ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪರಾಧ ಹೊರಿಸಲು ಹೋಗಿ ಸಿಕ್ಕ!

Last Updated 4 ಅಕ್ಟೋಬರ್ 2011, 9:25 IST
ಅಕ್ಷರ ಗಾತ್ರ

ಯಾದಗಿರಿ: ಪೊಲೀಸರ ಸಮಯಪ್ರಜ್ಞೆಯಿಂದಾಗಿ ನಿರಪರಾಧಿ ಆಟೋ ರಿಕ್ಷಾ ಚಾಲಕನೊಬ್ಬ ದುಷ್ಕರ್ಮಿಗಳು ಬೀಸಿದ ಜಾಲದಿಂದ ಪಾರಾದ ಘಟನೆ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಹೊನಗೇರಾ ಬಳಿ ಸೋಮವಾರ ನಡೆದಿದೆ.

ತಮ್ಮ ಮೇಲೆ ಆರೋಪ, ದೂರು ನೀಡುವ ಮೂಲಕ ಕಂಟಕನಾಗಿದ್ದ ಆಟೋ ರಿಕ್ಷಾ ಚಾಲಕನನ್ನೇ ಜೈಲಿಗೆ ಕಳುಹಿಸುವ ಪ್ರಯತ್ನ ಮಾಡಿದ ಮೂವರು, ಪೊಲೀಸರ ಸಕಾಲಿಕ ನಿರ್ಧಾರದಿಂದಾಗಿ ತಾವೇ ಜೈಲಿಗೆ ಸೇರುವಂತಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ನಿಂಗಪ್ಪ ಗುಡಗುಡಿ, ಹೊನಗೇರಾ ಗ್ರಾಮ ಪಂಚಾಯಿತಿ ಪಂಪ್ ಆಪರೇಟರ್ ಹೊನ್ನಪ್ಪ, ಸಿಪಾಯಿ ವೆಂಕಪ್ಪ ಎಂಬುವವರು ಬಂಧಿತ ಆರೋಪಿಗಳಾಗಿದ್ದಾರೆ.

ಘಟನೆಯ ವಿವರ: ಹಣಮಂತ ಬಳಿಚಕ್ರ ಎಂಬಾತ ಆಟೋ ರಿಕ್ಷಾ ಓಡಿಸಿಕೊಂಡಿದ್ದು, ವಿವಿಧ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದಾನೆ. ಇತ್ತೀಚೆಗಷ್ಟೇ ಹೊನಗೇರಾ ಗ್ರಾಮ ಪಂಚಾಯಿತಿಯಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ನಡೆದ ಅವ್ಯವಹಾರಗಳ ಬಗ್ಗೆ ಲೋಕಾಯುಕ್ತರು, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮುಂತಾದೆಡೆ ಹಣಮಂತ ದೂರು ನೀಡಿದ್ದ. ಈ ಬಗ್ಗೆ ವಿಚಾರಣೆ ನಡೆಸಿದ ನಂತರ, ವಾರದ ಹಿಂದೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿಯ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಿ, ಬಂಧಿಸಲಾಗಿತ್ತು.

ಇದರಿಂದ ವಿಚಲಿತನಾದ ನಿಂಗಪ್ಪ ಗುಡಗುಡಿ, ತನ್ನ ಆರೋಪಗಳ ಬಗ್ಗೆಯೂ ಹಣಮಂತ ದೂರು ನೀಡಬಹುದು ಎಂಬ ಹೆದರಿಕೆ ಆರಂಭವಾಗಿದೆ. ಹಾಗಾಗಿ ಹಣಮಂತನನ್ನೇ ಜೈಲಿಗೆ ಕಳುಹಿಸಬೇಕು. ಅದೂ ನಾಲ್ಕೈದು ತಿಂಗಳೂ ಜೈಲಿನಲ್ಲಿಯೇ ಉಳಿಯುವಂತಹ ಆರೋಪದಲ್ಲಿ ಸಿಲುಕಿಸಬೇಕು ಎಂದು ಯೋಜನೆ ರೂಪಿಸಿದ್ದಾರೆ.

ಅದಕ್ಕಾಗಿ ಗ್ರಾಮ ಪಂಚಾಯಿತಿ ನೌಕರರಾದ ಹೊನ್ನಪ್ಪ ಮತ್ತು ವೆಂಕಪ್ಪ ಎಂಬುವವರ ಸಹಾಯದಿಂದ ಎರಡು ಕಿ.ಗ್ರಾಂ. ಗಾಂಜಾ ತರಿಸಿ, ಹಣಮಂತನ ಆಟೋ ರಿಕ್ಷಾದಲ್ಲಿ ಇರಿಸಿದ್ದಾನೆ. ಇದಾವುದು ತಿಳಿಯದ ಹಣಮಂತ ತನ್ನ ಆಟೋ ತೆಗೆದುಕೊಂಡು ಯಾದಗಿರಿಯತ್ತ ಬರುತ್ತಿರುವಾಗ ನಿಂಗಪ್ಪನೇ ಪೊಲೀಸರಿಗೆ ಫೋನ್ ಕರೆ ಮಾಡಿ, ಆಟೋ ರಿಕ್ಷಾದಲ್ಲಿ ಗಾಂಜಾ ಸಾಗಿಸುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾನೆ. ಅದರಂತೆ ಕಾರ್ಯಪ್ರವೃತ್ತರಾದ ಪೊಲೀಸರಿಗೆ ಆಟೋ ರಿಕ್ಷಾದಲ್ಲಿ ಗಾಂಜಾ ಕೂಡ ಸಿಕ್ಕಿದೆ.

ಆದರೆ ಈ ಬಗ್ಗೆ ಎಳ್ಳಷ್ಟು ಗೊತ್ತಿರದ ಹಣಮಂತನ ಚಲನವಲನದಿಂದ ಸರ್ಕಲ್ ಇನ್ಸ್‌ಪೆಕ್ಟರ್ ಶಂಕರಗೌಡ ಪಾಟೀಲರಿಗೆ ಸಂಶಯ ಮೂಡಿದೆ. ಪ್ರಕರಣಕ್ಕೆ ಇನ್ನೊಂದು ಮುಖವೂ ಇರಬಹುದು ಎಂಬ ಆತಂಕದಿಂದ ಮಾಹಿತಿ ನೀಡಿದ ದೂರವಾಣಿ ಸಂಖ್ಯೆಯನ್ನು ಪಡೆದು, ಆತನಿಗೆ ಕರೆ ಮಾಡಲಾಗಿದೆ. ಮಾಹಿತಿ ನೀಡಿದವರೂ ಯಾರು ಎಂಬುದನ್ನು ಪತ್ತೆ ಹಚ್ಚಿ, ಆತನನ್ನು ಕರೆಸಿ, ವಿಚಾರಣೆ ಮಾಡಿದಾಗ, ಸತ್ಯಾಂಶ ಹೊರಬಿದ್ದಿದೆ.

ಅನ್ಯಾಯದ ವಿರುದ್ಧ ಧ್ವನಿ ಎತ್ತಿದ ಕಾರಣಕ್ಕೆ ವಿನಾಕಾರಣ ಜೈಲಿಗೆ ಸೇರುತ್ತಿದ್ದ ಹಣಮಂತ ಬಳಿಚಕ್ರ, ಪೊಲೀಸರ ಸಮಯಪ್ರಜ್ಞೆಯಿಂದಾಗಿ ಪಾರಾದಂತಾಗಿದೆ. ಈ ದುರುದ್ದೇಶಪೂರಿತ ಕೃತ್ಯ ಹಾಗೂ ಗಾಂಜಾ ಮಾರಾಟದ ಪ್ರಕರಣಗಳನ್ನು ಆರೋಪಿಗಳ ಮೇಲೆ ದಾಖಲಿಸಲಾಗಿದೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT