ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಘಾತದಲ್ಲಿ ಬಾಲಕ ಸಾವು: ಗ್ರಾಮಸ್ಥರ ಆಕ್ರೋಶ

Last Updated 14 ಅಕ್ಟೋಬರ್ 2012, 4:30 IST
ಅಕ್ಷರ ಗಾತ್ರ

ಹಾವೇರಿ: ಅಪಘಾತದಲ್ಲಿ ಬಾಲಕನೊಬ್ಬ ಮೃತಪಟ್ಟ ಹಿನ್ನೆಲೆಯಲ್ಲಿ ಸುಮಾರು ನಾಲ್ಕು ಗಂಟೆಗಳ ಕಾಲ ರಾಷ್ಟ್ರೀಯ ಹೆದ್ದಾರಿ-4ನ್ನು ಬಂದ್ ಮಾಡಿ ಪ್ರತಿಭಟನೆ ಮಾಡಿದ ಘಟನೆ ಶನಿವಾರ ಸಂಜೆ ಸಮೀಪದ ನೆಲೋಗಲ್ ಗ್ರಾಮದಲ್ಲಿ ನಡೆದಿದೆ.

ದಾವಣಗೆರೆ ಜಿಲ್ಲೆಯ ನೆಲ್ಲಿಕುದರಿ ಗೋಮಾಳದ ನಿವಾಸಿ ಮಹೇಶ ಓಬಳಪ್ಪ (8) ಎಂಬುವವನಿಗೆ ವ್ಯಾನ್ ಡಿಕ್ಕಿ ಹೊಡೆದ ಪರಿಣಾಮ ಆತ ಸ್ಥಳದಲ್ಲಿ ಮೃತಪಟ್ಟಿದ್ದನು. ಈತ ಗ್ರಾಮದಲ್ಲಿನ ಹಿರಿಯರ ಹಬ್ಬಕ್ಕಾಗಿ ನೆಲೋಗಲ್ಲಿನ ಸಂಬಂಧಿಕರ ಮನೆಗೆ ಬಂದಿದ್ದನು. ಶನಿವಾರ ಸಂಜೆ ಗ್ರಾಮದ ಎದುರಿನ ರಾಷ್ಟ್ರೀಯ ಹೆದ್ದಾರಿ ದಾಟಿ ಬಹಿರ್ದೆಸೆಗೆ ಹೋಗಿ ವಾಪಸ್ಸಾಗುತ್ತಿದ್ದಾಗ ಆತನಿಗೆ ವ್ಯಾನ್ ಒಂದು ಡಿಕ್ಕಿ ಹೊಡೆದು ಪರಾರಿಯಾಗಿದೆ.

ಇದರಿಂದ ಆಕ್ರೋಶಗೊಂಡ ನೆಲೋಗಲ್‌ನ ನೂರಾರು ಜನರು ರಾಷ್ಟ್ರೀಯ ಹೆದ್ದಾರಿಗೆ ಆಗಮಿಸಿ ಹೆದ್ದಾರಿ ಬಂದ್ ಮಾಡಿದರಲ್ಲದೇ, ಅಪಘಾತ ನಡೆದ ನಂತರ ನಾಪತ್ತೆಯಾದ ವಾಹನ ಪತ್ತೆ ಮಾಡಬೇಕು. ಗ್ರಾಮಕ್ಕೆ ಕೂಡಲೇ ಅಂಡರ್‌ಪಾಸ್ ಮಾಡಿಸಬೇಕು. ಮೃತ ಬಾಲಕನ ಕುಟುಂಬಕ್ಕೆ ಸೂಕ್ತ ಪರಿಹಾರ ಕೊಡಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ಆರಂಭಿಸಿದರು.

ರಾಷ್ಟ್ರೀಯ ಹೆದ್ದಾರಿ ಸಂಚಾರ ಸ್ಥಗಿತಗೊಳ್ಳುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಅಧಿಕಾರಿಗಳು ಪ್ರತಿಭಟನಾಕಾರರ ಮನವೊಲಿಸಲು ನಡೆಸಿದ ಎಲ್ಲ ಪ್ರಯತ್ನಗಳು ವಿಫಲವಾದವು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಅಂಡರ್‌ಪಾಸ್ ರಸ್ತೆ ನಿರ್ಮಿಸುವ ಬಗ್ಗೆ ಲಿಖಿತ ಭರವಸೆ ಕೊಡುವವರೆಗೆ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಪಟ್ಟು ಹಿಡಿದರು.

ಈ ಸಮಯದಲ್ಲಿ ಕೆಲಕಾಲ ಪೊಲೀಸ್ ಅಧಿಕಾರಿಗಳೊಂದಿಗೆ ಪ್ರತಿಭಟನಾಕಾರರು ಮಾತಿನ ಚಕಮಕಿ ನಡೆಸಿದರು. ಇದರಿಂದ  ಪ್ರತಿಭಟನಾ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.

ಪೊಲೀಸರು ನಡೆಸಿದ ಹಲವು ಸುತ್ತಿನ ಮಾತುಕತೆಗಳು ವಿಫಲವಾದವಲ್ಲದೇ, ಪ್ರತಿಭಟನೆಯಿಂದ ಹಿಂದೆ ಸರಿಯುವಂತೆ ಮಾಡಿದ ಮನವಿಗೆ ಗ್ರಾಮಸ್ಥರು ಸ್ಪಂದಿಸದೇ ಇದ್ದಾಗ ಪೊಲೀಸ್ ಅಧಿಕಾರಿಗಳು ಕೂಡಾ ಅಸಹಾಯಕರಾದರು. ಇದರಿಂದ ರಾಷ್ಟ್ರೀಯ ಹೆದ್ದಾರಿಯ ಎರಡೂ ಬಂದಿಗಳಲ್ಲಿ ಸುಮಾರು ಮೂರು ಕಿ.ಮೀ.ನಷ್ಟು ವಾಹನಗಳ ಸಾಲು ನಿಂತಿತ್ತು. ಸಾಧ್ಯವಿದ್ದ ಕಡೆಗಳಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರೂ, ದೊಡ್ಡ ವಾಹನಗಳು ಮಾತ್ರ ಹೆದ್ದಾರಿಯಲ್ಲಿಯೇ ನಿಂತುಕೊಳ್ಳಬೇಕಾಯಿತು.

ರಾತ್ರಿ 8.30 ರ ಸುಮಾರಿಗೆ ಡಿವೈಎಸ್‌ಪಿ ಸಿ.ಸಿ. ಪಾಟೀಲ, ಸಿಪಿಐಗಳಾದ ಎಂ. ಮುರುಗೇಂದ್ರಯ್ಯ, ಪಂಪಾಪತಿ ಅವರು ಒಂದೆರಡು ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಗ್ರಾಮಕ್ಕೆ ಕರೆತಂದು ಅಂಡರ್‌ಪಾಸ್ ರಸ್ತೆ ನಿರ್ಮಿಸುವ ಬಗ್ಗೆ ಗ್ರಾಮಸ್ಥರ ಜತೆ ಚರ್ಚೆ ಮಾಡುವ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನಾಕಾರರು ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚೆ ಮುಂದುವರಿಸಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.

ಸುಮಾರು ನಾಲ್ಕು ಗಂಟೆಗಳ ಕಾಲ ನಿಂತ ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡುವುದೇ ಪೊಲೀಸರಿಗೆ ಹರಸಾಹಸದ ಕೆಲಸವಾಗಿತ್ತು.

ಮುಗಿಲು ಮುಟ್ಟಿದ ಆಕ್ರಂದನ: ಮಗನನ್ನು ಕಳೆದುಕೊಂಡ ತಾಯಿ ಹಾಗೂ ಆತನ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.

ಮಗನಿಗೆ ಡಿಕ್ಕಿ ಹೊಡೆದ ವಾಹನ ಚಾಲಕನಿಗೆ ಹಿಡಿ ಶಾಪ ಹಾಕುತ್ತಿದ್ದ ಆತನ ತಾಯಿ, ಮಗನೇ ಇಲ್ಲದ ಮೇಲೆ ನಾನೇಕೆ ಬದಕಲಿ ಎಂದು ರೋಧಿಸುತ್ತಿರುವುದು ಸೇರಿದ ಜನರಲ್ಲಿ ಕಣ್ಣೀರು ತರಿಸಿತು.

ಹಬ್ಬಕ್ಕೆ ಬಂದ ಹುಡುಗ ಹೆಣವಾಗುತ್ತಾನೆ ಎಂದು ಯಾರೂ ಊಹಿಸಿರಲಿಲ್ಲ. ಹಬ್ಬಕ್ಕಾಗಿ ನೆಲ್ಲಿಕುದರಿ ಗೋಮಾಳದಿಂದ ಎರಡು ದಿನಗಳ ಹಿಂದೆಯಷ್ಟೆ ಸಂಬಂಧಿಕರ ಊರಾದ ನೆಲೋಗಲ್ ಗ್ರಾಮಕ್ಕೆ ಮಹೇಶ ಆಗಮಿಸಿದ್ದನು. ಮನೆಯವರ ಜತೆ ಸೇರಿ ಹಬ್ಬ ಮುಗಿಸಿಕೊಂಡು ಒಂದೆರಡು ದಿನಗಳಲ್ಲಿ ಊರಿಗೆ ವಾಪಸ್ಸು ಹೋಗುವವನಿದ್ದನು. ಆದರೆ, ವಿಧಿಯಾಟವೇ ಬೇರೆಯಾಗಿತ್ತು. ಸಂಜೆ ಬಹಿರ್ದೆಸೆಗೆ ಹೋಗಿ ವಾಪಸ್ಸಾಗುವ ಸಂದರ್ಭದಲ್ಲಿ ಸಾವಿನ ರೂಪದಲ್ಲಿ ಬಂದ ವಾಹನ ಆತನನ್ನು ಇಹಲೋಕ ತ್ಯಜಿಸುವಂತೆ ಮಾಡಿತು ಎಂದು ಸೇರಿದ ಜನರು ಮಮ್ಮಲ ಮರುಗುತ್ತಿರುವ ದೃಶ್ಯ ಕಂಡು ಬಂದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT