ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಷ್ಠಾನದ ವೈಫಲ್ಯ

Last Updated 6 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಅಪೌಷ್ಟಿಕತೆಯಿಂದ ಬಳಲುವ ಮಕ್ಕಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಬಡ ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸಲು ಸರ್ಕಾರ ರೂಪಿಸಿರುವ ಕಾರ್ಯಕ್ರಮಗಳು ವಿಫಲವಾಗಿವೆ ಎಂದೇ ಈ ಬೆಳವಣಿಗೆಯ ಅರ್ಥ. ಪದೇ ಪದೇ ಬರಗಾಲಕ್ಕೆ ತುತ್ತಾಗುವ ಉತ್ತರ ಕರ್ನಾಟಕದ ಜಿಲ್ಲೆಗಳ ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚಾಗಿದೆ.

ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ಈ ಸಮಸ್ಯೆ ಇಲ್ಲ ಎನ್ನುವಂತಿಲ್ಲ. ಎಳೆಯ ವಯಸ್ಸಿನಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರ ಸಿಗದಿದ್ದರೆ ಅಂಥ ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ಕುಂಠಿತವಾಗುತ್ತದೆ.

ಅಂಥವರು ಜೀವನದ ಉದ್ದಕ್ಕೂ ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಹೀಗಾಗಿ ಎಳೆಯ ಮಕ್ಕಳಿಗೆ ಪೌಷ್ಟಿಕ ಆಹಾರ ಕೊಡುವುದು ಅತಿಮುಖ್ಯ. ಪಾಲಕರ ಬಡತನವೇ ಅವರ ಮಕ್ಕಳ ಪಾಲಿನ ಶತ್ರು. ಮಕ್ಕಳಿಗೆ ಎರಡು ಹೊತ್ತಿನ ಊಟ ಒದಗಿಸುವುದೇ ಲಕ್ಷಾಂತರ ಕುಟುಂಬಗಳಿಗೆ ದೊಡ್ಡ ಸಮಸ್ಯೆ. ಹಾಲು, ಹಣ್ಣು, ತರಕಾರಿ, ಮಾಂಸ, ಮೊಟ್ಟೆ ಇತ್ಯಾದಿಗಳು ದುರ್ಲಭ. ಅಪೌಷ್ಟಿಕತೆಯಿಂದ ಬಳಲುವ ಮಕ್ಕಳಿಗಾಗಿಯೇ ಸರ್ಕಾರ ಅಂಗನವಾಡಿಗಳನ್ನು ತೆರೆದಿದೆ.
 
ಪ್ರತಿ ಮಗುವಿಗೆ ದಿನಕ್ಕೆ ಆರು ರೂಪಾಯಿಗಳನ್ನು ವೆಚ್ಚ ಮಾಡುತ್ತದೆ. ಆದರೂ ಅಪೌಷ್ಟಿಕತೆಯ ಸಮಸ್ಯೆ ಇದೆ ಎಂದು ಸರ್ಕಾರ ಒಪ್ಪಿಕೊಂಡಿದೆ. ಪೌಷ್ಟಿಕ ಆಹಾರ ಪೂರೈಸುವ ಕಾರ್ಯಕ್ರಮಗಳು ಸರಿಯಾಗಿ ಜಾರಿಯಾಗುತ್ತಿಲ್ಲ.

ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಸಚಿವರು ಇತ್ತೀಚೆಗೆ ವಿಧಾನಸಭೆಯಲ್ಲಿ ನೀಡಿದ ಹೇಳಿಕೆ ಪ್ರಕಾರ ರಾಜ್ಯದಲ್ಲಿ ಅಪೌಷ್ಟಿಕತೆಯಿಂದ ಬಳಲಿ ತೂಕ ಕಳೆದುಕೊಂಡ ಮಕ್ಕಳ ಸಂಖ್ಯೆ 61ಸಾವಿರಕ್ಕೂ ಹೆಚ್ಚು. ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ಮಾಹಿತಿಗಳನ್ನು ಗಮನಿಸಿದರೆ ಸರ್ಕಾರದ ಹೇಳಿಕೆಯನ್ನು ನಂಬುವುದು ಕಷ್ಟ. ಏನೇ ಇದ್ದರೂ, ಸರ್ಕಾರ ಈ ಸಮಸ್ಯೆಯತ್ತ ತುರ್ತಾಗಿ ಗಮನ ಹರಿಸದಿದ್ದರೆ ಪರಿಸ್ಥಿತಿ ಇನ್ನೂ ಗಂಭೀರವಾದೀತು.

ಮಕ್ಕಳ ಅಪೌಷ್ಟಿಕತೆಗೆ ಬಡತನವೊಂದೇ ಕಾರಣವಲ್ಲ. ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳು ಪ್ರತಿ ಮೂರು ವರ್ಷಕ್ಕೊಮ್ಮೆ ಬರಗಾಲಕ್ಕೆ ತುತ್ತಾಗುತ್ತವೆ. ಬಡವರು, ಕೂಲಿಕಾರರು ದೊಡ್ಡ ಸಂಖ್ಯೆಯಲ್ಲಿ ಗುಳೇ ಹೋಗುತ್ತಾರೆ. ಅಂಥವರಿಗೆ ಸಿಕ್ಕ ಆಹಾರ ತಿಂದು ಜೀವ ಉಳಿಸಿಕೊಳ್ಳುವ ಅನಿವಾರ್ಯತೆ. ಮಕ್ಕಳ ದೈಹಿಕ, ಮಾನಸಿಕ ಬೆಳವಣಿಗೆಗೆ ಬೇಕಾದ ಉತ್ತಮ ಆಹಾರ ಕೊಡಬೇಕೆಂಬ ತಿಳುವಳಿಕೆ ಅವರಿಗಿಲ್ಲ.
 
ಇನ್ನು ಬಾಲ್ಯ ವಿವಾಹ, ಎಳೆಯ ವಯಸ್ಸಿನಲ್ಲಿ ಗರ್ಭ ಧಾರಣೆ, ಗರ್ಭಿಣಿಯರಿಗೆ ಪೌಷ್ಟಿಕ ಆಹಾರದ ಕೊರತೆ, ಸಕಾಲದಲ್ಲಿ ಸಿಗದ ವೈದ್ಯಕೀಯ ಸೇವೆ, ಅವಧಿ ಪೂರ್ವ ಜನನ, ಹುಟ್ಟುವಾಗಲೇ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ, ಮೂಢನಂಬಿಕೆ, ಅನಕ್ಷರತೆ ಇತ್ಯಾದಿಗಳೂ ಅಪೌಷ್ಟಿಕತೆಗೆ ಕಾರಣವಾಗುತ್ತಿವೆ.

ಸರ್ಕಾರ `ಆರೋಗ್ಯವಂತ ಮಗು ದೇಶದ ಭವಿಷ್ಯದ ಆಸ್ತಿ~ ಎಂಬ ಘೋಷ ವಾಕ್ಯ ಜಪಿಸಿದರೆ ಸಾಲದು; ಪೌಷ್ಟಿಕ ಆಹಾರ ಕಾರ್ಯಕ್ರಮಗಳಿಗೆ ನೀಡುವ ಹಣ ಸದ್ಬಳಕೆ ಆಗುತ್ತಿದೆಯೇ ಎಂಬುದನ್ನೂ ಗಮನಿಸಬೇಕು. ಅಪೌಷ್ಟಿಕತೆ ನಿವಾರಣೆ ಸರ್ಕಾರದ ಜವಾಬ್ದಾರಿಯಾದರೂ ಈ ಕಾರ್ಯದಲ್ಲಿ ಸಮಾಜವೂ ಕೈಜೋಡಿಸಬೇಕು. ಉದಾರ ಮನಸ್ಸಿನ ದಾನಿಗಳು, ಸಂಘ ಸಂಸ್ಥೆಗಳು, ಮಠಗಳು ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೆ ಈ ಸಮಸ್ಯೆಗೆ ಪರಿಹಾರ ಸುಲಭವಾದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT