ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪರೂಪದ ವಿಶ್ಲೇಷಣಾಕಾರ ಕಣ್ಮರೆ

Last Updated 7 ಜೂನ್ 2012, 6:35 IST
ಅಕ್ಷರ ಗಾತ್ರ

ಶಿವಮೊಗ್ಗ: ಸ್ನೇಹಜೀವಿ, ಅಪರೂಪದ ರಾಜಕಾರಣಿ, ರಾಜಕೀಯ ವಿದ್ಯಮಾನಗಳ ವಿಶಿಷ್ಟ ವಿಶ್ಲೇಷಣೆಕಾರ ಪ.ರಾ. ಶ್ರೀನಿವಾಸ್ (62) ತಮ್ಮ ಲೌಕಿಕ ಲೋಕದ ಯಾತ್ರೆ ಮುಗಿಸಿದ್ದಾರೆ.

ಶ್ರೀನಿವಾಸ್ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗುವ ಮುನ್ನ ನೇಪಾಳಕ್ಕೆ ದೇವರ ವಿಗ್ರಹದ ಕಲ್ಲುಗಳನ್ನು ಹುಡುಕಿ ಕೊಂಡು ಹೋಗಿದ್ದರು. ಪ್ರವಾಸದಿಂದ ತೀರಾ ಬಳಲಿದ್ದ ಅವರಿಗೆ ಲೋಬಿಪಿ ಆಗಿತ್ತು. ನಗರದ ಖಾಸಗಿ ನರ್ಸಿಂಗ್ ಹೋಂನಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗಲೇ ಬುಧವಾರ ಬೆಳಗಿನ ಜಾವ 3ಗಂಟೆ ಸುಮಾರಿಗೆ ಹೃದಯಾಘಾತದಿಂದ ಲೋಕದ ಕೊಂಡಿ ಕಳಚಿಕೊಂಡರು.

ಮೇಲ್ನೋಟಕ್ಕೆ ನಾಸ್ತಿಕರಂತೆ ಕಾಣುತ್ತಿದ್ದ ಶ್ರೀನಿವಾಸ್ ಹೃದಯಲ್ಲಿ ಅಪ್ಪಟ ಆಸ್ತಿಕರಾಗಿದ್ದರು. ತಮ್ಮ ಜೀವನದ ಕೊನೆಯ ಆಸೆ ಎಂಬಂತೆ ತಾವು ವಾಸಿಸುತ್ತಿದ್ದ ಮನೆಯನ್ನೇ ನೆಲಸಮಗೊಳಿಸಿ ಅಲ್ಲಿ ರಾಘವೇಂದ್ರ, ಆಂಜನೇಯ ಹಾಗೂ ವೆಂಕಟರಮಣ ದೇವಸ್ಥಾನ ಕಟ್ಟಲು ಸಿದ್ಧತೆ ನಡೆಸಿದ್ದರು. ಅದಕ್ಕಾಗಿಯೇ ಈಚೆಗೆ ಹಗಲಿರಳು ಓಡಾಟ ನಡೆಸಿದ್ದರು.

ಅವರಿದ್ದದ್ದು ಅಪ್ಪಟ ಬ್ರಾಹ್ಮಣರ ಬೀದಿ (ಬಿ.ಬಿ. ಸ್ಟ್ರೀಟ್); ಆದರೆ, ಅಂತರಂಗ ಮತ್ತು ಬಹಿರಂಗ ಎರಡಲ್ಲೂ ಸಮಾಜವಾದಿಯಾಗಿದ್ದರು. ಅವರ ಸ್ನೇಹಕ್ಕೆ ಒಳಗಾಗದವರೇ ಇಲ್ಲ. ಪಕ್ಷಾತೀತವಾಗಿ ಸ್ನೇಹಿತರನ್ನು ಶ್ರೀನಿವಾಸ್ ಸಂಪಾದಿಸಿದ್ದರು. ಅವರ ಸ್ನೇಹಿತ ಬಳಗ ಎಲ್ಲ ಪಕ್ಷ, ಜಾತಿ, ಮತ ಮೀರಿತ್ತು. ಅವರ ಅಂತಿಮ ದರ್ಶನಕ್ಕೆ ಆಗಮಿಸಿದ ಗಣ್ಯರ ದಂಡೇ ಅದನ್ನು ಹೇಳುತ್ತಿತ್ತು.

ರಾಮಕೃಷ್ಣ ಹೆಗಡೆ, ಜೆ.ಎಚ್. ಪಟೇಲ್, ಎಚ್.ಡಿ. ದೇವೇಗೌಡ, ಎಚ್.ಡಿ. ಕುಮಾರಸ್ವಾಮಿ ಅವರ ಜತೆ ನೇರ ಸಂಪರ್ಕ ಹಾಗೂ ಸಲಿಗೆ ಎರಡೂ ಹೊಂದಿದ್ದ ಶ್ರೀನಿವಾಸ್, ರಾಜಕಾರಣದಲ್ಲಿ ಇನ್ನಷ್ಟು ಮೇಲಕ್ಕೆ ಏರಲು, ಆಸ್ತಿ ಸಂಪಾದಿಸಲು ಅವಕಾಶಗಳಿದ್ದವು. ಆದರೆ, ಅಂತಹ ಯಾವ ಮೋಹಗಳಿಗೆ ಅವರು ಸಿಕ್ಕಿಬೀಳಲಿಲ್ಲ ಎಂದು ಸ್ಮರಿಸುತ್ತಾರೆ ಗೆಳೆಯ ಎಂ.ಬಿ. ಶಿವಣ್ಣ.

ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಶ್ರೀನಿವಾಸ್, ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾಗಿದ್ದರು. ಗೋಪಾಲಗೌಡ, ವಿವೇಕಾನಂದ ಬಡಾವಣೆ ಅವರ ಅಧಿಕಾರದ ಅವಧಿಯಲ್ಲಿ ನಿರ್ಮಾಣಗೊಂಡವು. ಈಗಿನ ರಿಂಗ್‌ರೋಡ್ ಕಲ್ಪನೆ ಅವರದೇ ಆಗಿತ್ತು. 6 ಸಾವಿರ ನಿವೇಶನಗಳನ್ನು ನಗರಲ್ಲಿ ಗುರುತಿಸಿದ್ದ ಅವರು ಇನ್ನೇನು ಹಂಚಬೇಕು ಎಂದಾಗ ಅವರ ಸರ್ಕಾರವೇ ಅಧಿಕಾರ ಕಳೆದುಕೊಂಡಿತು.

ಪ್ರಾಧಿಕಾರದ ಅಧ್ಯಕ್ಷರಾಗಿದ್ದರೂ ಶ್ರೀನಿವಾಸ್ ಒಂದು ನಿವೇಶನವನ್ನೂ ಹೊಂದಿರಲಿಲ್ಲ. ಪ್ರಾಮಾಣಿಕರಾಗಿದ್ದ ಅವರು ಇಂದಿಗೂ ಯುವಕರನ್ನು ಹೋರಾಟಕ್ಕೆ ಅಣಿಗೊಳಿಸುತ್ತಿದ್ದರು. ರಾಜಕೀಯ ಘಟನೆಗಳನ್ನು ಅದ್ಭುತವಾಗಿ ವಿಶ್ಲೇಷಿಸುತ್ತಿದ್ದ ಅವರು ಜೆಡಿಎಸ್‌ನ `ಥಿಂಕ್ ಟ್ಯಾಂಕ್~ ಆಗಿದ್ದರು. ಹಾಗಾಗಿ, ಅವರಿಗೆ ಜೆಡಿಎಸ್ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರಾಗುವ ಅರ್ಹತೆ ಅನಾಯಸವಾಗಿ ದಕ್ಕಿತ್ತು.

2010ರ ಮಾರ್ಚ್ 23ರಂದು ಶ್ರೀನಿವಾಸ ಅವರೇ  ಕಷ್ಟಪಟ್ಟು ಡಾ.ರಾಮಮನೋಹರ ಲೋಹಿಯಾ ಅವರ 100ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಸಮಾಜವಾದಿ ಜನಾಂದೋಲನ ಮಂಚ್ ಅಡಿಯಲ್ಲಿ ಆಯೋಜಿಸಿದ್ದರು. ಇಲ್ಲಿಗೆ ಮೂರು ದಿವಸದ ಹಿಂದೆ ನಿಧನರಾದ ರಾಜ್ಯ ಸಮಾಜವಾದಿ ಪಕ್ಷದ ಮಾಜಿ ಅಧ್ಯಕ್ಷ ಕೆ.ಜಿ. ಮಹೇಶ್ವರಪ್ಪ, ಸ್ವಾಧಿ, ಬಿ.ಎನ್. ರಾಜಗೋಪಾಲ್, ಪ್ರೊ.ಎಸ್.ಎಚ್. ಪಟೇಲ್, ಮಾಜಿ ಶಾಸಕ ಎಲ್.ಟಿ. ತಿಮ್ಮಪ್ಪ ಹೆಗಡೆ ಅವರನ್ನೆಲ್ಲ ಒಟ್ಟಿಗೆ ಸೇರಿಸಿ, ಚಿಂತನ- ಮಂಥನ ನಡೆಸಿದ್ದರು.

ಶ್ರೀನಿವಾಸ್ ಅವರಿಗೆ ಡಿ. ದೇವರಾಜ ಅರಸು ಬಗ್ಗೆ ಅಪಾರ ಅಭಿಮಾನ. ಹಾಗಾಗಿ, ವಿದ್ಯಾರ್ಥಿ ದೆಸೆಯಲ್ಲಿ ಕಾಂಗ್ರೆಸ್ ಮೂಲಕ ರಾಜಕೀಯ ಪ್ರವೇಶ ಪಡೆದರು. ಆದರೆ, 1975ರಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾಗುತ್ತಿದ್ದಂತೆ ಕಾಂಗ್ರೆಸ್ ತೊರೆದರು.  ತುರ್ತು ಪರಿಸ್ಥಿತಿ ವಿರುದ್ಧ ನಡೆದ ಹೋರಾಟಗಳಲ್ಲಿ ತಮ್ಮನ್ನು ತೊಡಗಿಸಿ ಕೊಂಡಿದ್ದರು. ಅರಸು ನಿಧನದ ನಂತರ `ಕ್ರಾಂತಿ ರಂಗ~ದಲ್ಲಿ ಕಾಣಿಸಿಕೊಂಡ ಶ್ರೀನಿವಾಸ್ ನಂತರ ಜನತಾ ಪರಿವಾರದ ತೆಕ್ಕೆಗೆ ಬಂದರು. ಮುಂದೆ ಪರಿವಾರ ಇಬ್ಭಾಗ ಗೊಂಡಾಗ ದೇವೇಗೌಡ ನೇತೃತ್ವದ ಜೆಡಿಎಸ್‌ನಲ್ಲಿ ಉಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT