ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಸಂಧಾನಒಂದು ಕಾವ್ಯ ಕಸರತ್ತು

Last Updated 20 ಜನವರಿ 2013, 19:59 IST
ಅಕ್ಷರ ಗಾತ್ರ

ನಾಟಕ ಪ್ರಯೋಗದ ಹೆಸರೇ `ಅನುಸಂಧಾನ' ಎಂದರೆ ಆಶ್ಚರ್ಯವಾಗುವುದು ಸಹಜ. ವಿಮರ್ಶೆಯ ಪರಿಭಾಷೆಯ ನುಡಿಗಟ್ಟನ್ನು ನಾಟಕದ ಶೀರ್ಷಿಕೆಯಾಗಿ ಉಪಯೋಗಿಸಿದ್ದು ಬಹಳ ಅಪರೂಪ. ಹಾಗೆ ಉಪಯೋಗಿಸಿರುವ ರೀತಿಯಲ್ಲೇ ಆ ಪ್ರಯೋಗದ ಹೂರಣವನ್ನು, ಅದು ತಲುಪುವ ಪ್ರೇಕ್ಷಕರನ್ನು ನಿರ್ದೇಶಿಸುತ್ತಿದೆ. ಬೆಂಗಳೂರಿನ ಹವ್ಯಾಸಿ ರಂಗಭೂಮಿಯಲ್ಲಿ ಅಷ್ಟಾಗಿ ಕೇಳದೇ ಇರುವ ತಂಡದ ಹೆಸರು ಜಂಗಮರಂಗ.

ಅಪರೂಪಕ್ಕೆ ನಾಟಕಗಳನ್ನು ಮಾಡುತ್ತ, ತನ್ನ ಪಾಡಿಗೆ ತಾನು ಬೆಂಗಳೂರಿನ ಹೊರವಲಯದ ಕನಕಪುರ ರಸ್ತೆಯಲ್ಲಿರುವ ರಾವುಗೊಡ್ಲು ಎಂಬ ಗ್ರಾಮದಲ್ಲಿ ಹೊಸಹೊಸ ಪ್ರಯೋಗಗಳ ತಾಲೀಮುಮಾಡುತ್ತ, ಆಗೀಗ ಪ್ರದರ್ಶನಗಳನ್ನು ನೀಡುತ್ತ ಬಂದಿರುವ ತಂಡ ಅದು. ಅದರಲ್ಲೂ ಮುಖ್ಯವಾಗಿ ಗ್ರಾಮೀಣ, ಅನಾಥ ಮಕ್ಕಳ ಅನೌಪಚಾರಿಕ ಓದು, ನಾಟಕ, ಬೊಂಬೆಯಾಟ ಮೊದಲಾದ ಪ್ರಯೋಗಗಳು ವಿಶ್ವಾಲಯ-ಜಂಗಮರಂಗದ ಮುಖ್ಯ ಕಾಳಜಿ.

ಇವರು ಪ್ರಯೋಗಿಸಿದ ಹೊಸ ನಾಟಕ `ಅನುಸಂಧಾನ' ಇತ್ತೀಚೆಗೆ ಕೆ. ಎಚ್. ಕಲಾಸೌಧದಲ್ಲಿ ಮೊದಲ ಪ್ರದರ್ಶನ ಕಂಡಿತು. ಮೂಲ ರಷ್ಯನ್ ನಾಟಕಕಾರ ಆಂಟನ್ ಚೆಕಾಫ್‌ನ `ಬೇರ್' (ಕರಡಿ, ಒರಟ, ಅನಾಗರಿಕ) ಎಂಬ ಏಕಾಂಕವನ್ನು ಆಧರಿಸಿ, ಅದಕ್ಕೆ ಕನ್ನಡದ ನವ್ಯಕವಿಗಳಾದ ಗೋಪಾಲಕೃಷ್ಣ ಅಡಿಗರ ಕವಿತೆಗಳನ್ನು (`ನನ್ನ ನುಡಿ', `ಅಳಿಯಲಾರದ ನೆನಹು', `ವಿಧಿಗೆ', `ಗೆಳೆಯನಿಗೆ', `ನನ್ನ ನಿನ್ನ ಬಳುವಳಿ', `ಭೂಮಿಗೀತ', `ಸಮಾಜಭೈರವ', `ಭೂತ' ಇತ್ಯಾದಿ)  ಮತ್ತು ಪಿ. ಲಂಕೇಶರ ಕವಿತೆಗಳನ್ನು (`ದೇಶಭಕ್ತ ಸೂಳೆ ಮಗನ ಗದ್ಯಗೀತೆ', `ನನ್ನ ಸುತ್ತ', `ಬಿಚ್ಚು', `ರಾಮ', `ಎಟುಕದ ಆತಂಕ', `ಬೋದಿಲೇರನ ಅನುವಾದಿತ ಪದ್ಯಗಳು' ಇತ್ಯಾದಿ.) ಕಾವ್ಯಕಸಿ ಮಾಡಿ ಪ್ರದರ್ಶಿತವಾದ ಪ್ರಸ್ತುತ ಪ್ರಯೋಗವನ್ನು ಪ್ರದೀಪ ತಿಪಟೂರು ನಿರ್ದೇಶಿಸಿದ್ದಾರೆ.

ನೀನಾಸಂ ಪದವೀಧರರಾದ ಪ್ರದೀಪ್ ತಿಪಟೂರಿನ ಪ್ರೊಥಿಯುನಲ್ಲಿ ಸಕ್ರಿಯರಾಗಿದ್ದು ಹಲವು ರಂಗಕಮ್ಮಟಗಳನ್ನು ಬೇರೆಬೇರೆ ಜಿಲ್ಲೆಗಳಲ್ಲಿ ಮಾಡುತ್ತ ಬಂದಿದ್ದಾರೆ. ಬರೀ ಮೂರೇಮೂರು ಪಾತ್ರಗಳ ಚೆಕಾಫ್‌ನ ಏಕಾಂಕವನ್ನು ಒಂದು ಹೊಸ ರಂಗಸಾಧ್ಯತೆಯ ಹುಡುಕಾಟದ ಫಲವಾಗಿ ಅನುಸಂಧಾನವನ್ನಾಗಿ ನಿರ್ದೇಶಿಸಿದ್ದಾರೆ. ಇದರಲ್ಲಿ ಅಭಿನಯಿಸಿರುವ ಪ್ರಜ್ಞಾ, ನಾಗರಾಜ ಎಂ ಪತ್ತಾರ್ ಮತ್ತು ಭವಾನಿ ಮೂರೂ ಜನ ವೃತ್ತಿಪರ ರಂಗತರಬೇತಿ ಪಡೆದ ನಟರಾಗಿದ್ದು ಸಾಕಷ್ಟು ಶ್ರಮವಹಿಸಿ ಅಭಿನಯಿಸಿದ್ದಾರೆ. ರಂಗಸಜ್ಜಿಕೆ, ಕರಪತ್ರಗಳನ್ನು ವಿನ್ಯಾಸ ಮಾಡಿದ ಕೇಶವಮೂರ್ತಿ ಇವೆರಡರಲ್ಲೂ ಕಲಾತ್ಮಕತೆಯ ಲೇಪವನ್ನು ನೀಡುವ ಮೂಲಕ ಹೊಸತನವನ್ನು ನೀಡಿದ್ದಾರೆ.

ತನ್ನ ಗಂಡನ ನೆನಪುಗಳೊಂದಿಗೆ, ಅವನು ಎಷ್ಟೇ ದುರುಳನಾಗಿದ್ದರೂ, ನಂಬಿಕೆಗೆ ಅರ್ಹನಲ್ಲದವನಾಗಿದ್ದರೂ ಅವನ ಅಗಲಿಕೆಯಲ್ಲಿ ಅವನಿಗೆ ನಿಷ್ಠಳಾಗಿ ಉಳಿದ ವಿಧವೆ. ಒಂದು ಕಡೆ ಉಕ್ಕಿಹರಿವ ಯೌವನ, ಮತ್ತೊಂದು ಕಡೆ ಸಂಗಾತಿಯಿಲ್ಲದೆ ದೇಹ, ಮನಸ್ಸು ನೆರೆಯುತ್ತಿರುವ ಹಳಹಳಿಕೆ. ಇದರ ಜೊತೆಗೆ ಮಡಿದ ಗಂಡನಿಗೇ ವಿಧೇಯಳಾಗಿರಬೇಕು ಎಂಬ ಆದರ್ಶವಾದಿತನ.

ಇಂತಹ ಸಂದರ್ಭದಲ್ಲಿ ಗಂಡನ ಹಳೆ ಸ್ನೇಹಿತ ಜಮೀನ್ದಾರ ಅವನು ಬಾಕಿ ಕೊಡಬೇಕಿದ್ದ ಸಾಲವಸೂಲಾತಿಗೆ ಅಲ್ಲಿಗೆ ಬರುತ್ತಾನೆ. ಅವನು ರೂಕ್ಷ ಸ್ವಭಾವದವನು. ಪಕ್ಕಾ ವ್ಯವಹಾರಸ್ಥ; ಜೊತೆಗೆ ಈಗಾಗಲೇ ಹಲವು ಹೆಂಗಸರ ಸಂಗ ಮಾಡಿದವನು, ಹಾಗೆಯೇ ಹಲವು ಹೆಂಗಸರಿಂದ ಮೋಸಹೋದವನು. ವಿಧವೆ ತಾನೀಗ ದುಃಖದಲ್ಲಿರುವುದಾಗಿಯೂ ಇನ್ನೆರಡುದಿನ ಬಿಟ್ಟು ಸಾಲ ಮರುಪಾವತಿಸುವುದಾಗಿಯೂ ವಿನಂತಿಸಿಕೊಳ್ಳುತ್ತಾಳೆ. ಅವಳ ಮನೆಯ ಕೆಲಸದ ಅಜ್ಜಿಯೂ ಕೂಡ ಹೀಗೆ ಒಂದಾನೊಂದು ಕಾಲದಲ್ಲಿ ವಿಧವೆಯಾದವಳೇ. ಅವಳೂ ಕೂಡ ಅವನಲ್ಲಿ ವಿನಂತಿ ಮಾಡುತ್ತಾಳೆ.

ಆದರೆ ಅವನು ಸಾಲ ಕೊಂಡೇ ಹೋಗುವುದೆಂದು ಅವರ ಮನೆಯಲ್ಲೇ ಠಿಕಾಣಿ ಹೂಡುತ್ತಾನೆ. ಸಾಲದ್ದಕ್ಕೆ ಆ ಕೆಲಸದ ಅಜ್ಜಿಯ ಕೈಯಿಂದ ಮದ್ಯ ತರಿಸಿಕೊಂಡು ಅಲ್ಲೇ ಕುಡಿಯುತ್ತ ಕಾಯುತ್ತ ಕೂರುತ್ತಾನೆ. ಕಡೆಗೆ ವಿಧವೆ ಹೆಂಗಸು ಮತ್ತು ಆ ರೂಕ್ಷನ ನಡುವೆ ಗಂಡು-ಹೆಣ್ಣು ಕುರಿತಾದ ಒಂದು ದೊಡ್ಡ ಸಂವಾದವೇ ನಡೆಯುತ್ತದೆ. ಕಡೆಗೆ ಇಬ್ಬರೂ ದ್ವಂದ್ವ ಯುದ್ಧ ಮಾಡುವುದೆಂದು ನಿರ್ಧರಿಸಿ ಪಿಸ್ತೂಲು ಹಿಡಿದು ನಿಲ್ಲುತ್ತಾರೆ. ಆದರೆ ಆ ಹೊತ್ತಿಗೆ ಹೊತ್ತಿಉರಿಯುತ್ತಿದ್ದ ಆ ರೂಕ್ಷನ ಕಣ್ಣಲ್ಲಿ ವಿಧವೆಯೆಡೆಗೆ ಪ್ರೀತಿಯ ಸೆಲೆ ಜಿನುಗಲಾರಂಭಿಸುತ್ತದೆ.

ಅವನು ಅವಳಲ್ಲಿ ತನ್ನ ಎಲ್ಲ ರೂಕ್ಷತೆಯನ್ನು ಕಳೆದುಕೊಂಡು ಪ್ರೇಮನಿವೇದನೆ ಮಾಡಿಕೊಳ್ಳುತ್ತಾನೆ. ಆದರೆ ಗತಿಸಿದ ತನ್ನ ಗಂಡನ ಎಡೆಗೆ ವಿಚಿತ್ರವಾದ ನಿಷ್ಠೆಯನ್ನು ಹೊಂದಿದ ವಿಧವೆ ಈಗ ಇಬ್ಬಗೆಯ ಮನಃತೋಟಿಯಲ್ಲಿ ಬೀಳುತ್ತಾಳೆ. ಇವನನ್ನು ಸ್ವೀಕರಿಸುವುದೋ ಬೇಡವೋ? ತನ್ನ ಗಂಡನಿಗೆ ನಿಷ್ಠಳಾಗಿರುವುದೋ ಬೇಡವೋ? ಇಷ್ಟಕ್ಕೂ ನಿಷ್ಠೆ ಅಂದರೆ ಏನು? ಪ್ರೀತಿ ಎಂದರೆ ಏನು? ಎಂಬ ಹಲವು ಸಂಕೀರ್ಣ ಆಲೋಚನೆಗಳ ಕಡೆಗೆ ಮನಸ್ಸು ತುಯ್ದೊಡಿ ಕಡೆಗೆ ಅವರಿಬ್ಬರೂ ಪರಸ್ಪರ ಚುಂಬಿಸುವುದರ ಮೂಲಕ ನಾಟಕ ಮುಕ್ತಾಯ ಹೊಂದುತ್ತದೆ. ಇದಿಷ್ಟು ಚೆಕಾಫ್‌ನ `ಬೇರ್' ಏಕಾಂಕದ ಸಾರಾಂಶ.

ಇದಿಷ್ಟನ್ನೆ ಮಾಡಿದ್ದರೆ ಪ್ರಯೋಗದ ಕನ್ನಡದ ಅವತರಣಿಕೆ ಮಗ ಎಂದೋ, ರೂಕ್ಷ ಎಂದೋ ಆಗುತ್ತಿತ್ತು. ಆದರೆ ಆ ಎಳೆವಿಧವೆ ಮತ್ತು ರೂಕ್ಷನ ನಡುವೆ ಕನ್ನಡದ ಅಡಿಗರ, ಲಂಕೇಶರ ಕಾವ್ಯವನ್ನು ಹರಿದಾಡಿಸಿರುವುದರಿಂದ `ಅನುಸಂಧಾನ' ಎಂದಾಗಿದೆ. ಇದು ಒಂದು ಥರದಲ್ಲಾದರೆ ಇನ್ನೊಂದು ಥರದಲ್ಲಿ ಒಂದು ಗಂಡು ಮತ್ತು ಹೆಣ್ಣು ಇಬ್ಬರೂ ಕೂಡಿ ನಡೆಸುವ ವಾಗ್ವಾದ, ಕೊಟ್ಟು-ಪಡೆದುಕೊಳ್ಳುವ ಅನುಸಂಧಾನ. ಹಲವು ಕಡೆ ಕನ್ನಡದ ಕವಿತೆಗಳು ನಾಟಕಕ್ಕೆ ಹೊಸ ಅರ್ಥ, ಓಘವನ್ನು ನೀಡುತ್ತವೆ.

ಆದರೆ ಬಹುತೇಕ ಕಡೆಗಳಲ್ಲಿ ಹುಸಿ ಸೇರ್ಪಡೆಯಂತೆಯೂ ಭಾಸವಾಗದೆ ಇರದು. ಇಷ್ಟಕ್ಕೂ ಚೆಕಾಫ್‌ನ ಈ ಏಕಾಂಕಕ್ಕೆ ಕನ್ನಡ ಕಾವ್ಯಗಳ ಕಸಿಯ ಅವಶ್ಯಕತೆಯಾದರೂ ಏಕಿತ್ತು? ಅವಶ್ಯಕತೆ ಇದ್ದದ್ದೇ ಹೌದಾದರೆ ಅದು ಅಡಿಗರ ಮತ್ತು ಲಂಕೇಶರ ಕವಿತೆಗಳನ್ನೇ ಆಯ್ಕೆ ಮಾಡಿಕೊಂಡಿದ್ದರ ಹಿಂದಿನ ಉದ್ದೇಶ ಏನು? ಹೀಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿಬಿಡುತ್ತದೆ. ಇಲ್ಲಿನ ಹಲವು ಕವಿತೆಗಳಿಗೆ ಬಲವಾದ ಸಾಮಾಜಿಕ/ಕೌಟುಂಬಿಕ ಸ್ಥಿತಿ, ಸಂದರ್ಭಗಳ ಚೌಕಟ್ಟಿದೆ, ಮಿತಿಗಳಿವೆ. ಹಾಗೆಯೇ ಮತ್ತೂ ಕೆಲವು ಕವಿತೆಗಳಿಗೆ ಎಲ್ಲ ಕೌಟುಂಬಿಕ ಸಂಬಂಧ, ಪಾತ್ರಗಳ ಚೌಕಟ್ಟುನ್ನು ಮೀರಿದ ವಿಶ್ವಾತ್ಮಕತೆಯಿದೆ.

ಇವೆಲ್ಲವನ್ನೂ ನಾಟಕದ ಪಾತ್ರಗಳು ಆಡಿದಾಗ ಆಗುವ ಅನುಸಂಧಾನ ಯಾವ ಬಗೆಯದು? ಪ್ರೇಕ್ಷಕ ಮತ್ತು ನಟರ ನಡುವಿನ ಅನುಸಂಧಾನ ಯಾವಬಗೆಯದು? ನಟ ಮತ್ತು ತನ್ನ ಪಾತ್ರದ ನಡುವಿನ ಅನುಸಂಧಾನ ಯಾವ ಬಗೆಯದು? ಕಾವ್ಯ ಮತ್ತು ನಾಟಕದ ಅನುಸಂಧಾನ ಯಾವ ಬಗೆಯದು? ವಾಸ್ತವ ನಟನೆಯ ಪಾತ್ರ ಮತ್ತು ಅವಾಸ್ತವ ಕಾವ್ಯದ ನಡುವಿನ ಅನುಸಂಧಾನ ಯಾವ ಬಗೆಯದು? ಹೀಗೆ ಹಲವು ಅನುಮಾನ, ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಮತ್ತು ಯಾವುದನ್ನೂ ಸ್ಪಷ್ಟಪಡಿಸುವುದಿಲ್ಲ ಪ್ರಸ್ತುತ ಪ್ರಯೋಗ.

ನಿಜವಾದ ಕಲಾಕೃತಿಯೊಂದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕುವಂತಿರಬೇಕು. ಆದರೆ ಪ್ರಸ್ತುತ ಪ್ರಯೋಗ ಹುಟ್ಟುಹಾಕುತ್ತಿರುವ ಪ್ರಶ್ನೆ ಬೇರೆ ಬಗೆಯದು. ಅದು ಅತ್ಯಂತ ಪ್ರಾಥಮಿಕ ನೆಲೆಯದ್ದು. ಒಂದು ಪ್ರಕಾರವನ್ನು ಮತ್ತೊಂದು ಪ್ರಕಾರಕ್ಕೆ ಕಸಿಮಾಡುವಲ್ಲಿ ವಹಿಸಬೇಕಾದ ಎಚ್ಚರ, ಅನ್ವೇಷಣೆ ಮತ್ತು ಅದು ಬೀರಬಹುದಾದ ಪರಿಣಾಮಗಳ ಬಗ್ಗೆ ಇನ್ನೂ ಸರಿಯಾದ ಮನವರಿಕೆಯಿದ್ದರೆ ಮಾತ್ರ ಅದು ಸಂಕೀರ್ಣ ಕಲಾಕೃತಿಯಾಗುತ್ತದೆ. ಇಲ್ಲದಿದ್ದರೆ ಬರಿದೇ ಕಸರತ್ತಾಗುತ್ತದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT