ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನ್ಯ ಭಾಷೆಗಳಲ್ಲಿ ಹಳೆಯ ದಾಖಲೆಗಳು ಲಭ್ಯ

Last Updated 17 ಜನವರಿ 2011, 19:30 IST
ಅಕ್ಷರ ಗಾತ್ರ

ಹಿರಿಯ ಸಾಹಿತಿ ಮತ್ತು ಸಂಶೋಧಕರಾದ  ಡಾ.ಎಂ.ಚಿದಾನಂದಮೂರ್ತಿ ಅವರು ‘ವೀರಶೈವ’ ವಿವಾದಕ್ಕೆ ಅಂತಿಮ ತೆರೆ ಎಂಬ ತಮ್ಮ ಪತ್ರದಲ್ಲಿ ‘ವೀರಮಾಹೇಶ್ವರ’ದ ಪ್ರಾಚೀನತೆಯನ್ನು ಹೇಳಲು ಕ್ರಿ.ಶ. 11ನೇಶತಮಾನದ (13-11-1033) ಕೊಪ್ಪಳ ಶಾಸನದ ಆಧಾರವನ್ನು ನೀಡಿದ್ದಾರೆ. ಆದರೆ ಅದಕ್ಕಿಂತ ಪೂರ್ವದ ದಾಖಲೆಗಳು ಸಂಸ್ಕೃತ, ತೆಲುಗು, ತಮಿಳು ಭಾಷೆಗಳಲ್ಲಿ  ದೊರೆಯುತ್ತವೆ.

ಆಂಧ್ರಪ್ರದೇಶದ ವಾರಂಗಲ್ ಜಿಲ್ಲೆಯ ಪಾಂಡವಲಗಟ್ಟು ರಾವುಲಪಲ್ಲಿಯ ಕ್ರಿ.ಶ. 7ನೇ ಶತಮಾನದ ಶಾಸನದಲ್ಲಿ ‘ಶ್ರಿ ಉತ್ಪತ್ತಿ ಪಿಡುಗು ಏಕಾನ್ತವಾಸಿ ಪರಮ ಮಾಹೇಶ್ವರ ಮತನ್ ಮಹಾಮುನೀ(ಶ್ವರನ್)’ ಎಂಬ ಉಲ್ಲೇಖವನ್ನು ಉದಾಹರಿಸಿ ಇಮ್ಮಡಿ ಪುಲಿಕೇಶಿಯ ಮಗ ಮೊದಲನೇ ವಿಕ್ರಮಾದಿತ್ಯನು ಸುಮಾರು ಕ್ರಿ.ಶ. 660ರಲ್ಲಿ ಶ್ರಿ ಸುದರ್ಶನಾಚಾರ್ಯರಿಂದ ದೀಕ್ಷೆ ಪಡೆದು ಪರಮ (ವೀರ) ಮಾಹೇಶ್ವರನಾದನು ಎಂಬ ವಿಷಯವನ್ನು ಡಾ. ಶ್ರಿನಿವಾಸ ಪಾಡಿಗಾರ ‘ವೀರಶೈವ ಪೂರ್ವೇತಿಹಾಸ’ ಎಂಬ ಲೇಖನದಲ್ಲಿ ಶಾಸನಾಧಾರವಾಗಿ ಸ್ಪಷ್ಟಪಡಿಸಿದ್ದಾರೆ (ವೀರಶೈವ ಆಕರಗಳು: ಪುಟ3).

 ಇದೇ ವಿಷಯ ಡಾ.ಎಂ.ಜಿ.ನಾಗರಾಜ ಅವರ ಮೇರೆಗೆ ನೌಸಾರಿಯ ತಾಮ್ರಪಟಗಳಲ್ಲಿದೆ. ಹಾಗೆಯೆ ಅಮದುಲುಪಾಡು ತಾಮ್ರ ಶಾಸನದಲ್ಲೂ ಉಂಟು. ಡಿ.ಸಿ.ಸರ್ಕಾರ್ ಅವರು ಇಲ್ಲಿ ಉಲ್ಲೇಖಿತ ದೀಕ್ಷೆಯು ವೀರಶೈವ ದೀಕ್ಷಾ ಸಂಸ್ಕಾರವಾಗಿದೆ ಎಂದಿದ್ದಾರೆ.(ಶಾಸನ ಮತ್ತು ಶಿಲ್ಪಗಳಲಿ ್ಲವೀರಶೈವ ಆಕರಗಳು-ಡಾ.ಎಂ.ಜಿ. ನಾಗರಾಜ (ವೀರಶೈವ ಆಕರಗಳು:ಪುಟ 41) ವೀರಮಾಹೇಶ್ವರ ಹಾಗೂ ವೀರಶೈವ ಇವುಗಳನ್ನು ಸಮಾನಾರ್ಥದಲ್ಲಿ ಅಲ್ಲದೆ ಮತ ಮತ್ತು ಮತಾನುಯಾಯಿ ಎಂಬ ಎರಡೂ ಅರ್ಥಗಳಲ್ಲಿ ಬಳಸಲಾಗಿದೆ.

 ಒಂದು ಉದಾಹರಣೆ ಹೇಳುವುದಾದರೆ- ಪಾಲ್ಕುರಿಕೆ ಸೋಮನಾಥನು ಬಸವಣ್ಣನನ್ನು ‘ವೀರಮಾಹೇಶ್ವರಾಚಾರ ದೀಕ್ಷಿತ’ (ಪ್ರಥಮಾಶ್ವಾಸ ಸಾಲು 874) ಎಂದರೆ ಭೀಮಕವಿ ‘ವೀರಶೈವಾಚಾರ ದೀಕ್ಷಾಧಾರಕನ್’ (ಸಂ.3. ಪ49) ಎಂದಿದ್ದಾನೆ. ತಮಿಳಿನ ಒಟ್ಟಕೂತ್ತರ್ (ಕ್ರಿ.ಶ.1100)ನ ‘ತಕ್ಕಯಾಗಪ್ಪರಣಿ’ ಕೃತಿಯಲ್ಲಿ ‘ವೀರಮಾಹೇಶ್ವರ’ ಪ್ರಸ್ತಾಪವಿದೆ. ವೀರಮಾಹೇಶ್ವರನು ಲಿಂಗವಂತನಾಗಿಯೂ ಆಚಾರಗೆಟ್ಟು ನಡೆದರೆ ವೀರಶೈವಕ್ಕೆ ಹೊರಗಾಗಿ ನರಕಕ್ಕಿಳಿವನು (ವಚನ966) ಎಂದು ಬಸವಣ್ಣ ಹೇಳಿದರೆ, ಚನ್ನಬಸವಣ್ಣನು ‘ವೀರಮಾಹೇಶ್ವರತ್ವಮಂ’ (ವಚನ101) ಎನ್ನುತ್ತಾನೆ. ಶೈವ, ಅಥವಾ ಪಾಶುಪತದಲ್ಲರುವುದಕ್ಕಿಂತ ಭಿನ್ನವಾಗಿರದಿದ್ದ ಪಕ್ಷದಲ್ಲಿ ಬಸವಣ್ಣ ಚನ್ನಬಸವಣ್ಣ ಇವುಗಳನ್ನು ಬಳಸಲು ಸಾಧ್ಯವಿರಲಿಲ್ಲ. ಒಟ್ಟಿನಲ್ಲಿ ಪ್ರಾಚೀನ ಆಕರಗಳಲ್ಲಿ ವೀರಮಾಹೇಶ್ವರ, ವೀರಶೈವ ಪದಗಳು ದೊರೆಯುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT