ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುವಾದದಿಂದ ಅನುಭವ ಲೋಕ ವಿಸ್ತಾರ

ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ವಸುಂಧರಾ ಭೂಪತಿ ಅಭಿಪ್ರಾಯ
Last Updated 28 ಜುಲೈ 2013, 19:31 IST
ಅಕ್ಷರ ಗಾತ್ರ

ಬೆಂಗಳೂರು: `ಅನುವಾದ ಕಾರ್ಯದ ಮೂಲಕ ಭಾಷೆ ಹಾಗೂ ಅನುಭವ ಲೋಕ ವಿಸ್ತಾರವಾಗುತ್ತದೆ' ಎಂದು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ಅಭಿಪ್ರಾಯಪಟ್ಟರು.

ನವಕರ್ನಾಟಕ ಪ್ರಕಾಶನ ಸಂಸ್ಥೆಯು ನಗರದಲ್ಲಿ ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ `ವನಿತಾ ಚಿಂತನ ಮಾಲೆ'ಯ ನಾಲ್ಕು ಪುಸ್ತಕಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

`ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ ಕೃತಿಗಳು ಅನುವಾದಗೊಂಡಾಗ ಮೂಲ ಕೃತಿಯ ಅನುಭವ ಲೋಕ ಅನುವಾದಗೊಂಡ ಭಾಷೆಯಲ್ಲಿ ಅನಾವರಣಗೊಳ್ಳುತ್ತದೆ. ಇದರಿಂದ ಭಾಷೆಯೂ ಬೆಳೆಯುತ್ತದೆ. ಸಾಹಿತ್ಯ ಸಮೃದ್ಧವಾಗುತ್ತದೆ' ಎಂದರು.

`ಹೋರಾಟ, ಚಳವಳಿಗಳ ಮೂಲಕ ಅಧಿಕಾರಕ್ಕೆ ಬರುವ ರಾಜಕಾರಣಿಗಳು ಅಧಿಕಾರಕ್ಕೆ ಬಂದ ನಂತರ ಮೌಢ್ಯಗಳಿಗೆ ಶರಣಾಗುತ್ತಾರೆ. ಇದು ಸದ್ಯದ ರಾಜಕೀಯ ದುರಂತ. ದೇಶದಲ್ಲಿ ವಿದೇಶಿ ಕಂಪೆನಿಗಳಿಗೆ ಮಣೆ ಹಾಕಲಾಗುತ್ತಿದೆ. ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನಗಳನ್ನು ಯುವ ಜನತೆ ಮರೆಯುತ್ತಿದ್ದಾರೆ' ಎಂದು ಅವರು ವಿಷಾದಿಸಿದರು.

ಪುಸ್ತಕಗಳನ್ನು ಪರಿಚಯ ಮಾಡಿಕೊಟ್ಟ ಲೇಖಕಿ ಡಾ.ಕೆ.ಜಿ.ಗಾಯಿತ್ರಿ ದೇವಿ, `ಇಳಾಭಟ್ ಅವರ ಹೋರಾಟದ ಗಾಥೆಯನ್ನು ಗೀತಾ ಶೆಣೈ ಅವರ  ಪುಸ್ತಕ ತೆರೆದಿಟ್ಟಿದೆ. ಗುಜರಾತ್‌ನಲ್ಲಿ ಅಸಂಘಟಿತ ಮಹಿಳಾ ಕಾರ್ಮಿಕರನ್ನು `ಸೇವಾ' ಸಂಘಟನೆಯ ಮೂಲಕ ಒಗ್ಗೂಡಿಸಿದ ಇಳಾಭಟ್ ಅವರ ಕುರಿತ ಪುಸ್ತಕಗಳು ಈವರೆಗೆ ಕನ್ನಡದಲ್ಲಿ ಬಂದಿರಲಿಲ್ಲ. ಈ ಪುಸ್ತಕ ಆ ಕೊರತೆಯನ್ನು ನೀಗಿಸಿದೆ. ಬಂಗಾಳಿಯ ಸ್ವಾತಂತ್ರ್ಯ ಹೋರಾಟಗಾರ್ತಿ ಬೀನಾ ದಾಸ್  ಅವರ ಆತ್ಮಚರಿತ್ರೆಯನ್ನು ಕನ್ನಡಕ್ಕೆ ತರುವ ಮೂಲಕ ಎನ್.ಗಾಯಿತ್ರಿ ಉತ್ತಮ ಕಾರ್ಯ ಮಾಡಿದ್ದಾರೆ' ಎಂದರು.

`ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಮುಸ್ಲಿಂ ಮಹಿಳೆಯರ ಕೊಡುಗೆಯ ಬಗ್ಗೆ ಅಬಿದಾ ಸಮೀಉದ್ದೀನ್ ಅವರು ಬರೆದಿರುವ ಪುಸ್ತಕವನ್ನು ಷಾಕಿರಾ ಖಾನಂ ಕನ್ನಡಕ್ಕೆ ತಂದಿದ್ದಾರೆ. ಧರ್ಮದ ಕಟ್ಟುಪಾಡುಗಳಿದ್ದರೂ ಮುಸ್ಲಿಂ ಮಹಿಳೆಯರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡಿರುವ ಕಥನವನ್ನು ಈ ಪುಸ್ತಕ ತೆರೆದಿಟ್ಟಿದೆ.

ಅಸ್ಗರ್ ಅಲಿ ಎಂಜಿನಿಯರ್ ಅವರ ಇಸ್ಲಾಂ ಮತ್ತು ಮಹಿಳೆ ಕೃತಿಯನ್ನು ಅನುವಾದಿಸುವ ಮೂಲಕ ಹಸನ್ ನಯೀಂ ಸುರಕೋಡ ಅವರು ಪ್ರವಾದಿ ಮಹಮ್ಮದರ ಕೆಲವು ಮೂಲ ತತ್ವಗಳನ್ನು ಕನ್ನಡಕ್ಕೆ ಪರಿಚಯಿಸಿದ್ದಾರೆ' ಎಂದು ಹೇಳಿದರು.

ನವಕರ್ನಾಟಕ ಪ್ರಕಾಶನ ಹೊರತಂದಿರುವ ಪುಸ್ತಕಗಳ ಬೆಲೆ :
`ಸ್ತ್ರೀ ಸಮೂಹಶಕ್ತಿ ಸೇವಾದ ರೂವಾರಿ ಇಳಾಭಟ್' : ರೂ 60, `ಶೃಂಖಲೆಯ ಝೇಂಕಾರ' :ರೂ 75, `ಭಾರತ ಸ್ವಾತಂತ್ರ್ಯ ಸಂಗ್ರಾಮಕ್ಕೆ ಮುಸ್ಲಿಂ ಮಹಿಳೆಯರ ಕೊಡುಗೆ' : ರೂ 140 ಮತ್ತು `ಇಸ್ಲಾಂ ಮತ್ತು ಮಹಿಳೆ' : ರೂ 55

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT