ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಾಯದಲ್ಲಿ ಸರೀಸೃಪ

Last Updated 1 ಜೂನ್ 2013, 19:59 IST
ಅಕ್ಷರ ಗಾತ್ರ

ಜಗತ್ತಿನ ಅಗ್ರಮಾನ್ಯ ಪರಿಸರ ಸಂರಕ್ಷಣಾ ಸಂಸ್ಥೆ `ಇಂಟರ್‌ನ್ಯಾಷನಲ್ ಯೂನಿಯನ್ ಫಾರ್ ದಿ ಕಾನ್ಸರ್ವೇಶನ್ ಆಫ್ ನೇಚರ್' ಮತ್ತು ಸುಪ್ರಸಿದ್ಧ `ಜೂವಾಲಜಿಕಲ್ ಸೊಸೈಟಿ ಆಫ್ ಲಂಡನ್'- ಇವೆರಡೂ ಇತ್ತೀಚೆಗೆ ಕೈಗೊಂಡಿದ್ದ ಸರೀಸೃಪಗಳ ಸ್ಥಿತಿ-ಗತಿ ಕುರಿತ ವಿಸ್ತೃತ ಅಧ್ಯಯನದ ವರದಿ ಪ್ರತಿಷ್ಠಿತ ವಿಜ್ಞಾನ ಜರ್ನಲ್‌`ಬಯಾಲಾಜಿಕಲ್-ಕಾನ್ಸರ್ವೇಶನ್'ನಲ್ಲಿ ಇದೇ ಏಪ್ರಿಲ್‌ನಲ್ಲಿ ಪ್ರಕಟವಾಗಿದೆ.

ಧರೆಯಲ್ಲಿ ಮನುಷ್ಯರಿಗಿಂತ ಬಹಳ ಹಿಂದಿನ ಕಾಲದ್ಲ್ಲಲಿ ಈಗ್ಗೆ 35 ಕೋಟಿ ವರ್ಷ ಹಿಂದೆಯೇ ಅವತರಿಸಿ, ಧರೆಯ ಎಲ್ಲೆಡೆ ಸಾಮ್ರಾಜ್ಯ ಸ್ಥಾಪಿಸಿ, ಮಹಾಪ್ರಳಯಗಳನ್ನು ಎದುರಿಸಿದ ನಂತರವೂ ಸಾವಿರಾರು ಪ್ರಭೇದಗಳಾಗಿ ಅಸ್ತಿತ್ವದಲ್ಲಿರುವ ಈ ಯಶಸ್ವೀ ಜೀವಿವರ್ಗ ಪ್ರಸ್ತುತ ಕ್ಷಿಪ್ರ ವಿನಾಶದ ಹಾದಿಯಲ್ಲಿರುವುದನ್ನು ಆ ವರದಿ ನಿಚ್ಚಳಗೊಳಿಸಿದೆ.

ಅದರ ಪ್ರಕಾರ ಸರೀಸೃಪಗಳ ಸದ್ಯದ ಸಮೀಪ 5700 ಪ್ರಭೇದಗಳ ಶೇ 19 ಭಾಗ (ಎಂದರೆ 1083 ಪ್ರಭೇದಗಳು) ಅಳಿವಿನ ಹಾದಿ ಹಿಡಿದಿವೆ. ಆ ಪೈಕಿ ಶೇ 12 ರಷ್ಟು ಪ್ರಭೇದಗಳು ಇಂದು-ನಾಳೆ ಕಣ್ಮರೆಯಾಗುವ ಸ್ಥಿತಿಯಲ್ಲಿವೆ; ಶೇ 41 ಪ್ರಭೇದಗಳು ಅತ್ಯಲ್ಪ ಸಂಖ್ಯೆಯಲ್ಲಿದ್ದು ಅತಿ ಗಂಭೀರ ಸ್ಥಿತಿ ತಲುಪಿವೆ. `ಉಳಿದ ಶೇ 47 ರಷ್ಟು ಪ್ರಭೇದಗಳು ಅಲ್ಪಸಂಖ್ಯಾತರಾಗಿವೆ. ಸರೀಸೃಪಗಳ ಈ ದುಸ್ಥಿತಿಗೂ ಆಧುನಿಕ ಮಾನವರ ನೇರ ಅಥವಾ ಪರೋಕ್ಷ ದಾಳಿ-ಹಾವಳಿಗಳೇ ಕಾರಣ ಎಂಬುದು ಇಲ್ಲಿ ಗಮನಿಸಲೇಬೇಕಾದ ಆತಂಕಕಾರಿ ಅಂಶ.

ಪ್ರಾಣಿ ಸಾಮ್ರಾಜ್ಯದಲ್ಲಿ ಸರೀಸೃಪಗಳದು ಒಂದು ವಿಶಿಷ್ಟ ವರ್ಗ. ಉರಗವರ್ಗ ಎಂದೂ ಇದಕ್ಕೇ ಹೆಸರು. ಹಾವು, ಹಲ್ಲಿ, ಆಮೆ, ಮೊಸಳೆಗಳೆಲ್ಲ ಈ ವರ್ಗದವೇ. ಒಂದು ಕಾಲದಲ್ಲಿ ಧರೆಯನ್ನೆಲ್ಲ ಆಳಿ, ಆರೂವರೆ ಕೋಟಿ ವರ್ಷ ಹಿಂದಿನ ಮಹಾಪ್ರಳಯದಲ್ಲಿ ಸಂಪೂರ್ಣ ಅಳಿದ `ಡೈನೋಸಾರ್'ಗಳೂ (ಚಿತ್ರ-2) ಸರೀಸೃಪಗಳೇ ಆಗಿದ್ದುವು.

ಸರೀಸೃಪಗಳೆಲ್ಲ ಶೀತರಕ್ತ ಪ್ರಾಣಿಗಳು. ಹಾಗಾಗಿ ಅವಕ್ಕೆ ಆಹಾರದ ಅಗತ್ಯ ತುಂಬ ಕಡಿಮೆ. ಅವೆಲ್ಲ ತೆವಳುತ್ತ ಅಥವಾ ತೆವಳುವಂತೆ ಓಡಾಡುತ್ತವೆ. ಎಲ್ಲ ಸರೀಸೃಪಗಳೂ ಮೊಟ್ಟೆ ಇಡುತ್ತವೆ. ಮೊಟ್ಟೆಯಿಂದ ಹೊರಬರುವಾಗಲೇ ಮರಿ ಪ್ರೌಢವಾಗಿರುತ್ತದೆ; ಸ್ವತಂತ್ರ ಬದುಕನ್ನು ಆರಂಭಿಸುತ್ತದೆ. ಅತ್ಯಂತ ಶೀತದ ಧ್ರುವಗಳ ಸನಿಹದ ಪ್ರದೇಶಗಳನ್ನು ಬಿಟ್ಟು ಉಳಿದೆಲ್ಲೆಡೆ ಅವು ನೆಲೆಸಿವೆ. ಆದರೂ ಸರೀಸೃಪಗಳ ವೈವಿಧ್ಯ ಮತ್ತು ದಟ್ಟಣೆ ಎರಡೂ ಉಷ್ಣವಲಯದಲ್ಲಿ ಗರಿಷ್ಠ. ಪ್ರಸ್ತುತ ಉರಗಗಳ ಐದು ವಿಧಗಳು ಅಸ್ತಿತ್ವದಲ್ಲಿವೆ:
* ಸರೀಸೃಪಗಳ ಮೊದಲ ವಿಧ `ಕಿಲೋನಿಯನ್'ಗಳದು. ಆಮೆ, ಕಡಲಾಮೆ (ಚಿತ್ರ 6, 10) ಮತ್ತು ಟೆರಾಪಿನ್‌ಗಳನ್ನೊಳಗೊಂಡ ಈ ಗುಂಪಿನಲ್ಲಿ ಒಟ್ಟು ಎರಡು ನೂರು ಪ್ರಭೇದಗಳಿವೆ.

* ಸರೀಸೃಪಗಳ ಎರಡನೆಯ ಗುಂಪು ಹಲ್ಲಿಗಳದು (ಚಿತ್ರ 3, 5, 9, 11). `ಲೇಸರ್ ಟೇಲಿಯಾ' ಎಂಬ ಈ ಗುಂಪಿನಲ್ಲಿ ಭಾರೀ ವೈವಿಧ್ಯ ಇದೆ ಒಟ್ಟು ಎರಡು ಸಾವಿರ ಪ್ರಭೇದಗಳಿವೆ.

* ಸರೀಸೃಪಗಳ ಅತಿ ಬೃಹತ್ ಗುಂಪು ಸರ್ಪಗಳದು (ಚಿತ್ರ 4, 7, 8). `ಓಫೀಡಿಯಾ' ಎಂಬ ಈ ಗುಂಪಿನದೇ ಗರಿಷ್ಠ ವೈವಿಧ್ಯ. ಸರ್ಪಗಳಲ್ಲಿ ಮೂರು ಸಾವಿರದ ಐದುನೂರು ಪ್ರಭೇದಗಳಿವೆ.

* ಮೊಸಳೆಗಳದು ಸರೀಸೃಪಗಳ ನಾಲ್ಕನೆಯ ಬಗೆ. `ಕ್ರೊಕೋಡೀಲಿಯಾ' ಗುಂಪಿನಲ್ಲಿ ನಾಲ್ಕು ಪ್ರಧಾನ ಬಗೆಗಳಿವೆ: `ಕ್ರೋಕೋಡೈಲ್, ಆ್ಯಲಿಗೇಟರ್, ಕೇಮ್ಯಾನ್ ಮತ್ತು ಫವಿಯಲ್' (ಚಿತ್ರ 8, 12).

* ಸರೀಸೃಪಗಳ ಐದನೆಯ ಮತ್ತು ಅಂತಿಮ ವಿಧ `ರಿಂಖೋಸಿಫಾಲಿಯಾ'. ಒಂದೇ ಒಂದು ಪ್ರಭೇದ `ಟ್ವಟಾರಾ' ಈ ವಿಧವನ್ನು ರೂಪಿಸಿದೆ. ಡೈನೋಸಾರ್‌ಗಳ ಸಹಚರ ಆಗಿದ್ದ ಈ ಸರೀಸೃಪ ಹೇಗೋ ಅಳಿಯದೆ ಉಳಿದು `ಜೀವಂತ ಪಳೆಯುಳಿಕೆ' ಎಂದೇ ಪ್ರಸಿದ್ಧವಾಗಿದೆ. ಸದ್ಯದಲ್ಲಿ ನ್ಯೂಜಿಲ್ಯಾಂಡ್‌ನಲ್ಲಿ ಮಾತ್ರ ಅತ್ಯಲ್ಪ ಸಂಖ್ಯೆಯಲ್ಲಿ ಇದರ ಅಸ್ತಿತ್ವ.

ಈಗ್ಗೆ 345 ರಿಂದ 280 ದಶಲಕ್ಷ ವರ್ಷ ಹಿಂದಿನ `ಕಾರ್ಬಾನಿಫರಸ್ ಯುಗದಲ್ಲಿ' ಅವತರಿಸಿದಾಗಿನಿಂದಲೂ (ಚಿತ್ರ-1) ಪ್ರಕೃತಿಯಲ್ಲಿ ಸರೀಸೃಪಗಳದು ಬಹುಮಹತ್ವದ ಬಹುವಿಧ ಪಾತ್ರ. ಧರೆಯ ಬಹುಪಾಲು ಎಲ್ಲ ಜೀವಾವಾರಗಳಲ್ಲೂ ಸಾವಿರಾರು `ಜೀವ ಸರಪಳಿ'ಗಳಲ್ಲಿ, `ಆಹಾರ ಸರಪಣಿ'ಗಳಲ್ಲಿ ಸರೀಸೃಪಗಳು ನಿರ್ಣಾಯಕ  ಕೊಂಡಿಗಳಾಗಿವೆ. ಹಾಗೆಂದರೆ ಅವು ಬೇಟೆಗಾರರ ಸ್ಥಾನದಲ್ಲಿದ್ದು ಇತರ ಹೇರಳ ಜೀವಿ ವಿಧಗಳ ಸಂಖ್ಯಾ ನಿಯಂತ್ರಣ ಮಾಡುತ್ತಿವೆ. ಅಥವಾ ಬಲಿಗಳಾಗಿ ಬಹುಬಗೆಯ ಬೇರೆ ಪ್ರಾಣಿಗಳಿಗೆ ಆಹಾರವಾಗುತ್ತಿವೆ. ಆದ್ದರಿಂದಲೇ ಸರೀಸೃಪಗಳ ಒಂದೊಂದು ಪ್ರಭೇದ ಅಳಿದಾಗಲೂ ಅಲ್ಪಸಂಖ್ಯಾತವಾದಾಗಲೂ ಹಲವಾರು ಆಹಾರ ಸರಪಳಿಗಳು ತುಂಡಾಗುತ್ತವೆ. ಎಂದರೆ ಇತರ ಪ್ರಾಣಿಗಳ ಬದುಕು ಸಂಕಷ್ಟಕ್ಕೆ ಸಿಲುಕುತ್ತದೆ ಅಥವಾ ಕೆಲ ಪ್ರಾಣಿಗಳ ಸಂಖ್ಯೆ ವಿಪರೀತ ಹೆಚ್ಚುತ್ತದೆ. ಒಟ್ಟಾರೆ ನಿಸರ್ಗದ ಸಮತೋಲನ ಏರು ಪೇರಾಗುತ್ತದೆ (ಉದಾಹರಣೆ: ಹಾವುಗಳಿಂದಾಗಿ ಇಲಿಗಳ ಸಂಖ್ಯೆ, ವಿಧ ವಿಧ ಹಲ್ಲಿಗಳಿಂದಾಗಿ ಕೀಟಗಳ ಸಂಖ್ಯೆ, ಕಡಲಾಮೆಗಳಿಂದಾಗಿ ಜೆಲ್ಲಿ ಮೀನುಗಳ ಸಂಖ್ಯೆ ಹತೋಟಿಯಲ್ಲಿದೆ).

ಹಾಗಿದ್ದೂ, ಅದೆಲ್ಲ ತಿಳಿದಿದ್ದೂ, ಸರೀಸೃಪಗಳು ಮನುಷ್ಯರಿಂದಾಗಿ ಅಪಾಯಕ್ಕೆ ಸಿಲುಕಿವೆ. ಅದಕ್ಕೆ ಮೂರು ಪ್ರಧಾನ-ಕಾರಣಗಳಿವೆ:

* ನಗರ ವಿಸ್ತರಣೆ, ಕೈಗಾರಿಕಾ ನಿರ್ಮಾಣ ಮತ್ತು ಗಣಿಗಾರಿಕೆಗಳಿಗಾಗಿ ಅಡವಿ ಮತ್ತು ಹುಲ್ಲುಗಾವಲಿನ ಪ್ರದೇಶಗಳು ಹಾಗೂ ಹೊಲ ಗದ್ದೆಗಳೂ ಕೂಡ `ನೆಲಸಮ'ವಾಗಿ ಕಾಂಕ್ರಿಟ್ ಕಾಡುಗಳಾಗುತ್ತಿವೆ. ಹಾಗಾಗಿ ಹೇರಳ ಸರೀಸೃಪಗಳು- ವಿಶೇಷವಾಗಿ ಹಾವು ಹಲ್ಲಿಗಳು- ನೆಲೆ ಇಲ್ಲದೆ ನಿರ್ನಾಮವಾಗುತ್ತಿವೆ.

* ವಿಚಿತ್ರ, ವಿಕೃತ ಖಾದ್ಯಗಳನ್ನು ತಯಾರಿಸಿ ತಿನ್ನಲು ಲೆಕ್ಕವಿಲ್ಲದಷ್ಟು ಸರೀಸೃಪಗಳು ಬಲಿಯಾಗುತ್ತಿವೆ. ಉಡಗಳಂತಹ ಭಾರೀ ಹಲ್ಲಿಗಳು, ನೂರಾರು ಬಗೆಯ ಸರ್ಪಗಳು, ಮೊಸಳೆಗಳು, ಆಮೆ-ಕಡಲಾಮೆಗಳು ಬರ್ಬರವಾಗಿ ಹತ್ಯೆಗೊಳ್ಳುತ್ತಿವೆ. ಕಳ್ಳಬೇಟೆಯಾಡಿ ಸಂಗ್ರಹಿಸಿ ಕೂಡಿಹಾಕಿದ ಇಂತಹ ಸರೀಸೃಪಗಳನ್ನು ವಿಕೃತ ಜಿಹ್ವಾ ಚಾಪಲ್ಯದ ಗ್ರಾಹಕರ ಕಣ್ಣೆದುರಿಗೇ ಕ್ರೂರವಾಗಿ ಹಿಂಸೆ ನೀಡಿ ಕೊಂದು ತಿಂಡಿ ತಯಾರಿಸಿ ನೀಡುವ ವಿಶೇಷ ಹೋಟೆಲ್‌ಗಳು ಕೆಲವಾರು ರಾಷ್ಟ್ರಗಳಲ್ಲಿವೆ. ಕಡಲಂಚಿನ ಮರಳಲ್ಲಿ ಕಡಲಾಮೆಗಳು ಮೊಟ್ಟೆ ಇಡುತ್ತಿರುವಾಗಲೇ ಎಲ್ಲ ಮೊಟ್ಟೆಗಳನ್ನೂ ಬಾಚಿ ತಂದು ಅಡುಗೆ ಮಾಡಲಾಗುತ್ತಿದೆ. ಹಾಗೆಯೇ ಸರ್ಪಗಳ ಮೊಸಳೆಗಳ ಚರ್ಮದ ಪರ್ಸು-ಬ್ಯಾಗುಗಳನ್ನು, ಆಮೆ ಕಲಾಕೃತಿಗಳನ್ನು ಖರೀದಿಸುವ ವಿಕೃತ ಶೋಕಿಲಾಲರಿಂದಾಗಿಯೂ ಸರೀಸೃಪಗಳು ನಾಶಗೊಳ್ಳುತ್ತಿವೆ.

* ಊಸರವಳ್ಳಿಯಂತಹ ಹಲ್ಲಿಗಳ, ಎಲ್ಲ ಬಗೆಯ ಸರ್ಪಗಳ ಮತ್ತು ಮೊಸಳೆಗಳ ಬಗೆಗಿನ ಹೆದರಿಕೆ, ಅಜ್ಞಾನ ಮತ್ತು ಮೂಢನಂಬಿಕೆಗಳೂ ಇಂಥ ಸರೀಸೃಪಗಳನ್ನು ತೀವ್ರ ಅಪಾಯಕ್ಕೆ ತಳ್ಳಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT