ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಾಯದ ಗಂಟೆ ಬಾರಿಸುತ್ತಿರುವ ಸೇತುವೆಗಳು!

Last Updated 12 ಡಿಸೆಂಬರ್ 2012, 6:44 IST
ಅಕ್ಷರ ಗಾತ್ರ

ಬಳ್ಳಾರಿ: ಈ ಮಾರ್ಗದಲ್ಲಿರುವ ಸೇತುವೆಯ ತಡೆಗೋಡೆಗಳು ಹದಗೆಟ್ಟು ಹೋಗಿರುವುದರಿಂದ ವಾಹನಗಳು ಯಾವುದೇ ಸಂದರ್ಭದಲ್ಲಿ ಅಪಘಾತಕ್ಕೆ ಒಳಗಾಗಿ ಭಾರಿ ಅಪಾಯ ಎದುರಿಸುವ ಸಾಧ್ಯತೆ ಇದೆ.

ಇದು ಬಳ್ಳಾರಿ ಮತ್ತು ತೋರಣಗಲ್ ನಡುವೆ ರಾಷ್ಟ್ರೀಯ ಹೆದ್ದಾರಿ (ಎನ್‌ಎಚ್- 63)ಯಲ್ಲಿರುವ ಸೇತುವೆಗಳ ದುಸ್ಥಿತಿ.
ನಿತ್ಯವೂ ಸಾವಿರಾರು ವಾಹನಗಳು ಈ ಹೆದ್ದಾರಿಗುಂಟ ಕರ್ನಾಟಕ ಮತ್ತು ಆಂಧ್ರಪ್ರದೇಶ ನಡುವೆ ಸಂಚರಿಸುತ್ತವೆ. ಕುಡುತಿನಿ, ತೋರಣಗಲ್ಲು, ಹೊಸಪೇಟೆ ಮತ್ತು ಬಳ್ಳಾರಿ ನಡುವೆ ಇರುವ ಉಕ್ಕಿನ ಕಾರ್ಖಾನೆಗಳು, ಅನೇಕ ಮೆದು ಕಬ್ಬಿಣ ಘಟಕಗಳಿಂದ ಓಡಾಡುವ ಭಾರಿ ವಾಹನಗಳೂ ಇದರಲ್ಲಿ ಸೇರಿವೆ.

ಆದರೆ, ಈ ಹೆದ್ದಾರಿಯಲ್ಲಿರುವ ಸಣ್ಣಪುಟ್ಟ ಸೇತುವೆಗಳೂ, ಅವುಗಳಿಗೆ ಅಳವಡಿಸಲಾಗಿರುವ ತಡೆಗೋಡೆಗಳು ಹಾಳಾಗಿದ್ದು, ಸಂಪೂರ್ಣ ಶಿಥಿಲಾವಸ್ತೆ ತಲುಪಿವೆ.

ಕುರೇಕುಪ್ಪ- ತೋರಣಗಲ್ಲು ಮಧ್ಯದಲ್ಲಿರುವ ತುಂಗಭದ್ರಾ ಮೇಲ್ಮಟ್ಟದ ಕಾಲುವೆಗೆ ಸಮರ್ಪಕ ತಡೆಗೋಡೆ ಇಲ್ಲದ್ದರಿಂದ ನಸುಕಿನ ವೇಳೆಯಲ್ಲಿ ಶಿರಡಿಯಿಂದ ಮರಳುತ್ತಿದ್ದ ಇಂಡಿಕಾ ಕಾರ್‌ನ ಚಾಲಕನ ನಿಯಂತ್ರಣ ತಪ್ಪಿ, ನೀರಲ್ಲಿ ಬಿದ್ದಿದ್ದರಿಂದ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಐವರು ಸಾವಿಗೀಡಾಗಿರುವ ಕಹಿ ಘಟನೆ ಕಳೆದ ವರ್ಷ ನಡೆದಿದೆ. ಈ ಸೇತುವೆಯೂ ಒಳಗೊಂಡಂತೆ ತೋರಣಗಲ್ಲು, ಕುಡುತಿನಿ ಮತ್ತು ಬಳ್ಳಾರಿ ಮಧ್ಯದ ಐದು ಪ್ರಮುಖ ಸೇತುವೆಗಳು ಶಿಥಿಲಗೊಂಡಿದ್ದು, ಸ್ಪರ್ಧೆಗೆ ನಿಂತವರಂತೆ ಅತಿ ವೇಗದಿಂದ ಚಲಾಯಿಸುವ ಚಾಲಕರಿಂದಾಗಿ, ವಾಹನಗಳು ತಡೆಗೋಡೆಯಿಂದ ಕೆಳಕ್ಕೆ ಕುಸಿದು ಬೀಳುವ ಅಪಾಯವಿದೆ.

ಸೇತುವೆಯ ಮೇಲೇ ಒಂದನ್ನೊಂದು ಹಿಂದಿಕ್ಕಲು ಯತ್ನಿಸುವ ಚಾಲಕರು ಕೊಂಚವೇ ನಿರ್ಲಕ್ಷ್ಯವಹಿಸಿದರೂ ಅಪಾಯ ಕಟ್ಟಿಟ್ಟಬುತ್ತಿ.
ಕುಡುತಿನಿಯಿಂದ ವೇಣಿ ವೀರಾಪುರ ಮಧ್ಯೆ ಎರಡು, ವೇಣಿ ವೀರಾಪುರದಿಂದ ಅಲ್ಲಿಪುರದವರೆಗೆ ಎರಡು ಸೇತುವೆಗಳ ಸ್ಥಿತಿ `ಅಯೋಮಯ' ಎನ್ನುವಂತಿದೆ.

ಬಳ್ಳಾರಿಯ ಹೊರ ವಲಯದಲ್ಲಿರುವ ಅಲ್ಲಿಪುರದ ಬಳಿಯ ತುಂಗಭದ್ರಾ ಮೇಲ್ಮಟ್ಟದ ಕಾಲುವೆಗೆ ನಿರ್ಮಿಸಲಾಗಿರುವ ಸೇತುವೆಯೂ ಶಿಥಿಲಗೊಂಡಿದ್ದು, ತಡೆಗೋಡೆ ಸಂಪೂರ್ಣ ಹಾಳಾಗಿದೆ. ಇಲ್ಲಿ ಅಪಘಾತ ಸಂಭವಿಸಿದರೆ, ತುಂಬಿ ಹರಿಯುವ ನೀರಿನಲ್ಲಿ ವಾಹನಗಳು ಮುಳುಗುವ ಸಾಧ್ಯತೆಗಳಿವೆ. ಅಷ್ಟೇ ಅಲ್ಲದೆ, ಶಿಥಿಲಾವಸ್ತೆಯಲ್ಲಿರುವ ಈ ಸೇತುವೆ ಕುಸಿದಲ್ಲಿ, ಬಳ್ಳಾರಿ ಮತ್ತು ಹೊಸಪೇಟೆ ನಡುವಿನ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆಯೂ ಇದೆ.

ಹದಗೆಟ್ಟ ರಸ್ತೆ: ಬಳ್ಳಾರಿಯಿಂದ ಹೊಸಪೇಟೆಗೆ ತೆರಳುವ ಮಾರ್ಗದಲ್ಲಿ ಈ ಹೆದ್ದಾರಿಯು ಗಾದಿಗನೂರು ಗ್ರಾಮದವರೆಗೂ ಹದಗೆಟ್ಟಿದ್ದು, 40 ಕಿಮೀ ದೂರದ ಈ ಅಂತರವನ್ನು ಕ್ರಮಿಸಲು ಅಂದಾಜು ಒಂದೂವರೆಯಿಂದ ಎರಡು ಗಂಟೆ ವ್ಯಯವಾಗುತ್ತಿದೆ.

ಭಾರಿ ವಾಹನಗಳು ಓಡಾಡುವುದರಿಂದ ಅಲ್ಲಲ್ಲಿ ಸಂಚಾರ ದಟ್ಟಣೆಯಾಗುತ್ತ, ಈ ಮಾರ್ಗದ ಪ್ರಯಾಣ ನರಕಯಾತನೆ ಎಂಬಂತಾಗಿದೆ.

ಈ ಹೆದ್ದಾರಿಯನ್ನು ಷಟ್ಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲು ರೂಪುರೇಷೆ ಸಿದ್ಧಪಡಿಸಿದ್ದರೂ, ಕಾಮಗಾರಿ ಆರಂಭವಾಗುವುದು ವಿಳಂಬವಾಗುತ್ತ ಸಾಗಿರುವುದರಿಂದ ಪ್ರಯಾಣಿಕರ ಸಮಸ್ಯೆ ಮುಂದುವರಿದೇ ಇದೆ.

ರಸ್ತೆಯ ಅಭಿವೃದ್ಧಿಗೂ, ಸೇತುವೆಗಳ ಅಭಿವೃದ್ಧಿಗೂ ಕ್ರಮ ಕೈಗೊಳ್ಳಬೇಕು. ಅಪಾಯ ಎದುರಾಗುವ ಮುನ್ನವೇ ಸೇತುವೆಗಳಿಗೆ ತಡೆಗೋಡೆಯನ್ನಾದರೂ ನಿರ್ಮಿಸಿ ಸುರಕ್ಷಿತತೆಗೆ ಗಮನ ಹರಿಸುವ ಅಗತ್ಯವಿದೆ ಎಂಬುದು ಸಾರ್ವಜನಿಕರ ಕೋರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT