ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಅನ್ನಭಾಗ್ಯ' ಸಮಾರಂಭದಲ್ಲಿ ಪಕ್ಷ ರಾಜಕಾರಣ

ಸಭೆಯಿಂದ ಹೊರನಡೆದ ಬಿಜೆಪಿ ಶಾಸಕ: ಕಾಂಗ್ರೆಸ್ ಮುಖಂಡರ ಆಕ್ರೋಶ
Last Updated 11 ಜುಲೈ 2013, 10:11 IST
ಅಕ್ಷರ ಗಾತ್ರ

ಬೀದರ್:  ಸರ್ಕಾರದ ಬಹು ನಿರೀಕ್ಷಿತ `ಅನ್ನಭಾಗ್ಯ' ಯೋಜನೆಗೆ ಜಿಲ್ಲೆಯಲ್ಲಿ ಚಾಲನೆ ನೀಡುವ ಸಮಾರಂಭದಲ್ಲಿಯೂ ಪಕ್ಷ ರಾಜಕಾರಣದ ಪರ-ವಿರೋಧ ಕಾಣಿಸಿ ಕೊಂಡಿದ್ದು, ಎಪಿಎಲ್ ಪಡಿತರ ಚೀಟಿದಾರರಿಗೆ ಅಕ್ಕಿ ವಿತರಣೆ ರದ್ದುಪಡಿಸಿರುವ ಕ್ರಮ ಖಂಡಿಸಿ ಬಿಜೆಪಿಯ ರಘುನಾಥರಾವ್ ಮಲ್ಕಾಪುರೆ ಸಭೆ ಬಹಿಷ್ಕರಿಸಿ ಹೊರನಡೆದರು.

ಉದ್ಘಾಟನೆಯ ಬಳಿಕ ತಮ್ಮ ಭಾಷಣ ಮಾಡಿ ಆ ನಂತರ ಬಿಜೆಪಿ ಶಾಸಕರು ಬಹಿಷ್ಕಾರ ಹಾಕಿದ ಕ್ರಮಕ್ಕೆ ಸಂಸದ ಧರ್ಮಸಿಂಗ್ ಮತ್ತು ಶಾಸಕ ಈಶ್ವರಖಂಡ್ರೆ ಅವರು ಕಟುವಾಗಿ ತರಾಟೆಗೆ ತೆಗೆದುಕೊಂಡರು.

ಧರ್ಮಸಿಂಗ್ ಅವರು `ಎಪಿಎಲ್ ಪಡಿತರ ಚೀಟಿದಾರರಿಗೆ ಅಕ್ಕಿ ವಿತರಣೆ ನಿಲ್ಲಿಸಿದ್ದೇ ಬಿಜೆಪಿ ಸರ್ಕಾರ' ಎಂದು ನೇರವಾಗಿ ಟೀಕಿಸಿದರು.

ಅನ್ನಭಾಗ್ಯ ಯೋಜನೆಗೆ ಜಿಲ್ಲಾ ಮಟ್ಟದಲ್ಲಿ ಚಾಲನೆ ನೀಡಲು ನಗರದ ಚಿದ್ರಿ ರಸ್ತೆಯಲ್ಲಿರುವ ಶ್ರೀ ಫಂಕ್ಷನ್ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಿತ್ತು. ರಘುನಾಥ ಮಲ್ಕಾಪುರೆ  ಸಭೆಯಿಂದ ಹೊರ ನಡೆದ ಬಳಿಕ ಧರ್ಮಸಿಂಗ್ ಅವರು ನಿರೂಪಕರನ್ನು ತರಾಟೆಗೆ ತೆಗೆದುಕೊಂಡರು.

ಮಲ್ಕಾಪುರೆ ಅವರು ತಮ್ಮ ಭಾಷಣದಲ್ಲಿ, `ಅಧಿಕಾರ ಶಾಶ್ವತವಲ್ಲ. ಆದರೆ,ಇಂಥ ಯೋಜನೆ ಜಾರಿ ಮಾಡುವಾಗ ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಿ ಅರ್ಹರಿಗೆ ಸೌಲಭ್ಯ ತಲುಪುವಂತೆ ಮಾಡಬೇಕು. ಸೌಲಭ್ಯ ಸಮರ್ಪಕವಾಗಿ ತಲುಪುವಂತೆ ಪ್ರತಿ ನ್ಯಾಯಬೆಲೆ ಅಂಗಡಿಗೂ ಜಾಗೃತ ಸಮಿತಿ ರಚಿಸಬೇಕು' ಎಂದರು.

ಈಗ ಎಪಿಎಲ್ ಪಡಿತರ ಚೀಟಿದಾರರಿಗೆ ಅಕ್ಕಿ ವಿತರಣೆ ನಿಲ್ಲಿಸಲಾಗಿದೆ. ಇದು ಅನ್ಯಾಯ. ಅವರಿಗೆ ಈ ಹಿಂದೆ ವಿತರಿಸುತ್ತಿದ್ದ ದರದಲ್ಲಿಯಾದರೂ ಅಕ್ಕಿ ವಿತರಿಸಬೇಕು.

ಅವರಿಗೆ ಅಕ್ಕಿ ನಿಲ್ಲಿಸಿದ ಕ್ರಮವನ್ನು ಖಂಡಿಸಿ ಸಭೆ ಬಹಿಷ್ಕರಿಸುತ್ತೇನೆ ಎಂದರು.

ಪ್ರಚಾರ ತಂತ್ರ: ಧರ್ಮಸಿಂಗ್ ಅವರು, ಈ ಬೆಳವಣಿಗೆಯನ್ನು ತಮ್ಮ ಭಾಷಣದಲ್ಲಿ ಉಲ್ಲೇಖಿಸಿ `ಮಲ್ಕಾಪುರೆ ಮಾಧ್ಯಮಗಳಲ್ಲಿ ಪ್ರಚಾರ ಪಡೆಯಲು ಇಂಥ ತಂತ್ರ ಅನುಸರಿಸುತ್ತಿದ್ದಾರೆ. ಸರ್ಕಾರ ತನ್ನ ಭರವಸೆ ಈಡೇರಿಸದೇ ಇದ್ದರೆ ಬಹಿಷ್ಕಾರ ಹಾಕಬೇಕು. ಇವರು ಭರವಸೆ ಜಾರಿಗೊಳಿಸಿದರೂ ಬಹಿಷ್ಕಾರ ಹಾಕ್ತಾರೆ. ಎಪಿಎಲ್ ಪಡಿತರ ಚೀಟಿದಾರರಿಗೆ ಅಕ್ಕಿ ವಿತರಣೆ ನಿಲ್ಲಿಸಿದ್ದೇ ಬಿಜೆಪಿ ಸರ್ಕಾರ' ಎಂದು ಟೀಕಿಸಿದರು.

ಶಾಸಕ ಈಶ್ವರ ಖಂಡ್ರೆ ಅವರು, ಬಿಜೆಪಿ ಸರ್ಕಾರ ಇದ್ದಾಗ ಏನೂ ಮಾಡಲಲ್ಲ. ಖಜಾನೆ ಖಾಲಿಯಾಗಿದೆ ಎಂದು ಅಕ್ಕಿ ವಿತರಣೆ ನಿಲ್ಲಿಸಿದ್ದರು. ಈಗ ಬಹಿಷ್ಕಾರದ ಮೂಲಕ ಕೆಳಮಟ್ಟದ ರಾಜಕಾರಣ ಮಾಡುತ್ತಿದ್ದಾರೆ  ಎಂದು ತರಾಟೆಗೆ ತೆಗೆದುಕೊಂಡರು. ಇವರಿಗೆ ದನಿಗೂಡಿಸಿದ ಜೆಡಿಎಸ್ ಶಾಸಕ ಮಲ್ಲಿಕಾರ್ಜುನ ಖೂಬಾ ಅವರು,ಬಿಜೆಪಿ ಸರ್ಕಾರ ಕೆಲಸಕ್ಕಿಂತಲೂ ಸುಳ್ಳು ಹೇಳಿದ್ದೇ ಹೆಚ್ಚು. ಇತಿಹಾಸದಲ್ಲಿ ಮುಖ್ಯಮಂತ್ರಿ ಒಬ್ಬರು ಜೈಲಿಗೆ ಹೋದುದೇ ಬಿಜೆಪಿ ಸರ್ಕಾರದ ಸಾಧನೆ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT