ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಹರಣದ ನಾಟಕ: ಪೊಲೀಸರ ಆತಿಥ್ಯ

Last Updated 13 ಫೆಬ್ರುವರಿ 2011, 6:20 IST
ಅಕ್ಷರ ಗಾತ್ರ

ಬಳ್ಳಾರಿ: ಕೆಲಸ ಮಾಡುತ್ತಿದ್ದ ಸಂಸ್ಥೆಯ ಇತರ ನೌಕರರಿಗೆ ನೀಡಬೇಕಾದ  ಸಂಬಳದ ಹಣವನ್ನು ಬ್ಯಾಂಕ್‌ನಿಂದ ಡ್ರಾ ಮಾಡಿಕೊಂಡು ಬಂದ ದಿನಗೂಲಿ  ನೌಕರನೊಬ್ಬ, ಆ ಹಣವನ್ನು ಲಪಟಾಯಿಸುವ ಉದ್ದೇಶದಿಂದ, ‘ತನ್ನನ್ನು ಅಪಹರಿಸಲಾಗಿದೆ’ ಎಂಬ ನಾಟಕವಾಡಿ ಪೊಲೀಸರ ಅತಿಥಿಯಾಗಿರುವ ಘಟನೆ ಜಿಲ್ಲೆಯ ಹೊಸಪೇಟೆಯಲ್ಲಿ ನಡೆದಿದೆ.

ಹೊಸಪೇಟೆಯ ತುಂಗಭದ್ರಾ ಮಂಡಳಿಯಲ್ಲಿ ಕಂಪ್ಯೂಟರ್ ಆಪರೇಟರ್ ಕೆಲಸ ಮಾಡುವ ನಜೀರ್ ಎಂಬ ಯುವಕನೇ ಈ ರೀತಿ ನಾಟಕವಾಡಿ ಸಿಕ್ಕಿಬಿದ್ದಿದ್ದಾನೆ.

ತುಂಗಭದ್ರಾ ಮಂಡಳಿಯ ಅಧಿಕಾರಿ ಭೀಮರಾವ್ ಅವರು ಶುಕ್ರವಾರ ಬೆಳಿಗ್ಗೆ 11ಕ್ಕೆ ನೀಡಿದ 12 ಲಕ್ಷ 73 ಸಾವಿರದ 200 ರೂಪಾಯಿ ಮೊತ್ತದ ಚೆಕ್ ಪಡೆದು ಹಣ ಡ್ರಾ ಮಾಡಿಕೊಂಡ ಈತ, ನಂತರ ಅಲ್ಲಿಂದ ಪರಾರಿಯಾಗಿ, ತನ್ನನ್ನು ಕಾರ್‌ನಲ್ಲಿ ಬಂದ ದರೋಡೆಕೋರರ ತಂಡ ಹಣಕ್ಕಾಗಿ ಅಪಹರಿಸಿದ್ದು, ಇದೀಗ ಬೆಂಗಳೂರಿನ ಬಳಿ ಕೂಡಿ ಹಾಕಿದೆ ಎಂದು ಮನೆಯವರಿಗೆ ಮೊಬೈಲ್ ದೂರವಾಣಿ ಮೂಲಕ ಮಾಹಿತಿ ನೀಡಿದ್ದ.

ಈ ಕುರಿತು ನಜೀರ್ ತಂದೆ ಅಬ್ದುಲ್ ಅನ್ವರ್ ಅವರು ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಕಾರ್ಯ ಪ್ರವೃತ್ತರಾದ ಪೊಲೀಸರು ಜಿಲ್ಲೆಯ ಬಹುತೇಕ ಚೆಕ್‌ಪೋಸ್ಟ್‌ಗಳಲ್ಲಿ ಕಟ್ಟೆಚ್ಚರದ ತಪಾಸಣೆ ಆರಂಭಿಸಿದರಲ್ಲದೆ, ನಜೀರ್ ಮಾತನಾಡಿದ ಮೊಬೈಲ್‌ನ ಟವರ್ ಲೊಕೇಶನ್ ಪರಿಶೀಲಿಸಿದರು.

ಬಳ್ಳಾರಿಯ ಕೌಲ್‌ಬಜಾರ್ ಪ್ರದೇಶದಲ್ಲೇ ಆ ಮೊಬೈಲ್ ಬಳಕೆಯಾಗುತ್ತಿದೆ ಎಂಬ ಮಾಹಿತಿ ಲಭಿಸಿದ್ದರಿಂದ ಕೌಲ್‌ಬಜಾರ್ ಪ್ರದೇಶದ ಎಲ್ಲ ವಸತಿ ಗೃಹಗಳನ್ನು ಪರಿಶೀಲಿಸಿದ ಪೊಲೀಸರು ಕಡೆಗೆ ಗೋಲ್ಡ್‌ಸ್ಮಿತ್ ಸ್ಟ್ರೀಟ್‌ನಲ್ಲಿರುವ ರಾಜಾ ಡೀಲಕ್ಸ್ ವಸತಿ ಗೃಹದ ಮೇಲೆ ದಾಳಿ ನಡೆಸಿದಾಗ ಅಲ್ಲಿನ 110ನೇ ಸಂಖ್ಯೆಯ ಕೋಣೆಯಲ್ಲಿ ನಜೀರ್ ಹಣದ ಸಮೇತ ರಾತ್ರಿ ಪತ್ತೆಯಾದ.

ದೊಡ್ಡ ಪ್ರಮಾಣದ ಹಣವನ್ನು ಮೊದಲ ಬಾರಿಗೆ ನೋಡಿದ ತಕ್ಷಣ  ದುರಾಸೆಗೆ ಸಿಲುಕಿ, ಆ ಹಣದ ಸಮೇತ ಬೆಂಗಳೂರಿನ ಕಡೆ ಹೋಗಿ ಸೆಟ್ಲ್ ಆಗಲು ನಿರ್ಧರಿಸಿದ್ದಾಗಿ ತಿಳಿಸಿರುವ ನಜೀರ್‌ನ ಲೆಕ್ಕಾಚಾರಗಳೆಲ್ಲ ತಲೆಕೆಳಗಾಗಿ, ಪೊಲೀಸರ ಅತಿಥಿಯಾಗಿದ್ದಾನೆ.

ಹಣ ಪಡೆದ ತಕ್ಷಣ ಹೊಸಪೇಟೆಯಲ್ಲಿ ರೂ 50 ಸಾವಿರ ನೀಡಿ ಒಂದು ಬೈಕ್ ಖರೀದಿಸಿರುವ ನಜೀರ್, ಅಲ್ಲಿಂದ ಮನೆಗೆ ತೆರಳಿ, ಬೈಕ್‌ನಲ್ಲೇ ಬಳ್ಳಾರಿಗೆ ಬಂದಿದ್ದ. ಬಳ್ಳಾರಿಯ ಕೌಲ್‌ಬಜಾರ್‌ನ ಬಡಾವಣೆಯೊಂದರಲ್ಲಿ ಮನೆಯೊಂದನ್ನು ಬಾಡಿಗೆಗೆ ಕೇಳಿದ ಈತನಿಗೆ, ಪರಿಚಯ ಇಲ್ಲದವರಿಗೆ ಬಾಡಿಗೆ ನೀಡುವುದಿಲ್ಲ ಎಂದು ಮನೆಯ ಮಾಲೀಕರು ತಿಳಿಸಿದ್ದರಿಂದ ವಸತಿ ಗೃಹದಲ್ಲಿದ್ದು, ಮಾರನೇ ದಿನ ಹಿರಿಯೂರು ಅಥವಾ ಬೆಂಗಳೂರು ಕಡೆ ಪರಾರಿಯಾಗುವ ಉಪಾಯ ಮಾಡಿದ್ದ ಎಂದು ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ನಾಗರಾಜ್ ತಿಳಿಸಿದ್ದಾರೆ.

ಈತ ತನ್ನನ್ನು ಅಪಹರಿಸಲಾಗಿದೆ ಎಂಬ ನಾಟಕವಾಡಿ ತಾನೇ ಓಡಿದ ಹಳ್ಳಕ್ಕೆ ತಾನೇ ಬಿದ್ದಿದ್ದಾನೆ. ಘಟನೆ ನಡೆದು 8 ಗಂಟೆ ಕಳೆಯುವಷ್ಟರಲ್ಲಿ ಪ್ರಕರಣವನ್ನು ಭೇದಿಸುವಲ್ಲಿ ಡಿವೈಎಸ್‌ಪಿ ಎ.ಎಸ್. ಘೋರಿ, ಸಿಪಿಐಗಳಾದ ಬಾಲಾಜಿಸಿಂಗ್, ಎಸ್.ಎಸ್. ಹುಲ್ಲೂರ ಮತ್ತಿತರ ತಂಡವು ಯಶಸ್ವಿಯಾಗಿದ್ದು ಅವರೆಲ್ಲರಿಗೂ ನಗದು ಪುರಸ್ಕಾರ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT