ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಾರ್ಟ್‌ಮೆಂಟ್‌ಗಳಲ್ಲೂ ಪಾರ್ಕಿಂಗ್‌ ಸುಲಿಗೆ

ಪಾರ್ಕಿಂಗ್ ಬರೆ ಭಾಗ - 4
Last Updated 23 ಸೆಪ್ಟೆಂಬರ್ 2013, 19:41 IST
ಅಕ್ಷರ ಗಾತ್ರ

ಬೆಂಗಳೂರು: ಜಾಗದ ಸಮಸ್ಯೆಯನ್ನು ಎಲ್ಲ ಅರ್ಥದಲ್ಲೂ ದೊಡ್ಡ ಪ್ರಮಾಣದಲ್ಲಿ ಎದುರಿ ಸುತ್ತಿದೆ ಬೆಂಗಳೂರು ಮಹಾನಗರ. ಇಲ್ಲಿಯ ಗಗನಚುಂಬಿ ಕಟ್ಟಡದ ನೆತ್ತಿಮೇಲೆ ಹೆಲಿಪ್ಯಾಡ್‌ ಇದ್ದರೂ ಅಪಾರ್ಟ್‌ಮೆಂಟ್‌ಗಳ ಕೆಳಗೆ ವಾಹನ ಗಳ ನಿಲುಗಡೆಗೆ ಅಗತ್ಯ ಪ್ರಮಾಣದ ಸ್ಥಳಾವಕಾಶವೇ ಇಲ್ಲ.

ಹೌದು, ಮನೆ ಕಟ್ಟುವುದಕ್ಕೆ, ವಾಹನ ಓಡಿಸುವುದಕ್ಕೆ, ಜನರ ಅಲೆದಾಟಕ್ಕೆ, ಮರ ಬೆಳಸಲಿಕ್ಕೆ, ಕೊನೆಗೆ ಮಕ್ಕಳು ಆಡಲಿಕ್ಕೆ ಎಲ್ಲದಕ್ಕೂ ಜಾಗದ್ದೇ ಸಮಸ್ಯೆ. ಭೂಮಿಯ ಬರ ಅನುಭವಿ ಸುತ್ತಿರುವ ನಗರದಲ್ಲಿ ವಸತಿ ಸೌಕರ್ಯ ಕಲ್ಪಿಸಲು ಬಹುಪಾಲು ಅಪಾರ್ಟ್‌ಮೆಂಟ್‌ಗಳೇ ಆಧಾರ. ಬಿಲ್ಡರ್‌ಗಳಿಗೆ ಇಂಚಿಂಚು ಜಾಗ ಕೂಡ ಬಂಗಾರ. ಆದ್ದರಿಂದಲೇ ಕಾಯ್ದೆಯಲ್ಲಿ ಅವಕಾಶ ಇಲ್ಲ ದಿದ್ದರೂ ಅಪಾರ್ಟ್‌ಮೆಂಟ್‌ಗಳ ವಾಹನ ನಿಲು ಗಡೆ ಸ್ಥಳವನ್ನು ಅವರು ಮಾರಾಟ ಮಾಡು ತ್ತಿದ್ದಾರೆ. ಹಣ ಮಾಡಲು ಹೊಸ ಹಾದಿಯನ್ನು ಹುಡುಕಿಕೊಂಡಿದ್ದಾರೆ.

‘ಕರ್ನಾಟಕ ಅಪಾರ್ಟ್‌ಮೆಂಟ್‌ಗಳ ಮಾಲೀ ಕತ್ವ ಕಾಯ್ದೆ–1972’ರ ಪ್ರಕಾರ ಪಾರ್ಕಿಂಗ್‌ ಮೀಸಲಿಟ್ಟ ಜಾಗ, ಆ ಅಪಾರ್ಟ್‌ಮೆಂಟ್‌ನ ಎಲ್ಲ ನಿವಾಸಿಗಳೂ ಬಳಕೆ ಮಾಡುವ ಮತ್ತು ಎಲ್ಲರಿಗೂ ಸೇರಿದ ಪ್ರದೇಶವಾಗಿದೆ. ಯಾವ ಕಾರಣಕ್ಕೂ ಆ ಪ್ರದೇಶವನ್ನು ವಿಭಾಗ ಮಾಡುವ ಗೆರೆ ಎಳೆದು ಮಾರಾಟ ಮಾಡುವಂತಿಲ್ಲ.

ಪಾರ್ಕಿಂಗ್‌, ಪಾರ್ಕ್‌ನಂತಹ ಸಾಮಾನ್ಯ ಬಳಕೆ ಪ್ರದೇಶ (ಕಾಮನ್‌ ಯುಟಿಲಿಟಿ ಏರಿಯಾ)ವನ್ನು ಪರಭಾರೆ ಮಾಡಲು ಅವಕಾಶವೇ ಇಲ್ಲ. ಈ ಜಾಗದಲ್ಲಿ ಏನಾದರೂ ದುರಸ್ತಿ ಕಾರ್ಯ ಕೈ ಗೊಂಡಾಗ ಅದಕ್ಕೆ ತಗುಲಿದ ವೆಚ್ಚ ವನ್ನು ಅಲ್ಲಿನ ನಿವಾಸಿಗಳು ಸಮವಾಗಿ ಭರಿಸಬೇಕು ಎಂದು ಕಾಯ್ದೆ ಹೇಳು ತ್ತದೆ. ಆದರೆ, ಅಪಾರ್ಟ್‌ ಮೆಂಟ್‌ ಗಳ ಮಾರಾಟದ ವ್ಯವಹಾರದಲ್ಲಿ ಈ ಕಾಯ್ದೆಗೆ ಕವಡೆ ಕಾಸಿನ ಕಿಮ್ಮತ್ತನ್ನೂ ನೀಡಲಾಗುತ್ತಿಲ್ಲ.

ಫ್ಲಾಟ್‌ ಬೆಲೆ ಜತೆಗೆ ಪಾರ್ಕಿಂಗ್‌ ಸ್ಥಳಕ್ಕೆ ಲಕ್ಷಾಂತರ ರೂಪಾಯಿ ಹೆಚ್ಚಿನ ಶುಲ್ಕ ಪಡೆಯ ಲಾಗುತ್ತಿದೆ (ಸಾಮಾನ್ಯವಾಗಿ ಫ್ಲಾಟ್‌ ದರದ ಶೇ 5ರಿಂದ 10ರವರೆಗೆ ಅದರ ಬೆಲೆ ಇರುತ್ತದೆ). ವಾಹನ ನಿಲುಗಡೆ ಸ್ಥಳವನ್ನು ನಿವೇ ಶನಗಳ ಮಾದರಿಯಲ್ಲಿ ಗುರುತು ಹಾಕಿ, ಪ್ರತಿ ಯೊಂದಕ್ಕೂ ಒಂದೊಂದು ಸಂಖ್ಯೆಯನ್ನು ನೀಡಿ, ಹಂಚಿಕೆ ಮಾಡಲಾಗುತ್ತದೆ. ಅದರಲ್ಲೂ ಮುಕ್ತ ಸಂಚಾರಕ್ಕೆ ಸಹಾಯ ವಾಗುವ ಪ್ರಮುಖ ವಾಹನ ನಿಲುಗಡೆ ಅಂಕಣ ಗಳನ್ನು ಗುರುತು ಮಾಡಿ, ಅವುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡ ಲಾಗುತ್ತದೆ. ಫ್ಲಾಟ್‌ ಜತೆ, ಜತೆಗೆ ಪಾರ್ಕಿಂಗ್‌ ಸ್ಥಳ ವನ್ನೂ ಖರೀದಿ ಮಾಡಿದ ವರಿಗೆ ಮಾತ್ರ ವಾಹನ ನಿಲು ಗಡೆಗೆ ಅವಕಾಶ ಒದಗಿಸಲಾಗುತ್ತದೆ.

ನಗರದ ವೈಟ್‌ಫೀಲ್ಡ್‌, ಹೆಬ್ಬಾಳ, ಯಲಹಂಕ, ಬನ್ನೇರುಘಟ್ಟ ರಸ್ತೆ, ಬಿಟಿಎಂ ಲೇಔಟ್, ಜೆ.ಪಿ.ನಗರ ಮತ್ತು ಸರ್ಜಾಪುರಗಳಲ್ಲಿ ಲೆಕ್ಕವಿಲ್ಲ ದಷ್ಟು ಅಪಾರ್ಟ್‌ಮೆಂಟ್‌ಗಳು ತಲೆ ಎತ್ತಿದ್ದು, ಫ್ಲಾಟ್‌ ಗಳಿಗೆ ಈ ಭಾಗದಲ್ಲೇ ಬೇಡಿಕೆ ಹೆಚ್ಚಿದೆ. ಸಿಕ್ಕ ಜಾಗ ದಲ್ಲೇ ಬಿಲ್ಡರ್‌ಗಳು ಮುಗಿಲೆತ್ತರದ ಅಪಾ ರ್ಟ್‌ ಮೆಂಟ್‌ ಕಟ್ಟುತ್ತಿರುವ ಕಾರಣ, ಅಲ್ಲಿನ ನಿವಾಸಿಗಳ ಬೇಡಿಕೆಗೆ ತಕ್ಕಷ್ಟು ಪಾರ್ಕಿಂಗ್‌ ಪ್ರದೇಶ ವನ್ನು ಒದಗಿಸುವುದು ಸಾಧ್ಯವಾಗುತ್ತಿಲ್ಲ. ಹೀಗಾಗಿ ಪಾರ್ಕಿಂಗ್‌ ಸ್ಥಳ ಖರೀದಿ ಮಾಡಿದ ಬಳಿಕವೇ ಫ್ಲಾಟ್‌ ಕೊಂಡುಕೊಳ್ಳುವ ಅನಿವಾರ್ಯತೆ ಬಂದೊದಗಿದೆ.

ಗ್ರಾಹಕರಿಗೆ ಇರುವ ಮಾಹಿತಿ ಕೊರತೆಯನ್ನೇ ದುರ್ಬಳಕೆ ಮಾಡಿಕೊಳ್ಳುತ್ತಿರುವ ನಗರದ ಹೆಚ್ಚಿನ ಬಿಲ್ಡರ್‌ಗಳು ಅಪಾರ್ಟ್‌ಮೆಂಟ್‌ಗಳ ವಾಹನ ನಿಲುಗಡೆಯ ಜಾಗವನ್ನು ಮಾರಾಟ ಮಾಡುವ ದಂಧೆಯನ್ನು ಯಾವುದೇ ಭೀತಿ ಇಲ್ಲದೆ ನಡೆಸುತ್ತಿದ್ದಾರೆ. ಕೆಲವು ಬಿಲ್ಡರ್‌ಗಳು ಗ್ರಾಹಕರಿಗೆ ಒಂದಕ್ಕಿಂತಲೂ ಹೆಚ್ಚು ಪಾರ್ಕಿಂಗ್ ಜಾಗಗಳನ್ನು ಮಾರಾಟ ಮಾಡಿರುವುದು ಸಹ ಬೆಳಕಿಗೆ ಬಂದಿದೆ.

‘ಪಾರ್ಕಿಂಗ್ ಜಾಗವನ್ನು ಬಿಲ್ಡರ್‌ಗಳು ಮಾರಾಟ ಮಾಡಿದರೆ ಸಮಸ್ಯೆಯನ್ನು ಎದುರಿಸ ಬೇಕಾಗುತ್ತದೆ’ ಎಂದು ಅಧಿಕಾರಿಗಳು ಎಚ್ಚರಿಕೆ ನೀಡುತ್ತಾರೆ. ಅವರ ಕ್ರಮ ಅಷ್ಟಕ್ಕೇ ಸೀಮಿತ ಗೊಳ್ಳುತ್ತದೆ. ‘ಕ್ರಯ ಪತ್ರಗಳಲ್ಲಿ ಪಾರ್ಕಿಂಗ್‌ ಜಾಗ ಮಾರಾಟದ ಪ್ರಸ್ತಾಪ ಇದ್ದರೂ ನೋಂದಣಿ ಅಧಿ ಕಾರಿಗಳು ಅದರ ಕಡೆಗೆ ಗಮನವನ್ನೇ ನೀಡುತ್ತಿಲ್ಲ’ ಎಂದು ಅಪಾರ್ಟ್‌ಮೆಂಟ್‌ ನಿವಾಸಿಗಳು ದೂರುತ್ತಾರೆ.

ಬಿಬಿಎಂಪಿ ಕಟ್ಟಡ ನಿರ್ಮಾಣ ಕಾಯ್ದೆಯ 2.60 ಕಲಂ ಪ್ರಕಾರ, ಪ್ರತಿ ಕಾರಿಗೆ 18 ಚದರ ಮೀಟರ್‌ ವಿಸ್ತೀರ್ಣದ ಜಾಗ ಹೊಂದಿರುವುದು ಕಡ್ಡಾಯ. ಅಲ್ಲದೆ, ಹೊರಗಿನ ಅತಿಥಿಗಳ ವಾಹನ ಕ್ಕೂ ಶೇ 10ರಷ್ಟು ಪ್ರಮಾಣದ ಸ್ಥಳವನ್ನು ಮೀಸ ಲಿಡಬೇಕು. ಈ ನಿಯಮ ಯಾವ ಅಪಾರ್ಟ್‌ ಮೆಂಟ್‌ನಲ್ಲೂ ಪಾಲನೆ ಆಗುತ್ತಿಲ್ಲ. ಬದಲಿಗೆ ‘ಹೊರಗಿನವರ ವಾಹನಗಳಿಗೆ ಪ್ರವೇಶವಿಲ್ಲ’ ಎಂಬ ಫಲಕ ದ್ವಾರದಲ್ಲೇ ನೇತಾಡುತ್ತಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT