ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನೈತಿಕ ಚಟುವಟಿಕೆಗಳ ತಾಣವಾದ ಸರ್ಕಾರಿ ಕಟ್ಟಡ!

Last Updated 10 ಜೂನ್ 2011, 6:55 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ಪಟ್ಟಣದ ಹೊರವಲಯದ ಶಿಗ್ಲಿ ರಸ್ತೆಯಲ್ಲಿ 2005-06ರಲ್ಲಿ ಸುಮಾರು 12.40 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಸರ್ಕಾರಿ ಪ.ಪೂ. ವಿಜ್ಞಾನ ಕಾಲೇಜಿನ ಕಟ್ಟಡ ಕಳೆದ ಐದು ವರ್ಷಗಳಾದರೂ ಪೂರ್ಣಗೊಂಡಿಲ್ಲ. 

 ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಪ್ರಯತ್ನಪಟ್ಟು ಲಕ್ಷ್ಮೇಶ್ವರ ಹಾಗೂ ಶಿಗ್ಲಿಗೆ ತಲಾ ಒಂದೊಂದು ಸರ್ಕಾರಿ ಪದವಿ ಪೂರ್ವ ಕಾಲೇಜು ತರುವಲ್ಲಿ ಯಶಸ್ವಿಯಾಗಿದ್ದರು. ಅದರಂತೆ ಎರಡೂ ಕಾಲೇಜು ನಿರ್ಮಾಣಕ್ಕೆ ಅಗತ್ಯ ಅನುದಾನವನ್ನೂ ಬಿಡುಗಡೆ ಮಾಡಿಸಿದ್ದರು. ಎರಡೂ ಕಾಲೇಜು ಕಟ್ಟಡ ಕಾಮಗಾರಿ ಆರಂಭವಾಗಿ ಶಿಗ್ಲಿ ಕಾಲೇಜಿನ ಕಾಮಗಾರಿ ಪೂರ್ಣಗೊಂಡು ಆಗಲೇ ನಾಲ್ಕು ವರ್ಷ ಕಳೆದಿವೆ. ಆದರೆ ಪಟ್ಟಣದ ಕಾಲೇಜಿನ ಕಟ್ಟಡ ಮಾತ್ರ ಇನ್ನೂ ಅಪೂರ್ಣವಾಗೇ ಉಳಿದಿದೆ.

ಈಗ ಕಟ್ಟಡ ನಿರ್ಮಾಣದ ಕೆಲಸ ಶೇ.70ರಷ್ಟು ಮುಗಿದಿದ್ದು ಕಿಟಕಿ, ಬಾಗಿಲು, ನೆಲಹಾಸು, ವಿದ್ಯುದ್ದೀಕರಣ ಸೇರಿದಂತೆ ಬಾಕಿ ಇರುವ ಕೆಲಸ ಮುಗಿಸಲು ಅಂದಾಜು ರೂ 3ರಿಂದ 5ಲಕ್ಷ  ಹಣದ ಅವಶ್ಯಕತೆ ಇದೆ.

ಕ್ಷೇತ್ರದಲ್ಲಿ ಮೂವರು ಮಾಜಿ ಶಾಸಕರು, ಹಾಗೂ ಹಾಲಿ ಶಾಸಕರು ಇದ್ದರೂ ಈ ಕಟ್ಟಡ ಪೂರ್ಣಗೊಳಿಸಲು ಸಾಧ್ಯವಾಗದಿರುವುದು ಶಿಕ್ಷಣ ಬಗ್ಗೆ ಕಾಳಜಿ ಇಲ್ಲ ಎನ್ನುವುದನ್ನು ತೋರುತ್ತಿದೆಯೆ?

ಅಪೂರ್ಣಗೊಂಡ ಕಟ್ಟಡ ಈಗ ಅನೈತಿಕ ತಾಣ ಹಾಗೂ ಕುರಿ ನಿಲ್ಲುವ ಕುರಿದೊಡ್ಡಿಯಾಗಿದ್ದು ಕಟ್ಟಡದ ಖಾಲಿ ಇರುವ ಕೊಠಡಿಗಳಲ್ಲಿ ಬರೀ ಕುರಿ ಹಿಕ್ಕೆಗಳೇ ತುಂಬಿಕೊಂಡಿವೆ.

ಇದು ಈಗ ಅನೇಕ ಅಕ್ರಮ ಚಟುವಟಿಕೆಗಳ ತಾಣವಾಗಿದೆ. ಅಲ್ಲದೆ ಇಲ್ಲಿ ಅನೇಕ ಕಾನೂನು ಬಾಹಿರ ಚಟುವಟಿಕೆಗಳೂ ನಡೆಯುತ್ತಿವೆ ಎನ್ನಲಾಗಿದೆ.

ಶಾಸಕರು, ಮಾಜಿ ಶಾಸಕರು, ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷರೂ ಸೇರಿದಂತೆ ಎಲ್ಲ ಅಧಿಕಾರಿಗಳೂ ಈ ಮಾರ್ಗದಲ್ಲಿ ಹಾದು ಹೋಗುತ್ತಾರೆ. ಆದರೂ ಅಪೂರ್ಣಗೊಂಡ ಕಟ್ಟಡ ಇವರ ಕಣ್ಣಿಗೆ ಬೀಳದಿರುವುದು ಜಾಣ ಕುರುಡು ಎನ್ನಬೇಕೆ? ತಿಳಿಯದಾಗಿದೆ.

ಶಿಗ್ಲಿಯ ಕಟ್ಟಡ ಪೂರ್ಣಗೊಂಡು ಈಗಾಗಲೇ 4 ವರ್ಷಗಳಾಗಿದ್ದರೂ ಲಕ್ಷ್ಮೇಶ್ವರದ ಕಾಲೇಜು ಕಟ್ಟಡ ಮಾತ್ರ ಅನಾಥವಾಗಿ ಉಳಿದಿದೆ.

ಕಟ್ಟಡ ನಿರ್ಮಾಣಕ್ಕೆ ಭೂದಾನ ಮಾಡಿದ ಮಾನ್ವಿ ಕುಟುಂಬದ ಸದಸ್ಯರಿಗೂ ಕಾಲೇಜು ಅಪೂರ್ಣ ವಾಗಿರುವುದು ಬೇಸರ ತರಿಸಿದೆ.

ಈ ಕಟ್ಟಡ ಎಎಸ್‌ಡಿಎಂಸಿಯಿಂದ ಕಟ್ಟಲ್ಪಟ್ಟಿದ್ದು ಈಗ ಎಸ್‌ಡಿಎಂಸಿ ಖಾತೆಯಲ್ಲಿ ಒಂದು ಲಕ್ಷ ರೂಪಾಯಿ ಇದೆ ಎನ್ನಲಾಗುತ್ತಿದೆ. ಕಟ್ಟಡ ಪೂರ್ಣಗೊಳಿಸಲು ರೂ 4 ಲಕ್ಷ ಅಗತ್ಯ ಇದೆ. ಈಗಲಾದರೂ ಶಾಸಕರು ಕಟ್ಟಡ ಪೂರ್ಣಗೊಳಿಸಲು ಪ್ರಯತ್ನಿಸಬೇಕು. ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕು ಎನ್ನುವುದು ಶಿಕ್ಷಣ ಪ್ರೇಮಿಗಳ ಒತ್ತಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT