ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಘಾತ: ನಾಲ್ವರು ಮಹಿಳೆಯರು ಸಾವು

Last Updated 10 ಜುಲೈ 2013, 13:02 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಕಾರಿನ ಮೇಲೆ ಲಾರಿ ಉರುಳಿ ಬಿದ್ದು ಒಂದೇ ಕುಟುಂಬದ ನಾಲ್ವರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಚಿಕ್ಕಬಳ್ಳಾಪುರ ಹೊರವಲಯ ವಾಪಸಂದ್ರ ಸಮೀಪದ ರಾಷ್ಟ್ರೀಯ ಹೆದ್ದಾರಿ-7ರ ಬಳಿ ಮಂಗಳವಾರ ನಡೆದಿದೆ.

ನಂದಿ ಗ್ರಾಮದ ನಿವಾಸಿ ವೆಂಕಟಲಕ್ಷ್ಮಮ್ಮ (65), ದೊಡ್ಡಮರಳಿ ನಿವಾಸಿಗಳಾದ ರತ್ನಮ್ಮ (55), ಪ್ರಮೀಳಮ್ಮ (50) ಮತ್ತು ಪಾರ್ವತಮ್ಮ (45) ಮೃತಪಟ್ಟಿದ್ದಾರೆ. ಕಾರು ಚಾಲನೆ ಮಾಡುತ್ತಿದ್ದ ಪಾರ್ವತಮ್ಮ ಪತಿ ಚನ್ನಬೈರೇಗೌಡ (50) ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ತಾಲ್ಲೂಕಿನ ಸೊಪ್ಪಹಳ್ಳಿ ಗ್ರಾಮದಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ತೆರಳಿದ್ದ ಚನ್ನಬೈರೇಗೌಡ ಮತ್ತು ನಾಲ್ವರು ಮಹಿಳೆಯರು ಕಾರಿನಲ್ಲಿ ತಮ್ಮ ಮನೆಗೆ ಮರಳುತ್ತಿದ್ದರು. ವಾಪಸಂದ್ರ ಸಮೀಪದ ರಾಷ್ಟ್ರೀಯ ಹೆದ್ದಾರಿ-7ರ ಬಳಿಯಿರುವ ಅಂಡರ್‌ಪಾಸ್ ಒಳಗೆ ಹೋದ ಅವರು ತಿರುವು ತೆಗೆದುಕೊಂಡು ರಾಷ್ಟ್ರೀಯ ಹೆದ್ದಾರಿಯನ್ನೇರಿದರು.

ಒಂದು ಕ್ಷಣ ದಾರಿ ತಪ್ಪಿರುವುದಾಗಿ ಭಾವಿಸಿದ ಚನ್ನಬೈರೇಗೌಡ ಅವರು ಕಾರನ್ನು ಹಿಂಬದಿಯಿಂದ ಚಾಲನೆ ಮಾಡಿಕೊಂಡು ಬೇರೆ ದಾರಿ ಮೂಲಕ ಹೋಗಲು ಪ್ರಯತ್ನಿಸಿದರು. ಆದರೆ ಅಷ್ಟರಲ್ಲಿ ಹೈದರಾಬಾದ್‌ನಿಂದ ಬೆಂಗಳೂರಿನತ್ತ ವೇಗವಾಗಿ ಹೊರಟಿದ್ದ ಲಾರಿ ಕಾರಿಗೆ ಡಿಕ್ಕಿ ಹೊಡೆಯಿತು. ಲಾರಿ ಉರುಳಿ ಕಾರು ಮೇಲೆ ಬಿದ್ದ ಪರಿಣಾಮ ನಾಲ್ವರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದರೆ, ಚನ್ನಬೈರೇಗೌಡರಿಗೆ ಗಾಯಗಳಾದವು ಎಂದು ಪೊಲೀಸರು ತಿಳಿಸಿದ್ದಾರೆ.

`ಅಂಡರ್‌ಪಾಸ್ ಬಳಿ ಮಾರ್ಗ ಸೂಚಿಸುವ ಫಲಕ ಅಳವಡಿಸದ ಕಾರಣದಿಂದಲೇ ಈ ದುರ್ಘಟನೆ ಸಂಭವಿಸಿದೆ. ಸರಿಯಾದ ಸೂಚನಾ ಫಲಕ ಇರದೆ ಇಲ್ಲಿ ಆಗಾಗ್ಗೆ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಈಗಲಾದರೂ ಇಲ್ಲಿ ಫಲಕ ಅಳವಡಿಸಲು ಮುಂದಾಗಬೇಕು' ಎಂದು ಗ್ರಾಮಸ್ಥರು ಆಗ್ರಹಿಸಿದರು.

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಶಿವಪ್ರಸಾದ್, ಸರ್ಕಲ್ ಇನ್ಸ್‌ಪೆಕ್ಟರ್ ಎಸ್.ಮಹೇಶ್‌ಕುಮಾರ್ ಮತ್ತಿತರರು ಭೇಟಿ ನೀಡಿ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT