ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪೂರ್ಣ ಆಲ್ಬಂನ ಕೆಲವು ನೆನಪುಗಳು...

Last Updated 21 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಹತ್ತೊಂಬತ್ತು ವರ್ಷಗಳ ಹಿಂದಿನ ಮಾತು. ನಾನು ಎಂಟನೇ ತರಗತಿಯಲ್ಲಿ ಓದುತ್ತಿದ್ದೆ. ನಮ್ಮ ವಿಜ್ಞಾನ ಶಿಕ್ಷಕರು ಬೆಳಕಿನ ವಕ್ರೀಭವನ ಕುರಿತು ಪಾಠ ಮಾಡುತ್ತಿದ್ದರು. ಕೆಲವರಿಗೆ ಅದರ ವಿವರಣೆ ಅರ್ಥವಾಗಲಿಲ್ಲ. ಅವರು ಮುಂದಿನ ತರಗತಿಗೆ ಬರುವಾಗ ಒಂದು ಹಳೆಯ ಪತ್ರಿಕೆಯನ್ನು ತಂದಿದ್ದರು. ಅದರಲ್ಲಿ ಚಿತ್ರ ಸಹಿತವಾಗಿ ಬೆಳಕಿನ ವಕ್ರೀಭವನವನ್ನು ವಿವರಿಸಲಾಗಿತ್ತು. ಅದನ್ನು ತೋರಿಸಿ ವಿವರಿಸಿದಾಗ ಎಲ್ಲಾ ವಿದ್ಯಾರ್ಥಿಗಳ ಮುಖದಲ್ಲೂ ಖುಷಿ ತುಂಬಿದ ಕುತೂಹಲ. ಆಗ ನಮ್ಮ ಶಿಕ್ಷಕರು ಇದು ಪ್ರಜಾವಾಣಿ ದಿನಪತ್ರಿಕೆಯ ‘ಸಾಪ್ತಾಹಿಕ ಪುರವಣಿ’. ಇದರಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದಂತೆ ಎನ್. ವಾಸುದೇವ್ ಎನ್ನುವವರು ಪ್ರತೀ ಭಾನುವಾರ ಲೇಖನ ಬರೆಯುತ್ತಾರೆ. ಅದರಲ್ಲಿ ತುಂಬಾ ಒಳ್ಳೆಯ ಮಾಹಿತಿಗಳು ಸಿಗುತ್ತವೆ ಓದಿರಿ ಎಂದು ಹೇಳಿದ್ದರು. ಅಂದಿನಿಂದ ವಾಸುದೇವ್‌ ಅವರ ಲೇಖನ ನನ್ನ ವಾರದ ಅತಿಥಿಯಾಗಿ ಬಿಟ್ಟಿತು.

ಭಾನುವಾರ ಬಂತೆಂದರೆ ಈ ಲೇಖನವನ್ನು ಓದುವುದು (ಒಮ್ಮೊಮ್ಮೆ ನನಗೆ ಅರ್ಥವಾಗದಿದ್ದರೂ) ಮತ್ತು ನಮ್ಮ ಪಠ್ಯಕ್ಕೆ ಸಂಬಂಧಿಸಿದ್ದನ್ನು ಕತ್ತರಿಸಿ ಜೋಪಾನ ಮಾಡುವುದು ನನ್ನ ಅಭ್ಯಾಸವೇ ಆಯಿತು. ಇದು ನನ್ನ ಮೇಲೆ ಎಷ್ಟು ಪ್ರಭಾವ ಬೀರಿದೆಯೆಂದರೆ, ಇಂದು ನಾನು ಕನ್ನಡ ಶಿಕ್ಷಕನಾಗಿದ್ದರೂ ಈ ಲೇಖನವನ್ನು ಓದದೆ ಪತ್ರಿಕೆಯನ್ನು ಮುಚ್ಚಿಡಲಾಗುವುದಿಲ್ಲ.

ಈಗಿನಷ್ಟು ವರ್ಣರಂಜಿತ ಚಿತ್ರಗಳು ಆಗಿನ ದಿನಗಳಲ್ಲಿ ಇರದಿದ್ದರೂ ಮಾಹಿತಿಗೇನು ಕೊರತೆ ಇರಲಿಲ್ಲ. ಅವರು ಬರೆಯುತ್ತಿದ್ದ ವಿಷಯಗಳು ಒಂದೇ, ಎರಡೇ! ಕಲ್ಲಿದ್ಲಲು, ವಜ್ರ, ಚಿನ್ನ, ಅಬ್ರಕ, ಸೌರಮಂಡಲದಲ್ಲಿ ಸೂರ್ಯ, ಚಂದ್ರ, ನಕ್ಷತ್ರ, ನಕ್ಷತ್ರಪುಂಜಗಳು, ಧೂಮಕೇತು, ಉಲ್ಕಾಪಾತಗಳು, ಭೂಮಿಯ ಉಗಮ, ಸಮುದ್ರದ ಒಡಲು, ಕಡಲುಗವಿಗಳು, ಮೀನುಗಳು, ಮರುಭೂಮಿ, ಜಲಮಂಡಲ, ವಾಯುಮಂಡಲ, ಹೋಮೋಸೀಫಿಯಸ್ (ಮನುಷ್ಯ) ಬೆಳೆದು ಬಂದ ದಾರಿ, ಪಳೆಯುಳಿಕೆಗಳು, ಚಿಂಪಾಂಜಿ, ಗೊರಿಲ್ಲ, ಸಸ್ತನಿಗಳು, ಉರಗಗಳು, ಹುಲಿ, ಜಿರಾಫೆ, ಸೊಳ್ಳೆ, ಕಾಗೆ, ಇರುವೆ– ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಒಂದು ವಾರ ವಿವರಣೆ ಇದ್ದರೆ ಇನ್ನೊಂದು ವಾರ ರಸಪ್ರಶ್ನೆಗಳ ರೂಪದಲ್ಲಿ (ಕೊನೆಯಲ್ಲಿ ಉತ್ತರ ಸಹಿತ)  ಜ್ಞಾನದ ಸುರಿಮಳೆಯನ್ನೇ ಈ ಲೇಖನದಿಂದ ಪಡೆಯತೊಡಗಿದೆ. ಸುಮಾರು ವರ್ಷಗಳಿಂದ ಮತ್ತೆ ಮತ್ತೆ ಓದುತ್ತಿದ್ದರಿಂದ ಅವರನ್ನು ನೋಡಬೇಕೆಂಬ ಆಸೆ ಚಿಗುರೊಡೆಯತೊಡಗಿತು.

ನಾನು ಛತ್ತೀಸ್‌ಗಡದ ದಂತೇವಾಡದಲ್ಲಿ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದಾಗ ನಾಗೇಶ್ ಹೆಗಡೆಯವರ (ಈಗಲೂ ಪ್ರಜಾವಾಣಿಯಲ್ಲಿ ಪ್ರತಿ ಗುರುವಾರ ‘ವಿಜ್ಞಾನ ವಿಶೇಷ’ ಅಂಕಣ ಬರೆಯುತ್ತಿದ್ದಾರೆ) ‘ಪ್ರತಿದಿನ ಪರಿಸರ ದಿನ’ ಎಂಬ ಪಾಠವನ್ನು ಮಾಡುತ್ತಿದ್ದೆ. ಅದರಲ್ಲಿ ಬರುವ ಗಣಿಗಾರಿಕೆ, ಜಲಾಶಯ, ವಿದ್ಯುದಾಗರ ಮತ್ತು ಕೀಟಗಳಿಗೆ ಸಂಬಂಧಿಸಿದಂತೆ ವಿವರಣೆ ಕೊಡುವಾಗ ನಾನು ಸಂಗ್ರಹಿಸಿಟ್ಟುಕೊಂಡಿದ್ದ ವಾಸುದೇವರ ಲೇಖನಗಳನ್ನು ತೋರಿಸಿ (ನನ್ನ ಶಿಕ್ಷಕರನ್ನು ನೆನಪಿಸಿಕೊಂಡು) ಮಕ್ಕಳ ಮನಸ್ಸಿಗೆ ಮುಟ್ಟುವಂತೆ ವಿವರಿಸಿದೆ. ತರಗತಿ ಮುಗಿದ ಮೇಲೆ ಎಲ್ಲಾ ವಿದ್ಯಾರ್ಥಿಗಳು ಆ ಲೇಖನಗಳನ್ನು ತೆಗೆದುಕೊಂಡು ನೋಡಿ ಸಂತೋಷಪಟ್ಟರು.

ಒಂದು ವರ್ಷದ ನಂತರ ಒಂದು ದಿನ ನನಗೆ ರಿಜಿಸ್ಟರ್ಡ್‌ ಪತ್ರವೊಂದು ಬಂತು. ಅದನ್ನು ತೆಗೆದು ಓದಿದಾಗ ಅದರಲ್ಲಿ ಹೀಗೆ ಬರೆದಿತ್ತು, ‘ನನ್ನ ಪ್ರೀತಿಯ ಗುರುಗಳಿಗೆ ನಿಮ್ಮ ಶಿಷ್ಯ ಅನಂತ ನಮಸ್ಕಾರಗಳು. ನೀವು ಕಳೆದ ವರ್ಷ ನಮಗೆ ಪಾಠ ಮಾಡುವಾಗ ವಾಸುದೇವ್‌ಅವರ ಲೇಖನಗಳ ಸಂಗ್ರಹವನ್ನು ನಮಗೆ ತೋರಿಸಿದ್ದಿರಿ. ಆ ಸಂಗ್ರಹದಲ್ಲಿಲ್ಲದ ಕೆಲವು ಲೇಖನಗಳನ್ನು ನನಗೆ ಸಾಧ್ಯವಾದಷ್ಟು ಹಳೆಯ ‘ಸಾಪ್ತಾಹಿಕ ಪುರವಣಿ’ ಸಂಚಿಕೆಗಳಿಂದ ಹುಡುಕಿ ಈ ಪತ್ರದ ಜೊತೆ ಕಳುಹಿಸಿದ್ದೇನೆ. ಇದನ್ನೇ ನಿಮ್ಮ ಈ ವರ್ಷದ ಹುಟ್ಟು ಹಬ್ಬದ ಉಡುಗೊರೆಯೆಂದು ಭಾವಿಸಿ ಮುಂದಿನ ವಿದ್ಯಾರ್ಥಿಗಳಿಗೂ ಪ್ರೇರಣೆ ನೀಡಬೇಕಾಗಿ ವಿನಂತಿ’. ಈ ಸಾಲುಗಳನ್ನು ಓದುತ್ತಲೇ ನನಗೆ ಆನಂದಬಾಷ್ಪ ತಡೆಯಲಾಗಲಿಲ್ಲ.

ಇಷ್ಟೆಲ್ಲಕ್ಕೆ ಕಾರಣರಾದ ಆ ಲೇಖಕರ ಭಾವಚಿತ್ರವನ್ನಾದರೂ ನೋಡಲು ಸಾಧ್ಯವಾಗುತ್ತೋ ಇಲ್ಲವೋ ಎಂದುಕೊಳ್ಳುತ್ತಿದ್ದೆ. ಕೆಲವು ವರ್ಷಗಳ ಹಿಂದೆ ವಾಸುದೇವರ ಬದಲು ಬಿಂಬಸಾರ ಎಂಬ ಹೆಸರಿನಲ್ಲಿ ವಿಜ್ಞಾನ ಲೇಖನಗಳು ಪ್ರಕಟವಾಗುತ್ತಿದ್ದಂತೆ, ‘ಅಯ್ಯೋ! ಅವರ ಭಾವಚಿತ್ರವನ್ನಾದರೂ ನೋಡಬೇಕೆಂಬ ನನ್ನ ಆಸೆ ಕೊನೆಗೂ ಈಡೇರಲಿಲ್ಲ‘ ಎಂದು ತುಂಬಾ ದುಃಖಿತನಾಗಿದ್ದೆ. ಆದರೆ ಮತ್ತೆ ವಾಸುದೇವರ ಲೇಖನ ಸರಣಿ ಮುಂದುವರೆಯಿತು. ಅವರ ಫೋಟೊ ನೋಡುವ ಆಸೆ ನನ್ನಲ್ಲಿ ಇನ್ನೂ ಹಸಿರಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT