ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಾರ ತಾಳ್ಮೆ ಅಗತ್ಯ

Last Updated 19 ಮಾರ್ಚ್ 2014, 19:30 IST
ಅಕ್ಷರ ಗಾತ್ರ

ಪರೀಕ್ಷೆಯ ಮತ್ತು ಶಾಲಾ ಶಿಕ್ಷಣದ ಒತ್ತಡಕ್ಕೆ ಮತ್ತಿಬ್ಬರು ಬಾಲೆಯರು ಬಲಿಯಾಗಿದ್ದಾರೆ. ಬೆಂಗಳೂರಿನ ಖಾಸಗಿ ಶಾಲೆಯ ಎಸ್ಸೆಸ್ಸೆಲ್ಸಿ ಮತ್ತು ಒಂಬತ್ತನೇ ತರಗತಿಯ ಇಬ್ಬರು ವಿದ್ಯಾರ್ಥಿನಿಯರು ಸ್ಯಾಂಕಿ ಕೆರೆಗೆ ಹಾರಿ ಆತ್ಮ­ಹತ್ಯೆ ಮಾಡಿಕೊಂಡಿರುವುದು ದುರದೃಷ್ಟಕರ ಹಾಗೂ ಮನಕಲಕುವ ಘಟನೆ. ವಾರವೊಂದರಲ್ಲಿ ಬೆಂಗಳೂರಿನಲ್ಲಿ ಇದು ಇಂತಹ ಮೂರನೇ ಘಟನೆ.  ಕಳೆದ ವಾರ ಪರೀಕ್ಷೆಯ ಒತ್ತಡ ಎದುರಿಸಲಾಗದೆ ಇಬ್ಬರು ಹುಡುಗಿ­ಯರು ಆತ್ಮಹತ್ಯೆ ಮಾಡಿಕೊಂಡಿದ್ದರು.

ಹದಿಹರೆಯದ ಹೆಣ್ಣುಮಕ್ಕಳಲ್ಲಿ ಸಹಜವಾಗಿರುವ ಮಾನಸಿಕ ಹಾಗೂ ಶಾರೀರಿಕ ಪರಿವರ್ತನೆಯ ಕಾಲದಲ್ಲಿ  ಮನಸ್ಸುಗಳು ಸೂಕ್ಷ್ಮವಾಗಿ ರುತ್ತವೆ. ಈ ಮನಸ್ಥಿತಿಯನ್ನು ನಿಭಾಯಿಸುವ  ಬದುಕಿನ ಕಲೆಯನ್ನು ನಮ್ಮ ಮಕ್ಕಳಿಗೆ  ಕಲಿಸುವುದು ಅಗತ್ಯ. ಶಾಲೆಯ ಆವ­ರಣ­ದಲ್ಲಿ ಹೋಳಿ ಆಡಿದ್ದಕ್ಕಾಗಿ ಮುಖ್ಯ ಶಿಕ್ಷಕಿಯರು ಬೈದು, ಬುದ್ಧಿ ಹೇಳಿದ­ರೆಂಬ ಕಾರಣಕ್ಕೆ ಈ ಇಬ್ಬರು ಹೆಣ್ಮಕ್ಕಳೂ ಆತ್ಮಹತ್ಯೆಯಂತಹ ದುಡುಕಿನ ನಿರ್ಧಾರ ಕೈಗೊಂಡಿರುವುದು ಈ ಅಗತ್ಯವನ್ನು ಮತ್ತೊಮ್ಮೆ ಪ್ರತಿಪಾದಿಸು­ತ್ತದೆ.

ಎಸ್ಸೆಸ್ಸೆಲ್ಸಿ ಮತ್ತು ಒಂಬತ್ತನೇ ತರಗತಿಯಲ್ಲಿ ವಿದ್ಯಾರ್ಥಿಗಳು ಓದಿನ ಕಡೆಗೆ ಹೆಚ್ಚಿನ ಗಮನ ಕೊಡಬೇಕು ಎನ್ನುವುದು ನಿಜ. ಈ ಹಂತದಲ್ಲಿ ಅವರು ಗಳಿಸುವ ಅಧಿಕ ಅಂಕಗಳು ಅವರ  ಭವಿಷ್ಯವನ್ನು ನಿರ್ಧರಿಸುವಲ್ಲಿ ಮಹತ್ವದ ಪಾತ್ರ­ವನ್ನು ವಹಿಸುವುದೂ ಹೌದು. ಮುಖ್ಯ ಶಿಕ್ಷಕಿಯರು ಈ ಮಕ್ಕಳನ್ನು ಬೈದಿ­­ದ್ದಕ್ಕೆ ಅವರ ಮೇಲೆಯೂ ಇರುವ ಅಧಿಕ ಫಲಿತಾಂಶದ ಶೈಕ್ಷಣಿಕ ಒತ್ತಡದ ಕಾರಣವೂ ಇರಬಹುದು. 

ಏಕೆಂದರೆ  ಶಿಕ್ಷಣದ ವ್ಯಾಪಾರೀಕ­ರಣ­ದಿಂದ ಪೈಪೋಟಿ ಇಂದು ಹೆಚ್ಚಾಗಿದ್ದು ಎಲ್ಲಾ ಮಕ್ಕಳೂ ಹೆಚ್ಚು ಅಂಕ ಗಳಿಸ­ಬೇಕು ಎಂಬಂಥ ಒತ್ತಡ ಇದೆ. ಹೀಗಾಗಿ ಕಡಿಮೆ ಪ್ರತಿಭೆ ಇರುವ ಮಕ್ಕಳನ್ನು ಅಮಾನವೀಯವಾಗಿ ನಡೆಸಿಕೊಳ್ಳುವ ವ್ಯವಸ್ಥೆ ಈ ಸಮಸ್ಯೆಯ ಮೂಲ. ಹೀಗಾಗಿ ಒಟ್ಟಾರೆ ಶೈಕ್ಷಣಿಕ ವ್ಯವಸ್ಥೆ ಸಂವೇದನಾಶೀಲವಾಗಬೇಕಾದ ಅಗತ್ಯವನ್ನು ಈ ಪ್ರಕರಣ ಎತ್ತಿ ತೋರುತ್ತದೆ. 

ಹದಿಹರೆಯದ ಮಕ್ಕಳನ್ನು ನಿಭಾಯಿಸುವುದು ಅಷ್ಟು ಸುಲಭವಲ್ಲ. ಶಿಕ್ಷಕಿ­ಯರಿಗಿಂತ ಪೋಷಕರ ಪಾತ್ರವೇ ಇದರಲ್ಲಿ ಹೆಚ್ಚು ಮುಖ್ಯ. ತಪ್ಪು ಮಾಡಿದರೆ ಗದರುವಾಗಲೂ ಭಾಷೆಯನ್ನು ಸಂಯಮದಿಂದ ಬಳಸಬೇಕು. ಮಕ್ಕಳ ತಪ್ಪನ್ನು ಅವರಿಗೆ ಎತ್ತಿ ಹೇಳಿ, ತಿದ್ದುವ ಕೆಲಸವನ್ನು ತುಂಬಾ ಜಾಣ್ಮೆಯಿಂದ ನಿಭಾಯಿಸಬೇಕು. ಹದಿಹರೆಯದಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗುವ ಮಕ್ಕ­ಳನ್ನು ಸಂತೈಸುವ ಸಲುವಾಗಿಯೇ  ಅನೇಕ ಸಮಾಲೋಚನಾ ಕೇಂದ್ರಗಳೂ ಇವೆ. ಶಾಲೆಗಳಲ್ಲಿ ಶಿಕ್ಷಕರೂ ಈ ಮಾಹಿತಿಯನ್ನು ವಿದ್ಯಾರ್ಥಿಗಳ ಜತೆಗೆ ಹಂಚಿ­ಕೊಳ್ಳಬೇಕು.

ನಗರ ಪ್ರದೇಶಗಳಲ್ಲಿ ಒತ್ತಡದ ಬದುಕಿನಿಂದಾಗಿ  ಹದಿ­ಹರೆಯದ ಮಕ್ಕಳ ಖಿನ್ನತೆಯ ಪ್ರಕರಣಗಳು ಇತ್ತೀಚೆಗೆ ಏರುತ್ತಲೇ ಇವೆ. ಗಂಡ-ಹೆಂಡತಿ ಇಬ್ಬರೂ ದುಡಿಯವ ಕುಟುಂಬಗಳಲ್ಲಂತೂ ಮಕ್ಕಳ ಸಮಸ್ಯೆ­ಗಳತ್ತ ಹೆಚ್ಚು ಗಮನ ಹರಿಸಲು ಪೋಷಕರಿಗೆ ಸಮಯ ಸಿಗುವುದಿಲ್ಲ. ಪ್ರೌಢಾ­ವಸ್ಥೆಯ ಸಮಸ್ಯೆಗಳ ನಿವಾರಣೆಯಲ್ಲಿ ಶಿಕ್ಷಕರ ಪಾತ್ರವೂ ಮುಖ್ಯವಾದದ್ದು.   ಪಠ್ಯ ವಿಧಾನ ಹಾಗೂ ಪರೀಕ್ಷಾ ವ್ಯವಸ್ಥೆಗಳಲ್ಲಿ ಸುಧಾರಣೆ ಆಗಬೇಕು.  ಅಂಕ ಗಳಿಕೆಗಿಂತ ಸೃಜನಾತ್ಮಕ ಕಲಿಕೆ ಹಾಗೂ ಜೀವನ ಕೌಶಲ ಕಲಿಕೆಗೆ ಪ್ರಾಶಸ್ತ್ಯ ಸಿಗುವುದು ಇಂದಿನ ಅಗತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT