ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪರೂಪದ ವಾದ್ಯ ಮೇಳ

Last Updated 19 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಪ್ರತಿ ಶುಕ್ರವಾರ ಸಾಂಸ್ಕೃತಿಕ ಸಂಜೆಯಲ್ಲಿ ಭರತನಾಟ್ಯ ಮಾಡಿದ ಸ್ನೇಹಾ ಹರೀಶ್ ನೃತ್ಯ ಕಲಾ ಮಂದಿರದ ಬಿ. ಭಾನುಮತಿ ಹಾಗೂ ಶೀಲಾ ಚಂದ್ರಶೇಖರ್ ಅವರಲ್ಲಿ ಕಲಿಯುತ್ತಾ ಈಗಾಗಲೇ ಕೆಲ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ.

`ಗಜವದನಾ ಕರುಣಾ ಸದನ~ದ ಮೂಲಕ ವಿಘ್ನರಾಜನಿಗೆ ವಂದಿಸಿ, ಸ್ನೇಹಾ ನೃತ್ಯ ಪ್ರಾರಂಭಿಸಿದರು. ದ್ವಾರಕೀ ಕೃಷ್ಣಸ್ವಾಮಿ ಅವರ ಕಮಾಚ್ ರಾಗದ  `ಭುವನ ಸುಂದರನ ಕರೆತಾರೆ~ ವರ್ಣದಲ್ಲಿ ಬಿಗಿ ಹಂದರದ ಜತಿಗಳಿಗೆ ಪಾದಚಾಲನೆ ನೀಡುತ್ತಾ ಸಾಗಿದರು. ತಾನು ಪಡೆಯುತ್ತಿರುವ ದಕ್ಷ ಶಿಕ್ಷಣವನ್ನು ಸ್ನೇಹಾ ಹೊರಗೆಡಹಿ ಅಭಿನಯಕ್ಕೆ ಎರಡು ಉತ್ತಮ ರಚನೆಗಳನ್ನು ಆಯ್ದರು. `ಮಧುರಾ ನಗರಿಳೊ~ ಒಂದು ಐತಿಹಾಸಿಕ ರಚನೆ. ಕನಕದಾಸರ ಪ್ರಸಿದ್ಧ `ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ~ ದೇವರನಾಮಕ್ಕೆ ಕೆಲವು ಪೌರಾಣಿಕ ಘಟನೆಗಳನ್ನು ಅಳವಡಿಸಿ, ನಾಟಕೀಯವಾಗಿ ಅಭಿನಯಿಸಿದರು. ಹೆಚ್ಚಿನ ಶಿಕ್ಷಣ ಹಾಗೂ ರಂಗಾನುಭವಗಳಿಂದ ನೃತ್ಯದ ಸೂಕ್ಷ್ಮತೆಗಳಿಗೆ ಗಮನ ಕೊಟ್ಟು, ಗಾಢವಾಗಿಸಬಹುದು. ವಲಚಿ ರಾಗದ ತಿಲ್ಲಾನದೊಂದಿಗೆ ಮಂಗಳಕ್ಕೆ ಸರಿದರು.

ಹಿನ್ನೆಲೆಯಲ್ಲಿ ನಟುವಾಂಗದಲ್ಲಿ ಶೀಲಾ ಚಂದ್ರಶೇಖರ್, ಗಾಯನದಲ್ಲಿ ಕಾರ್ತಿಕ್ ಹೆಬ್ಬಾರ್, ಮೃದಂಗದಲ್ಲಿ ವಿ. ನಾರಾಯಣಸ್ವಾಮಿ ಮತ್ತು ಕೊಳಲಿನಲ್ಲಿ ಕಾರ್ತಿಕ್ ಸಾತವಳ್ಳಿ- ನೆರವಾದರು.

ಭೋರ್ಗರೆದ ವಾದ್ಯವೃಂದ
ಶ್ರಿರಾಮ ಲಲಿತಕಲಾ ಮಂದಿರದವರು ಒಂದು ಭಿನ್ನ ರೀತಿಯ ಕಾರ್ಯಕ್ರಮವನ್ನು ಆಯೋಜಿಸಿದ್ದರು. ನಿಜ, ವಾದ್ಯಗೋಷ್ಠಿಗಳು ನಮಗೆ ಹೊಸದೇನಲ್ಲ! ಭಾರತದ ವಾದ್ಯಗೋಷ್ಠಿ 20ನೇ ಶತಮಾನದ ಪ್ರಾರಂಭದಲ್ಲಿ ಆರಂಭಿಸಿದ್ದು ಮೈಸೂರು ಅರಮನೆಯಲ್ಲೇ. ನಾಲ್ವಡಿ ಕೃಷ್ಣರಾಜ ಒಡೆಯರ ಕನಸಿನ ಕೂಸಾಗಿ ಕರ್ನಾಟಕ್ ಬ್ಯಾಂಡ್ ಮತ್ತು ಇಂಗ್ಲಿಷ್ ಬ್ಯಾಂಡ್ ಮೈಸೂರು ಅರಮನೆಯಲ್ಲಿ ಮೊಳಗಿದವು. ಪ್ರತಿಭಾನ್ವಿತ ವೀಣಾ ವಾದಕಿ ಕುಮರೇಷನ್ ಅವರ ಶ್ರಮದಿಂದ  ಇಂಡಿಯನ್ ನ್ಯಾಷನಲ್ ಆರ್ಕೆಸ್ಟ್ರಾ  ಕಳೆದ ವರ್ಷ ಜನ್ಮ ತಾಳಿತು. ಐ.ಎನ್.ಓ. ಬೆಂಗಳೂರಿನಲ್ಲಿ ಮೊದಲ ಬಾರಿಗೆ ಮೊನ್ನೆ ಭಾನುವಾರ ಕಛೇರಿ ನೀಡಿತು.

ವಾದ್ಯವೃಂದ ಗಂಭೀರ ನಾಟ ರಾಗದಲ್ಲಿ ವಿಘ್ನರಾಜನಿಗೆ ವಂದಿಸಿ (ಊತಕ್ಕಾಡು ವೆಂಕಟಸುಬ್ಬಯ್ಯರ್) ಪ್ರಾರಂಭಿಸಿದರು. ಅವ್ಯಕ್ತದಿಂದ ಪ್ರತ್ಯಕ್ಷಕ್ಕೆ ಸಾಗುತ್ತಾ, ಕೊನೆಯಲ್ಲಿ ಕೊನಕೋಲ್ ಹೇಳಿ ಮೊನಚಾಗಿ ಮುಕ್ತಾಯ ಮಾಡ್ದ್ದಿದು ಸ್ವಾರಸ್ಯವಾಗಿತ್ತು. ಎರಡನೆಯದರಲ್ಲಿ ರಾಷ್ಟ್ರೀಯ ಪಕ್ಷಿ ನವಿಲಿನ ನಡಿಗೆಯನ್ನು ಬಿಂಬಿಸಲು ಚತುಶ್ರ, ತಿಶ್ರ ಗತಿಯನ್ನು ರೀತಿಗೌಳ ರಾಗದಲ್ಲಿ ವಿನಿಕೆ ಮಾಡಿದರು.

ಗಂಗಾನದಿಯನ್ನು ತೋರಲು ರಾಗ ಗಂಗೇಶ್ವರಿಯನ್ನು ಆಯ್ದರು. ರಿಷಭ ವರ್ಜ್ಯ ಚಾರುಕೇಶಿ ರಾಗದಲ್ಲಿ ಗತಿಯನ್ನು ಬದಲಾಯಿಸುತ್ತಾ ನದಿಯ ಹರಿವನ್ನು ಬಿಂಬಿಸಿದರು. ಅದಕ್ಕೆ ಸೂಕ್ತವಾಗಿ ಶಂಕರಾಚಾರ್ಯರ ರಚನೆಯನ್ನು ತೆಗೆದುಕೊಂಡು, ಲಯವಾದ್ಯ ರಹಿತವಾಗಿ ಪ್ರಾರಂಭಿಸಿ, ಕ್ರಮೇಣ ಸಿತಾರ್, ಬಾನ್ಸುರಿ, ಹಾರ್ಮೋನಿಯಂಗಳು ಮಿಲನವಾಗಿ ನದಿಯಂತೆ ಭೋರ್ಗರೆಯಿತು. ಹಿಮಾಲಯ, ಕೈಲಾಸ ಪರ್ವತ - ಪರಿಕ್ರಮಗಳನ್ನು ಮೂಡಿಸಲು ಭಿನ್ನ ಲಲಿತ್ (ಹರಿಚರಣ್) ತೆಗೆದುಕೊಂಡರು. ಲಯ ವಾದ್ಯಗಳಿಂದ ಪ್ರಾರಂಭಿಸಿ, ಕ್ರಮೇಣ ಇತರ ವಾದ್ಯಗಳೂ ಮೇಳೈಸಿದವು. ಜಾನಪದ ಸಂಗೀತಕ್ಕಾಗಿ ಬೇಹಾಗ್ ರಾಗವನ್ನು ಆರಿಸಲಾಯಿತು. `ಕಾಶ್ಮೀರದಿಂದ ಕನ್ಯಾಕುಮಾರಿ~ ಎಂಬ ರಚನೆಯನ್ನು ಸಿಂಧುಭೈರವಿ ರಾಗದಲ್ಲಿ ನುಡಿಸಿ, ಮುಕ್ತಾಯ ಮಾಡಿದರು.

ವೀಣೆ, ಪಿಟೀಲು, ಕೊಳಲು, ಸಿತಾರ್, ಹಾರ್ಮೊನಿಯಂಗಳ ಜೊತೆಗೆ ಲಯವಾದ್ಯಗಳು (ಮೃದಂಗ, ಖಂಜರಿ, ಘಟ, ಮೋರ್ಚಿಂಗ್, ತಬಲ, ಕೊನಕೋಲು) ಮೇಳೈಸಿ, ಅದ್ಭುತ ನಾದ ತರಂಗಗಳನ್ನು ಸೃಷ್ಟಿಸಿದವು! ಸಿದ್ಧ ರಚನೆಗಳ ಬದಲು ಹೊಸ ವಾದ್ಯ ಪ್ರಬಂಧಗಳನ್ನು ಹೆಣೆದು, ಪ್ರತಿ ವಾದ್ಯದ ವ್ಯಕ್ತಿತ್ವ ಗೋಚರವಾಗುವುದಕ್ಕೂ ಅವಕಾಶ ಕಲ್ಪಿಸಿ, ಒಂದು `ರಾಷ್ಟ್ರೀಯ ವಾದ್ಯವೃಂದ~ದ ಸೃಷ್ಟಿಗೆ ನಾಂದಿ ಹಾಡಿದರು. ಒಂದೊಂದು ವಾದ್ಯ ನುಡಿಸಿದವರೂ ಅನುಭವೀ, ಪ್ರತಿಭಾನ್ವಿತ ಕಲಾವಿದರು. ಒಟ್ಟಿನಲ್ಲಿ ಜಯಂತಿ ಕುಮರೇಷನ್‌ರ ಪ್ರಯತ್ನ ಶ್ಲಾಘನೀಯ.

ನೃತ್ಯ ಜುಗಲ್‌ಬಂದಿ
ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಪರಿಷತ್ ಹಾಗೂ ಭಾರತೀಯ ವಿದ್ಯಾ ಭವನದ ಸಹಭಾಗಿತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭರತನಾಟ್ಯ ಮತ್ತು ಕಥಕ್ ನೃತ್ಯವನ್ನು ಮಾಡಿದವರು ಶುಭಾ ಧನಂಜಯ್ ಮತ್ತು ಅವರ ಶಿಷ್ಯರು. ನೃತ್ಯದಲ್ಲಿ ಪದವಿ ಪಡೆದು, ನಾಟ್ಯತರಂಗ ಶಾಲೆಯನ್ನು ಸ್ಥಾಪಿಸಿ, ನರ್ತಕಿ, ಬೋಧಕಿ, ನೃತ್ಯ        ಸಂಯೋಜಕಿಯಾಗಿ    ಶುಭಾ ಬೆಳಗುತ್ತಿದ್ದಾರೆ. ಗಣಪತಿ ಮೇಲಿನ ರಚನೆಯೊಂದಿಗೆ ಐವರು ಕಿರಿಯರು ಕಾರ್ಯಕ್ರಮ ಪ್ರಾರಂಭಿಸಿದರು. ಶುಭ ಅವರು ಓಂಕಾರದಲ್ಲಿ ಶುದ್ಧ ನೃತ್ತದ ಮೂಲಕ ಪ್ರಭಾತ್ ವಂದನ ಮಾಡಿದರು. ಸರಸ್ವತಿ ಸ್ತುತಿಯನ್ನು ಹಾಡುತ್ತಾ ಮಡಕೆಯ ಮೇಲೆ ನಿಂತು ಮಾಡಿದ ಪೇರಿಣಿ ನೃತ್ಯ ಸಹ ಶ್ಲಾಘನೆಗೆ ಒಳಗಾಯಿತು. ಚತುರ್ ಅಂಗವನ್ನು ಮೂವರು ನರ್ತಿಸಿ ಶಿವಸ್ತುತಿಗೆ ಸರಿದರು. ಆದರೆ ಭರತನಾಟ್ಯ ಮತ್ತು ಕಥಕ್‌ಗಳ ಜುಗಲ್‌ಬಂದಿ ಗೋಜಲಾಯಿತು!

ಸ್ಥಳ ಸಂಕೋಚದ ಜೊತೆಗೆ ಸಿದ್ಧತೆಯ ಕೊರತೆಯೂ ಎದ್ದು ಕಾಣುತ್ತಿತ್ತು. ಪದೇಪದೇ ಕಾಣಿಸುತ್ತಿದ್ದ ಧ್ವನಿಮುದ್ರಿಕೆಗಳ ತೊಂದರೆಯನ್ನೂ ತಪ್ಪಿಸಬಹುದಿತ್ತು. ಇವೆಲ್ಲದರ ನಡುವೆ ಶುಭ ಧನಂಜಯರ ಅನುಭವೀ ನೃತ್ಯವು ಕಾರ್ಯಕ್ರಮವನ್ನು ಬೆಳಗಿಸಿತು.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT