ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಘಾತದಲ್ಲಿ ಸತ್ತವರೊಡನೆ ಸಾಯುತ್ತ..

Last Updated 19 ಜೂನ್ 2011, 19:30 IST
ಅಕ್ಷರ ಗಾತ್ರ

ಸತ್ತವರೊಂದಿಗೆ ಯಾರೂ ಸಾಯುವುದಿಲ್ಲ ಎಂಬುದೊಂದು ಲೋಕಾರೂಢಿಯ ಮಾತು. ಆದರೆ ಇಂದಿನ ವ್ಯವಸ್ಥೆಯಿಂದಾಗಿ ಸತ್ತವರೊಡನೆಯೇ ನಾವೂ ಸಾಯಬಾರದೇಕೆ ಎಂದು ಎನಿಸದೇ ಇರದು.

ಇತ್ತೀಚೆಗೆ ಮಡಿಕೇರಿ ಜಿಲ್ಲೆಯಲ್ಲೊಂದು ರಸ್ತೆ ಅಪಘಾತವಾಯಿತು. ಕೇಂದ್ರ ಸರ್ಕಾರದ ನೌಕರರೂ ಈ ಅಪಘಾತದಲ್ಲಿ ಗಾಯಗೊಂಡಿದ್ದರು.

ಲಾರಿಯಲ್ಲಿ ಹೊರಟ ಮದುವೆ ದಿಬ್ಬಣ (ಅದ್ಯಾರು ಲಾರಿಯವರಿಗೆ ಇಂಥ ಸಂಚಾರಕ್ಕೆ ಅನುಮತಿ ನೀಡುತ್ತಾರೊ?). ಅವ್ಯವಸ್ಥೆಯ ಕರಾಳ ಮುಖ ಆರಂಭವಾಗುವುದೇ ಇಲ್ಲಿಂದ. ಮದುವೆ ದಿಬ್ಬಣ ಎಂದ ಮೇಲೆ ಊಟ, ಪಾನದ `ವ್ಯವಸ್ಥೆ~ ಆಗಲೇ ಬೇಕಲ್ಲ. ಹೊರಡುವ ಮುನ್ನವೇ ಚಾಲಕ ಪಾನಮತ್ತ. ಇದು ಎರಡನೇ ಅವ್ಯವಸ್ಥೆ.

ಶನಿವಾರ ಅಪಘಾತದಲ್ಲಿ ಗಾಯಗೊಂಡವರು, ಸಮೀಪದ ಗ್ರಾಮದಲ್ಲಿ ವೈದ್ಯರ ಸಲಹೆಯ ಮೇರೆಗೆ ನೋವು ನಿವಾರಕಗಳನ್ನು ಸೇವಿಸಿ ಕುಶಾಲನಗರಕ್ಕೆ ಬಂದಿದ್ದಾರೆ. ಸ್ಥಳೀಯ ವೈದ್ಯರೂ ಸಮಗ್ರವಾಗಿ ತಪಾಸಣೆ ಮಾಡಿಲ್ಲ. ಮೇಲ್ನೋಟಕ್ಕೆ ಪರಿಶೀಲಿಸಿ ಕೇವಲ ನೋವು ನಿವಾರಕಗಳನ್ನು ನೀಡಿದ್ದಾರೆ.

ಪ್ರಥಮ ಚಿಕಿತ್ಸೆಯೊಂದಿಗೆ ಹೆಚ್ಚುವರಿ ಚಿಕಿತ್ಸೆಯನ್ನಾದರೂ ಸೂಚಿಸಿದ್ದಲ್ಲಿ ಆ `ಸುವರ್ಣ ಗಳಿಗೆ~ಗಳು ಅವರ ಜೀವ ಉಳಿಸಬಲ್ಲವಾಗಿದ್ದವು. ಆದರೆ ಅಲ್ಲಿಗೆ ಗಾಯಾಳುವಿನ `ಸುವರ್ಣ ಗಳಿಗೆ~ಗಳು ಮುಗಿದು ಅಂತಿಮ ಗಳಿಗೆಗಳು ಆರಂಭವಾದವು.

ಶನಿವಾರ ಸಂಜೆ ಆಹಾರ ಸೇವಿಸಲಾಗದೇ ಮತ್ತೆ ಕುಶಾಲನಗರದ ಆಸ್ಪತ್ರೆಗೆ ಎಡತಾಕಿದ್ದಾರೆ. ಆಗ ಅಲ್ಲಿರುವ ವೈದ್ಯರು ಆಂತರಿಕ ಪೆಟ್ಟುಗಳಾಗಿರುವುದರಿಂದ ಮೈಸೂರಿಗೆ ಕರೆದೊಯ್ಯಲು ತಿಳಿಸಿದರು.

ಅಂದು ರಾತ್ರಿ ಮೈಸೂರಿಗೆ ತಲುಪಿ ಸಾರ್ವಜನಿಕ ಆಸ್ಪತ್ರೆಗೆ ಹೋದರೆ, ವೈದ್ಯರೇ ಇಲ್ಲ. ಇರುವ ಸಿಬ್ಬಂದಿ ಸಾಮಾನ್ಯ ವಾರ್ಡಿನಲ್ಲಿ ದಾಖಲಿಸಿದ್ದಾರೆ. ಅಷ್ಟರಲ್ಲಿಯೇ ಆಂತರಿಕ ರಕ್ತಸ್ರಾವವೂ ಆರಂಭವಾಗಿ ಗಾಯಾಳು ಗಂಭೀರ ಪರಿಸ್ಥಿತಿಗೆ ತಲುಪಿದ್ದಾರೆ.
 
ಮರುದಿನ ತಮ್ಮ ಅಧಿಕಾರಿ ವರ್ಗದವರಿಗೆ ಸಂಪರ್ಕಿಸಿ ಅವರ ಶಿಫಾರಸಿನ ಮೇರೆಗೆ ಹಿರಿಯ ಶಸ್ತ್ರವೈದ್ಯರು ಬಂದು, ಪರಿಶೀಲಿಸಿ, ಶೀಘ್ರವೇ ಶಸ್ತ್ರಚಿಕಿತ್ಸೆಗೆ ಏರ್ಪಾಟು ಮಾಡಿದರು. ಆದರೆ ಶಸ್ತ್ರಚಿಕಿತ್ಸೆಗೆ ಕರೆದೊಯ್ಯುವಾಗಲೇ ಗಾಯಾಳು ಕೊನೆಯುಸಿರು ಎಳೆದಿದ್ದ.

ಇಲ್ಲಿಗೆ ಅಲಕ್ಷ್ಯದ ಅಧ್ಯಾಯ ಮುಗಿದಿತ್ತು. ಹಿಂದಿನ ದಿನ ರಾತ್ರಿಯೇ ಯಾರಾದರೂ ವೈದ್ಯರು ಪರಿಶೀಲಿಸಿದ್ದರೆ.. ಈ ಅನಾಹುತ ತಪ್ಪಿಸಬಹುದಾಗಿತ್ತೇ? ಇಂಥದ್ದೊಂದು ಪ್ರಶ್ನೆ ಆ ಕುಟುಂಬದವರ ಮುಂದೆ ಜೀವಿತಾವಧಿಯ ಉದ್ದಕ್ಕೂ ಕಾಡಲಿದೆ.
ಅಷ್ಟರಲ್ಲಿ ಆಸ್ಪತ್ರೆಯಲ್ಲಿ ಇನ್ನೊಂದು ಪ್ರಹಸನ ಆರಂಭ. ಇದು ಅಪಘಾತ ಪ್ರಕರಣ.

ಪೊಲೀಸರು ಬಂದು ಮಹಜರು ಮಾಡಬೇಕು. ಪಂಚನಾಮೆ ಮಾಡಬೇಕು. ನಂತರವಷ್ಟೆ ಶವಪರೀಕ್ಷೆಗೆ ಅವಕಾಶ ಎಂದು ವೈದ್ಯರು ಕಾನೂನು ತಿಳಿಸಿದರು. ಪೊಲೀಸ್ ಠಾಣೆಗೆ ಹೋದರೆ, `ನಮ್ಮ ವ್ಯಾಪ್ತಿಯಲ್ಲ~ ಎಂದು ತಮ್ಮ ವ್ಯಾಪ್ತಿ ಪ್ರದೇಶದ ಅಧಿಕಾರ ತೋರಿದ್ದಾರೆ.

 ಕೊಡಗು ಜಿಲ್ಲೆಯ ಯಾವುದೋ ಗ್ರಾಮದ ಬಳಿ ಆಗಿರುವ ಅಪಘಾತಕ್ಕೆ ಅದೇ ವ್ಯಾಪ್ತಿಯ ಠಾಣೆಗೆ ಮೃತರ ಸಂಬಂಧಿಗಳು ಎಡತಾಕಿದರು. ಕೇಂದ್ರ ಸರ್ಕಾರಿ ನೌಕರರ ಅಧಿಕಾರಿಗಳು ಪೊಲೀಸ್ ವರಿಷ್ಠಾಧಿಕಾರಿಗೆ ಸಂಪರ್ಕಿಸುವವರೆಗೂ ಮೃತನ ಸಂಬಂಧಿಗಳ ಮಾತಿಗೆ ಬೆಲೆಯೇ ಕೊಡದ ಪೊಲೀಸರು, ನಂತರ ಆ ದಿನದ ಸಂಜೆ ಹೊತ್ತಿಗೆ ಮೈಸೂರಿಗೆ `ಸವಾರಿ~ ಮಾಡುತ್ತ ಬಂದರು.

ಮಹಜರು ಪ್ರಕ್ರಿಯೆ ಮುಗಿಯುವುದರಲ್ಲಿ, ಭಾನುವಾರ ಶವ ಪರೀಕ್ಷೆಯ ವೈದ್ಯರು ಬಂದಿಲ್ಲ. ಅಲ್ಲಿರುವ ಸಿಬ್ಬಂದಿಗೆ ಕಂಠಮಟ್ಟ ಕುಡಿಸುವವರೆಗೂ ಬರುವುದಿಲ್ಲ. ನಂತರ ಶವ ಸುತ್ತುವ ಬಟ್ಟೆ ಖರೀದಿ. ಈ ನಡುವೆ ಮೃತ ವ್ಯಕ್ತಿ ಚಿಕಿತ್ಸೆಗೆಂದು ತಂದ ಹಣ, ಒಡವೆ ಮಾಯ.

ಮೃತನಿಗಾಗಿ ಅಳುವುದೋ, ಗೊತ್ತಿರದ ಊರಿನಲ್ಲಿ ಪಡಬಾರದ ಪಾಡಿಗಾಗಿ ಅಳುವುದೋ...

ಇದೊಂದು ಘಟನೆ ಮಾತ್ರ. ಇಲ್ಲಿ ಹಣ, ಶಿಫಾರಸು, ಅಧಿಕಾರ ಎಲ್ಲವೂ ಇದ್ದೂ ಈ ಪಾಡು ಪಡಬೇಕಾಯಿತು. ಏನೂ ಇಲ್ಲದ ಬಡವರೊಂದಿಗೆ ಇಂಥ ಹಲವಾರು ಘಟನೆಗಳು ಘಟಿಸುತ್ತಲೇ ಇರುತ್ತವೆ. ಅಂಥವರ ಪರಿಸ್ಥಿತಿ ಏನು?

ಸಾರಿಗೆ-ಸಂಚಾರ, ವೈದ್ಯಕೀಯ ಹಾಗೂ ಪೊಲೀಸ್ ವ್ಯವಸ್ಥೆಯ ಅವ್ಯವಸ್ಥೆಯನ್ನೇ ಈ ಘಟನೆ ಎತ್ತಿ ತೋರಿಸಿದೆ. ಕನಿಷ್ಠ ಕರ್ತವ್ಯ ಪ್ರಜ್ಞೆಯನ್ನೇ ತೋರದ ಅಧಿಕಾರಿಗಳಿಂದ ಮಾನವೀಯ ವರ್ತನೆಯನ್ನು ನಿರೀಕ್ಷಿಸುವುದೂ ಅತಿರೇಕದ ಬಯಕೆ ಎನಿಸಬಹುದೇನೋ?

ಆದರೆ ವ್ಯವಸ್ಥೆಯ ದುರಸ್ತಿ ಆಗಬೇಕಿರುವುದು ಎಲ್ಲಿಂದ?ವೈದ್ಯಕೀಯ ಕ್ಷೇತ್ರಕ್ಕೆ ಚಿಕಿತ್ಸೆ ಕೊಡುವಂತೆ ಆರೋಗ್ಯ ಸಚಿವರು ಧಿಡೀರ್ ಭೇಟಿ ಮಾಡುತ್ತಿದ್ದಾರೆ. ಸ್ಥಳದಲ್ಲಿಯೇ ವೈದ್ಯಾಧಿಕಾರಿಯ ಅಮಾನತು ಸಹ ಮಾಡುತ್ತಿದ್ದಾರೆ ಆದರೆ ನಂತರ..? ಮುಂದಿನ ಅವ್ಯವಸ್ಥೆಯನ್ನು ಸರಿಪಡಿಸುವವರು ಯಾರು?

ಅಮಾನತು, ಸೇವೆಯಿಂದ ವಜಾ ಮಾಡುವುದು ಇಂಥ ಯಾವ ಕ್ರಮಗಳೂ ಉಳಿದವರಿಂದ ಉತ್ತಮ ನಡವಳಿಕೆ ನಿರೀಕ್ಷಿಸುವಂಥ ಎಚ್ಚರಿಕೆ ಗಂಟೆಯಾಗಿ ಉಳಿದಿಲ್ಲ ಈಗ. ಅವ್ಯವಸ್ಥೆಯನ್ನು ಇನ್ನಷ್ಟು ಜಟಿಲವಾಗಿಸುತ್ತವೆ ಈ ಕ್ರಮಗಳು. ಅದರ ಬದಲಿಗೆ ಕರ್ತವ್ಯಚ್ಯುತಿ ಮಾಡುವವರಿಗೆ ಹೆಚ್ಚುವರಿ ಸೇವೆಯ ಹೊಣೆಯನ್ನು ಹೊರಿಸಲಿ.

ಇಲ್ಲದಿದ್ದರೆ ಜಿಡ್ಡುಗಟ್ಟಿದ ವ್ಯವಸ್ಥೆಗೆ ಚುರುಕು ಮುಟ್ಟಿಸಲು ಲಾಭರಹಿತ ಸೇವೆಗೆ ಅಧಿಕಾರಿಗಳನ್ನು ನೇಮಿಸಲಿ. ಇಲ್ಲದಿದ್ದಲ್ಲಿ ಈ ಅವ್ಯವಸ್ಥೆಯಲ್ಲಿ ಸತ್ತವರೊಂದಿಗೆ ಬದುಕಿದವರೂ ಸಾಯುತ್ತ, ಸಾವಿಗಾಗಿ ಬಯಸುತ್ತ ರೋದಿಸುವುದು ತಪ್ಪುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT