ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಹರಣಕ್ಕೆ ಯತ್ನ: ದುಷ್ಕರ್ಮಿಗಳ ಹುಡುಕಾಟ

Last Updated 9 ಫೆಬ್ರುವರಿ 2012, 5:30 IST
ಅಕ್ಷರ ಗಾತ್ರ

ಬಸವಕಲ್ಯಾಣ: ಬಾಲಕನೊಬ್ಬನನ್ನು ದ್ವಿಚಕ್ರ ವಾಹನದ ಮೇಲೆ ಕೂಡಿಸಿಕೊಂಡು ಹೋಗಿ ಅಪಹರಣಕ್ಕೆ ಯತ್ನಿಸಿದ ಘಟನೆ ಮಂಗಳವಾರ ರಾತ್ರಿ ಇಲ್ಲಿ ನಡೆದಿದೆ. ಐದು ಕಿ.ಮೀ.ದಷ್ಟು ದೂರ ಸಾಗಿಸಿದ್ದ ಬಾಲಕ ಹೇಗೋ ಮಾಡಿ ಬಿಡಿಸಿಕೊಂಡು ಮನೆಗೆ ಹಿಂದಿರುಗಿದ್ದು ಪೊಲೀಸರು ಹುಡುಕಾಟ ನಡೆಸಿದರೂ ದುಷ್ಕರ್ಮಿಗಳ ಪತ್ತೆ ಆಗಿಲ್ಲ.

ಇಲ್ಲಿನ ಬಸವೇಶ್ವರ ಮಂದಿರ ಸಮೀಪದ ಅನ್ವರಪೇಟ್ ಓಣಿಯ ಮಹ್ಮುದ್ ಆಖೀಮ್ ಖಾದಿವಾಲೆ (13) ಎನ್ನುವವನನ್ನೇ ಅಪಹರಣ ಮಾಡುವ ಯತ್ನ ನಡೆದಿತ್ತು. ಈತ ವಿಶ್ವಭಾರತಿ ಕನ್ನಡ ಮಾಧ್ಯಮದ ಶಾಲೆಯಲ್ಲಿ 8 ನೇ ತರಗತಿಯಲ್ಲಿ ಓದುತ್ತಾನೆ.
 
ನಿನ್ನೆ ಸಂಜೆ ಮನೆಯಲ್ಲಿ ಓದುತ್ತ ಕುಳಿತಿದ್ದ ಈತ ವಿದ್ಯುತ್ ಹೋಗಿದ್ದರಿಂದ ಮನೆಯ ಹೊರಗೆ ಬಂದಾಗ ಆತನನ್ನು ದ್ವಿಚಕ್ರ ವಾಹನದ ಮೇಲೆ ಕೂಡಿಸಿಕೊಂಡು ಹೋಗಲಾಯಿತು ಎಂದು ತಿಳಿದು ಬಂದಿದೆ. ಮನೆಯ ಹೊರಗಡೆ ನಿಂತಾಗ ದ್ವಿಚಕ್ರ ವಾಹನದ ಮೇಲೆ ಬಂದ ಇಬ್ಬರು ಯುವಕರು `ಮಿಠಾಯಿವಾಲೆ ಎನ್ನುವವರ ಮನೆ ಎಲ್ಲಿದೆ ತೋರಿಸು~ ಎಂದು ಕೇಳಿದರು. ಆಯ್ತು ನಡೆಯಿರಿ ಎಂದೆ. ಆಗ ಅವರು ನನ್ನನ್ನು ತಮ್ಮ ವಾಹನದ ಮೇಲೆ ಕೂಡಿಸಿಕೊಂಡು ಬೇರೆ ದಾರಿಯಲ್ಲಿ ಸಾಗಿದರು. ನನಗೆ ಗಾಬರಿಯಾಗಿ ಈ ಕಡೆ ಏಕೆ ಎಂದು ಕೇಳಿದಕ್ಕೆ ಹಿಂದೆ ಕುಳಿತಿದ್ದ ಒಬ್ಬ ನನ್ನ ಬಾಯಿ ಒತ್ತಿ ಹಿಡಿದ. ಹೀಗಾಗಿ ನನಗೆ ಮಾತನಾಡಲು ಬರಲಿಲ್ಲ ಎಂದು ಬಾಲಕ ಆಖೀಮ್ ಪತ್ರಕರ್ತರಿಗೆ ಹೇಳಿದ್ದಾನೆ. ನಂತರ ಅವರು ಸಸ್ತಾಪುರ ಬಂಗ್ಲಾ ರಸ್ತೆಯಿಂದ ವಾಹನವನ್ನು ತೆಗೆದುಕೊಂಡು ಹೋಗಿ ಬಿಕೆಡಿಬಿ ಕಚೇರಿ ಎದುರಿನ ಕ್ರೀಡಾಂಗಣದ ಸಮೀಪದಲ್ಲಿನ ಖಾಲಿ ಜಾಗದಲ್ಲಿ ನನ್ನನ್ನು ಇಳಿಸಿದರು. ಅಲ್ಲಿ ನಿಂತಿದ್ದ ಕ್ರೂಸರ್ ವಾಹನದಲ್ಲಿ ಕುಳ್ಳಿರಿಸಿ ಕೈಗಳನ್ನು ಹಗ್ಗದಿಂದ ಕಟ್ಟುತ್ತಿದ್ದಾಗ ನಾನು ಬಿಡಿಸಿಕೊಂಡು ಅಲ್ಲಿಂದ ಓಡಿದೆ ಎಂದು ಬಾಲಕ ನಡೆದ ಘಟನೆಯನ್ನು ವಿವರಿಸಿದ.

ನನ್ನನ್ನು ಹಿಡಿದುಕೊಂಡು ಹೋದವರು ನನ್ನ ಬೆನ್ನುಹತ್ತಿ ಬಂದರಾದರೂ ನಾನು ರಸ್ತೆಗೆ ಬಂದು ಅಲ್ಲಿ ನಡೆದುಕೊಂಡು ಹೋಗುತ್ತಿದ್ದ ಕೆಲ ಜನರಿಗೆ `ನನ್ನನ್ನು ಕಿಡ್ನ್ಯಾಪ ಮಾಡಲು ಬೆನ್ನು ಹತ್ತಿದ್ದಾರೆ, ರಕ್ಷಿಸಿರಿ~ ಎಂದು ಕೂಗಿದೆ. ಆದ್ದರಿಂದ ಬಹುಶಃ ಅವರು ಹಿಂದಿರುಗಿ ಹೋಗಿರಬಹುದು. ನಾನು ಭಯಭೀತನಾಗಿ ಹಾಗೆಯೇ ಮುಂದೆ ಓಡಿದ್ದರಿಂದ ರಸ್ತೆಯಲ್ಲಿ ಹೋಗುತ್ತಿದ್ದವರು ಏನು ಮಾಡಿದರು. ನಂತರ ಎಲ್ಲಿ ಏನು ನಡೆಯಿತು ಎಂಬುದು ನನಗೆ ಗೊತ್ತಿಲ್ಲ. ರಸ್ತೆಗುಂಟ ಓಡುತ್ತಲೇ ಮನೆಗೆ ಬಂದೆ. ಅವರು ನನ್ನನ್ನು ಕೂಡಿಸಿದ್ದ ಕ್ರೂಸರ್ ವಾಹನದಲ್ಲಿ ನನ್ನಂತಹ 5-6 ಬಾಲಕರು ಇರುವುದನ್ನು ನೋಡಿದ್ದೇನೆ. ಅವರ ಕೈಗಳನ್ನು ಕಟ್ಟಿ ಹಾಕಿದ್ದರು. ಅಪಹರಣಕಾರರು ಹಿಂದಿಯಲ್ಲಿ ಮಾತನಾಡುತ್ತಿದ್ದರು. ವಾಹನದಲ್ಲಿನ ಬಾಲಕರನ್ನೆಲ್ಲ ಶೀಘ್ರ ಮುಂಬೈಗೆ ತಲುಪಿಸುತ್ತೇವೆ ಎಂದು ಅವರು ಮೊಬೈಲ್‌ನಲ್ಲಿ ಮಾತನಾಡುತ್ತಿುವುದನ್ನು ಕೇಳಿಸಿಕೊಂಡಿದ್ದೇನೆ ಎಂದು ಈತ ಹೇಳುತ್ತಾನೆ. ಆಖೀಮ್ ಮನೆಗೆ ಬಂದ ನಂತರ ಈತನ ಸಂಬಂಧಿಕರಾದ ಜಮೀರ ಖಾದಿವಾಲೆ ಹಾಗೂ ಇತರರು ತಕ್ಷಣ ನಗರ ಪೊಲೀಸ್ ಠಾಣೆಗೆ ಕರೆದುಕೊಂಡಿ ಹೋಗಿ ನಡೆದ ಘಟನೆಯನ್ನು ವಿವರಿಸಿದ್ದಾರೆ. ಆಗ ಸಬ್ ಇನಸ್ಪೆಕ್ಟರ್ ಉಮೇಶ ಕಾಂಬಳೆಯವರು ಕೆಲ ಕಾನಸ್ಟೆಬಲ್‌ಗಳನ್ನು ಹಾಗೂ ಬಾಲಕನನ್ನು ಜತೆಗೆ ಕರೆದುಕೊಂಡು ಹೋಗಿ ಹುಡುಕಾಟ ನಡೆಸಿದ್ದಾರೆ. ಬಾಲಕ ಹೇಳಿದ ಕಡೆಗಳಲ್ಲೆಲ್ಲ ರಾತ್ರಿ 2 ಗಂಟೆವರೆಗೆ ಪತ್ತೆ ಕಾರ್ಯ ನಡೆಸಿದರೂ ದುಷ್ಕರ್ಮಿಗಳ ಸುಳಿವು ದೊರೆಯಲಿಲ್ಲ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT