ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಅಪರಾಧಮುಕ್ತ ಭಾರತ'ಕ್ಕಾಗಿ ಸೈಕಲ್ ಪರ್ಯಟನೆ!

Last Updated 6 ಆಗಸ್ಟ್ 2013, 6:04 IST
ಅಕ್ಷರ ಗಾತ್ರ

ಮೈಸೂರು: ಸುಮಾರು ಮೂರು ತಿಂಗಳಲ್ಲಿ ಬೈಸಿಕಲ್ ಮೇಲೆ 2,630 ಕಿಲೋಮೀಟರ್ ದೂರ ಕ್ರಮಿಸಿರುವ ಜ್ಞಾನೇಂದ್ರಸಿಂಗ್ ಮುಖದಲ್ಲಿ ಒಂಚೂರು ಆಯಾಸದ ಕಳೆ ಇರಲಿಲ್ಲ. ಇನ್ನೂ ಎಂಟು ಸಾವಿರ ಕಿಲೋಮೀಟರ್ ಸೈಕಲ್ ತುಳಿಯುವ ಗುರಿ ಮಾತ್ರ ಕಣ್ಣುಗಳಲ್ಲಿ ಅಚ್ಚೊತ್ತಿತ್ತು!

ಸೋಮವಾರ ಬೆನ್ನ ಮೇಲೊಂದು ದೊಡ್ಡ ಬ್ಯಾಗು, ಕಣ್ಣ ಮುಂದೆ ನಲಿಯುವ ತ್ರಿವರ್ಣ ಧ್ವಜ ಇಟ್ಟುಕೊಂಡು  ಹರ್ಕ್ಯುಲಸ್ ಬೈಸಿಕಲ್ ತುಳಿ ಯುತ್ತ ಮೈಸೂರಿಗೆ ಬಂದಿರುವ ಜ್ಞಾನೇಂದ್ರಸಿಂಗ್ ಮೂಲತಃ ಉತ್ತರಾಖಂಡ ರಾಜ್ಯದ ನೈನಿತಾಲ್ ಜಿಲ್ಲೆಯ ಕೃಷಿಕ. 43 ವರ್ಷದ ಈ ಅವಿವಾಹಿತ `ಅಪರಾಧರಹಿತ ಭಾರತ ನಿರ್ಮಾಣ' ಘೋಷಣೆಯೊಂದಿಗೆ ರಾಮೇಶ್ವರದಿಂದ ಸೈಕಲ್ ಯಾತ್ರೆ ಆರಂಭಿಸಿದ್ದಾರೆ. ಈ ಯಾತ್ರೆಯು ಅವರ ತವರೂರಿನವರೆಗೆ ನಡೆಯಲಿದೆ. ಏ. 29ರಂದು ರಾಮೇಶ್ವರದಿಂದ ಆರಂಭವಾಗಿರುವ ಅವರ ಯಾತ್ರೆಯು ಮಧುರೈ, ತಿರುವನವೇಲಿ, ನಾಗರಕೊಯಿಲ್, ತಿರುಚ್ಚಿ, ಕೊಚ್ಚಿನ್, ಕೊಯಿಕೋಡ್, ಕಾಸರಗೋಡು, ಮಂಗಳೂರು, ಉಡುಪಿ, ಶೃಂಗೇರಿ, ಚಿಕ್ಕಮಗಳೂರು, ಹಾಸನ ಮಾರ್ಗವಾಗಿ ಭಾನುವಾರ ರಾತ್ರಿ ಮೈಸೂರು ತಲುಪಿದ್ದಾರೆ.

ಸೋಮವಾರ ಬೆಳಿಗ್ಗೆ `ಪ್ರಜಾವಾಣಿ'ಯೊಂದಿಗೆ ಮಾತನಾಡಿದ ಅವರು, `ನನಗೆ ಮೊದಲಿನಿಂದಲೂ ಭಾರತವನ್ನು ಸೈಕಲ್ ಪರ್ಯಟನೆ ಮಾಡುವ ಹವ್ಯಾಸವಿದೆ. ಇದು ಐದನೇ ಬಾರಿ ನಾನು ಪರ್ಯಟನೆ ಮಾಡುತ್ತಿದ್ದೇನೆ. ಎಲ್ಲ ದೇಶಗಳಲ್ಲಿಯೂ ಅಪರಾಧ ಚಟುವಟಿಕೆಗಳು ಕಡಿಮೆಯಾದರೆ ಮಾತ್ರ ವಿಶ್ವಶಾಂತಿ ಸಾಧ್ಯ ಎಂಬ ಸಂದೇಶವನ್ನು ಈ ಬಾರಿ ಸಾರುತ್ತಿದ್ದೇನೆ. ಎರಡು ಆಥವಾ ಮೂರು ದಿನ ಇಲ್ಲಿದ್ದು, ನಂತರ ಂಗಳೂರು, ಪಾಂಡಿಚೇರಿ, ಚೆನ್ನೈ, ಹೈದರಾಬಾದ್, ನಾಗಪುರ, ರಾಯಪುರ, ಭುವನೇಶ್ವರ್, ಕೋಲ್ಕತ್ತ, ರಾಂಚಿ, ಪಾಟ್ನಾ, ಲಖನೌ, ನವದೆಹಲಿ, ಡೆಹರಾಡೂನ್, ರಾಮನಗರ ಮಾರ್ಗವಾಗಿ ನನ್ನ ತವರೂರು ಕಾಶೀಂಪುರ ಸೇರಿಕೊಳ್ಳುತ್ತೇನೆ' ಎಂದು ವಿವರಿಸಿದರು.

ವಿಶ್ವಶಾಂತಿಗಾಗಿ, ಕೋಮು ಸೌಹಾರ್ದತೆ, ರಾಷ್ಟ್ರೀಯ ಭಾವೈಕ್ಯತೆ ಘೋಷಣೆಗಳೊಂದಿಗೆ ಈಗಾಗಲೇ ಅವರು ಪರ್ಯಟನೆ ಮಾಡಿದ್ದಾರೆ. ಈ ಬಾರಿ ಅವರು ಭಾರತದಲ್ಲಿ ಅಪರಾಧ ಮುಕ್ತ ಸಮಾಜ ನಿರ್ಮಾಣವಾಗಬೇಕು ಎಂಬ ಕಳಕಳಿಯೊಂದಿಗೆ ಪರ್ಯಟನೆ ಆರಂಭಿಸಿದ್ದಾರೆ.

`ನನ್ನ ಯಾತ್ರೆಯುದ್ದಕ್ಕೂ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಾನು ಶಿಕ್ಷಕನಾಗಿಯೂ ಕಾರ್ಯನಿರ್ವಹಿಸಿದ್ದೆ. ನನಗೆ ಮೂವರು ಸಹೋದರರು ಇದ್ದಾರೆ. ತಾಯಿಯನ್ನು ಅವರೇ ನೋಡಿಕೊಳ್ಳುತ್ತಾರೆ. ನನ್ನ ಯಾತ್ರೆಯ ಸಂದರ್ಭದಲ್ಲಿ ವಸತಿಗೆ ಕೆಲವು ಬಾರಿ ಹೋಟೆಲ್‌ಗಳಲ್ಲಿ ಉಳಿಯುತ್ತೇನೆ. ಇಲ್ಲದಿದ್ದರೆ ಯಾವುದಾದರೂ ಆಶ್ರಮ ಸಿಕ್ಕರೆ ಅಲ್ಲಿ ತಂಗುತ್ತೇನೆ. ಕೆಲವು ಸ್ನೇಹಿತರು ಹಣಕಾಸಿನ ಸಹಾಯ ಮಾಡಿದ್ದಾರೆ. ಉಳಿದಂತೆ ನನ್ನ ಸ್ವಂತ ದುಡ್ಡಿನಲ್ಲಿಯೇ ನಿರ್ವಹಿಸುತ್ತಿದ್ದೇನೆ' ಎಂದು ಜ್ಞಾನೇಂದ್ರಸಿಂಗ್ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT