ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪರಾಧಗಳು ಏಕೆ ಕಡಿಮೆಯಾಗುತ್ತಿಲ್ಲ?

Last Updated 18 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಕಳೆದ ಶನಿವಾರ ಶಿವಮೊಗ್ಗ ನಗರದ ಕೋಟೆ ಆಂಜನೇಯ ದೇವಸ್ಥಾನಕ್ಕೆ ಕುಟುಂಬ ಸಮೇತ ತೆರಳಿದ್ದೆ.  ವಿಶೇಷ ಪೂಜೆ ಇದ್ದುದರಿಂದ ವಿಪರೀತ ಜನಸಂದಣಿ ಇತ್ತು.  ಒಂದು ಬಾರಿ ದೇವರ ದರ್ಶನವಾದರೆ ಸಾಕೆಂಬಷ್ಟು ನೂಕು­ನುಗ್ಗಲು ಇದ್ದುದರಿಂದ ಎರಡು ಕ್ಷಣದಲ್ಲಿಯೇ ದೇವರತ್ತ ಕಣ್ಣು ಬೀರಿ ದೂರ ಸರಿದೆ. 

ಮಡದಿ ಮಕ್ಕಳು ಇನ್ನೂ ಸರದಿಯಲ್ಲಿ ನಿಂತಿದ್ದರಿಂದ ನಾನು ಸ್ವಲ್ಪ ದೂರ ನಿಂತು ಅವರೆಲ್ಲರ ಆಗಮನ­ವನ್ನು ನಿರೀಕ್ಷಿಸುತ್ತಾ ನಿಂತೆ. ಅಷ್ಟರಲ್ಲಿಯೇ ಗಂಧ, ಕುಂಕುಮ ಧರಿಸಿದ ಯುವಕನೊಬ್ಬ ದರ್ಶನ­ಕ್ಕಾಗಿ ಗುಂಪಿನಲ್ಲಿ ತೂರಲು ನೋಡಿದ. ಆತನ ಭಯಭಕ್ತಿ ಕಂಡು  ಇಂಥ ಆಧುನಿಕ  ಕಾಲದಲ್ಲೂ ದೇವರ ಮೇಲೆ ಶ್ರದ್ಧೆ ಇರುವ ಯುವಕನನ್ನು ನೋಡಿ ನನಗೆ ಆನಂದ ಜತೆಗೆ ಅಚ್ಚರಿ­ಯಾಯಿತು. ದೇವರತ್ತ ಕೈಮುಗಿದು ಆ ಯುವಕ ಹಿಂದೆ ಸರಿದ.

ಕೆಲವೇ ಕ್ಷಣದಲ್ಲಿ ಮತ್ತೆ ಗುಂಪಿನಲ್ಲಿ ತೂರಿ ದೇವರಿಗೆ ಕೈಮುಗಿದ.  ನನಗೆ ಆತನ ಅನನ್ಯ ಭಕ್ತಿ ಕಂಡು ಈಗ  ಆನಂದ ಅಚ್ಚರಿಯ ಬದಲಿಗೆ ಅನುಮಾನ ಕಾಡತೊಡಗಿತು.  ಇದೇ ರೀತಿ ಆತ ಪದೇ ಪದೇ ಗುಂಪಿನಲ್ಲಿ ತೂರಲು ಪ್ರಯತ್ನಿಸಿದಾಗಲೆಲ್ಲ ನಾನು ಆತನ ಚಲನವಲನ­ಗಳನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸ­ಲಾರಂಭಿಸಿದೆ.  ನನ್ನ ಹಾಗೇ ಇನ್ನೂ ಇಬ್ಬರು  ಭಕ್ತರು ಅನುಮಾನ ಬಂದು ನನ್ನೊಂದಿಗೆ ಅದೇ ವಿಷಯ ಚರ್ಚಿಸಿದರು.

ನನಗಾಗ ಆತನಿಗೆ ದೇವರ ಮೇಲಿನ ಭಕ್ತಿಗಿಂತ ಭಕ್ತರ ಜೇಬುಗಳ ಮೇಲೆಯೇ ಹೆಚ್ಚಿನ ಗಮನ­ವಿದ್ದುದು ದೃಢವಾಯಿತು.  ನಾನು ಸಹ ಅವನ ಅರಿವಿಗೆ ಬಾರದಂತೆ ಆತ ಹೋದಲ್ಲೆಲ್ಲ ಹಿಂಬಾ­ಲಿಸಿದೆ.  ಕೊನೆಗೆ ಆತನಿಗೆ ಅವಕಾಶ ಸಿಗದ ಕಾರಣ ಹೊರಗಡೆ ಹೋದ, ಒಂದು ಜೊತೆ ಬೆಲೆ ಬಾಳುವ ಪಾದರಕ್ಷೆಗಳನ್ನು ಎತ್ತಿಕೊಂಡು ಹೋಗಿ, ಮತ್ತೆ ಬಂದ.  ಅವನ ಜೊತೆ ಇನ್ನೊಬ್ಬ ಸೇರಿಕೊಂಡ.

ಇಬ್ಬರೂ ಸೇರಿ ಮತ್ತೆ ಒಂದು ಜೊತೆ ಪಾದರಕ್ಷೆ ಹೊತ್ತೊಯ್ದರು. ಆಗ ಸುಮ್ಮ­ನಿರಬಾರದೆಂದು ಸನಿಹದಲ್ಲಿ ಯಾರಾದರೂ ಪೊಲೀಸರು ಇರಬಹುದೆಂದು ಹುಡುಕಾಡಿದೆ, ಕಾಣಲಿಲ್ಲ.  ದೇವಸ್ಥಾನದ ಹೊರಗೆ ಬಂದು ಹುಡುಕಿದೆ.  ‘ಎ.ಎಸ್.ಐ. ಮೋಟಾರ್‌­ಸೈಕಲ್‌­ನಲ್ಲಿ ಹೊರಟಿದ್ದರು. ತಡೆದು ನಿಲ್ಲಿಸಿ ವಿಷಯ ತಿಳಿಸಿದೆ.  ನಾನೀಗ ಬೇರೆ ಕರ್ತವ್ಯದ ಮೇಲಿದ್ದು, ಬೇರೆ ಯಾರಾದರೂ ಇದ್ದಾರೆಯೋ ನೋಡಿ ಅವರಿಗೆ ವಿಷಯ ತಿಳಿಸಿ  ಎಂದು ಹೊರಟೇ­ಬಿಟ್ಟರು!  ನಂತರ ಸಮೀಪದಲ್ಲಿಯೇ ಸಂಚಾರ ನಿಯಂತ್ರಣದ ಕರ್ತವ್ಯಕ್ಕೆಂದು ನಿಯೋಜಿಸಿದ್ದ ಪೇದೆಯ ಬಳಿ ತೆರಳಿ ವಿಷಯ ತಿಳಿಸಿದೆ.  ಆತ  ನನ್ನದು ಸಂಚಾರ ನಿಯಂತ್ರಣದ ಕೆಲಸ, ದೇವಸ್ಥಾನದ ಒಳಗೆ  ಮಹಿಳಾ ಪೇದೆಯೊಬ್ಬರು ಇರಬೇಕಲ್ಲ, ಅವರಿಗೆ ವಿಷಯ ತಿಳಿಸಿ  ಎಂದರು.

‘ಒಳಗೆ ಯಾರೂ ಸಿಗಲಿಲ್ಲ, ಆದ್ದರಿಂದ ನಿಮಗೆ ವಿಷಯ ತಿಳಿಸುತ್ತಿದ್ದು, ನಿಮ್ಮ ವಾಕಿಟಾಕಿಯಲ್ಲಿ ಮಾಹಿತಿ ಕೊಡಿ’ ಎಂದೆ.  ಅವರ ಬಳಿ ವಾಕಿಟಾಕಿ ಇಲ್ಲ  ಎಂದ ಕಾರಣ ಬೇಸರದಿಂದ ಹೊರಟೆವು.  ಅಷ್ಟರಲ್ಲಿ ಆತ ಮೊಬೈಲ್ ಫೋನ್‌­ನಲ್ಲಿ ಆ ಮಹಿಳಾ ಪೇದೆಗೆ ವಿಷಯ ತಿಳಿಸಿದ್ದರಿಂದ ಅವರು ಬಂದರು.  ನಂತರ ಆ ಹುಡುಗನನ್ನು ತೋರಿಸಿ ಎಂದರು.

ತೋರಿಸಿದೆವು.  ಇಬ್ಬರೂ ಸೇರಿ ಆ ಯುವಕನನ್ನು ಹಿಡಿದುಕೊಂಡು ದೇವ­ಸ್ಥಾನ­ದಿಂದ ಸ್ವಲ್ಪ ದೂರ ಕರೆದುಕೊಂಡು ಬಂದು ಬಾಯಿಮಾತಿನಲ್ಲಿಯೇ ತೀವ್ರವಾಗಿ ವಿಚಾರಣೆ ಮಾಡಿದರು!  ನನ್ನ ಮಕ್ಕಳಿಗೆ ಕಳ್ಳನನ್ನು ಹಿಡಿದು­ಕೊಟ್ಟ ಸಂತೋಷ, ಇಬ್ಬರೂ ಸಂಭ್ರಮಿಸಿದರು.  ನಂತರ ಆ ಮಹಿಳಾ ಪೇದೆ ತನ್ನ ದ್ವಿಚಕ್ರ ವಾಹನದಲ್ಲಿ ಶಂಕಿತ ಯುವಕನನ್ನು ಹಿಂದೆ ಕೂರಿಸಿ­ಕೊಂಡು ಹೊರಟರು.  ನಾವೆಲ್ಲರೂ ಬಹು­ಶಃ ಠಾಣೆಗೆ ಕರೆದುಕೊಂಡು ಹೊರಟ­ರೇನೋ ಎಂದು ನಮ್ಮ ವಾಹನದಲ್ಲಿ ಹತ್ತಿ ಮನೆಗೆ ತೆರಳಲು ಅಣಿಯಾದೆವು.  ಸ್ವಲ್ಪ ದೂರ ಬರುತ್ತಿ­ದಂತೆ ಕೋಟೆ ಠಾಣೆಯಿಂದ ಅನತಿ ದೂರ­ದಲ್ಲಿಯೇ  ಮಹಿಳಾ ಪೇದೆ ಆ ಯುವಕನನ್ನು ಇಳಿಸಿ ಹೊರಟುಬಿಟ್ಟರು!  ನನಗಿಂತ ನನ್ನ ಮಕ್ಕಳಿಗೆ ತೀವ್ರ ಕೋಪ, ಹತಾಶೆ ಆವರಿಸಿತು.  ಈ ಸುಖಕ್ಕೆ ಒಂದೂವರೆ ಗಂಟೆ ಸಮಯಹರಣ ಮಾಡಿ, ಇಷ್ಟೆಲ್ಲ ಕಷ್ಟಪಡಬೇಕಿತ್ತೇ ಎಂದು ಗೊಣಗಿದರು. 

ನನಗೂ ತೀರ ಬೇಸರವಾಗಿ ಮತ್ತೆ ಕೋಟೆ ಠಾಣೆಯೊಳಗೆ ಹೋಗಿ  ಇನ್‌ಸ್ಪೆಕ್ಟರ್‌ ಇದ್ದಾರೆ­ಯೇ ಎಂದು ವಿಚಾರಿಸಿದೆ.  ಎ.ಎಸ್.ಐ. ಒಬ್ಬರು   ಅವರು ಈಗ ತಾನೇ ಸಿಟಿ ರೌಂಡ್ಸ್‌ಗೆ ಹೋದರು ಎಂದರು.  ಅದೇ ಎ.ಎಸ್.ಐ.ಗೆ ನಡೆದ ಘಟನಾ­ವಳಿ ತಿಳಿಸಿ,  ‘ಸಾರ್ವಜನಿಕರು ಅನುಮಾನಾಸ್ಪದ ವ್ಯಕ್ತಿಗಳ ಕುರಿತು ಮಾಹಿತಿ ನೀಡಿ ಎಂದು ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಜಾಹೀ­ರಾತು, ಪ್ರಕಟಣೆ ಕೊಡುತ್ತೀರಿ. ಕಳ್ಳನನ್ನು ಹಿಡಿದು­­ಕೊಟ್ಟರೆ ಅವನ ಮೇಲೆ ಪ್ರಕರಣ ದಾಖಲಿಸುವುದಿರಲಿ, ವಿಚಾರಣೆಯನ್ನು ಕೂಡ ಮಾಡದೇ ನೀವೇ ಕೈಬಿಟ್ಟು ಕಳಿಸಿದರೆ ನಾಗರಿಕರ ಪರಿಶ್ರಮಕ್ಕೇನು ಬೆಲೆ? ಕನಿಷ್ಠ ಅವನದೊಂದು ಫೋಟೊ ಆದರೂ ತೆಗೆದುಕೊಂಡು ಕಳಿಸಬಹುದಿತ್ತಲ್ಲ’ ಎಂದೆ.

‘ನೀವು ಹೇಳಿದ ಹಾಗೆಲ್ಲ ಮಾಡುವುದಕ್ಕಾಗು­ವುದಿಲ್ಲ, ನಿಮಗೆ ಆತನ ಮೇಲೆ ಅನುಮಾನವಿದ್ದರೆ ಲಿಖಿತ ದೂರು ದಾಖಲಿಸಿ, ವಿಚಾರಣೆ ನಡೆಸು­ತ್ತೇವೆ. ಸುಮ್ಮನೆ ನೀವು ಹೇಳಿದಿರೆಂದು ಠಾಣೆಗೆ ಕರೆತಂದು ಕೂರಿಸಿಕೊಂಡರೆ ನಾಳೆ ಹೆಚ್ಚು ಕಡಿಮೆ­ಯಾದರೆ ನಾವು ಮನೆಗೆ ಹೋಗಬೇಕಾಗುತ್ತದೆ. ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ, ಸುಮ್ಮನೆ ಮನೆಗೆ ಹೋಗಿ’ ಎಂದು ಉಪದೇಶಿಸಿ ಸಾಗ ಹಾಕಲು ನೋಡಿದರು. ನನಗೆ ತೀವ್ರ ನಿರಾಸೆ, ವ್ಯಥೆ ಅನಿಸಿತು. ಆ ಎ.ಎಸ್.ಐ. ಸೌಜನ್ಯಕ್ಕಾದರೂ ಎರಡು ಒಳ್ಳೆಯ ಮಾತನಾಡಬಹುದಿತ್ತು ಎನ್ನಿಸಿ ಬೇಸರದಿಂದ ಹೊರಟೆ.

ಅಷ್ಟರಲ್ಲಿ ನಮ್ಮ ಚರ್ಚೆಯನ್ನು ಗಮನಿಸುತ್ತಿದ್ದ ಇನ್ನೊಬ್ಬ ಎ.ಎಸ್.ಐ. ನನ್ನ ಬಳಿ ಬಂದು ‘ಸರ್, ತಪ್ಪು ತಿಳಿಯಬೇಡಿ, ನಮ್ಮ ವ್ಯವಸ್ಥೆಯೇ ಹೀಗೆ.  ಯಾರೂ ರಿಸ್ಕ್ ತೆಗೆದುಕೊಳ್ಳಲು ಸಿದ್ಧರಿರು­ವು­ದಿಲ್ಲ. ಲಿಖಿತ ದೂರು ಇಲ್ಲದೇ ಯಾರನ್ನಾದರೂ ಠಾಣೆಗೆ ಕರೆತಂದರೆ ಲೋಕಲ್ ಪುಢಾರಿಗಳು ಓಟ್‌ಬ್ಯಾಂಕ್ ಆಸೆಗಾಗಿ ತಂಡ ಕಟ್ಟಿಕೊಂಡು ಬಂದು ಗಲಾಟೆ ಮಾಡುತ್ತಾರೆ.

ಸಾಲದ್ದಕ್ಕೆ ಮಾನವ ಹಕ್ಕು ಆಯೋಗ, ಸುಪ್ರೀಂಕೋರ್ಟ್ ತೀರ್ಪು, ಕಾನೂನು ಮಾತನಾಡುತ್ತಾರೆ.  ನಾವು ಯಾರನ್ನಾದರೂ ಠಾಣೆಗೆ ಕರೆತಂದರೆ ಸವಿವರ­ವಾಗಿ ಮಾಹಿತಿಯನ್ನು ದಾಖಲಿಸಿ ತಕ್ಷಣ ಹಿರಿಯ ಅಧಿಕಾರಿಗಳಿಗೆ ರವಾನಿಸಬೇಕು. ಅಧಿಕೃತವಾಗಿ ಬಂಧಿಸಿದರೆ ಕೂಡಲೇ ನ್ಯಾಯಾಧೀಶರೆದುರು ಹಾಜರುಪಡಿಸಬೇಕು.

ಬಂಧಿಸಿದವರೆಲ್ಲರನ್ನೂ ಈ ಪ್ರಕ್ರಿಯೆಗೊಳಪಡಿಸಲು ತೀರಾ ಕಡಿಮೆ ಇರುವ ಸಿಬ್ಬಂದಿಗೆ ಬೇರೆ ಯಾವ ಕೆಲಸ ಮಾಡಲಾಗುವು­ದಿಲ್ಲ.  ಮಾಹಿತಿಗಳನ್ನೆಲ್ಲ ದಾಖಲೆ ಮಾಡಿದಲ್ಲಿ ನಮ್ಮ ಏರಿಯಾದ ಕ್ರೈಮ್ ರೇಟ್ ಹೆಚ್ಚಾಗುತ್ತಿದೆ  ಎಂದು ಹಿರಿಯ ಅಧಿಕಾರಿಗಳು ಸಂಬಂಧಿತ ಠಾಣಾಧಿಕಾರಿಗಳ ಮೇಲೆ ರೇಗುತ್ತಾರೆ.  ಹೀಗಾಗಿ­ಯೇ ಬಹುತೇಕ ಎಲ್ಲ ಠಾಣೆಗಳ ಸಬ್‌­ಇನ್‌­ಸ್ಪೆಕ್ಟರ್‌ ರೌಂಡ್ಸ್ ನೆಪದಲ್ಲಿ ಠಾಣೆಯೊಳಗೇ ಕೂರು­ವುದಿಲ್ಲ.  ನಿಮಗೆ, ಇಷ್ಟೆಲ್ಲ ಶ್ರಮಪಟ್ಟು ಒಬ್ಬ ಶಂಕಿತನನ್ನು ಪೊಲೀಸ್ ಸುಪರ್ದಿ­ಗೊಪ್ಪಿ­ಸಲು ಇಷ್ಟೆಲ್ಲ ಪಡಿಪಾಟಲು ಬೇಕೆ ಎನ್ನಿಸುವುದು ಸಹಜ. ನಿಮ್ಮ ನೋವು ನನಗರ್ಥ­ವಾಗುತ್ತದೆ.  ದಯವಿಟ್ಟು ಬೇಸರಿಸಿಕೊಳ್ಳಬೇಡಿ, ಆ ಮಹಿಳಾ ಪೇದೆಗೆ ನಾಳೆ ನಾನೇ ತಿಳಿಹೇಳು­ತ್ತೇನೆ’ ಎಂದು ಕನಿಷ್ಠ ಸೌಜನ್ಯದ ಮಾತುಗಳನ್ನಾಡಿ ಕಳಿಸಿದರು. 

ಈಗ ಹೇಳಿ, ಯಾವನೋ ಒಬ್ಬ ಗುರುತು ಪರಿಚಯವಿಲ್ಲದ ವ್ಯಕ್ತಿ ಅನುಮಾನಾಸ್ಪದವಾಗಿ ಓಡಾಡಿದರೆ, ಅಪರಾಧಕೃತ್ಯಗಳಲ್ಲಿ ತೊಡಗಿದ್ದು ಕಂಡುಬಂದರೆ ನಮ್ಮ ಪೊಲೀಸ್ ನಿಯಮಗಳು ಹೇಳಿದಂತೆ ನಾವೇ ಲಿಖಿತ ದೂರು ಸಲ್ಲಿಸಲು ಸಾಧ್ಯವೇ?  ಜವಾಬ್ದಾರಿಯುತ ನಾಗರಿಕರೆನ್ನಿಸಿ­ಕೊಂಡವರೇ ಪೊಲೀಸರಿಗೆ ಮಾಹಿತಿ ನೀಡಲು ಹಿಂದೇಟು ಹಾಕುತ್ತಿರುವ ಇಂದಿನ ದಿನಗಳಲ್ಲಿ ಸ್ವಪ್ರೇರಣೆಯಿಂದ - ಸ್ವಂತ ಖರ್ಚಿನಿಂದ ಕನಿಷ್ಠ ಮಾಹಿತಿಯನ್ನು ಸಕಾಲದಲ್ಲಿ ನೀಡಿದಾಗ ಸ್ವಯಂ ದೂರು ದಾಖಲಿಸಿಕೊಳ್ಳಲು, ಅಗತ್ಯ ಕಾನೂನು ಕ್ರಮ ಕೈಗೊಳ್ಳಲು ಪೊಲಿಸರಿಗೆ ಹಿಂಜರಿಕೆ ಏಕೆ?  ಈ ತೆರನಾದ ನಿಯಮಾವಳಿಗಳು, ಸನ್ನಿವೇಶಗಳು ಇರುವಾಗ ರಾಷ್ಟ್ರದಲ್ಲಿ ಅಪರಾಧಗಳ ಸಂಖ್ಯೆ ಕಡಿಮೆಯಾಗಲು ಸಾಧ್ಯವೇ?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT