ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಘಾತ: ಮಹಿಳೆಯರಿಬ್ಬರ ಸಾವು

Last Updated 12 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಕೆ.ಆರ್. ರಸ್ತೆಯ ಪ್ರೊ.ಶಿವಶಂಕರ್ ವೃತ್ತದ ಬಳಿ ಶುಕ್ರವಾರ ನಸುಕಿನಲ್ಲಿ ಲಾರಿ ಮತ್ತು ಆಟೊ ನಡುವೆ ಸಂಭವಿಸಿದ ಅಪಘಾತದಲ್ಲಿ ಮಹಿಳೆಯರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಐದು ಮಂದಿ ಗಾಯಗೊಂಡಿದ್ದಾರೆ.

ಕದಿರೇನಹಳ್ಳಿ ಕ್ರಾಸ್‌ನ ಕಮಲಮ್ಮ (55) ಮತ್ತು ಉಣ್ಣಾ ಮಲೈ (60) ಮೃತಪಟ್ಟವರು. ಆಟೊ ಚಾಲಕ ಕುಮಾರ್ (27), ಕದಿರೇನಹಳ್ಳಿ ಕ್ರಾಸ್ ನಿವಾಸಿಗಳಾದ ಮಾರಿಯಮ್ಮ (35), ಕುಪ್ಪಮ್ಮ (30), ಮಣಿಯಮ್ಮ (35) ಹಾಗೂ ಸೀತಮ್ಮ (60) ಎಂಬುವರು ಗಾಯಗೊಂಡಿದ್ದಾರೆ.

ಮೃತರು ಹಾಗೂ ಗಾಯಗೊಂಡಿರುವ ಮಹಿಳೆಯರು ಹೂವಿನ ವ್ಯಾಪಾರ ಮಾಡುತ್ತಿದ್ದರು. ಆ ಆರು ಮಂದಿ ಬೆಳಗಿನ ಜಾವ ನಾಲ್ಕು ಗಂಟೆ ಸುಮಾರಿಗೆ ಹೂ ಖರೀದಿಸಲು ಆಟೊದಲ್ಲಿ ಸಿಟಿ ಮಾರುಕಟ್ಟೆಗೆ ಬರುತ್ತಿದ್ದಾಗ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಚಾಲಕ ಕುಮಾರ್ ಅವರು ತಿರುವು ಪಡೆದುಕೊಳ್ಳುವ ಯತ್ನದಲ್ಲಿದ್ದಾಗ ಲಾರಿ, ಆಟೊಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಆಟೊ ಮಗುಚಿ ಬಿದ್ದಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಕಮಲಮ್ಮ ಮತ್ತು ಉಣ್ಣಾ ಮಲೈ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕುಮಾರ್ ಹಾಗೂ ಇತರೆ ಮಹಿಳೆಯರು ಗಾಯಗೊಂಡಿದ್ದು, ಅವರೆಲ್ಲರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳು ಸೀತಮ್ಮ ಅವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಚಾಲಕನನ್ನು ಬಂಧಿಸಿ ಲಾರಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸೆಂಟ್ರಲ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಂಧನ: ಎರಡು ತಲೆಯ ಹಾವನ್ನು ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿರುವ ಆಡುಗೋಡಿ ಪೊಲೀಸರು ಹಾವು ಹಾಗೂ ಕಾರನ್ನು ವಶಪಡಿಸಿಕೊಂಡಿದ್ದಾರೆ.

ತಮಿಳುನಾಡು ಮೂಲದ ರಾಜ (22), ಲಕ್ಕಸಂದ್ರದ ಹರೀಶ (35) ಮತ್ತು ಗಣೇಶ (26) ಬಂಧಿತರು. ಆರೋಪಿಗಳು ಲಕ್ಕಸಂದ್ರ ಎರಡನೇ ಮುಖ್ಯರಸ್ತೆಯ ಬಳಿ ಹಾವು ಮಾರಾಟ ಮಾಡಲು ಯತ್ನಿಸುತ್ತಿದ್ದ ಬಗ್ಗೆ ಠಾಣೆಗೆ ಮಾಹಿತಿ ಬಂತು. ಈ ಮಾಹಿತಿ ಆಧರಿಸಿ ಅವರನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.

ತಮಿಳುನಾಡಿನ ವೆಲ್ಲೂರು ಬಳಿಯ ಅರಣ್ಯ ಪ್ರದೇಶದಿಂದ ಹಾವನ್ನು ಹಿಡಿದುಕೊಂಡು ಬಂದಿದ್ದಾಗಿ ಆರೋಪಿಗಳು ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳವು: ತಿಲಕ್‌ನಗರ ಸಮೀಪದ ಎಸ್‌ಆರ್‌ಕೆ ಗಾರ್ಡನ್ ನಿವಾಸಿ ಮಹಮ್ಮದ್ ರಿಜ್ವಾನ್ ಎಂಬುವರ ಮನೆಯಲ್ಲಿ ದುಷ್ಕರ್ಮಿಗಳು ಚಿನ್ನಾಭರಣ ಹಾಗೂ 20 ಸಾವಿರ ನಗದು ಸೇರಿದಂತೆ ಸುಮಾರು 4.50 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ಕಳವು ಮಾಡಿದ್ದಾರೆ.

ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಮಹಮ್ಮದ್ ಮತ್ತು ಅವರ ಪತ್ನಿ ಗುರುವಾರ ಮಧ್ಯಾಹ್ನ ಮನೆಗೆ ಬೀಗ ಹಾಕಿಕೊಂಡು ಕೆಲಸಕ್ಕೆ ಹೋಗಿದ್ದರು. ಈ ಸಂದರ್ಭದಲ್ಲಿ ಬೀಗ ಒಡೆದು ಒಳ ನುಗ್ಗಿರುವ ದುಷ್ಕರ್ಮಿಗಳು ಅಲ್ಮೇರಾದಲ್ಲಿದ್ದ ಚಿನ್ನಾಭರಣ, ಬೆಳ್ಳಿ ವಸ್ತುಗಳು ಹಾಗೂ ಹಣವನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತಿಲಕ್‌ನಗರ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT