ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪರೂಪದ ಕೊಳಗಳ ಊರು ಕೋಣಂದೂರು

Last Updated 16 ಫೆಬ್ರುವರಿ 2012, 7:45 IST
ಅಕ್ಷರ ಗಾತ್ರ

ಅತ್ತ ದಟ್ಟ ಮಲೆನಾಡಲ್ಲದ, ಇತ್ತ ಬಯಲು ಸೀಮೆ ಎನ್ನಿಸಿಕೊಳ್ಳಲು ಒಪ್ಪದ ಮಲೆನಾಡಿನ  ಕಾನನದಂಚಿನ ಕೋಣಂದೂರು ವಿಶಾಲ ಬಯಲು ಅಂಗಳದಲ್ಲಿ ನಿರ್ಮಾಣಗೊಂಡ ಹೋಬಳಿ ಕೇಂದ್ರವಾಗಿದೆ.

ತಾಲ್ಲೂಕು ಕೇಂದ್ರವಾದ ತೀರ್ಥಹಳ್ಳಿಯನ್ನು ಬಿಟ್ಟರೆ ಅತೀ ದೊಡ್ಡ ಪೇಟೆಯನ್ನೊಳಗೊಂಡ ಕೋಣಂದೂರು ತನ್ನದೇ ಆದ ಹಲವು ವಿಶಿಷ್ಟತೆಗಳನ್ನು ಒಳಗೊಂಡಿದೆ. ಅಗ್ರಹಾರಗಳನ್ನೇ ಮುಖ್ಯವಾಗಿ ಹೊಂದಿರುವ ಈ ಪ್ರದೇಶಕ್ಕೆ ಅಗ್ರಹಾರ ಹೋಬಳಿ ಎನ್ನಲಾಗುತ್ತದೆ.

ಕೋಣಂದೂರು ಗ್ರಾಮ ಪಂಚಾಯ್ತಿ ಎಂಟು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ದೊಡ್ಡ ಗ್ರಾಮ ಪಂಚಾಯ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಒಕ್ಕಲಿಗರು, ಮುಸ್ಲಿಮರು, ಬಣಗಾರರು, ಸೊನಗಾರರು, ದೈವಜ್ಞಬ್ರಾಹ್ಮಣರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು, ಮಡಿವಾಳರು, ಬೋವಿಜನಾಂಗದವರು, ಈಡಿಗರು, ಕ್ರಿಶ್ಚಿಯನ್ನರು ಸೇರಿದಂತೆ ಅನೇಕ ಚಿಕ್ಕ ಪುಟ್ಟ ಜಾತಿಗಳ ಹಲವು ಸಮುದಾಯದ ಜನರನ್ನು ಒಳಗೊಂಡಿದೆ.

ಗ್ರಾಮ ಹೆಸರಿನ ಹಿನ್ನೆಲೆ 
ಈ ಪ್ರದೇಶದಲ್ಲಿ ಹಲವಾರು ಜೋಡಿಕೆರೆಗಳಿವೆ. ಕೊಳಗಳ ಊರು ಕ್ರಮೇಣ ಕೋಣಂದೂರಾಯಿತು. `ಕೊಳಂದೂರು~ ಕೊಳಗಳಿಂದ ಸುತ್ತುವರೆದಿರುವುದರಿಂದ ಕೋಣಂದೂರು ಎಂಬ ಹೆಸರು ಬಂತು ಎಂದು ಹಿರಿಯ ಸಮಾಜವಾದಿ, ಮಾಜಿ ಶಾಸಕ ಕೋಣಂದೂರು ಲಿಂಗಪ್ಪ ಹೇಳುತ್ತಾರೆ. ಕಿಟಲ್ ಪದ ಕೋಶದಲ್ಲಿಯೂ ಕೂಡ ಇದೇ ಮಾಹಿತಿ ದಾಖಲಾಗಿದೆ ಎನ್ನುತ್ತಾರೆ ಅವರು.

ಇದು ಕೋಣಂದು ಊರು, ಕೋಣನಕಲ್ಲಿನ ಭೂತ ಇಲ್ಲಿದೆ. ಇದು ಒಕ್ಕಲಿಗರ ಆರಾಧ್ಯ ದೈವ. ಕೋಣನ ತಲೆಕಟ್ಟೆ ಮಕ್ಕಿಬೈಲಿನಲ್ಲಿದ್ದು  ಹೆಚ್ಚು ಸಾಕ್ಷ್ಯ ಒದಗಿಸಿದೆ ಎಂದು ಹಾದಿಗಲ್ಲು ರಾಘವೇಂದ್ರ ಹೇಳುತ್ತಾರೆ. ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಮಹಿಷಾಸುರ ಬಲಿಪಡೆದ ಕೋಣನ ತಲೆ ಇಲ್ಲಿ ಬಂದು ಬಿದ್ದಿದೆ. ಹಾಗಾಗಿ ಈ ಊರಿಗೆ ಕೋಣಂದೂರು ಎಂಬ ಹೆಸರು ಬಂತು ಎಂಬ ಅಭಿಪ್ರಾಯವನ್ನು ಸ್ಥಳೀಯರು ವ್ಯಕ್ತಪಡಿಸುತ್ತಾರೆ.

ಕೋಣನ ಕಟ್ಟೆ
ಊರಿನ ಹೆಸರಿಗೆ ಕಾರಣವಾದ ಕೋಣನ ಕಟ್ಟೆ ಮಕ್ಕಿಬೈಲಿನಲ್ಲಿದೆ. ಕಲ್ಲಿನ ಕೋಣನ ರುಂಡಕ್ಕೆ ಪೂಜೆ ಪುನಸ್ಕಾರಗಳು ನಡೆಯುತ್ತವೆ, ಗ್ರಾಮ ಹಬ್ಬವಾಗಿ  ಹೋಳಿ ಹುಣ್ಣಿಮೆ ಸಂದರ್ಭದಲ್ಲಿ `ದೊಂಬರ ಹಬ್ಬ~ ನಡೆಯುತ್ತದೆ. ಒಕ್ಕಲಿಗರ ಆರಾಧ್ಯ ದೈವವಾದ ಕೋಣನ ಕಟ್ಟೆ ಎಲ್ಲ ಸಮುದಾಯದ ಭಕ್ತರನ್ನು ಒಳಗೊಂಡಿದೆ.

 ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ ಶಿಥಿಲಗೊಂಡಿದ್ದು ಈಗ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದೆ. ಈ ದೇವಸ್ಥಾನ ಸುಮಾರು 800 ಎಕರೆ ಕೃಷಿ ಭೂಮಿಯನ್ನು ಹೊಂದಿತ್ತು ಕ್ರಮೇಣ ಭೂ ಸುಧಾರಣೆಯಲ್ಲಿ ಸಾಗುವಳಿದಾರರ ಆಸ್ತಿಯಾಯ್ತು ಎನ್ನುತ್ತಾರೆ. ಸ್ಥಳೀಯರು.
ಬೃಹನ್ಮಠ, ಬಸವೇಶ್ವರ ದೇವಸ್ಥಾನ, ಬನಶಂಕರಿ ದೇವಸ್ಥಾನಗಳು ಪ್ರಮುಖ ಧಾರ್ಮಿಕ ಕೇಂದ್ರಗಳಾಗಿವೆ.

ದೊಡ್ಡಕೆರೆ: ಕುಮುದ್ವತಿ ನದಿಯ ಮೂಲ ಈ ದೊಡ್ಡಕೆರೆ. ಇಲ್ಲಿಂದ ಹರಿವ ನೀರು ಅಂಜನಾಪುರ ಜಲಾಶಯ ಸೇರುತ್ತದೆ ಎನ್ನುತ್ತಾರೆ ಸ್ಥಳೀಯರಾದ ರಾಜು ಅವರು. ನೂರಾರು ಎಕರೆ ಜಮೀನಿಗೆ ನೀರುಣಿಸಬಲ್ಲ ಇಲ್ಲಿನ ದೊಡ್ಡಕೆರೆ ಒತ್ತುವರಿ ಕಾಟದಿಂದ ತನ್ನ ಒಡಲಲ್ಲಿ ನೀರನ್ನು ಹಿಡಿದಿಡಲು ಹೆಣಗಾಡುತ್ತಿದೆ. ಸುಮಾರು 48 ಎಕರೆ ವಿಸ್ತೀರ್ಣದ ಕೆರೆ ಕೇವಲ ನಿರ್ವಹಣೆ ಕೊರತೆ, ಒತ್ತುವರಿ ಕಾಟದಿಂದಾಗಿ ಇಂದು ಕಿರಿದಾಗಿದೆ.

ಅತ್ಯಂತ ಆಕರ್ಷಕವಾಗಿ ಕಾಣುವ ಬೃಹತ್ ಕೆರೆಯಲ್ಲಿ ಪೂರ್ವಿಕರು ಗುಮ್ಮನಗುಡ್ಡದಿಂದ ಕಂಚಿನ ತೇರನ್ನು ಎಳೆಯುತ್ತಿರುವಾಗ ಅದು ಕೆರೆಯಲ್ಲಿ ಮುಳುಗಿದೆ ಎಂದು ನಂಬಲಾಗಿದೆ. ಕೆರೆಯ ಆಳವನ್ನು ಇದುವರೆವಿಗೂ ಯಾರೂ ಕಂಡಿಲ್ಲ ಎನ್ನುತ್ತಾರೆ ಇಲ್ಲಿನ ಜನರು.

ಕ್ರಿಯಾಶೀಲ ಗ್ರಾಮ ಪಂಚಾಯ್ತಿ
ಸ್ವಚ್ಛಗ್ರಾಮ, ಸುವರ್ಣ ಗ್ರಾಮ, ನಿರ್ಮಲ ಗ್ರಾಮ ಪುರಸ್ಕಾರ ಪಡೆದ ಪಂಚಾಯ್ತಿಯಲ್ಲಿ 13 ಮಂದಿ ಕ್ರಿಯಾಶೀಲ ಸದಸ್ಯರನ್ನು ಹೊಂದಿದೆ. ನಾಲ್ಕು ಭಾಗಗಳಾಗಿ ವಿಂಗಡಣೆಯಾದ ಪಂಚಾಯ್ತಿಯಲ್ಲಿ ಮಕ್ಕಿಬೈಲು, ಕೆರೆಕೊಡಿಗೆ, ಕುಕ್ಕನಕೊಡಿಗೆ, ಕಲ್ಗದ್ದೆ, ಕಲ್ಗುಡ್ಡ, ಅಗಸರಕಟ್ಟೆ, ಹಲವನಹಳ್ಳಿ, ಕೋಣಂದೂರು ಪೇಟೆ, ಸೊನಗಾರ ಕೇರಿ, ಕೋಲಿಗೆ, ಹಾಲೇಸರದಿಂದ ಪ್ರತಿನಿಧಿಗಳು ಆಯ್ಕೆಯಾಗಿದ್ದಾರೆ. 

 ಬಡವರಿಗೆ ಹಕ್ಕುಪತ್ರ ನೀಡದೇ ಇರುವುದರಿಂದ ಮನೆಗಳನ್ನು ನಿರ್ಮಿಸಿಕೊಡಲು ಗ್ರಾಮ ಪಂಚಾಯ್ತಿಯಿಂದ ಸಾಧ್ಯವಾಗುತ್ತಿಲ್ಲ. ಕುಡಿಯುವ ನೀರಿನ ಸಮಸ್ಯೆ ಹೆಚ್ಚಿದೆ. ಕೊಳವೆ ಬಾವಿಗಳು ವಿಫಲವಾಗುತ್ತಿವೆ. ಅಂತರ್ಜಲ ಕುಸಿದಿದೆ. ಕುಡಿಯಲು ನೀರು, ವಾಸಕ್ಕೆ ಮನೆ ಬೇಡಿಕೆ ಹೆಚ್ಚಿದೆ. ಆದರೆ ಅದನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ ಎಂಬ ಕೊರಗನ್ನು ಗ್ರಾಮ ಪಂಚಾಯ್ತಿ ಅಧ್ಯಕ್ಷ ಕೋಣಂದೂರು ಪೂರ್ಣೇಶ್ ವ್ಯಕ್ತಪಡಿಸುತ್ತಾರೆ.

ತುಂಗಾನದಿಯಿಂದ ನೀರನ್ನು ತರುವ ಯೋಜನೆ ಚಾಲ್ತಿಯಲ್ಲಿದೆ. ಸುಮಾರು ರೂ.12 ಕೋಟಿ ವೆಚ್ಚದ ಈ ಯೋಜನೆಯಿಂದ ನೆರಟೂರು, ಗುಡ್ಡೇಕೊಪ್ಪ, ಆರಗ, ಕೋಣಂದೂರು, ಹಾದಿಗಲ್ಲು ಹಾಗೂ ಹುಂಚದ ಕಟ್ಟೆ ಗ್ರಾಮ ಪಂಚಾಯ್ತಿಗಳಿಗೆ ನೀರನ್ನು ಒದಗಿಸಬಹುದಾಗಿದೆ. ಈಗಾಗಲೇ ಯೋಜನೆಗೆ ನೀಲನಕ್ಷೆ ಸಿದ್ಧಗೊಂಡಿದೆ ಎನ್ನುತ್ತಾರೆ ಅವರು.

ಗ್ರಾಮ ಪಂಚಾಯ್ತಿಯಲ್ಲಿ ರಾಜಾಸಾಹೇಬ್, ಸುಬ್ಬರಾವ್, ಚಿನ್ನಪ್ಪಗೌಡ, ಬಸಪ್ಪಗೌಡ ಅವರು ಉತ್ತಮ ಆಡಳಿತ ನಡೆಸಿದ್ದಾರೆ. ಅವರು ಹಾಕಿಕೊಟ್ಟ ದಾರಿಯಲ್ಲಿ ಸಾಗಬೇಕಾಗಿದೆ ಎನ್ನುತ್ತಾರೆ ಪೂರ್ಣೇಶ್.

ಸ್ಮರಣೀಯರು: ಕೋಣಂದೂರಿನ ಸಮಗ್ರ ಅಭಿವೃದ್ಧಿಗೆ ಗಂಗೇಗೌಡರು, ಭೀಮನಕೋಣೆ ಮಠ, ಕಾರಕೋಡ್ಲು ನರಹರಿರಾಯರು, ಹಲವನಹಳ್ಳಿ ಪಟೇಲ್ ಮಲ್ಲಪ್ಪನವರು, ಎಂ.ಕೆ. ಶ್ರೀನಿವಾಸರಾವ್ ತಮ್ಮ ಭೂಮಿಯನ್ನು ನೀಡಿದ್ದಾರೆ.  ಉದ್ದಾದೇವರ ಮಠದ ಪಂಚಾಕ್ಷರಯ್ಯ ಅವರು ಶೈಕ್ಷಣಕಿ ಪ್ರಗತಿಗಾಗಿ ರಾಷ್ಟ್ರೀಯ ಶಿಕ್ಷಣ ಸಂಸ್ಥೆಗೆ 40 ಎಕರೆ ಭೂಮಿ ನೀಡಿ ಸಹಕರಿಸಿದ್ದಾರೆ. ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಐಕ್ಯತೆಗಾಗಿ ಶ್ರಮಿಸಿದ ಡಾ.ರಾಜಾಸಾಹೇಬ್, ಹಾದಿಗಲ್ಲು ರಾಮಪ್ಪ, ಶ್ರೀಪತಿರಾವ್ `ಉದಯರವಿ~ ಕಲಾವಿದರ ತಂಡ ನಿರ್ಮಿಸಿದ್ದರು.

 ಸಹಕಾರ ಕ್ಷೇತ್ರಕ್ಕೆ ತಮ್ಮಯ್ಯಗೌಡರು ಕೊಡುಗೆ ನೀಡಿದ್ದಾರೆ. ಇಲ್ಲಿನ ಶಾಲೆಯಲ್ಲಿ ಒಂದು ವರ್ಷ ಹಾದಿಗಲ್ಲು ನೀಲಕಂಠ ಭಟ್ಟರ ಮನೆಯಲ್ಲಿದ್ದುಕೊಂಡು ಜ್ಞಾನ ಪೀಠ ಪುರಸ್ಕೃತ ಸಾಹಿತಿ ಡಾ.ಯು.ಆರ್. ಅನಂತಮೂರ್ತಿ ವ್ಯಾಸಂಗ ಮಾಡಿದ್ದಾರೆ. ಸಮಾಜವಾದಿ ಚಳವಳಿಗಳ ಮೂಲಕ ಗಮನಸೆಳೆದ ಕೋಣಂದೂರು ಲಿಂಗಪ್ಪ, ಸಾಹಿತಿ, ಸಂಶೋಧಕ ಕೋಣಂದೂರು ವೆಂಕಪ್ಪಗೌಡ ಅವರ ಕೊಡುಗೆ ಗಮನಾರ್ಹ.
 
ಹಳೆಯ ನಾಣ್ಯ, ತಾಮ್ರಪತ್ರ. ತಾಳೇಗರಿ, ಇತಿಹಾಸದ ಕುರುಹುಗಳನ್ನು ನೀಡುವ ಸಮಗ್ರ ವಸ್ತುಗಳ ಸಂಗ್ರಹಣೆಯಲ್ಲಿ ನಾಡಿನ ಗಮನ ಸೆಳೆದ ಪ್ರಭಾಕರ ಪ್ರಭು ಸಹೋದರರ ಕುಟುಂಬ ಗಮನಸೆಳೆಯುತ್ತದೆ.

ಪ್ರಾಥಮಿಕ ಆರೋಗ್ಯ ಕೇಂದ್ರ, ಉಪ ತಹಶೀಲ್ದಾರ್ ಕಚೇರಿ, ಪಶು ಆಸ್ಪತ್ರೆ, ಪೊಲೀಸ್ ಉಪಠಾಣೆ, ಕೃಷಿ ಇಲಾಖೆ, ಎಪಿಎಂಸಿ ಮುಂತಾದ ಸೌಲಭ್ಯಗಳನ್ನು ಪಡೆದಿರುವ ಕೋಣಂದೂರು ಜನಸಂಖ್ಯೆಗೆ ಅನುಗುಣವಾಗಿ ಇನ್ನೂ ಹೆಚ್ಚಿನ ಸೌಲಭ್ಯ ಹೊಂದಬೇಕಾಗಿದೆ.
 
ಕಳೆದ ಆರು ವರ್ಷಗಳಿಂದ ನಿರ್ಮಾಣದ ಅಂತ್ಯ ಕಾಣದೇ ಕೆಟ್ಟು ನಿಂತಂತಿರುವ ವಿದ್ಯುತ್ ಪವರ್ ಸ್ಟೇಷನ್‌ನಲ್ಲಿ ಸಾಮಗ್ರಿಗಳಿಗೆ ತುಕ್ಕು ಹಿಡಿಯುತ್ತಿದೆ. ದಾನಿಗಳು ಕೃಷಿ ಮಾರುಕಟ್ಟೆ ಚಟುವಟಿಕೆಗೆ ಭೂಮಿ ನೀಡಿದರೂ ಎಪಿಎಂಸಿ ಕಟ್ಟಡ ಕಾರ್ಯ ನಿರ್ವಹಿಸುತ್ತಿಲ್ಲ.

ಸ್ಥಳೀಯರ ಅನಿಸಿಕೆ
ಯುವಕರು ಗ್ರಾಮ ಪಂಚಾಯ್ತಿ ಆಡಳಿತವನ್ನು ಚೆನ್ನಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ, ಕುಡಿಯುವ ನೀರು, ಮನೆ ನಿರ್ಮಾಣ, ರಸ್ತೆ ಮುಂತಾದ ಕೆಲಸಗಳ ಕಡೆ ಹೆಚ್ಚು ಆದ್ಯತೆ ನೀಡಬೇಕಾಗಿದೆ ಎನ್ನುತ್ತಾರೆ ಸ್ಥಳೀಯರಾದ ಶೇಷಪ್ಪ ಅವರು.

ಗ್ರಾಮ ಪಂಚಾಯ್ತಿ ಸ್ಥಳವನ್ನು ಒತ್ತುವರಿ ಮಾಡಲಾಗಿದೆ. ಒತ್ತುವರಿ ತೆರವು ಗೊಳಿಸಿಕೊಡಲು ಗ್ರಾಮಸ್ಥರು ಮುಂದಾದರೆ ಅಲ್ಲಿನ ಸ್ಥಳವನ್ನು ಬಳಸಿಕೊಂಡು ಗ್ರಾಮ ಪಂಚಾಯ್ತಿಗೆ ಆದಾಯ ತರಬಲ್ಲ ಯೋಜನೆಗಳಿಗೆ ಚಾಲನೆ ನೀಡಬಹುದು ಎನ್ನುತ್ತಾರೆ ಗ್ರಾಮ ಪಂಚಾಯ್ತಿ ಸದಸ್ಯ ಎ.ಡಿ. ಸುಧಾಕರ್.

ಅಭಿವೃದ್ಧಿಗೆ ಸ್ಥಳೀಯರ ಸಹಕಾರ ತುಂಬಾ ಅಗತ್ಯ. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಗ್ರಾಮ ಪಂಚಾಯ್ತಿ ಆಡಳಿತಕ್ಕೆ ಸಾರ್ವಜನಿಕರಿಂದ ಸಹಕಾರ ಸಿಗುತ್ತಿಲ್ಲ ಎನ್ನುತ್ತಾರೆ ಸ್ಥಳೀಯರಾದ ದಿನೇಶ್ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT