ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನ್ನದಾನ: ಸಹಕರಿಸಲು ಸಂಘ-ಸಂಸ್ಥೆಗಳಿಗೆ ಕೋರಿಕೆ

Last Updated 12 ಅಕ್ಟೋಬರ್ 2011, 8:05 IST
ಅಕ್ಷರ ಗಾತ್ರ

ಮಡಿಕೇರಿ: ಈ ಬಾರಿ ತೀರ್ಥೋದ್ಭವ ಸಂದರ್ಭದಲ್ಲಿ ತಲಕಾವೇರಿಯಲ್ಲಿ ದೇವಸ್ಥಾನ ಸಮಿತಿಯಿಂದಲೇ ಅನ್ನದಾನ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ಇದಕ್ಕೆ ಸಂಘ-ಸಂಸ್ಥೆಗಳು ಸಹಕರಿಸಬೇಕು ಎಂದು ವಿಧಾನಸಭಾಧ್ಯಕ್ಷ ಕೆ.ಜಿ. ಬೋಪಯ್ಯ ಕೋರಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ತೀರ್ಥೋದ್ಭವ ಸಿದ್ಧತಾ ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ದೇವಾಲಯದೊಳಗೆ ದೇವಸ್ಥಾನ ಸಮಿತಿಯಿಂದ ಹಾಗೂ ಭಾಗಮಂಡಲದಲ್ಲಿ ಇತರ ಸಂಘಸಂಸ್ಥೆಗಳಿಗೆ ಅನ್ನದಾನ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿದೆ. ಎಲ್ಲರೂ ಸಹಕರಿಸಬೇಕು ಎಂದರು.

ತೀರ್ಥೋದ್ಭವ ಸಂದರ್ಭದಲ್ಲಿ ತಲಕಾವೇರಿಗೆ ಆಗಮಿಸುವ ಸಹಸ್ರಾರು ಭಕ್ತರಿಗೆ ಅನ್ನದಾನ ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ವಿವಾದ ಇಲ್ಲ ಎಂದು ಸ್ಪಷ್ಟಪಡಿಸಿದರು.

ಕಾನೂನಿನಲ್ಲಿ ಅವಕಾಶ ಇಲ್ಲ: ಮುಜರಾಯಿ ಇಲಾಖೆಯ ಆಡಳಿತ ವ್ಯಾಪ್ತಿಗೆ ಒಳಪಟ್ಟ ದೇವಾಲಯಗಳಲ್ಲಿ ಭಕ್ತಾದಿಗಳಿಂದ ಹಣ ಸಂಗ್ರಹಿಸಿ, ಅನ್ನದಾನ ಮಾಡಲು ಅವಕಾಶ ಇಲ್ಲ ಎಂದು ಅವರು ಹೇಳಿದರು.

ಜಾತ್ರೆ ಸೇರಿದಂತೆ ಇತರೆ ಯಾವುದೇ ಕಾರ್ಯಕ್ರಮಗಳು ನಡೆದರೆ ಅವುಗಳನ್ನು ದೇವಸ್ಥಾನ ಸಮಿತಿಯಿಂದಲೇ ನಡೆಸಬೇಕಾಗುತ್ತದೆ. ಅದರಂತೆ ಈ ಬಾರಿ ಆಯೋಜಿಸಲಾಗುತ್ತಿದೆ ಎಂದರು.

ಜಾಗ ನೀಡಲು ಅವಕಾಶ ಇಲ್ಲ: ಅನ್ನಸಂತರ್ಪಣೆ ಮಾಡುವ ಸಂಘ-ಸಂಸ್ಥೆಗಳಿಗೆ ದೇವಸ್ಥಾನದ ಬಳಿಯಾಗಲಿ, ಅಥವಾ ಭಾಗಮಂಡಲದಲ್ಲಾಗಲಿ ಶಾಶ್ವತವಾಗಿ ಜಾಗ ನೀಡಲು ಸಾಧ್ಯವಿಲ್ಲ. ತೀರ್ಥೋದ್ಭವ ಸಂದರ್ಭದಲ್ಲಿ ಎರಡು ದಿನಗಳ ಮಟ್ಟಿಗೆ ಮಾತ್ರ ಸೂಕ್ತ ಜಾಗ ಕಲ್ಪಿಸಿಕೊಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

ನಾಣಯ್ಯ ಸ್ವಾಗತ: ಅನ್ನದಾನ ಮಾಡುವುದನ್ನು ದೇವಸ್ಥಾನದ ಸಮಿತಿಗೆ ವಹಿಸಿಕೊಟ್ಟಿರುವುದು ಒಳ್ಳೆಯದು ಎಂದು ವಿಧಾನಪರಿಷತ್ ಸದಸ್ಯ ಎಂ.ಸಿ. ನಾಣಯ್ಯ ಹೇಳಿದರು.

ಕಾವೇರಿ ಮಾತೆಯ ಸನ್ನಿಧಿಯಲ್ಲಿ ಅನ್ನದಾನ ಮಾಡುವ ವಿಷಯಕ್ಕೆ ರಾಜಕೀಯ ಬೆರೆತದ್ದು ಖೇದಕರ. ವೈಯಕ್ತಿಕ ದ್ವೇಷ, ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ತೀರ್ಥೋದ್ಭವ ಜಾತ್ರೆಯನ್ನು ಸಂಭ್ರಮದಿಂದ ಆಚರಿಸೋಣ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT