ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನೈತಿಕ ಚಟುವಟಿಕೆಗಳ ತಾಣವಾದ ಸರ್ಕಾರಿ ಕಚೇರಿ

Last Updated 4 ಜನವರಿ 2014, 4:53 IST
ಅಕ್ಷರ ಗಾತ್ರ

ಕುಶಾಲನಗರ: ಪಟ್ಟಣದ ಹೃದಯ ಭಾಗದಲ್ಲಿರುವ ಕರ್ನಾಟಕ ಸರ್ಕಾರದ ಒಂದು ಉದ್ದಿಮೆಯಾದ ಕರ್ನಾಟಕ ಆಗ್ರೋ ಇಂಡಸ್ಟ್ರೀಸ್ ಕಾರ್ಪೋರೇಷನ್ ಲಿಮಿಟೆಡ್‌ನ ಕಚೇರಿ ಹದಿನೈದು ವರ್ಷಗಳಿಂದ ಪಾಳು ಬಿದ್ದಿದ್ದು, ಇದೀಗ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.

25 ವರ್ಷಗಳ ಹಿಂದೆ ರೈತರಿಗೆ ರಸಗೊಬ್ಬರ, ಸಸ್ಯ ಸಂರಕ್ಷಣಾ ಔಷಧಗಳು, ಟಿಲ್ಲರ್ ಸೇರಿದಂತೆ ವ್ಯವಸಾಯದ ಬಿಡಿ ಭಾಗಗಳು ಮತ್ತು ಹಲವು ಕೃಷಿ ಉಪಕರಣಗಳನ್ನು ನೀಡುವ ಮೂಲಕ ಕೃಷಿಯನ್ನು ಉತ್ತೇಜಿಸುವ ದೃಷ್ಟಿಯಿಂದ ಜಿಲ್ಲಾ ವ್ಯವಸ್ಥಾಪಕರ ಕಚೇರಿ ಆರಂಭಿಸಲಾಗಿತ್ತು.

ಆದರೆ, 2005 ಸಂದರ್ಭಕ್ಕೆ ಸಂಸ್ಥೆಯ ಉಪಕಚೇರಿ ನಷ್ಟ ಅನುಭವಿಸಲು ಆರಂಭಿಸಿದ್ದರಿಂದ ಜಿಲ್ಲಾ ವ್ಯವಸ್ಥಾಪಕರ ಕಚೇರಿಯನ್ನು ಮುಚ್ಚಿ ಅಲ್ಲಿನ ನೌಕರರನ್ನು ಬೇರೆ ಬೇರೆ ಇಲಾಖೆಗಳಿಗೆ ವರ್ಗಾಯಿಸಲಾಯಿತು.

ಸುಮಾರು 8 ಸೆಂಟ್‌ ಜಾಗದಲ್ಲಿ ನಿರ್ಮಾಣವಾಗಿದ್ದ ಒಂದು ಅಂತಸ್ತಿನ ಬಂಗಲೆಯಿಂದ ವ್ಯವಸ್ಥಾಪಕ ಕಚೇರಿ ತೆರವುಗೊಳ್ಳುತ್ತಿದ್ದಂತೆ ಕಚೇರಿಯು ಪಾಳು ಬಿದ್ದಿತು. ನೆಲಮಾಳಿಗೆಯಲ್ಲಿ ವಿಸ್ತಾರವಾದ ನಾಲ್ಕೈದು ಕೊಠಡಿಗಳು, ಎರಡನೇ ಅಂತಸ್ತಿನಲ್ಲೂ ಇದೇ ಮಾದರಿಯಲ್ಲಿರುವ ಈ ಬಂಗಲೆಯನ್ನು ಕೃಷಿ ಇಲಾಖೆಗೆ ಬಿಟ್ಟುಕೊಡಲು ನಿರ್ಧರಿಸಲಾಯಿತು. ಆದರೂ 2010ರವರೆಗೆ ಯಾವುದೇ ಪತ್ರ ವ್ಯವಹಾರಗಳು ನಡೆಯದೇ ಹಾಗೇ ಉಳಿಯಿತು.

ವಿಪರ್ಯಾಸವೆಂದರೆ ಈ ಕಚೇರಿ ಆ ಸಂದರ್ಭಕ್ಕಾಗಲೇ ಪುಂಡಪೋಕರಿಗಳಿಗೆ ಕಾರ್ಡ್ಸ್ ಆಡುವ ಅಡ್ಡೆಯಾಗಿ ಮಾರ್ಪಟ್ಟಿತ್ತು ಎಂಬುದು ಸತ್ಯ. ಆದರೆ 2010ರಲ್ಲಿ ಕರ್ನಾಟಕ ಆಗ್ರೋ ಇಂಡಸ್ಟ್ರೀಸ್ ಕಾರ್ಪೋರೇಷನ್ ಲಿಮಿಟೆಡ್ ಕೃಷಿ ಇಲಾಖೆಗೆ ಒಂದು ಪತ್ರ ಬರೆದು, ತನ್ನ ಸುಪರ್ದಿಗೆ ಪಡೆಯುವಂತೆ ತಿಳಿಸಿತು. ಆದರೂ ಇದುವರೆಗೂ ಖಾತೆ ಬದಲಾವಣೆ ಆಗಲಿಲ್ಲ.

ಹೀಗಾಗಿ, ಕಟ್ಟಡದ ಮೊದಲ ಅಂತಸ್ತಿನ ಮೇಲೆ ಆಳೆತ್ತರದ ಗಿಡಗಳೆಲ್ಲ ಬೆಳೆದಿವೆ. ಅಲ್ಲದೇ, ಕಟ್ಟಡದ ಸುತ್ತಲೂ ಕಂಡಕಂಡವರೆಲ್ಲಾ ಕಸ–ಕಡ್ಡಿಗಳ ರಾಶಿ ಹಾಕಿ ಕಚೇರಿ ಭೂತದ ಬಂಗಲೆಯೇನೋ ಎಂಬ ಸ್ಥಿತಿ ತಲುಪಿದೆ. ಹೀಗಾಗಿ ಕಟ್ಟಡ ಸಂಪೂರ್ಣ ಶಿಥಿಲಗೊಂಡು ಇಂದೋ ನಾಳೆಯೋ ಬಿದ್ದು ಹೋಗುವುದೇ ಎನ್ನುವ ಹಂತ ತಲುಪಿದೆ.

ಕಟ್ಟಡದ ಸುತ್ತಲೂ ಅಂದಾಜು 25 ಸೆಂಟ್‌ಗಳಷ್ಟಿರುವ ಜಾಗವನ್ನು ಸುತ್ತ ಮುತ್ತ ಇರುವವರು ಒತ್ತುವರಿ ಮಾಡುವ ದಿನಗಳು ಬಂದರೂ ಆಶ್ಚರ್ಯವೇನಿಲ್ಲ. ಇನ್ನು ಕಟ್ಟಡದ ಒಳಕ್ಕೆ ಹೋಗಲು ಹಿಂದಿನ ಬಾಗಿಲು ತೆರೆದುಕೊಂಡಿರುವುದರಿಂದ ಅದರೊಳಕ್ಕೆ ಸುಲಭವಾಗಿ ಹೋಗಲು ಸಾಧ್ಯವಿರುವುದರಿಂದ ಪುಂಡಪೋಕರಿಗಳು ಅದರೊಳಗೆ ಬೀರು–ಬ್ರಾಂಡಿಗಳನ್ನು ಕುಡಿದು ಬಾಟಲಿಗಳನ್ನು ಬಿಸಾಡಿದ್ದಾರೆ. ಹೀಗಾಗಿ, ಆಗ್ರೊ ಇಂಡಸ್ಟ್ರೀಸ್ ಲಿಮಿಟೆಡ್ ಕಚೇರಿಯು ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.

ಒಟ್ಟಾರೆ ಪಟ್ಟಣದ ಹೃದಯ ಭಾಗದಲ್ಲಿರುವ ಈ ಕಟ್ಟಡವು ಇಂದು ಏನಿಲ್ಲ ಎಂದರೂ ಇವತ್ತಿನ ಮಾರುಕಟ್ಟೆಯ ಬೆಲೆಯ ಆಧಾರದಲ್ಲಿ ಹೇಳುವುದಾದರೆ, ಅಂದಾಜು ಮೂರು ಕೋಟಿಗೂ ಹೆಚ್ಚು ಬೆಲೆ ಬಾಳುವ ಆಸ್ತಿ ವ್ಯರ್ಥವಾಗಿ ಬಿದ್ದಿದೆ ಎಂಬುದು ಮಾತ್ರ ಬೇಸರದ ಸಂಗತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT