ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪರಾಧ ಪ್ರಕರಣ ಹೆಚ್ಚಳ: ತತ್ತರಿಸಿದ ಜನ

Last Updated 1 ಅಕ್ಟೋಬರ್ 2012, 4:40 IST
ಅಕ್ಷರ ಗಾತ್ರ

ಬಳ್ಳಾರಿ: ಅಪರಿಚಿತರಿಂದ ಹಲ್ಲೆ, ಸುಲಿಗೆ, ದರೋಡೆ, ಎಟಿಎಂ ಕೇಂದ್ರದ ಕಾವಲು ಗಾರನ ಕೊಲೆ; ಕಳ್ಳತನಕ್ಕೆ ವಿಫಲ ಯತ್ನ, ಮನೆಗೆ ನುಗ್ಗಿದ ದರೋಡೆಕೋರರಿಂದ ಹಲ್ಲೆ; ಕಳ್ಳತನ, ಸರ್ಕಾರಿ ಕಚೇರಿಯ ಕಾವಲುಗಾರನ ಕೊಲೆ, ರಸ್ತೆಯಲ್ಲಿ ಹೊರಟಿದ್ದ ಮಹಿಳೆಯ ಚಿನ್ನದ ಸರ ಕಳ್ಳತನ... - ಹೀಗೆ ಜನರನ್ನು ಬೆಚ್ಚಿಬೀಳಿಸುವ ಅನೇಕ ಅಪರಾಧ ಪ್ರಕರಣಗಳು ನಗರದಾದ್ಯಂತ ಇತ್ತೀಚಿನ ದಿನಗಳಲ್ಲಿ ನಡೆಯುತ್ತಲೇ ಇವೆ.

ಇಂತಹ ಅನೇಕ ಪ್ರಕರಣಗಳ ತನಿಖೆ ನಡೆಸುತ್ತಿರುವ ಪೊಲೀಸರು ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯೇ ಆರೋಪಿಗಳ ತ್ವರಿತ ಬಂಧನಕ್ಕೆ ಅಡ್ಡಿಯಾಗಿದೆ ಎಂದೂ ಹೇಳುತ್ತಿದಾರೆ.

ಸಾರ್ವಜನಿಕರಲ್ಲಿ ತೀವ್ರ ಆತಂಕ ಉಂಟುಮಾಡಿರುವ ಇಂತಹ ಪ್ರಕರಣ ಗಳನ್ನು ತಡೆಯುವುದಕ್ಕೆ ಸಾರ್ವಜನಿಕರ ಕಾಳಜಿಯೂ, ಸಾರ್ವಜನಿಕ ವಲಯ ದಲ್ಲಿರುವ ಸಂಸ್ಥೆಗಳ ಮುತುವರ್ಜಿಯೂ ಅಷ್ಟೇ ಮುಖ್ಯ ಎಂಬ ಅಭಿಪ್ರಾಯವೂ ಪೊಲೀಸ್ ಅಧಿಕಾರಿಗಳ ವಲಯದಿಂದ ಕೇಳಿಬರುತ್ತಿದೆ.

ಸಿಸಿ ಕ್ಯಾಮೆರಾ ಅಳವಡಿಕೆ: ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಇಲಾಖೆ ನಗರದ ವಿವಿಧ ವೃತ್ತಗಳಲ್ಲಿ ಈಗಾಗಲೇ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿದ್ದು, ಕಾನೂನು ಭಂಗ ಮಾಡುವವರನ್ನು ಇದರಿಂದ ಸುಲಭ ವಾಗಿ ಪತ್ತೆ ಮಾಡಬಹುದಾಗಿದೆ.

ಅದೇ ರೀತಿ, ಎಟಿಎಂ ಕೇಂದ್ರಗಳನ್ನು ಹೊಂದಿ ರುವ ಬ್ಯಾಂಕ್‌ಗಳು ಕಾವಲುಗಾರನಿಗೆ ಶಸ್ತ್ರಾಸ್ತ್ರ ಪೂರೈಸಿ, ಆತನ ಸ್ವಯಂ ಹಾಗೂ ಕೇಂದ್ರದ ರಕ್ಷಣೆಗೂ ಆದ್ಯತೆ ನೀಡಬೇಕು ಎಂಬುದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಚಂದ್ರಗುಪ್ತ ಅವರ ಕೋರಿಕೆಯಾಗಿದೆ.

ಈಗಾಗಲೇ ನಗರದಲ್ಲಿರುವ ಬಹು ತೇಕ ಬ್ಯಾಂಕ್ ಅಧಿಕಾರಿಗಳೊಂದಿಗೆ ಭದ್ರತಾ ಸಮಿತಿಯ ಸಭೆ ನಡೆಸಿ, ಎಟಿಎಂ ಕೇಂದ್ರಗಳ ಎದುರು ಸಿಸಿ ಕ್ಯಾಮೆರಾ ಅಳವಡಿಸುವಂತೆ ಮನವಿ ಮಾಡಿಕೊಂಡಿದ್ದರೂ, ಸೂಕ್ತ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ ಎಂಬುದು ಅವರ ಆರೋಪ.

ಎಟಿಎಂ ಕೇಂದ್ರಗಳ ಕಳ್ಳತನದ ಇರಾದೆಯೊಂದಿಗೆ, ಗಮನಿಸಲೆಂದೇ ಮುಂಚಿತವಾಗಿ ಓಡಾಡಿ, ಸಂಚು ರೂಪಿಸುವವರನ್ನು ಇದರಿಂದ ಸುಲಭ ದಲ್ಲಿ ಪತ್ತೆ ಮಾಡಬಹುದಾಗಿದೆ. ಅಲ್ಲದೆ, ಕಾವಲುಗಾರರಿಗೆ ಶಸ್ತ್ರಾಸ್ತ್ರ ಪೂರೈಸಿದಲ್ಲಿ ಅವರ ಆತ್ಮರಕ್ಷಣೆಗೂ ನೆರವಾಗಬಹುದಾಗಿದೆ. ಹಣ ಕಳವು ಮಾಡುವ ಉದ್ದೇಶದಿಂದ ಬರುವ ದುಷ್ಕರ್ಮಿಗಳ ಸಂಚಿಗೆ ಬಡ ಕಾವಲುಗಾರರು ಬಲಿ ಆಗುವುದನ್ನು ತಡೆಯುವುದಲ್ಲದೆ, ಸಾರ್ವಜನಿಕರಲ್ಲೂ ಭದ್ರತಾ ಭಾವ ಮೂಡುವಂತೆ ಮಾಡಬಹುದಾಗಿದೆ ಎಂಬುದು ಅವರ ಅಭಿಪ್ರಾಯವಾಗಿದೆ.

ಇಲಾಖೆ ಅನೇಕ ಬಾರಿ ಮನವಿ ಮಾಡಿದರೂ, ಬ್ಯಾಂಕ್‌ಗಳ ಆಡಳಿತ ಮಂಡಳಿಯವರು ಅದನ್ನು ಪುರಸ್ಕರಿ ಸಿಲ್ಲ. ಎಷ್ಟೋ ಎಟಿಎಂ ಕೇಂದ್ರಗಳೆದುರು ಕಾವಲುಗಾರರೇ ಇಲ್ಲ. ಕೂಡಲೇ ಬ್ಯಾಂಕ್ ಆಡಳಿತ ಮಂಡಳಿಗಳು ತಮ್ಮ ಕೇಂದ್ರಗಳ ಭದ್ರತೆ ಹಾಗೂ ಸಾರ್ವ ಜನಿಕರ ಸೌಖ್ಯದ ಬಗ್ಗೆ ಆಲೋಚಿಸ ಬೇಕು ಎಂಬುದು ಅವರ ಕೋರಿಕೆ.

ದ್ವೇಷ, ಅಸೂಯೆ, ಹಣಕಾಸಿನ ವ್ಯವಹಾರ, ಅನೈತಿಕ ಸಂಬಂಧ, ಆಸ್ತಿ ವಿವಾದ... ಹೀಗೆ ಹತ್ತು, ಹಲವು ಕಾರಣಗಳಲ್ಲದೆ, ಕಳ್ಳತನದ ಇರಾದೆ ಯಿಂದಲೂ ಜನರ ಮೇಲೆ ಹಲ್ಲೆಗಳು ನಡೆಯುವ ಪ್ರಸಂಗಗಳೇ ಅಧಿಕ.
ಆದರೆ, ಎಟಿಎಂ ಕೇಂದ್ರದಲ್ಲಿ ಹಣ ಕಳವು ಮಾಡುವುದಕ್ಕೆ, ನಗರದ ಹೊರ ವಲಯದಲ್ಲಿರುವ ಸಣ್ಣ ನೀರಾವರಿ ಇಲಾಖೆ ಕಚೇರಿಯಲ್ಲಿನ ಕಡತಗಳನ್ನು ತಡಕಾಡುವುದಕ್ಕೆ ಕಾವಲುಗಾರರನ್ನೇ ಕೊಲೆ ಮಾಡಿರುವ ಘಟನೆಗಳು ಜನರನ್ನು ತಲ್ಲಣಕ್ಕೆ ಈಡುಮಾಡಿವೆ ಎಂದೂ ಅವರು ಹೇಳುತ್ತಾರೆ.

ಮುನ್ನೆಚ್ಚರಿಕೆ ಅಗತ್ಯ: ಅಪರಾಧ ಪ್ರಕರಣಗಳನ್ನು ತಡೆಯುವುದಕ್ಕೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡಲ್ಲಿ, ಸಾರ್ವಜನಿಕರು ಸಂಕಷ್ಟದಿಂದ ಪಾರಾಗ ಬಹುದು ಎಂಬ ಅಭಿಪ್ರಾಯ ಪೊಲೀಸ್ ವಲಯದಿಂದ ವ್ಯಕ್ತವಾಗುತ್ತಿದೆ.

ಕಳ್ಳತನದ ಕಾರ್ಯಾಚರಣೆ ನಡೆಸುವ ಅಪರಾಧಿಗಳಿಗೆ ಒಂದು ನಿರ್ದಿಷ್ಟ ಉದ್ದೇಶವಿರುತ್ತದೆ. ಯಾರೊಂ ದಿಗೂ ದ್ವೇಷವನ್ನೇ ಹೊಂದಿರದ ವ್ಯಕ್ತಿಯ ಕೊಲೆ ನಡೆದಾಗ ತನಿಖೆ ನಡೆಸುವ ಪೊಲೀಸರ ತಲೆಯೂ ಬಿಸಿಯಾಗುತ್ತದೆ. ಬಲಿಪಶುವಾದ ವ್ಯಕ್ತಿಯ ಹಿನ್ನೆಲೆ, ಸಂಬಂಧಗಳು, ದ್ವೇಷ, ನಡವಳಿಕೆ ಕುರಿತೂ ಮಾಹಿತಿ ನೀಡಿದಲ್ಲಿ ಆರೋಪಿಗಳ ಬಂಧನ ಸುಲಭವಾಗುತ್ತದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸುತ್ತಾರೆ.

ಹಾಡಹಗಲಲ್ಲೇ ನಡೆಯುತ್ತಿರುವ ಅಪರಾಧ ಪ್ರಕರಣಗಳಿಗೆ ಪೊಲೀಸರೇ ಹೊಣೆಗಾರರು ಎಂಬ ಸಾರ್ವತ್ರಿಕ ಅಭಿಪ್ರಾಯವಿದೆ. ಆದರೆ, ಕಾನೂನಿನ ಬಿಗಿಹಿಡಿತವನ್ನು ಅರಿತೂ ಅಪರಾಧ ಪ್ರಕರಣಗಳಿಗೆ ಕಾರಣವಾಗುವವರನ್ನು ಪತ್ತೆ ಮಾಡಿ, ಮುಂದೆ ಅಂತಹ ಪ್ರಕರಣ ಗಳು ನಡೆಯದಂತೆ ತಡೆಯುವ ನಿಟ್ಟಿನಲ್ಲಿ ಪೊಲೀಸರಿಗೆ ಸಾರ್ವಜನಿಕರ ಸಹಕಾರ ಅತ್ಯಗತ್ಯ ಎನ್ನುತ್ತಾರೆ.

ಕಳ್ಳತನದ ಉದ್ದೇಶದ ಅಪರಾಧ ಪ್ರಕರಣಗಳನ್ನು ಹೊರತುಪಡಿಸಿ, ಮುಂದೆ ಆಗಲಿರುವ ಅನಾಹುತವನ್ನು ಗ್ರಹಿಸಿ, ಪೊಲೀಸರ ನೆರವು ಪಡೆದಲ್ಲಿ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕಬಹುದಾಗಿದ್ದು, ಸಾರ್ವಜನಿಕರು ಆಲೋಚಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT