ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನ್ನದ ನಾಡು, ಚಿನ್ನದ ಬೀಡು

Last Updated 23 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಭತ್ತದ ಕಣಜ. ಚಿನ್ನದ ನಾಡು. ನಾಡಿಗೆ ಬೆಳಕು ನೀಡುವ ‘ಶಕ್ತಿ’ ಕೇಂದ್ರ. ಹರಿದಾಸರ ತೊಟ್ಟಿಲು. ಶರಣ ಸಂಸ್ಕೃತಿಯ ನೆಲ. ಉತ್ತರಕ್ಕೆ ಕೃಷ್ಣೆ, ದಕ್ಷಿಣಕ್ಕೆ ತುಂಗಭದ್ರಾ ನದಿ ನಡುವಿನ ಪ್ರದೇಶವೇ ರಾಯಚೂರು ಜಿಲ್ಲೆ. ಇರ್ದೊರೆಯ ನಾಡು, ‘ದೋ ಆಬ್’ ಪ್ರದೇಶವೆಂದೂ ರಾಯಚೂರು ಹೆಸರುವಾಸಿಯಾಗಿತ್ತು.

ದಕ್ಷಿಣ ಭಾರತದಲ್ಲಿಯೇ ಅತಿ ಹೆಚ್ಚು ಪ್ರಮಾಣದ ಹತ್ತಿ ಬೆಳೆಯುವುದರಿಂದ ‘ಬಿಳಿ ಬಂಗಾರ’ ಬೆಳೆಯುವ ಜಿಲ್ಲೆ ಎಂದೂ ಹೆಸರಾಗಿದೆ. ಇಲ್ಲಿ ಬೆಳೆಯುವ ಸೋನಾ ಮಸೂರಿ ಭತ್ತ ಜಾಗತಿಕ ಮಾರುಕಟ್ಟೆಯಲ್ಲಿ ಗಮನಸೆಳೆದಿದೆ.

ಅನ್ನ-ಚಿನ್ನ, ಅಪರೂಪದ ಕೆಂಪು ಗ್ರಾನೈಟ್, ವಿದ್ಯುತ್ ಉತ್ಪಾದಿಸುವ ಶಾಖೋತ್ಪನ್ನ ವಿದ್ಯುತ್ ಸ್ಥಾವರ ಜಿಲ್ಲೆಯ ವಿಶೇಷಗಳು. ಕೃಷ್ಣೆ- ತುಂಗಭದ್ರೆಯರು ಎಡ ಮತ್ತು ಬಲದಲ್ಲಿ ಹರಿದರೂ ಜಿಲ್ಲೆಯಲ್ಲಿ ಬಡತನ ಹಾಸಿ ಹೊದ್ದು ಮಲಗಿದೆ. ಅನಕ್ಷರತೆ ಪ್ರಮಾಣ ಕೊಂಚ ತಗ್ಗಿದ್ದರೂ ಕೆಲಸ ಅರಸಿ ಗುಳೇ ಹೋಗುವವರ ಸಂಖ್ಯೆ ಕಡಿಮೆಯಾಗಿಲ್ಲ.

ತುಂಗಭದ್ರಾ ಎಡದಂಡೆ ಹಾಗೂ ನಾರಾಯಣಪುರ ಬಲದಂಡೆ ಕಾಲುವೆಗಳ ಅಸಮರ್ಪಕ ನಿರ್ವಹಣೆಯಿಂದ ಜಿಲ್ಲೆಯಲ್ಲಿ ನೀರಾವರಿ ಅಭಿವೃದ್ಧಿ ಆಗಿಲ್ಲ. ನಾರಾಯಣಪುರ ಬಲದಂಡೆ ನಾಲೆ ಕಾಮಗಾರಿ ಅರೆಬರೆಯಾಗಿದೆ. ತುಂಗಭದ್ರಾ ಕಾಲುವೆ ಪದೇ ಪದೇ ಒಡೆಯುತ್ತಿದೆ. ಕೊನೆ ಭಾಗದ ರೈತರಿಗೆ ತುಂಗಭದ್ರೆ ನೀರು ಇಂದಿಗೂ ಮರೀಚಿಕೆ.

ಐತಿಹಾಸಿಕ ಹಿನ್ನೆಲೆ: ಜಿಲ್ಲೆಯ ಇತಿಹಾಸವು ಕ್ರಿ.ಪೂ. 300ರಿಂದ ಅಧಿಕೃತ ಆರಂಭವಾಗುತ್ತದೆ. ಜಿಲ್ಲೆಯ ಮಸ್ಕಿಯಲ್ಲಿ ಅಶೋಕ ಕಾಲದ ಶಾಸನವಿದೆ. ಮೌರ್ಯರು, ಶಾತವಾಹನರು, ಕಾಕತೀಯರು, ಮಾನ್ಯ ಖೇಟದ ರಾಷ್ಟ್ರಕೂಟರು, ಕಲ್ಯಾಣದ ಚಾಲುಕ್ಯರು, ಕಲಚೂರಿಗಳು, ವಿಜಯನಗರದ ಅರಸರು, ಬಹುಮನಿ ಸುಲ್ತಾನರು, ದೇವಗಿರಿಯ ಸೇವುಣರು, ಬಿಜಾಪುರದ ಆದಿಲ್‌ಶಾಹಿಗಳು, ಮೊಘಲರು, ಮರಾಠರು, ಹೈದರಾಬಾದ್ ನಿಜಾಮರು ಹಾಗೂ ಬ್ರಿಟಿಷರು ಈ ಜಿಲ್ಲೆಯ ಪ್ರದೇಶವನ್ನು ಆಳಿದ್ದಾರೆ.

ಕರಡಕಲ್ಲಿನ ಕದಂಬರು, ಸಾಲಗುಂದಿಯ ಸಿಂಧರು, ಹೈಹಯರು, ದೇವದುರ್ಗ ಸಂಸ್ಥಾನಿಕರು, ಗುಡಗುಂಟಿ ನಾಯಕರು, ಮಲ್ಲಟದ ಹೈಹಯರು, ಗುಂತಗೋಳ, ಎಡದೊರೆ ನಾಡಿನ ಹೈಹಯರು ಹೀಗೆ ಹಲವು ಸಾಮಂತ ಅರಸರೂ ಆಳ್ವಿಕೆ ಮಾಡಿದ್ದಾರೆ. ನಾಡಗೌಡ, ಜಹಗೀರದಾರ, ದೇಸಾಯಿ, ನಾಯಕ ಮನೆತನದವರೂ ಆಳಿದ್ದಾರೆ.

ಜಿಲ್ಲೆಯ ಇತಿಹಾಸದಲ್ಲಿ ವಿಜಯನಗರ ಅರಸರ, ಬಹುಮನಿ ಸುಲ್ತಾನರ, ಬಿಜಾಪುರ ಆದಿಲ್‌ಶಾಹಿ ಆಳ್ವಿಕೆಯ ಕಾಲ ಘಟ್ಟ ಬಹುಮುಖ್ಯವಾದುದು. ಈ ಜಿಲ್ಲೆಯಲ್ಲಿನ ಫಲವತ್ತಾದ ಭೂ ಪ್ರದೇಶ ಸ್ವಾಧೀನಪಡಿಸಿಕೊಳ್ಳಲು ಹಲವಾರು ಯುದ್ಧಗಳು ನಡೆದಿವೆ. ಮುದಗಲ್, ರಾಯಚೂರು, ಮಲಿಯಾಬಾದ್, ಜಲದುರ್ಗದ ಕೋಟೆಗಳು ರಾಯಚೂರು ಜಿಲ್ಲೆಯ ಗತ ಇತಿಹಾಸದ ಕಥೆ ಹೇಳುತ್ತವೆ.

ಜಿಲ್ಲೆಯ ವ್ಯಾಪ್ತಿ: ರಾಯಚೂರು ಜಿಲ್ಲೆ ಗಾತ್ರದ ದೃಷ್ಟಿಯಿಂದ ರಾಜ್ಯದ 11ನೇ ಸ್ಥಾನದಲ್ಲಿದೆ. ಒಟ್ಟು 6,827 ಚ.ಕಿ.ಮೀ. ವಿಸ್ತೀರ್ಣ ಹೊಂದಿದೆ. ಜಿಲ್ಲೆಯಲ್ಲಿ ಎರಡು ಕಂದಾಯ ವಿಭಾಗಗಳು, ಐದು ತಾಲ್ಲೂಕುಗಳು ಹಾಗೂ 37 ಹೋಬಳಿಗಳಲ್ಲಿ 830 ಜನವಸತಿ ಗ್ರಾಮಗಳು ಹಾಗೂ 53 ಜನವಸತಿ ಇಲ್ಲದ ಗ್ರಾಮಗಳಿವೆ. ಯಾದಗಿರಿ, ಕೊಪ್ಪಳ, ಬಳ್ಳಾರಿ, ಬಾಗಲಕೋಟೆ, ಗುಲ್ಬರ್ಗ ಹಾಗೂ ಆಂಧ್ರಪ್ರದೇಶದ ಮೆಹಬೂಬ್‌ನಗರ ಮತ್ತು ಕರ್ನೂಲ್ ಜಿಲ್ಲೆಗಳು ಈ ಜಿಲ್ಲೆಯ ಅಕ್ಕಪಕ್ಕದ ಜಿಲ್ಲೆಗಳಾಗಿವೆ.

ಐದು ತಾಲ್ಲೂಕು ಪಂಚಾಯಿತಿ, 164 ಗ್ರಾಮ ಪಂಚಾಯಿತಿಗಳು, 6 ಸ್ಥಳೀಯ ಸಂಸ್ಥೆಗಳು, 7 ವಿಧಾನಸಭಾ ಕ್ಷೇತ್ರಗಳು ಜಿಲ್ಲೆಯಲ್ಲಿವೆ. ಜಿಲ್ಲೆಯ ಜನಸಂಖ್ಯೆ 16,69,762. ಜಿಲ್ಲೆಯ 8,35,843 ಹೆಕ್ಟೇರ್ ಭೌಗೋಳಿಕ ಕ್ಷೇತ್ರದಲ್ಲಿ 5,75,551 ಹೆಕ್ಟೇರ್ ಕೃಷಿ ಭೂಮಿ. ಅದರಲ್ಲಿ 1,26,406 ಹೆಕ್ಟೇರ್ ನೀರಾವರಿ ಪ್ರದೇಶ. 18,167 ಹೆಕ್ಟೇರ್ ಅರಣ್ಯ ಪ್ರದೇಶವಿದೆ. ವಾರ್ಷಿಕ ವಾಡಿಕೆ ಮಳೆ ಪ್ರಮಾಣ 621.2 ಮಿ.ಮೀ. ಭತ್ತ, ಹತ್ತಿ, ಕಡಲೆ, ಜೋಳ, ಹೈಬ್ರಿಡ್ ಸಜ್ಜೆ, ತೊಗರಿ, ಹೆಸರು, ಸೂರ್ಯಕಾಂತಿ, ಶೇಂಗಾ, ಬಿಳಿ ಜೋಳ  ಜಿಲ್ಲೆಯ ಪ್ರಮುಖ ಬೆಳೆಗಳು. ಕೃಷಿ ಹಾಗೂ ವ್ಯಾಪಾರ ಜಿಲ್ಲೆಯ ಜನರ ಪ್ರಮುಖ ಉದ್ಯೋಗಗಳು. ಕನ್ನಡ ಭಾಷೆ ಮುಖ್ಯ ಭಾಷೆ. ತೆಲುಗು, ಉರ್ದು, ಗುಜರಾತಿ ಹಾಗೂ ಮರಾಠಿ, ರಾಜಸ್ತಾನಿ ಭಾಷಿಕರೂ ಜಿಲ್ಲೆಯಲ್ಲಿದ್ದಾರೆ.

ಶೈಕ್ಷಣಿಕ ಕ್ಷೇತ್ರ: ಪಂಡಿತ ತಾರಾನಾಥರು 1920ರಲ್ಲಿ ಸ್ಥಾಪಿಸಿದ ಹಮ್‌ದರ್ದ್ ಶಿಕ್ಷಣ ಸಂಸ್ಥೆ ಹಾಗೂ ಅವರ ಹೆಸರಿನ ತಾರಾನಾಥ ಶಿಕ್ಷಣ ಸಂಸ್ಥೆಯ ಎಲ್‌ವಿಡಿ ಮಹಾವಿದ್ಯಾಲಯ, ಎಚ್‌ಕೆಇ ಸಂಸ್ಥೆಯ ಎಸ್‌ಎಲ್‌ಎನ್ ಎಂಜಿನಿಯರಿಂಗ್ ಕಾಲೇಜು, ಟ್ಯಾಗೋರ್ ಶಿಕ್ಷಣ ಸಂಸ್ಥೆ ಸೇರಿದಂತೆ ಅನೇಕ ಸಂಸ್ಥೆಗಳು ಜಿಲ್ಲೆಯ ಶೈಕ್ಷಣಿಕ ಏಳಿಗೆಗೆ ಶ್ರಮಿಸುತ್ತಿವೆ. ಅಮೃತ ಮಹೋತ್ಸವ ಆಚರಿಸುತ್ತಿರುವ ಕೃಷಿ ಸಂಶೋಧನಾ ಕೇಂದ್ರ, ಈಚೆಗೆ ಆರಂಭವಾದ ರಾಯಚೂರು ಕೃಷಿ ವಿವಿಯ ಸಂಶೋಧನೆಗಳು ರಾಷ್ಟ್ರದ ಗಮನ ಸೆಳೆದಿವೆ. ಇಲ್ಲಿನ ಎಪಿಎಂಸಿ ಹತ್ತಿ ಮಾರುಕಟ್ಟೆ ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದೆ. ಇದು ದಕ್ಷಿಣ ಭಾರತದ ಪ್ರಮುಖ ಮಾರುಕಟ್ಟೆಗಳಲ್ಲಿ ಒಂದು. ಸಹಕಾರ ಕ್ಷೇತ್ರದಲ್ಲಿ ಆರ್‌ಡಿಸಿಸಿ ಬ್ಯಾಂಕ್, ಸಿಂಧನೂರಿನ ಸೌಹಾರ್ದ ಸಹಕಾರಿ ಬ್ಯಾಂಕ್(ಸುಕೋ) ಗಮನಾರ್ಹ ಸಾಧನೆ ಮಾಡಿವೆ.

ನಿಜಾಂ ಆಡಳಿತಕ್ಕೆ ಶಾಸ್ತಿ: 1947ರ ಆಗಸ್ಟ್ 15ರಂದು ರಾಷ್ಟ್ರಕ್ಕೆ ಸ್ವಾತಂತ್ರ್ಯ ಸಿಕ್ಕಾಗ ದೇಶದ ಎಲ್ಲೆಡೆ ಜನರು ತ್ರಿವರ್ಣ ಧ್ವಜ ಹಾರಿಸಿ ಸಂಭ್ರಮಿಸಿದರೆ ಹೈದರಾಬಾದ್ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ರಾಷ್ಟ್ರಧ್ವಜ ಹಾರಿಸುವುದು ನಿಷೇಧಿಸಲಾಗಿತ್ತು. ನಿಜಾಂ ಆಡಳಿತದ ಅಟ್ಟಹಾಸಕ್ಕೆ ತಕ್ಕ ಶಾಸ್ತಿ ಮಾಡಲು ತಾರಾನಾಥರು ಜಿಲ್ಲೆಯಲ್ಲಿ ಹೋರಾಟಕ್ಕೆ ಭೂಮಿಕೆಯನ್ನು ಸಿದ್ಧಪಡಿಸಿದರು. ನಿಜಾಮರ ಆಜ್ಞೆ ಉಪೇಕ್ಷಿಸಿ ಆಗಸ್ಟ್ 14ರ ರಾತ್ರಿ ರಾಯಚೂರು ಸಾಥ್ ಕಚೇರಿ ಮೇಲೆ ಎಂ ನಾಗಪ್ಪ, ಬಸಣ್ಣ, ಶರಭಯ್ಯ, ಚಂದ್ರಯ್ಯ, ಪರ್ವತರೆಡ್ಡಿ ಮತ್ತಿತರ ಸ್ವಾತಂತ್ರ್ಯ ಹೋರಾಟಗಾರು ತ್ರಿವರ್ಣ ಧ್ವಜ ಹಾರಿಸಿ ನಿಜಾಮರ ಕೋಪಕ್ಕೆ ಗುರಿಯಾದರು.

1997ರಲ್ಲಿ (ಸ್ವಾತಂತ್ರ್ಯದ ಸುವರ್ಣ ಮಹೋತ್ಸವ ವರ್ಷ) ರಾಯಚೂರು ಜಿಲ್ಲೆಯ ಭಾಗವಾಗಿದ್ದ ಕೊಪ್ಪಳ ನೂತನ ಜಿಲ್ಲೆಯಾಗಿ ರಚನೆಗೊಂಡಿತು. ಕೊಪ್ಪಳ, ಗಂಗಾವತಿ, ಕುಷ್ಟಗಿ ಹಾಗೂ ಯಲಬುರ್ಗಾ ತಾಲ್ಲೂಕುಗಳು ಹೊಸ ಜಿಲ್ಲೆಗೆ ಸೇರಿದವು. ಈಗ ರಾಯಚೂರು ಜಿಲ್ಲೆಯಲ್ಲಿ ಐದು ತಾಲ್ಲೂಕುಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT