ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪರೂಪದ ಕುಲಪತಿ ನಿವೃತ್ತಿ

Last Updated 8 ಜುಲೈ 2012, 19:30 IST
ಅಕ್ಷರ ಗಾತ್ರ

ಹಾವೇರಿ ಜಿಲ್ಲೆ ಶಿಗ್ಗಾವಿ ತಾಲ್ಲೂಕಿನ ಬಂಕಾಪುರ ಗ್ರಾಮದ ಡಾ. ಎ.ಎಂ. ಪಠಾಣ ಅವರು ಶಿಕ್ಷಣ ಕ್ಷೇತ್ರದಲ್ಲಿ ಗುರುತಿಸಲ್ಪಟ್ಟ ಅಪರೂಪದ ಕುಲಪತಿ. ಮೂರು ವಿವಿಗಳಲ್ಲಿ ಸೇವೆ ಸಲ್ಲಿಸಿ ಗಮನಾರ್ಹ ಕಾರ್ಯನಿರ್ವಹಿಸಿದ ಹಿರಿಮೆ ಅವರದು.

ಧಾರವಾಡದ ಕರ್ನಾಟಕ ವಿವಿಯಲ್ಲಿ ಎರಡು ಅವಧಿ (1996-2002), ಹೈದರಾಬಾದ್‌ನ ಮೌಲಾನಾ ಅಜಾದ್ ರಾಷ್ಟ್ರೀಯ ವಿವಿ (2004-2009), ಗುಲ್ಬರ್ಗ ಬಳಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (2009ರಿಂದ) ಕುಲಪತಿ ಹುದ್ದೆ ಅಲಂಕರಿಸಿ ವಿವಾದವಿಲ್ಲದೆ ವಿವಿ ಮುನ್ನಡೆಸಿ ಈಗ ನಿವೃತ್ತರಾಗಿದ್ದಾರೆ.

ಜೂನ್ 29, 1942ರಲ್ಲಿ ಜನನ. 1ರಿಂದ 4ನೇ ತರಗತಿವರೆಗೂ ಶಿಗ್ಗಾವಿಯಲ್ಲಿ ಓದು, 5ರಿಂದ ಸ್ನಾತಕೋತ್ತರದವರೆಗೂ ಧಾರವಾಡ, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಾಯೋಗಿಕ ಭೂಗರ್ಭಶಾಸ್ತ್ರ (ಜಿಯೋಲಾಜಿ)ದಲ್ಲಿ ಪಿಎಚ್‌ಡಿ ಪೂರೈಸಿ ಅದೇ ವಿವಿಯಲ್ಲಿ ಬೋಧಕ ವೃತ್ತಿ ಆರಂಭಿಸಿದರು.

ಬದುಕಿಗೆ ತಿರುವು ಕೊಟ್ಟ ಪ್ರಸಂಗ- ಎಸ್ಸೆಸ್ಸೆಲ್ಸಿ ಮುಗಿದ ನಂತರ ಪಿಯುಸಿ ಸೇರಿಕೊಳ್ಳಲು ಧಾರವಾಡದ ಕೆಸಿಡಿ ಕ್ಯಾಂಪಸ್‌ಗೆ ಕಾಲಿಟ್ಟಾಗ, ಕಲಾ ವಿಭಾಗದ ಪ್ರವೇಶ ಶುಲ್ಕ ತುಂಬಲು ಸರತಿಸಾಲು ಉದ್ದವಾಗಿದ್ದರಿಂದ ವಿಜ್ಞಾನ ವಿಭಾಗದ ಸರತಿಯಲ್ಲಿ ನಿಂತುಕೊಂಡಿದ್ದು! 1963ರಲ್ಲಿ ಮೊದಲ ರ‌್ಯಾಂಕ್‌ನೊಂದಿಗೆ ಬಿಎಸ್ಸಿ ಪೂರೈಸಿ, ಡಾ. ಡಿ.ಸಿ. ಪಾವಟೆ ಪ್ರಶಸ್ತಿಗೆ ಪಾತ್ರರಾದರು. ಎಂಎಸ್ಸಿಯಲ್ಲಿ ಚಿನ್ನದ ಪದಕ ಪಡೆದರು.

ಕರ್ನಾಟಕದ ಶೈಕ್ಷಣಿಕ ಇತಿಹಾಸದಲ್ಲಿ 10 ವರ್ಷ ದೀರ್ಘಾವಧಿ ಕುಲಪತಿ ಹುದ್ದೆ ನಿಭಾಯಿಸಿದ ಕೀರ್ತಿ ಡಾ. ಡಿ.ಸಿ. ಪಾವಟೆ ಅವರದ್ದಾಗಿತ್ತು. ಇದೀಗ ಡಾ. ಎ.ಎಂ. ಪಠಾಣ ಅವರು 14 ವರ್ಷ ಆರು ತಿಂಗಳು ಕುಲಪತಿಯಾಗಿ ನೂತನ ದಾಖಲೆ ಬರೆದಿದ್ದಾರೆ. ರಾಜ್ಯದಲ್ಲೆ ಮೊದಲನೆಯದಾಗಿ ಗುಲ್ಬರ್ಗದಲ್ಲಿ ಆರಂಭವಾದ `ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ~ದ ಸಂಸ್ಥಾಪನಾ ಕುಲಪತಿಯಾಗಿ ವಿವಿಗೆ ಭದ್ರ ಬುನಾದಿ ಹಾಕಿಕೊಟ್ಟ ಬಗ್ಗೆ `ಪ್ರಜಾವಾಣಿ~ಯೊಂದಿಗೆ ಅವರು ಹಂಚಿಕೊಂಡ ಕೆಲವು ವಿಚಾರಗಳು ಇಲ್ಲಿವೆ...

ಕೇಂದ್ರೀಯ ವಿವಿ ಸ್ಥಾಪನಾ ಕುಲಪತಿಯಾಗಿದ್ದರ ಬಗ್ಗೆ ನಿಮ್ಮ ಅನಿಸಿಕೆ?

- ಇದು ನನ್ನ ಅದೃಷ್ಟ. ಗುಲ್ಬರ್ಗ ಪ್ರಾದೇಶಿಕ ಆಯುಕ್ತ ರಜನೀಶ್ ಗೋಯಲ್, ಐಎಎಸ್ ಅಧಿಕಾರಿ ವಿ.ಪಿ. ಬಳಿಗಾರ್ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿದ್ದ ಸುಧಾಕರ್ ರಾವ್ ಅವರ ಸೂಚನೆ ಮೇರೆಗೆ ರಾಷ್ಟ್ರಪತಿ ಭವನಕ್ಕೆ ಸ್ವ-ವಿವರ ಕಳುಹಿಸಿದ್ದೆ. ಬಂದಿದ್ದ ಎಲ್ಲ ಅರ್ಜಿಗಳನ್ನು ಪರಿಶೀಲಿಸಿದ ಆಯ್ಕೆ ಸಮಿತಿಯು ನನ್ನ ಹೆಸರನ್ನು ಆಯ್ಕೆ ಮಾಡಿತು. ಕಟ್ಟಡವೆ ಇಲ್ಲದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಂಪೂರ್ಣ ರೂಪುರೇಷೆ ತಯಾರಿಸುವುದು ಒಂದು ಸವಾಲು ಎಂದುಕೊಂಡು ಬಂದೆ.

ಈ ನೂತನ ಜವಾಬ್ದಾರಿ ವೇಳೆ, ಬೇಸರ ಹುಟ್ಟಿಸಿದ ವಿಚಾರಗಳು ಯಾವವು?

- ಈಗ ಗುಲ್ಬರ್ಗ ವಿಶ್ವವಿದ್ಯಾಲಯದ ಕಟ್ಟಡ ಒಂದು ಭಾಗದಲ್ಲಿ ಬಾಡಿಗೆ ಇದ್ದೇವೆ. ಕೇಂದ್ರೀಯ ಕಟ್ಟಡ ಕಾಮಗಾರಿ ಇನ್ನೂ ಪ್ರಗತಿಯಲ್ಲಿದೆ. ನನ್ನ ಅವಧಿಯಲ್ಲಿ ಅಲ್ಲಿಗೆ ಸ್ಥಳಾಂತರವಾಗಲು ಸಾಧ್ಯವಾಗಲಿಲ್ಲ ಎನ್ನುವುದು ಒಂದು ಬೇಸರ. ಪಿಯುಸಿಯಿಂದ ಎಂಎ ವರೆಗೂ ಓದಲು ಅನುಕೂಲತೆ ಕಲ್ಪಿಸಲು `ಚಾಯ್ಸ ಬೇಸ್ಡ್ ಕ್ರೇಡಿಟ್ ಸಿಸ್ಟ್‌ಮ್ (ಸಿಬಿಸಿಎಸ್) ಪದ್ಧತಿ ಬಗ್ಗೆ ವಿದ್ಯಾರ್ಥಿಗಳಲ್ಲಿ ಸಾಕಷ್ಟು ಅರಿವಿನ ಕೊರತೆ ಇದೆ ಎನ್ನುವುದು ಮತ್ತೊಂದು ಬೇಸರದ ವಿಷಯ. ದೆಹಲಿ, ಚೆನ್ನೈ, ಹೈದರಾಬಾದ್ ಪ್ರತಿಯೊಂದು ನಗರದಲ್ಲೂ ಈ ರೀತಿಯ ಶಿಕ್ಷಣಕ್ಕೆ ತುಂಬಾ ಬೇಡಿಕೆ ಇದೆ.

ಹೈದರಾಬಾದ್ ಕರ್ನಾಟಕ ಭಾಗದ ಅಭಿವೃದ್ಧಿಗೆ ಕೇಂದ್ರೀಯ ವಿಶ್ವವಿದ್ಯಾಲಯದ ಕೊಡುಗೆ?

- ಈ ಭಾಗದ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣಕ್ಕಾಗಿ ದೂರದ ಪ್ರದೇಶಕ್ಕೆ ಹೋಗುವುದು ತಪ್ಪುತ್ತದೆ. ಅಲ್ಲದೆ ದೇಶದಾದ್ಯಂತ ವಿದ್ಯಾರ್ಥಿಗಳು ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಬರುವುದರಿಂದ ಕ್ಯಾಂಪಸ್ ವಾತಾವರಣವೇ ವಿಭಿನ್ನವಾಗಿ ಕಾಣುತ್ತದೆ. ಪರೋಕ್ಷವಾಗಿ ಈ ಭಾಗದಲ್ಲಿ ಉದ್ಯೋಗಾವಕಾಶ ಹೆಚ್ಚಳವಾಗುವುದರೊಂದಿಗೆ ಜನಜೀವನ ಸುಧಾರಣೆ ಸಾಧ್ಯವಾಗಲಿದೆ.

ಕೇಂದ್ರೀಯ ವಿವಿಗೂ ರಾಜ್ಯದ ವಿವಿಗಳಿಗೂ ಏನು ವ್ಯತ್ಯಾಸ?

- ಕೇಂದ್ರೀಯ ವಿವಿಗೆ ಅನುದಾನದ ಸಮಸ್ಯೆ ಇರುವುದಿಲ್ಲ. ಸಂಪೂರ್ಣ ಸ್ವಾಯತ್ತತೆ ಇರುವುದರಿಂದ ನಿರ್ಧಾರ ಕೈಗೊಳ್ಳುವುದು ಹಾಗೂ ಅನುಷ್ಠಾನಗೊಳಿಸುವುದು ತೀವ್ರವಾಗಿ ನಡೆಯುತ್ತದೆ. ಆಕಾಡೆಮಿಕ್ ಕೌನ್ಸಿಲ್ ಹಾಗೂ ಎಕ್ಸಿಕ್ಯುಟಿವ್ ಕೌನ್ಸಿಲ್‌ಗಳನ್ನು ರಾಷ್ಟ್ರಪತಿಗಳೇ ನೇಮಕ ಮಾಡುವುದರಿಂದ ಕುಲಪತಿ ಹುದ್ದೆಯ ಮೇಲೆ ಯಾವುದೇ ಪ್ರಭಾವ ಕೆಲಸ ಮಾಡುವುದಿಲ್ಲ.

ಕುಲಪತಿ ಹುದ್ದೆಗಳು ಈಚೆಗೆ ಭಾರಿ ವಿವಾದಕ್ಕೆ ಕಾರಣವಾಗುತ್ತಿವೆ. ಈ ಬಗ್ಗೆ ನಿಮ್ಮ ಸಲಹೆ?

- ಬೇರೆ ವಿಶ್ವವಿದ್ಯಾಲಯದ ಕುಲಪತಿ ಬಗ್ಗೆ ಯಾವುದೇ ಹೇಳಿಕೆ ಕೊಡುವುದಿಲ್ಲ. ಆದರೆ ಕುಲಪತಿ ನೇಮಕ ಪಾರದರ್ಶಕವಾಗಿರಬೇಕು. ಅದು ಸಂಪೂರ್ಣ ಮೆರಿಟ್ ಆಧಾರಿತವಾಗಿರಬೇಕು. ಸರ್ಕಾರವು ಕುಲಪತಿ ನೇಮಕದಲ್ಲಿ ತಲೆಹಾಕಬಾರದು.

ಬಾಡಿಗೆ ಕಟ್ಟಡದಲ್ಲಿರುವ ಕರ್ನಾಟಕ ಕೇಂದ್ರೀಯ ವಿವಿಯಲ್ಲಿ ಏನೇನಿದೆ?

-ಸದ್ಯ ಮೂರು ಕಲಾ ಹಾಗೂ ಮೂರು ವಿಜ್ಞಾನ ವಿಭಾಗದಲ್ಲಿ ಇಂಟಿಗ್ರೆಟೆಡ್ ಎಂಎ, ಎಂಎಸ್ಸಿ ಕೋರ್ಸ್‌ಗಳಿವೆ. 13 ಸ್ನಾತಕೋತ್ತರ ಕೋರ್ಸ್‌ಗಳಿವೆ. 10 ವಿಷಯಗಳಲ್ಲಿ ಸಂಶೋಧನೆಗೆ ಅವಕಾಶವಿದೆ. ಪಿಯುಸಿ ವಿದ್ಯಾರ್ಥಿಗಳಿಗಾಗಿ ಎರಡು ಡಿಪ್ಲೋಮಾ ಕೋರ್ಸ್ ನಡೆಸಲಾಗುತ್ತಿದೆ.

ಸ್ವಂತ ಕ್ಯಾಂಪಸ್‌ಗೆ ಸ್ಥಳಾಂತರವಾದ ನಂತರ ಏನು ಬದಲಾವಣೆ ಬರಲಿದೆ?

-ಗುಲ್ಬರ್ಗದಿಂದ ಆಳಂದ ರಸ್ತೆಯಲ್ಲಿರುವ ಕಡಗಂಚಿ ಬಳಿ 650 ಎಕರೆ ಜಾಗದಲ್ಲಿ ಕೇಂದ್ರೀಯ ವಿವಿ ನೂತನ ಕಟ್ಟಡ ಕಾಮಗಾರಿ ನಡೆಯುತ್ತಿದೆ. ಒಟ್ಟು ರೂ. 293 ಕೋಟಿ ವೆಚ್ಚದ ಕಾಮಗಾರಿ ಜಾರಿಯಲ್ಲಿದ್ದು, ಅನುದಾನದ ಕೊರತೆಯಿಲ್ಲ. ಆರು ತಿಂಗಳಲ್ಲಿ ನೂತನ ಕ್ಯಾಂಪಸ್ ಲಭ್ಯವಾಗಲಿದೆ. ವಿಜ್ಞಾನದ ವಿಷಯಗಳನ್ನು ಹೊಸ ಕ್ಯಾಂಪಸ್‌ನಲ್ಲಿ ಆರಂಭಿಸಲು ಎಲ್ಲ ರೀತಿಯ ರೂಪುರೇಷೆ ಸಿದ್ಧವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT