ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಾಯದ ಮರಗಳಿಗೆ ಕೊಡಲಿ ಏಟು..!

ನಗರ ಸಂಚಾರ
Last Updated 1 ಜುಲೈ 2013, 8:28 IST
ಅಕ್ಷರ ಗಾತ್ರ

ಕಾರವಾರ:  ದೇವದಾರು, ಮಾವು, ಬಾದಾಮ್, ಕ್ಯಾಸುರಿನಾ (ಗಾಳಿ ಮರ), ಮಿಲ್ಲಿಂಗ್ಟೋನಿಯಾ, ಯುಕೆಲಿಫ್ಟಸ್, ಸ್ವೈಪೆನಿಯಾ, ಪ್ಲೇಟಾಫಾರ್ಮ್, ವಾಟೆರಿಯಾ ಇಂಡಿಕಾ ಆಲದ ಮರ... ಹೀಗೆ ನಗರದ ಎಲ್ಲ ಬೀದಿಗಳಲ್ಲಿ ಸುಮಾರು 106 ಜಾತಿಯ ಉಪಯುಕ್ತ ಮರಗಳಿವೆ.

ಬೆಂಗಳೂರು ಹೊರತುಪಡಿಸಿದರೆ ನಗರ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ಗಿಡ-ಮರಗಳನ್ನು ಹೊಂದಿರುವ ನಗರ ಎನ್ನುವ ಖ್ಯಾತಿ ಕಾರವಾರಕ್ಕಿದೆ. ನಗರದ ಎಲ್ಲ ಬೀದಿಗಳಲ್ಲಿರುವ ಮರಗಳು ನಗರದ ಸೌಂದರ್ಯವನ್ನೂ ಇಮ್ಮಡಿಗೊಳಿಸಿವೆ. ಸಾಲುಸಾಲು ಮರಗಳ ಕಾರಣದಿಂದ ನಗರದಲ್ಲಿ ಗ್ರೀನ್‌ಸ್ಟ್ರೀಟ್ ಎನ್ನುವ ಹೆಸರಿನಲ್ಲೇ ಬೀದಿಯೊಂದು ನಿರ್ಮಾಣವಾಗಿದೆ.

ನೂರಾರು ವರ್ಷಗಳಿಂದ ಸಾರ್ವಜನಿಕರಿಗೆ ನೆರಳಾಗಿ, ಫುಟ್‌ಪಾತ್ ವ್ಯಾಪಾರಿಗಳಿಗೆ ಆಶ್ರಯ ನೀಡಿರುವ ಮರಗಳಲ್ಲಿ ಕೆಲವು ಬೀದಿಗಳಲ್ಲಿರುವ ಬ್ರಹತ್ ಗಾತ್ರದ ಮರಗಳು ಮಳೆಗಾಲದ ಆರಂಭದಲ್ಲೇ ನೆಲಕ್ಕುರುಳಿ ಮತ್ತೆ ಕೆಲ ಮರಗಳು ಟೊಂಗೆಗಳು ಮುರಿದು ಬಿದ್ದು ಸಾರ್ವಜನಿಕರ ಆಪ್ತಿಪಾಸ್ತಿಗೆ ಹಾನಿಯನ್ನುಂಟು ಮಾಡಿ ಅಪಾಯದ ಮುನ್ಸೂಚನೆ ನೀಡುತ್ತಿವೆ.

ಅರಬ್ಬಿ ಸಮುದ್ರದಲ್ಲಿ ಆಗಾಗ ಬೀಸುವ ಬಿರುಗಾಳಿಗೆ ರಸ್ತೆ ಇಕ್ಕೆಲಗಳಲ್ಲಿರುವ ಮರಗಳು ಅತ್ತಿತ್ತ ಹೊಯ್ದಾಟ ನಡೆಸಿ ಸಾರ್ವಜನಿಕರಲ್ಲಿ ಭೀತಿಯನ್ನುಂಟು ಮಾಡುತ್ತಿವೆ. ಕೋಡಿಬಾಗ ಮುಖ್ಯರಸ್ತೆಯಲ್ಲಿರುವ ಆಲದ ಮರವೊಂದು ಕಾರಿನ ಮೇಲೆ ಬಿದ್ದು ನೆಲಕ್ಕುರುಳಿದ ನಂತರ ಈ ಭೀತಿ ಇಮ್ಮಡಿಯಾಗಿದೆ.

ರಸ್ತೆಯ ಇಕ್ಕೆಲಗಳಲ್ಲಿರುವ ಮರಗಳು ನೆಲಕ್ಕುರುಳಿ ಅಥವಾ ಟೊಂಗೆ ಮುರಿದು ಬಿದ್ದರೆ ಸಾರ್ವಜನಿಕರಿಗೆ ಹಾಗೂ ಆಸ್ತಿಪಾಸ್ತಿಗಳಿಗೆ ಹಾನಿಯಾಗಬಹುದು ಎನ್ನುವ ಕಾರಣದಿಂದ ಮುನ್ನೆಚ್ಚರಿಕೆ ಕ್ರಮವಾಗಿ ನಗರಸಭೆ ಅರಣ್ಯ ಇಲಾಖೆಯ ನೆರವು ಪಡೆದು ಅಪಾಯದ ಹಂತದಲ್ಲಿರುವ ಮರ ಮತ್ತು ಅವುಗಳ ಟೊಂಗೆ ಕಡಿಯಲು ನಿರ್ಧರಿಸಿದೆ.

ಈಗಾಗಲೇ ನಗರಸಭೆ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ನಗರದ ಹಬ್ಬುವಾಡಾ, ಬಾಂಡಿಶಿಟ್ಟಾ, ಮಹಾತ್ಮಗಾಂಧಿ ರಸ್ತೆ, ಕಾಜುಬಾಗ-ಕೊಡಿಬಾಗ ಮುಖ್ಯರಸ್ತೆ, ಕಾಜುಬಾಗ ಕ್ರಾಸ್-ಸುಂಕೇರಿಯ. ಗ್ರೀನ್‌ಸ್ಟ್ರೀಟ್, ಪಿಕಳೆ ರಸ್ತೆಯಲ್ಲಿ ಜಂಟಿ ಸರ್ವೆಕಾರ್ಯ ನಡೆಸಿ ಅಪಾಯದ ಹಂತದಲ್ಲಿರುವ ಒಟ್ಟು 64 ಮರಗಳನ್ನು ಗುರುತಿಸಿದ್ದಾರೆ.

ಈ 64 ಮರಗಳ ಪೈಕಿ 42 ಮರಗಳು ಸಾರ್ವಜನಿಕರಿಗೆ ಮತ್ತು ಆಸ್ತಿಪಾಸ್ತಿಗಳಿಗೆ ಅಪಾಯ ತಂದೊಡ್ಡುವ ಸ್ಥಿತಿಯಲ್ಲಿರುವುದರಿಂದ ಅವುಗಳನ್ನು ನೆಲಕ್ಕುರುಳಿಸಬೇಕು ಮತ್ತು 22 ಮರದ ಟೊಂಗೆಗಳನ್ನು ಕಡಿಯಬೇಕು ಎನ್ನುವ ನಿರ್ಧಾರವನ್ನು ಅಧಿಕಾರಿಗಳು ಕೈಗೊಂಡಿದ್ದಾರೆ.

`ನಗರದ ಕೋಡಿಬಾಗ ಮುಖ್ಯರಸ್ತೆಯಲ್ಲಿದ್ದ ಮರವೊಂದು ಕಾರಿನ ಮೇಲೆ ಬಿದ್ದು ಕಾರು ಜಖಂಗೊಂಡಿತ್ತು. ಘಟನೆಯಲ್ಲಿ ನಾಲ್ವರು ಅಪಾಯದಿಂದ ಸ್ವಲ್ಪದರಲ್ಲೇ ಪಾರಾಗಿದ್ದರು. ಈ ಘಟನೆಯ ನಂತರ ಅಪಾಯದಲ್ಲಿರುವ ಮರಗಳ ಸರ್ವೇ ನಡೆಸಿದ್ದೇವೆ. ಮರ ಮತ್ತು ಟೊಂಗೆಗಳನ್ನು ಕಡಿಯುವ ಬಗ್ಗೆ ಪರವಾನಗಿ ಪಡೆಯಲು ಅರಣ್ಯ ಇಲಾಖೆಗೆ ಪತ್ರ ಬರೆಯಲಾಗಿದೆ. ಅವರಿಂದ ಪರವಾನಗಿ ಬಂದ ನಂತರ ಟೆಂಡರ್ ಕರೆಯಲಾಗುವುದು' ಎನ್ನುತ್ತಾರೆ ನಗರಸಭೆ ಪ್ರಭಾರ ಆಯುಕ್ತ ವೆಂಕಟೇಶ.

`ಸಾರ್ವಜನಿಕರಿಗೆ ತೊಂದರೆಯನ್ನುಂಟು ಮಾಡುವ ಮರಗಳನ್ನು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿ ಕಡಿಯಬೇಕು ಎನ್ನುವ ಅನಿವಾರ್ಯತೆ ಇದೆಯೇ ಇಲ್ಲವೋ ಎನ್ನುವುದನ್ನು ನೋಡಿ, ಒಂದು ಮರ ಕಡಿದರೆ ಹತ್ತು ಮರ ನೆಡಬೇಕು ಎನ್ನುವ ಪೂರ್ವ ಷರತ್ತಿನೊಂದಿಗೆ ಮರ ಕಡಿಯಲು ಅನುಮತಿ ನೀಡುತ್ತೇವೆ' ಎನ್ನುತ್ತಾರೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮೋಹನ ಕಣಗಿಲ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT