುವಾದ ಮಾಡುವಾಗ ನಿಮ್ಮನ್ನು ಬಿಟ್ಟು ಅವರೊಳಗೆ ಹೋಗಿ ಮತ್ತೆ ನಿಮ್ಮಳಗೆ  ನೀವು ವಾಪಸ್ ಬಂದು ಬರೀಬೇಕು. ಆ ಅರ್ಥದಲ್ಲಿ ಅನುವಾದ ಕಷ್ಟಕರ. ಏಕೆಂದರೆ ನೀವು ಮೂಲ ಲೇಖಕರ ಬರಣಿಗೆಗೆ ನಿಷ್ಠರಾಗಿರಲೇಬೇಕು. ಆದರೆ ಕನ್ನಡಕ್ಕೂ ಇಂಗ್ಲಿಷ್‌ಗೂ ಭಾಷೆ ಅಂತರ ಇದೆ.
 
ಕನ್ನಡದಲ್ಲಿ ಸಾಫ್‌ಸೀದಾ ಹೇಳೋದನ್ನು ಇಂಗ್ಲಿಷ್‌ಗೆ ಅಕ್ಷರಶಃ ಅನುವಾದ ಮಾಡಿದರೆ ಅರ್ಥವೇ ಬರುವುದಿಲ್ಲ. ಆದರೆ ನನ್ನ ಉದ್ದೇಶ, ಇಂಗ್ಲಿಷ್‌ನಲ್ಲಿ ಓದುವಾಗಲೂ ಇವರು ಇಂಗ್ಲಿಷ್‌ನಲ್ಲೇ ಬರೆದದ್ದೇನೋ ಎಂಬಂತಹ ಭಾವನೆ ಓದುಗರಿಗೆ ಬರಬೇಕು. ಎಷ್ಟೋ ರಷ್ಯನ್, ಫ್ರೆಂಚ್ ಲೇಖಕರನ್ನು ನಾವು ಇಂಗ್ಲಿಷ್‌ನಲ್ಲೇ ಓದಿರುವುದು.
 
ಟಾಲ್‌ಸ್ಟಾಯ್, ದೊಸ್ತೊವಸ್ಕಿ ಅವರನ್ನೆಲ್ಲಾ ಇಂಗ್ಲಿಷ್‌ನಲ್ಲೇ ಓದಿ  ನಾವು ಮೆಚ್ಚಿದೀವಲ್ಲ. ಈ ಕೃತಿಗಳನ್ನು ರಷ್ಯನ್‌ನಲ್ಲಿ ಬರೆದಿರುವುದು ಎಂದು ಯಾವತ್ತೂ ಅನಿಸೇ ಇಲ್ಲ. ಆ ಕ್ವಾಲಿಟಿ ಬರಬೇಕು.

ಕುವೆಂಪು, ಕಂಬಾರ ಹಾಗೂ ಕಾರಂತರ ಕೃತಿಗಳಲ್ಲಿನ ಪ್ರಾದೇಶಿಕ, ಸಾಂಸ್ಕೃತಿಕ ವೈಶಿಷ್ಟ್ಯಗಳನ್ನು ಇಂಗ್ಲಿಷ್‌ಗೆ ಇಳಿಸುವುದು ಕ್ಲಿಷ್ಟವಲ್ಲವೆ?
ಕಂಬಾರರ ಲಯ, ಪದ್ಯ ಚೆನ್ನಾಗಿರುತ್ತೆ. ಅವರು ಯಾವ ರೀತಿ ಹೇಳ್ತಾರೊ ಕನ್ನಡದಲ್ಲಿ ನಮಗೆ ಹೇಗೆ ಕೇಳಿಸುತ್ತೊ ಅದನ್ನು ಆದಷ್ಟು ಮಟ್ಟಿಗೆ ಇಂಗ್ಲಿಷ್‌ನಲ್ಲೂ ತರಲಿಕ್ಕಾಗಬೇಕು. ಲೇಖಕರು ಸಣ್ಣ ಸಣ್ಣ ಪದಗಳನ್ನು ಬಳಸಿದ್ದಾಗ ನಾವೂ ಸಣ್ಣ ಸಣ್ಣ ಪದ ಬಳಸಿದಾಗ ಲಯ ಉಳಿದುಕೊಳ್ಳುತ್ತೆ. ಅನುವಾದ ಮಾಡುವಾಗ, ಬಾಯಿಯಲ್ಲೂ ಹೇಳಿಕೊಳ್ಳಬೇಕು, ಅಕ್ಷರದಲ್ಲೂ ಮೂಡಿಸಬೇಕು. ಕನ್ನಡದ್ದೇ ಲಯ ಬರುತ್ತೊ, ಇಲ್ಲವೋ ಹೇಳಲಾಗದು.

ಏಕೆಂದರೆ ಕನ್ನಡದಲ್ಲಿ ಒತ್ತಕ್ಷರಗಳಿವೆ.ಇಂಗ್ಲಿಷ್‌ನಲ್ಲಿ ಒತ್ತಕ್ಷರ ಇಲ್ಲ. ಆದರೆ ಸೂಕ್ತ ಪದಗಳ ಆಯ್ಕೆ ಮಾಡುವ ಪ್ರಕ್ರಿಯೆಯೇ ಸಂತೋಷದ ಕೆಲಸ. ನಾನು ಅನುವಾದ ಮಾಡಿದ ಎಲ್ಲಾ ಲೇಖಕರೂ ಬೇರೆ ಬೇರೆ ರೀತಿ ಬರೆಯುವವರು. ಅದೊಂದು ಥರ ರಮಣೀಯ ದೃಶ್ಯ. ಬೇರೆ ಬೇರೆ ಥರ ಹೂಗಳಿರುವ ತೋಟಕ್ಕೆ ಹೋದಂತೆ. ಬಣ್ಣ, ವಾಸನೆ, ಶೈಲಿಗಳೇ ಬೇರೆ ಬೇರೆ. ಅಬ್ಬಾ ಎಷ್ಟೊಂದು ಶ್ರೀಮಂತ ಭಾಷೆ ನಮ್ಮದು ಎನಿಸುತ್ತೆ. ಇವರೆಲ್ಲಾ ದಿಗ್ಗಜರು.

ಘಟಾನುಘಟಿಗಳು. ಕೆಲವೊಮ್ಮೆ ಅಡಿಟಿಪ್ಪಣಿ (ಫುಟ್‌ನೋಟ್) ಕೊಡುವುದೂ ಅಗತ್ಯವಾಗುತ್ತದೆ. ಉದಾಹರಣೆಗೆ `ಆರತಿ~ ಪದ. ಹಾಗೆಂದರೇನೆಂಬುದು ಭಾರತದವರಿಗೆ ಗೊತ್ತು. ಆದರೆ ಬೇರೆ ದೇಶಗಳ ಓದುಗರಿಗಾಗಿ ಆರತಿ ಎಂದರೇನು ಎಂಬುದನ್ನು ವಿವರಿಸಬೇಕಾಗುತ್ತದೆ. ಅಂತಹ ಪದಗಳನ್ನು ಇಟಾಲಿಕ್ಸ್‌ನಲ್ಲಿ ಮುದ್ರಿಸಿ ವಿವರಣೆಯನ್ನು ಪುಸ್ತಕದ ಕೊನೆಯಲ್ಲಿ ಶಬ್ದಕೋಶದಲ್ಲಿ (ಗ್ಲೋಸರಿ) ಕೊಡಬೇಕು. ರಷ್ಯನ್ ಪದ `ಸಮೋವರ್~ ಎಂದರೆ `ಟೀ ಪಾಟ್~ ಎಂಬುದು ಈಗ ನಮಗೆ ಗೊತ್ತಾಗಿಲ್ಲವೆ? ಓದಿ ಓದಿ ಗೊತ್ತಾಗುತ್ತೆ. ಸಹಜವಾಗಿಯೇ ಅರ್ಥವಾಗುತ್ತಾ ಹೋಗುತ್ತದೆ.

ಶೇ.100ರಷ್ಟು ಮೂಲ ಕೃತಿಗೆ ನಿಷ್ಠವಾಗಿ ಅನುವಾದ ಸಾಧ್ಯವೆ?
ಒಟ್ಟಿನಲ್ಲಿ ಸಾಧ್ಯ. ಒಂದು ಭಾಷೆಗೂ ಇನ್ನೊಂದು ಭಾಷೆಗೂ ಹೋಲಿಕೆ ಇದ್ದರೂ ತದ್ರೂಪಿ ಇನ್ನೊಂದು ಇಲ್ಲ. ಭಾರತದ ಭಾಷೆಗಳಲ್ಲೇ ಹೋಲಿಕೆ ಇಲ್ಲ. ನಮ್ಮಲ್ಲಿ ಮೊದಲು ಕ್ರಿಯಾಪದ ಹಾಕಿ ಆಮೇಲೆ ನಾಮಪದ ಹಾಕಿದ್ರೆ ಅಡ್ಡಿ ಇಲ್ಲ. `ನಾಳೆ ಬರ‌್ತಾನೆ ಅವನು~ ಎಂದರೆ ನಮಗೆ ಅರ್ಥವಾಗುತ್ತೆ. ಆದರೆ `ಟುಮಾರೊ ಕಮ್ ಹಿ~ ಎಂದು ಹೇಳಲಾಗದು. ಈ ಬಗೆಯ ಸಿಂಟ್ಯಾಕ್ಸ್ (ವಾಕ್ಯ ರಚನೆಯ ಸೂತ್ರ) ಗಮನಿಸಿಕೊಳ್ಳಬೇಕಾಗುತ್ತೆ. ಯಾವ ಭಾಷೆಯಲ್ಲಿ ಅನುವಾದ ಮಾಡಿದರೂ ಅದು ಸಹಜವಾಗಿ ಓದಿಸಿಕೊಂಡು ಹೋಗಬೇಕು. ಅಷ್ಟು ಸಾಕು.
 
ಒಂದಕ್ಕೊಂದು ಪಡಿಯಚ್ಚಾಗಿ, ಅತಿ `ಫೇತ್‌ಫುಲ್~ ಆದಾಗಲೂ ಅನುವಾದ ಎಳೆದ ಹಾಗೆ ಆಗುತ್ತೆ. ಯಾಕೆಂದರೆ ಪ್ರತಿ ಭಾಷೆಯ ಜಾಯಮಾನವೇ ಬೇರೆ. ಕಥೆ ಹೇಳೋದು ನಾನು ಹೇಳೋದೇ ಬೇರೆ ರೀತಿ. ನೀವು ಹೇಳೋದೇ ಬೇರೆ ರೀತಿ ಇರಬಹುದು. ಆದರೆ ಕಥೆ ಅದೇ. ಆದರೂ ಅತಿಯಾದ ಸ್ವಾತಂತ್ರ್ಯ ತೆಗೆದುಕೊಳ್ಳಬಾರದು. ಯಾವ ಭಾಷೆಗೆ ತರ‌್ತಿದ್ದೀರಿ ಎನ್ನುವುದರ ಮೇಲೆ, ಸ್ವಲ್ಪ ಸವರುವುದು, ಎತ್ತಿ ಹಿಡಿಯುವುದು ಮಾಡಬಹುದು. ಮೂಲ ಲೇಖಕರಿಗೆ ಅಪಚಾರ ಆಗದ ಹಾಗೆ ಇದನ್ನು  ಮಾಡುವುದರಲ್ಲಿ ತಪ್ಪಲ್ಲ. ಏನೇ ಆದರೂ ಅವರ ಕೃತಿ ಅವರದ್ದು ಎಂಬುದು ನೆನಪಿರಬೇಕು.

ಅನುವಾದದ ಅನುಭವ ಯಾವ ಬಗೆಯದು?  
ನಿಜವಾಗಿಯೂ ಒಂದು ಕೃತಿಯನ್ನು ಓದುವುದು ಯಾವಾಗ ಎಂದರೆ ನನ್ನ ಪ್ರಕಾರ ಅದನ್ನು ಅನುವಾದ ಮಾಡಿದಾಗಲೇ. ಏಕೆಂದರೆ ಆ ಕೃತಿಯ ಒಳಗೇ ರಕ್ತವಾಗಿ ಪ್ರವಾಹವಾಗಿ ಹರಿಯುತ್ತಾ ಅದರ ಹೃದಯ ಬಡಿತ ಕೇಳಿಸಿಕೊಳ್ಳುವುದೂ ಸಾಧ್ಯವಾಗುತ್ತೆ. ಅನುವಾದ ಮಾಡುವಾಗ ಆ ಕೃತಿಯ ಬಾಗಿಲು ತೆಗೆದು ಅದರೊಳಗೆ ಪ್ರವೇಶಿಸಿ ಅಡುಗೆ ಮನೆ, ಊಟದ ಮನೆ ಎಲ್ಲಾ ನೋಡಬೇಕಾಗುತ್ತೆ. ಆ ಅನುಭವವನ್ನು ಹೀಗೇ ಎಂದು ಹೇಳಲಾಗುವುದಿಲ್ಲ.

ಅನುಭವಿಸಿದಾಗಲೇ ಗೊತ್ತಾಗಬೇಕು. ಮಾವು ಸಿಹಿ ಎನ್ನುತ್ತೇವೆ ಸರಿ. ಆದರೆ ಮಾವು, ಸೀಬೆ, ಸೀತಾಫಲದ ಸಿಹಿ ಬೇರೆ ಬೇರೆ. ಅದನ್ನು ಹೆಚ್ಚಿಕೊಂಡು ತಿಂದಾಗಲೇ ಆ ವ್ಯತ್ಯಾಸಗಳು ತಿಳಿಯುವುದು.

`ರಿಟರ್ನ್ ಟು ದಿ ಅರ್ತ್~ (ಮರಳಿ ಮಣ್ಣಿಗೆ) ಅನುವಾದ ಕೃತಿಯ ಮುನ್ನುಡಿಯಲ್ಲಿ ನಾನು ಹೀಗೆ ಬರೆದಿದ್ದೆ: ಅನುವಾದ ಎನ್ನುವುದು ಗಾಳಿಪಟದ ಹಾಗೆ. ಆಕಾಶ ಪೂರ್ತಿ ಇದೆ ಹಾರಲಿಕ್ಕೆ. ಆದರೆ ಸೂತ್ರ ಎಲ್ಲಿದೆ? ಮೂಲ ಲೇಖಕರೇ ಹಿಡಿದುಕೊಂಡಿರ‌್ತಾರೆ. ಆದರೂ ಸೂಕ್ತ ಪದಗಳನ್ನು ಹುಡುಕುವುದು, ವಾಕ್ಯ ಪ್ರಯೋಗಗಳನ್ನು ಪರಾಮರ್ಶಿಸುವ ಪ್ರಕ್ರಿಯೆಯೆಲ್ಲಾ `ಎಕ್ಸೈಟಿಂಗ್~.

ಏಕೆಂದರೆ ಪ್ರತಿಯೊಂದು ಭಾಷೆಗೂ ಅದರದೇ ಸಾವಿರಾರು ಸಾಧ್ಯತೆಗಳಿರುತ್ತವೆ. ಒಂದು ಕಡೆ ಒರಿಜಿನಲ್, ಮತ್ತೊಂದು ಕಡೆ ಖಾಲಿ ಪೇಪರ್, ಪೆನ್, ಪೆನ್ಸಿಲ್ ಹಿಡಿದುಕೊಂಡು ಈ ಪದ ವಾಸೀನಾ, ಇದಕ್ಕಿಂತ  ಮತ್ತೊಂದು ಪದ ಸರಿಯಾಗುತ್ತಾ ಎಂದೆಲ್ಲಾ ಎಣಿಸುತ್ತಾ 2-3 ಬಾರಿ ಓದ್ತೀನಿ. ಅಷ್ಟಾಗಿಯೂ ಪ್ರಿಂಟ್ ಆದಾಗ `ಅಯ್ಯೋ ಇದರ ಬದಲು ಹಾಗೆ ಹೇಳಿರಬಹುದಿತ್ತಲ್ಲಾ~ ಎಂದೂ ಕೆಲವೊಮ್ಮೆ ಅನ್ನಿಸಿದ್ದಿದೆ.

ಅನುವಾದ ಹಾಗೂ ಸೃಜನಶೀಲ ಬರವಣಿಗೆಗಳ ನಡುವಿನ ವ್ಯತ್ಯಾಸವನ್ನು ಹೇಗೆ ಗುರುತಿಸುವಿರಿ?
ಸೃಜನಶೀಲವಾಗಿ ಬರೆದಾಗ ನಮ್ಮ ಮನಸ್ಸಿಗೆ ಬಂದದ್ದು ಬರೆದುಕೊಂಡು ಹೋಗಿಬಿಡುತ್ತೇವೆ. ಅನುವಾದ ಮಾಡುವಾಗ ಅದರೊಳಹೊಕ್ಕು  ಮತ್ತೆ ವಾಪಸ್ ಬಂದು, ಮತ್ತೆ ಬರೀಬೇಕು. ಅನುವಾದಕ್ಕೂ ಸೃಜನಶೀಲತೆ ಬೇಕಾಗುತ್ತೆ. ಒಮ್ಮಮ್ಮೆ ಅದನ್ನು ಮೀರಿಯೂ ಹೋಗಬೇಕಾಗುತ್ತೆ. ಮೂಲ ಲೇಖಕರು ಬರೆದ ಹಾಗೇ ಇರಬೇಕು. ಆದರೆ ಬರೀತಿರೋದು ನೀವು. ಈ ಸಂಬಂಧ ಹೇಗಿದೆ ನೋಡಿ. ಎಷ್ಟೊಂದು ಚಕ್ರಗಳಿರುತ್ತವೆ. ಹೀಗಾಗಿಯೇ ಅನುವಾದ ಪ್ರಕ್ರಿಯೆಯಲ್ಲಿ ಅಷ್ಟು ಖುಷಿ ಇರುವುದು.

ಒಂದು ಕೃತಿಯ ಅನುವಾದ ಕಾರ್ಯಕ್ಕೆ ಸಾಮಾನ್ಯ ಎಷ್ಟು ಸಮಯ ಹಿಡಿಸುತ್ತದೆ?
`ಕಾನೂರು ಹೆಗ್ಗಡಿತಿ ಸುಬ್ಬಮ್ಮ~ ಅನುವಾದಕ್ಕೆ ಒಂದು ವರ್ಷ ಹಿಡಿಯಿತು. ಬರೆದ ಮೇಲೆ ಓದಿ, ಮತ್ತೆ ಓದಿ, ಮೂಲಕೃತಿಗೆ ಹೋಲಿಸಿ ನೋಡಬೇಕು. ಸಾಕಷ್ಟು ಪರಿಶ್ರಮ ಬೇಡುವ ಕೆಲಸ ಇದು. ಆದರೆ ಕೆಲಸ ಮಾಡುವ ಹುಮ್ಮಸ್ಸು ಇದ್ದಾಗ ಇವೆಲ್ಲಾ ದೊಡ್ಡದಲ್ಲ.

ಶಾಲೆಯಿಂದ ಮಧ್ಯಾಹ್ನ 3 ಗಂಟೆಗೆ ಮನೆಗೆ ಬರುತ್ತೇನೆ. ಅನುವಾದ ಎಂದರೆ ಅದರ ಹಿಡಿತಕ್ಕೆ ಸಿಕ್ಕಿಹಾಕಿಕೊಂಡು ಬಿಟ್ಟಿರುತ್ತೇವೆ. ಬಿಡಿಸಿಕೊಳ್ಳುವುದು ಕಷ್ಟ. ಬಿಡಿಸಿಕೊಳ್ಳಲು ಇಷ್ಟವೂ ಇರುವುದಿಲ್ಲ.

ನೀವು ಅನುವಾದ ಮಾಡಿದ ಕೃತಿಗಳಲ್ಲಿ ನಿಮ್ಮ ಮೆಚ್ಚಿನದು ಯಾವುದು? ಈಗ ಯಾವ ಕೃತಿಯ ಅನುವಾದದಲ್ಲಿ ತೊಡಗಿದ್ದೀರಿ?
ಇದು ಎಂದು ನಿರ್ದಿಷ್ಟವಾಗಿ ಹೇಳಲಾರೆ. ಪ್ರತಿಯೊಂದು ಕೃತಿ ಅನುವಾದ ಮಾಡಿದಾಗಲೂ ಇದಕ್ಕಿಂತ ಚೆನ್ನಾಗಿ ಮಾಡಬಹುದಿತ್ತು ಎಂಬಂತಹ ವಿಷಾದವಂತೂ ಆಗಿಲ್ಲ. ನಾನು ಅನುವಾದ ಕಾರ್ಯವನ್ನು ತುಂಬಾ ಗಂಭೀರವಾಗಿ ತೆಗೆದುಕೊಳ್ಳುತ್ತೇನೆ. ತನುಮನ ಧಾರೆಯೆರೆದು ಅನುವಾದ ಮಾಡಿರುತ್ತೇನೆ. ಮಲ್ಲಿಗೆ, ಸೂರ್ಯಕಾಂತಿ ಮತ್ತಿತರ ಹೂವುಗಳ ಮಧ್ಯೆ ಯಾವುದು ಚೆಂದ ಎಂದು ಹೇಳಲಾಗದು. ಅವುಗಳದೇ ಸೌಂದರ್ಯ ಅವಕ್ಕಿರುತ್ತೆ. `ಕುವೆಂಪು ಭಾಷಾ ಭಾರತಿ~ಗಾಗಿ ಸದ್ಯಕ್ಕೆ ಕನಕದಾಸರ ಕೆಲವು ಕೀರ್ತನೆಗಳನ್ನು ಇಂಗ್ಲಿಷ್‌ಗೆ ಅನುವಾದಿಸುತ್ತಿದ್ದೇನೆ.    

ಅನುವಾದ ಪ್ರಕಾರದ ಭವಿಷ್ಯದ ಬಗ್ಗೆ...
ಅನುವಾದ ಪ್ರಕಾರ ಒಳ್ಳೇ ಹೆಸರು ಮಾಡ್ತಾ ಇದೆ. ಅನುವಾದದ ಶಕ್ತಿ ಇರುವ ಜನರೂ ಇದ್ದಾರೆ. ಹೊರ ರಾಷ್ಟ್ರಗಳಲ್ಲಿ ಮಾತ್ರವಲ್ಲ ನಮ್ಮ ದೇಶದ್ಲ್ಲಲೇ ಇಂಗ್ಲಿಷ್‌ಗೆ ವ್ಯಾಪಕ ಓದುಗರಿದ್ದಾರೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT