ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪೂರ್ವ ವ್ಯಾಕರಣ ಕೃತಿ ಶಬ್ದಭಾಸ್ಕರ

Last Updated 18 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಹಳತು ಹೊನ್ನು

`ಶಬ್ದಭಾಸ್ಕರ~ ಕೃತಿ 1869ರಲ್ಲಿ, ಬೆಂಗಳೂರಿನ `ಕರ್ಣಾಟಕ ಪ್ರೆಸ್~ ಅಚ್ಚುಕೂಟದಲ್ಲಿ ಮುದ್ರಣಗೊಂಡಿರುವ ಒಂದು ವ್ಯಾಕರಣ ಶಾಸ್ತ್ರ ಗ್ರಂಥ. ಇದರ ಲೇಖಕರು ಪಂಡಿತ ದಕ್ಷಿಣಾಮೂರ್ತಿ ಶಾಸ್ತ್ರಿ. ಈ ಕೃತಿ 1871ರಲ್ಲಿ ಎರಡನೇ ಮುದ್ರಣ ಕಂಡಿದೆ.
 
1870ರಲ್ಲಿ ಇದೇ ಲೇಖಕರ  ಕನ್ನಡ ತೊರವೆ ರಾಮಾಯಣ, 1887ರಲ್ಲಿ ಶ್ರೀಮದಧ್ಯಾತ್ಮ ರಾಮಾಯಣವನ್ನು ಕುರಿತ ಕನ್ನಡದ ಟೀಕೆ ಮತ್ತು 1888ರಲ್ಲಿ 3 ಭಾಗಗಳಲ್ಲಿ ಜೈಮಿನಿ ಭಾರತದ ಟೀಕೆಗಳು (1913ರಲ್ಲಿ ಇವು ಮೂರೂ ಭಾಗಗಳು ಒಟ್ಟಿಗೆ ಒಂದು ಸಂಪುಟವಾಗಿ ಪ್ರಕಟವಾಗಿದೆ) ಪ್ರಕಟಗೊಂಡಿರುತ್ತವೆ. ಇವರ ಮತ್ತೊಂದು ಕೃತಿಯಾದ ವಿದ್ಯಾರಣ್ಯ ಮುನಿ ಅಚ್ಚಾದ ಕಾಲ ಗೊತ್ತಿಲ್ಲ.

`ಶಬ್ದಭಾಸ್ಕರ~ ಕೃತಿಯನ್ನು ರಚಿಸಿದ ಕಾಲವನ್ನು ದಕ್ಷಿಣಾಮೂರ್ತಿ ಶಾಸ್ತ್ರಿಯವರು ಶಾಸನಗಳಲ್ಲಿ ಕಾಲಸೂಚನೆ ನೀಡುವ ಕ್ರಮದಲ್ಲಿ ನೀಡಿರುವುದು ಒಂದು ವಿಶೇಷ. ಕಾಲ ಸೂಚನೆಯ ಪದ್ಯ ಇಂತಿದೆ:

ಗಗನ ಋಷಿ ನವ ವೇದ ಸಂಖ್ಯಾ
ನಿಗಮ ಸಿದ್ಧಾಕಲಿಯುಗಾಬ್ಧಿಗ
ಳೊಗೆಯುತಿರಲಾ ಪುಷ್ಯ ಬಹುಳದ ಷ್ಠ ಸೋಮದೊಳು
ಅಗಣಿತಾನಿರ್ವಾಚ್ಯಮಹಿನ
ವಿಗತಮಾಯನ ದೇವದೇವನ
ನಗಸುತೆಯು ಕೃಪೆಯಿಂದಲೀ ಕೃತಿ ಪೂರ್ತಿಯಾಗಿಹುದು.

ಇಲ್ಲಿ ಕೃತಿಕಾರರು ವಾಮಗತಿಚಲನೆಯ ಕ್ರಮವನ್ನೊಳಗೊಂಡಿರುವ ಮಹಾಭಾರತ ಯುದ್ಧ ಸಂವತ್ಸರ ಅಥವಾ ಯುಧಿಷ್ಠಿರ ಸಂವತ್ಸರ ಅಥವಾ ಕಲಿಯುಗ ಸಂವತ್ಸರದ ಪರಿಗಣನೆಯಲ್ಲಿ ಕೃತಿ ರಚನೆಯ ಕಾಲಸೂಚನೆಯನ್ನು ನೀಡಿರುತ್ತಾರೆ. ಅದನ್ನು ಈ ರೀತಿ ಬಿಡಿಸಬಹುದು:
ಗಗನ = 0,  ಋ = 7, ನವ = 9, ವೇದ = 4.
ಹೀಗಾಗಿ ಗಗನ ಋಷಿ ನವ ವೇದ ಸಂಖ್ಯಾ ಎಂದರೆ 0794 ಆಗುತ್ತದೆ. ಈ ಸಂಖ್ಯೆಯನ್ನು ವಾಮಗತಿ ಚಲನೆ ಅರ್ಥಾತ್ ಬಲದಿಂದ ಎಡಕ್ಕೆ ಬರೆಯಬೇಕು. ಆಗ ಈ ಸಂಖ್ಯೆಯು 4970 ಆಗುತ್ತದೆ. ಮಹಾಭಾರತ ಯುದ್ಧ ಕ್ರಿ.ಪೂ. 3102ರಲ್ಲಿ ನಡೆಯಿತೆಂದೂ ಕಲಿಯುಗ ಸಂವತ್ಸರ ಕ್ರಿ.ಪೂ 3101ರಲ್ಲಿ ಆರಂಭವಾಯಿತೆಂದೂ ಈ ಕಾಲಗಣನೆಕಾರರ ಲೆಕ್ಕಾಚಾರ.
 
ಇದರ ಪ್ರಕಾರ 4970ರಲ್ಲಿ 3101ನ್ನು ಕಳೆಯಬೇಕು. ಆಗ ಉಳಿಕೆ 1869 ಆಗುತ್ತದೆ. ಈ ಕ್ರಮದಲ್ಲಿ `ಶಬ್ದಭಾಸ್ಕರ~ ಮುದ್ರಣಗೊಂಡ ಕಾಲ ಕ್ರಿ.ಶ.1869.
1/8 ಡೆಮಿ ಆಕಾರದ 61 ಪುಟಗಳಿರುವ ಈ ಪುಸ್ತಕದಲ್ಲಿ 162 ಕಂದಪದ್ಯಗಳು, 1 ಉತ್ಪಲಮಾಲಾ ವೃತ್ತ, 2 ಚಂಪಕಮಾಲಾ ವೃತ್ತ ಹಾಗೂ 114 ಭಾಮಿನಿ ಷಟ್ಪದಿಗಳನ್ನು ಒಳಗೊಂಡ 279 ಪದ್ಯಗಳಿವೆ. ಈ ಕೃತಿಯ ಅಂದಿನ ಬೆಲೆ ಎಂಟು ಆಣೆ.

ಕೃತಿಕಾರರು ತಮ್ಮನ್ನು ಮತ್ತು ತಮ್ಮ ಕೃತಿಯನ್ನು ಕುರಿತು ಒಂದು ಭಾಮಿನಿ ಷಟ್ಪದಿಯಲ್ಲಿ ಹೀಗೆ ಹೇಳಿಕೊಂಡಿದ್ದಾರೆ:

ಪರಮಕಲ್ಯಾಣಾಖ್ಯ ಪತ್ತನ
ವರನಿಲಯ ನಾರಾಯಣಾತ್ಮಜ
ಪರಿಪರಿಯ ವಿದ್ಯಾವಿಲಾಸಿಯು ದಕ್ಷಿಣಾಮೂರ್ತಿ
ವಿರಚಿಸಲ್ತಾ ತೊಡಗಿದಂ ತ
ದ್ಗುರುಪದಂಗಳ ನೆನೆವ ಬಲ್ಪಿಂ
ವರಕೃತಿಯ ಶಬ್ದೋಘ ಸಾಗರವೆಂಬ ಪೆಸರಿಟ್ಟು.
 

ಕವಿಯ ಸ್ಥಳ ಕಲ್ಯಾಣವೆಂಬ ಪ್ರಸಿದ್ಧ ಪಟ್ಟಣ. ಕವಿಯ ತಂದೆಯ ಹೆಸರು ನಾರಾಯಣ. ಕವಿ ಪರಿಪರಿಯ ವಿದ್ಯಾವಿಲಾಸಿಯಾದ ದಕ್ಷಿಣಾಮೂರ್ತಿ. ಇವನ ವರಕೃತಿಯ ಹೆಸರು `ಶಬ್ದೋಘ ಸಾಗರ~. ಆದರೆ ಕೃತಿಯ ಮೇಲೆ ಅಚ್ಚಾಗಿರುವ ಹೆಸರು `ಶಬ್ದಭಾಸ್ಕರ~.
ವಿಷಯಾನುಕ್ರಮಣಿಕೆಯಲ್ಲಿ ಅಕ್ಷರ ಖಂಡವು, ಶಬ್ದ ಖಂಡವು ಮತ್ತು ವಾಕ್ಯ ಖಂಡವು ಎಂಬ ಮೂರು ಅಧ್ಯಾಯಗಳಿದ್ದು ಭಾಷೆಯ ಮೂರೂ ನೆಲೆಗಳಾದ ಅಕ್ಷರ, ಶಬ್ದ ಮತ್ತು ವಾಕ್ಯ ವಿಚಾರಗಳನ್ನು ಕುರಿತ ನಿರೂಪಣೆಯಿದೆ. ಕನ್ನಡ-ತೆಲುಗು ಭಾಷೆಗಳಿಗೆ ಸಾಮಾನ್ಯವಾಗಿ ಬಳಸುತ್ತಿದ್ದ ಏಕರೂಪದ ಲಿಪಿಯನ್ನು ಮುದ್ರಣದಲ್ಲಿ ಬಳಸಲಾಗಿದೆ.

`ಶಬ್ದಭಾಸ್ಕರ~ದ ವಿಷಯಗಳನ್ನು ಕುರಿತು ಒಂದು ಷಟ್ಪದಿಯಲ್ಲಿ ವಿವರಿಸುವುದು ಹೀಗೆ:

ಬಾಲರಿಗೆ ಸುಖಬೋಧೆಗಾಗಿಯೆ
ಲಾಲಿತದಿ ಪೇಳುವೆನು ವರ್ಣದ
ಜಾಲವನು ಸಂಧಿಯನು ದೇಶ್ಯದ ತತ್ಸಮಾದಿಗಳ
ಮೂಲರೂಪಗಳಾ ಕ್ರಿಯಾಪದ
ಜಾಲರೂಪಗಳವ್ಯಯಂಗಳ
ಬಾಳಿಕೆಯ ರೀತಿಗಳನುಸುರ್ವೆಂ ಬುಧರೊಲಿಯುವಂತೆ

ಅಕ್ಷರ ಖಂಡದಲ್ಲಿ ವರ್ಣ ವಿಭಾಗ ಪ್ರಕರಣ ಮತ್ತು ಸಂಧಿ ಪ್ರಕರಣಗಳಿವೆ. ಶಬ್ದ ಖಂಡದಲ್ಲಿ ತತ್ಸಮ ಶಬ್ದ, ತದ್ಭವ ಶಬ್ದ, ದೇಶ್ಯ ಶಬ್ದ, ಹೂಣ ಶಬ್ದ, ಮ್ಲೇಚ್ಛದೇಶ್ಯ ಶಬ್ದ, ಗ್ರಾಮ್ಯ ಶಬ್ದ, ಶಬ್ದ ವಿಭಾಗ, ಸಮಾಸ ಪ್ರಕರಣ, ನಾಮಪದ- ಸರ್ವನಾಮ- ಕ್ರಿಯಾಪದ ಹಾಗೂ ಅವ್ಯಯ ಪ್ರಕರಣಗಳಿವೆ. ವಾಕ್ಯ ಖಂಡದಲ್ಲಿ ಆಖ್ಯಾತ ಪ್ರಕರಣ, ವಿಶೇಷ್ಯಾದಿ ಪ್ರಕರಣ, ಕಾರಕ ಪ್ರಕರಣ, ಉಪಪ್ರಕರಣಗಳೆಂಬ ಪ್ರಕರಣಗಳಿವೆ.

ಈ ಪುಸ್ತಕವು ಸಾಂಪ್ರದಾಯಿಕ ವ್ಯಾಕರಣಗಳನ್ನೇ ಅನುಸರಿಸಿದ್ದರೂ, ಕೃತಿಕಾರರು ಅನೇಕ ಉಪಯುಕ್ತ ಪಟ್ಟಿಗಳನ್ನು ನೀಡಿರುವುದು ಆಧುನಿಕತೆಯ ಪ್ರಭಾವದಿಂದಲೇ. ಸಂಸ್ಕೃತ, ಪ್ರಾಕೃತ, ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳ ತೌಲನಿಕ ವರ್ಣಮಾಲೆಗಳ ಪಟ್ಟಿ, ಕನ್ನಡ ಶಬ್ದಗಳ ರೂಪಮಾಲೆ, ಪುರುಷತ್ರಯ ರೂಪಮಾಲೆ, ಸರ್ವನಾಮಗಳ ವಿಭಕ್ತಿರೂಪಮಾಲೆ, ಸಂಖ್ಯಾ ಪರಿಮಾಣ ವಾಚಕ ರೂಪಮಾಲೆ, ನಾಮಾತ್ಮಕ ಕ್ರಿಯಾಪದಗಳ ರೂಪಮಾಲೆ, ಭಾವರೂಪಗಳು, ಧಾತುಗಳ ಮುಂದೆ ಬರುವ ಪ್ರತ್ಯಯ ಮಾಲೆ, ಮುಂತಾದುವುಗಳ ವಿವರವಾದ ಪಟ್ಟಿ ಕೃತಿಕಾರರ ನಿಶಿತಮತಿ ಹಾಗೂ ಬಹುಶ್ರುತತ್ವಕ್ಕೆ ನಿದರ್ಶನವಾಗಿದೆ.


ಆಧುನಿಕ ಭಾಷಾವಿಜ್ಞಾನಿಗೆ ಇರಬಹುದಾದ ಸೂಕ್ಷ್ಮಜ್ಞತೆ, ಒಳನೋಟ ಹಾಗೂ ಶಿಸ್ತಿನ ಅಂಶಗಳನ್ನು ಕೃತಿಯ ಕೆಲವು ಭಾಗಗಳಲ್ಲಿ ಗಮನಿಸಬಹುದು. ಈ ವ್ಯಾಕರಣ ಗ್ರಂಥ ವಿದ್ಯಾರ್ಥಿಗಳಿಗಿಂತ ವಿಶೇಷವಾಗಿ ಅಧ್ಯಾಪಕರಿಗೆ ಹೆಚ್ಚು ಉಪಯುಕ್ತ.
 
ಕನ್ನಡ ಭಾಷೆಯ ಕಲಿಕೆ, ಬೋಧನೆ ಹಾಗೂ ಅಭಿವ್ಯಕ್ತಿಯ ದೃಷ್ಟಿಯಿಂದ 19ನೇ ಶತಮಾನದಲ್ಲಿ ಹಲವಾರು ಉಪಯುಕ್ತ ವ್ಯಾಕರಣ ಗ್ರಂಥಗಳೂ ನಿಘಂಟುಗಳೂ ರಚನೆಗೊಂಡವು. ಈ ನಿಟ್ಟಿನಲ್ಲಿ `ಶಬ್ದಭಾಸ್ಕರ~ ದೇಸಿ ವಿದ್ವಾಂಸರೊಬ್ಬರಿಂದ ರಚಿತವಾದ ಒಂದು ಮಹತ್ವದ ಕೃತಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT