ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಹರಣ ಪ್ರಕರಣ ಬೆಳಕಿಗೆ 15 ಲಕ್ಷ ಹಣ ಪಡೆದು ಬಿಡುಗಡೆ

Last Updated 19 ಜೂನ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು:  ಕೈಗಾರಿಕೋದ್ಯಮಿಯೊಬ್ಬರ ಮಗನನ್ನು ದುಷ್ಕರ್ಮಿಗಳು ಅಪಹರಿಸಿ ನಂತರ ಅವರ ಕುಟುಂಬ ಸದಸ್ಯ ರಿಂದ 15 ಲಕ್ಷ ರೂಪಾಯಿ ಹಣ ಪಡೆದು ಒತ್ತೆಯಾಳನ್ನು ಬಿಟ್ಟು ಕಳುಹಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ಈ ಸಂಬಂಧ ಜೆ.ಪಿ.ನಗರ ನಿವಾಸಿ ಗೌತಮ್ (26) ಎಂಬುವರು ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಗೌತಮ್ ಅವರ ತಂದೆ ಯಜ್ಞನಾರಾಯಣ ಕಮ್ಮಾಜೆ ಅವರು ಅತ್ತಿಬೆಲೆ ಕೈಗಾರಿಕಾ ಪ್ರದೇಶದಲ್ಲಿ `ಸೋನಾ ಬ್ಯಾಂಡ್~ ಎಂಬ ಕಾರ್ಖಾನೆ ನಡೆಸುತ್ತಿದ್ದಾರೆ. ಆ ಕಾರ್ಖಾನೆಯಲ್ಲಿ ಕೈಗಡಿಯಾರದ ಬಿಡಿ ಭಾಗಗಳನ್ನು ತಯಾರಿಸಲಾಗುತ್ತದೆ. ಗೌತಮ್ ಕಾರ್ಖಾನೆಯ ವ್ಯವಹಾರ ನೋಡಿಕೊಳ್ಳುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಎಂದಿನಂತೆ ಗೌತಮ್ ಮೇ 16ರಂದು ಕಾರ್ಖಾನೆಗೆ ಹೋಗಿದ್ದರು. ಕೆಲಸವೆಲ್ಲ ಮುಗಿದ ನಂತರ ಸಂಜೆ ಐದು ಗಂಟೆ ಸುಮಾರಿಗೆ ಅವರು ಕಾರಿನಲ್ಲಿ ಮನೆಗೆ ಬರುತ್ತಿದ್ದಾಗ ಅತ್ತಿಬೆಲೆ ಕೈಗಾರಿಕಾ ಪ್ರದೇಶದಲ್ಲಿ ಕಿಡಿಗೇಡಿಗಳು ಅವರ ವಾಹನದ ಮೇಲೆ ಕಲ್ಲು ತೂರಿದರು.

ಆ ಸಂದರ್ಭದಲ್ಲಿ ವಾಹನ ನಿಲ್ಲಿಸಿ ಕೆಳಗಿಳಿದ ಅವರ ಮೇಲೆ ದುಷ್ಕರ್ಮಿಗಳು ಏಕಾಏಕಿ ದಾಳಿ ನಡೆಸಿ ಕಣ್ಣಿಗೆ ಕಾರದ ಪುಡಿ ಎರಚಿದರು. ಅಲ್ಲದೇ ಅವರ ಕೈ ಕಾಲುಗಳನ್ನು ಕಟ್ಟಿ ಕಾರಿನಲ್ಲೇ ಬಂಗಾರಪೇಟೆ ಸಮೀಪಕ್ಕೆ ಎಳೆದೊಯ್ದಿದ್ದರು. ಅದೇ ದಿನ ರಾತ್ರಿ ಅವರ ಕುಟುಂಬ ಸದಸ್ಯರಿಗೆ ಕರೆ ಮಾಡಿದ್ದ ಅಪಹರಣಕಾರರು `ಎರಡು ಕೋಟಿ ರೂಪಾಯಿ ಹಣ ನೀಡಬೇಕು. ಇಲ್ಲದಿದ್ದರೆ ಗೌತಮ್ ಅವರನ್ನು ಕೊಲೆ ಮಾಡುತ್ತೇವೆ~ ಎಂದು ಬೆದರಿಕೆ ಹಾಕಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಇದರಿಂದ ಆತಂಕಗೊಂಡ ಕುಟುಂಬ ಸದಸ್ಯರು ಮನೆಯ ಕಾರು ಚಾಲಕನ ಮೂಲಕ ಅಪಹರಣಕಾರರಿಗೆ 15 ಲಕ್ಷ ಹಣ ಕೊಟ್ಟು ಕಳುಹಿಸಿದ್ದರು. ಕಾರು ಚಾಲಕ ಮೇ 17ರ ನಸುಕಿನಲ್ಲಿ ಅಪಹರಣಕಾರರನ್ನು ಭೇಟಿ ಮಾಡಿ ಹಣ ಕೊಟ್ಟಿದ್ದ. ಬಳಿಕ ಅಪಹರಣಕಾರರು ಗೌತಮ್ ಅವರನ್ನು ಬಿಟ್ಟು ಕಳುಹಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಅಪಹರಣದ ವಿಷಯವನ್ನು ಪೊಲೀಸರಿಗೆ ತಿಳಿಸಿ ದೂರು ನೀಡದಂತೆ ದುಷ್ಕರ್ಮಿಗಳು ಗೌತಮ್ ಮತ್ತು ಅವರ ಕುಟುಂಬ ಸದಸ್ಯರಿಗೆ ಬೆದರಿಕೆ ಹಾಕಿದ್ದರು. ದೂರು ನೀಡಿದರೆ ಕೊಲೆ ಮಾಡುವುದಾಗಿಯೂ ಅವರು ಬೆದರಿಸಿದ್ದರು. ಈ ಕಾರಣದಿಂದಾಗಿ ಅವರು ಘಟನೆ ನಡೆದು ಹಲವು ದಿನಗಳವರೆಗೂ ದೂರು ನೀಡಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಿ ಮೂವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಮತ್ತಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆ ಕಾರ್ಯ ಮುಂದುವರೆದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು`ಪ್ರಜಾವಾಣಿ~ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT