ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಾಯಕಾರಿ ತ್ಯಾಜ್ಯ - ಕಡಿವಾಣ ಅಗತ್ಯ

Last Updated 21 ಫೆಬ್ರುವರಿ 2011, 19:55 IST
ಅಕ್ಷರ ಗಾತ್ರ

ಬೆಂಗಳೂರು: ‘ಜನರ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿರುವ ಅಪಾಯಕಾರಿ ತ್ಯಾಜ್ಯಗಳನ್ನು ಉತ್ಪಾದಿಸುವ ಕಾರ್ಖಾನೆಗಳ ಮೇಲೆ ಸರ್ಕಾರ ನಿಯಂತ್ರಣ ಹೇರಬೇಕಿದೆ’ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಎ.ಎಸ್. ಸದಾಶಿವಯ್ಯ ಒತ್ತಾಯಿಸಿದರು.

ಮಂಡಳಿ ವತಿಯಿಂದ ನಗರದಲ್ಲಿ ಸೋಮವಾರ ಏರ್ಪಡಿಸಿದ್ದ  ‘ಅಪಾಯಕಾರಿ ತ್ಯಾಜ್ಯ ನಿಯಮಗಳು 2008’ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.‘ರಾಜ್ಯದಲ್ಲಿ ಅಪಾಯಕಾರಿ ತ್ಯಾಜ್ಯಗಳ ವಿಲೇವಾರಿ ಅವೈಜ್ಞಾನಿಕವಾಗಿದೆ. ಇದು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ವಿಲೇವಾರಿ ಕುರಿತಂತೆಯೂ ಸರ್ಕಾರ ಸಾಕಷ್ಟು ನಿಯಂತ್ರಣ ವಿಧಾನಗಳನ್ನು ಜಾರಿಗೆ ತರಬೇಕಿದೆ’ ಎಂದರು.

‘ರಾಸಾಯನಿಕ ಸಂಯುಕ್ತಗಳ ತೀವ್ರತೆಯನ್ನು ತಗ್ಗಿಸಿ ಕಾರ್ಖಾನೆಗಳು ಉತ್ಪಾದಿಸುವ ತ್ಯಾಜ್ಯದ ಅಪಾಯದ ಮಟ್ಟವನ್ನು ಕಡಿಮೆಗೊಳಿಸಬಹುದಾಗಿದೆ. ಅಲ್ಲದೇ ಪರಿಸರಕ್ಕೆ ಅಪಾಯವಾಗದಂತೆ ತ್ಯಾಜ್ಯವನ್ನು ಸಂಗ್ರಹಿಸಬಹುದಾಗಿದ್ದು ಇವುಗಳ ಬಗ್ಗೆಯೂ ಗಮನ ಹರಿಸಬೇಕಿದೆ’ ಎಂದರು.

‘ಬೃಹತ್ ಕೈಗಾರಿಕೆಗಳು ಮಾತ್ರವಲ್ಲದೇ ಪ್ರತಿಯೊಬ್ಬರೂ ಅಪಾಯಕಾರಿ ತ್ಯಾಜ್ಯಗಳ ನಿರ್ವಹಣೆ ಬಗ್ಗೆ ಗಮನ ಹರಿಸಬೇಕಿದೆ. ನೀತಿ ರೂಪಿಸುವವರ ಮೇಲೆ ಪ್ರಭಾವ ಬೀರುವ ಉದ್ದೇಶದಿಂದ ಅಪಾಯಕಾರಿ ತ್ಯಾಜ್ಯಗಳನ್ನು ಉತ್ಪಾದಿಸುವ ಕಾರ್ಖಾನೆಗಳ ಉತ್ಪನ್ನಗಳನ್ನು ಗ್ರಾಹಕರು ಖರೀದಿಸಬಾರದು’ ಎಂದು ಅವರು ಮನವಿ ಮಾಡಿದರು.

‘ಕಾರ್ಖಾನೆಗಳು ಉತ್ಪಾದಿಸುವ ವಸ್ತುಗಳಿಗೆ ಅನುಗುಣವಾಗಿ ತ್ಯಾಜ್ಯ ಪ್ರಮಾಣವೂ ಹೆಚ್ಚುತ್ತದೆ. ಆದ್ದರಿಂದ ಕಾರ್ಖಾನೆಗಳ ಉತ್ಪನ್ನದ ಪ್ರಮಾಣವನ್ನು ಕೂಡ ಮಂಡಳಿ ಪರಿಗಣಿಸಲಿದೆ’ ಎಂದು ಹೇಳಿದರು. 

ವಿಜ್ಞಾನಿ ಟಿ. ವೆಂಕಟೇಶ್ ಮಾತನಾಡಿ ‘ಅಪಾಯಕಾರಿ ತ್ಯಾಜ್ಯಗಳಲ್ಲಿ ಸೀಸದ ಪ್ರಮಾಣ ಹೆಚ್ಚಿದ್ದು ಕಾರ್ಖಾನೆಗಳು ಮುಂಜಾಗ್ರತಾ ಕ್ರಮ ಕೈಗೊಂಡರೂ ಸೀಸದ ಅಡ್ಡ ಪರಿಣಾಮಗಳನ್ನು ತಡೆಯುವುದು ಸಾಧ್ಯವಾಗುತ್ತಿಲ್ಲ. ಇದು ಕಾರ್ಮಿಕರ ಕುಟುಂಬಗಳ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.‘ಆಸ್ಪತ್ರೆಗಳಲ್ಲಿ ದ್ರವ ತ್ಯಾಜ್ಯ ನಿರ್ವಹಣೆ ಸರಿಯಾದ ರೀತಿಯಲ್ಲಿ ನಡೆಯುತ್ತಿಲ್ಲ. ಕೊಳಚೆ ನೀರನ್ನು ಸಂಸ್ಕರಿಸದೇ ಇರುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಸೌರಶಕ್ತಿಯನ್ನು ಬಳಸಿ ಇಂತಹ ತ್ಯಾಜ್ಯಗಳನ್ನು ಸಂಸ್ಕರಿಸಬಹುದಾಗಿದ್ದು ಈ ಬಗ್ಗೆ ಗಮನ ಹರಿಸುವ ಅಗತ್ಯವಿದೆ’ ಎಂದರು.

ಮಂಡಳಿಯ ಸದಸ್ಯ ಕಾರ್ಯದರ್ಶಿ ಎಂ.ಎಸ್.ಗೌಡರ್ ಮಾತನಾಡಿ ‘ಅಸಂಘಟಿತ ವಲಯದಲ್ಲಿ ಅಪಾಯಕಾರಿ ತ್ಯಾಜ್ಯಗಳ ನಿರ್ವಹಣೆ ವ್ಯವಸ್ಥಿತವಾಗಿಲ್ಲ. ಸೀಸ, ಲೀಚೆಂಟ್ ಪುನರ್ ಬಳಕೆ, ಬಳಕೆ ಮಾಡಿದ ಮತ್ತು ತ್ಯಾಜ್ಯ ಎಣ್ಣೆಯ ಮರುಬಳಕೆ ಹಾಗೂ ಸಾಲ್ವೆಂಟ್ ಪುನರ್ ಬಳಕೆಯ ವೇಳೆ ಅಪಾರ ಪ್ರಮಾಣದ ತ್ಯಾಜ್ಯ ಉತ್ಪಾದನೆಯಾಗುತ್ತಿದೆ’ ಎಂದು ಹೇಳಿದರು.

‘ಹೊಲ, ನದಿಗಳು ಮುಂತಾದ ಕಡೆಗಳಿಗೆ ಅಪಾಯಕಾರಿ ತ್ಯಾಜ್ಯವನ್ನು ವಿಲೇವಾರಿ ಮಾಡಲಾಗುತ್ತಿದೆ. ತ್ಯಾಜ್ಯದಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ತ್ಯಾಜ್ಯ ನಿರ್ವಾಹಕರಲ್ಲಿ ಜಾಗೃತಿ ಮೂಡಬೇಕಿದೆ’ ಎಂದು ತಿಳಿಸಿದರು.

ಮಂಡಳಿಯ ಅಪಾಯಕಾರಿ ತ್ಯಾಜ್ಯ ನಿರ್ವಹಣೆ ಸಮಿತಿಯ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಡಿ.ಆರ್. ಕುಮಾರಸ್ವಾಮಿ, ಲೀಡೇಜ್ ಕಂಪೆನಿಯ ಮಾಲೀಕ ಮುರಳಿ, ಎ.ಟಿ. ಅಂಡ್ ಎಸ್ ಕಂಪೆನಿಯ ಮುಖಸ್ಥ ಡಾ. ಮಾರುತಿ, ಬಯೊಕಾನ್ ಅಧಿಕಾರಿ ಡಾ. ಕಾಮೇಶ್ವರರಾವ್, ಸೆಂಚುರಿ ರಿಫೈನರೀಸ್ ಪ್ರೈ. ಲಿಮಿಟೆಡ್ ಮುಖ್ಯಸ್ಥ ಭಾರದ್ವಾಜ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT