ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪೌಷ್ಟಿಕ ಮಕ್ಕಳ ಆಕ್ರಂದನ

Last Updated 4 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಕಳೆದ ಒಂದೂವರೆ ತಿಂಗಳ ಅವಧಿಯಲ್ಲಿ ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನಲ್ಲಿ ಮಹಾಲಕ್ಷ್ಮಿ, ಆಂಜನೇಯ ಮತ್ತು ನಾಗರಾಜ್ ಎನ್ನುವ ಮಕ್ಕಳು ಅಪೌಷ್ಟಿಕತೆಗೆ ತುತ್ತಾಗಿ ಮೃತಪಟ್ಟಿದ್ದಾರೆ. ಚಿನ್ನದ ನಾಡು-ಭತ್ತದ ಕಣಜ ಎಂದೇ ಖ್ಯಾತಿಯಾಗಿರುವ ರಾಯಚೂರು ಜಿಲ್ಲೆಯಲ್ಲಿ 2009 ರಲ್ಲಿ 84 ಮಕ್ಕಳು, 2010 ರಲ್ಲಿ 1233 ಮತ್ತು 2011 ಜನವರಿಯಿಂದ ಆಗಸ್ಟ್ ತಿಂಗಳ ಅವಧಿಯಲ್ಲಿ 645 ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಸಾವಿಗೀಡಾಗಿರುವುದನ್ನು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಂಕಿ-ಅಂಶಗಳು ದೃಢಪಡಿಸುತ್ತವೆ. ಆದರೆ, ಅಪೌಷ್ಟಿಕತೆಯ ಕರಾಳ ಛಾಯೆ ಕೇವಲ ರಾಯಚೂರು ಜಿಲ್ಲೆಗೆ ಮಾತ್ರ ಸೀಮಿತವಾಗಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಮಕ್ಕಳ ವಯಸ್ಸು ಮತ್ತು ತೂಕದ ಆಧಾರದ ಮೇಲೆ ಮಕ್ಕಳ ಬೆಳವಣಿಗೆಯನ್ನು ಗ್ರೇಡ್ ಆಧಾರದ ಮೇಲೆ ಗುರುತಿಸಲಾಗುತ್ತದೆ. ಅದರ ಪ್ರಕಾರ ಸಾಮಾನ್ಯ, ಸಾಧಾರಣ ಮತ್ತು ತೀವ್ರ ಕಡಿಮೆ ತೂಕ ಹೊಂದಿರುವ ಮಕ್ಕಳೆಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳು ಮಕ್ಕಳ ಆರೋಗ್ಯದ ಬೆಳವಣಿಗೆಯನ್ನು ನಿರ್ಧರಿಸುತ್ತಿವೆ. ಈ ಎರಡೂ ಇಲಾಖೆಗಳ ಮಾಹಿತಿಯ ಅನ್ವಯ, ರಾಯಚೂರು ಜಿಲ್ಲೆಯಲ್ಲಿ 4531, ಬಾಗಲಕೋಟೆ ಜಿಲ್ಲೆಯಲ್ಲಿ 8957, ಬೆಳಗಾವಿ ಜಿಲ್ಲೆಯಲ್ಲಿ 7016, ಬಳ್ಳಾರಿ ಜಿಲ್ಲೆಯಲ್ಲಿ 6411, ಬಿಜಾಪುರ ಜಿಲ್ಲೆಯಲ್ಲಿ 8953, ದಾವಣಗೆರೆ ಜಿಲ್ಲೆಯಲ್ಲಿ 3724, ಹಾವೇರಿ ಜಿಲ್ಲೆಯಲ್ಲಿ 4537, ಕೊಪ್ಪಳ ಜಿಲ್ಲೆಯಲ್ಲಿ 4085, ಮೈಸೂರು ಜಿಲ್ಲೆಯಲ್ಲಿ 1097 ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ 1486 ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಈ ಕೆಲವು ಜಿಲ್ಲೆಗಳ ತೀವ್ರ ಅಪೌಷ್ಟಿಕತೆ ಹೊಂದಿರುವ 6 ವರ್ಷದೊಳಗಿನ ಮಕ್ಕಳ ಅಂಕಿ ಅಂಶಗಳನ್ನು ಗಮನಿಸಿದಾಗ, ಇದೊಂದು ರಾಜ್ಯವ್ಯಾಪಿ ಸಮಸ್ಯೆಯಾಗಿದ್ದು, ಹೈದ್ರಾಬಾದ್ ಮತ್ತು ಮುಂಬೈ ಕರ್ನಾಟಕದ ಜಿಲ್ಲೆಗಳಲ್ಲಿ ಅತ್ಯಧಿಕ ಪ್ರಮಾಣದಲ್ಲಿರುವುದು ಸ್ಪಷ್ಟವಾಗುತ್ತದೆ.

ರಾಜ್ಯದ 30 ಜಿಲ್ಲೆಗಳಲ್ಲಿ 2100818 ಮಕ್ಕಳು ಸಹಜ ತೂಕ, 1129947 ಮಕ್ಕಳು ಸಾಧಾರಣ ತೂಕ ಮತ್ತು 71605 ಮಕ್ಕಳು ಅತೀ ಕಡಿಮೆ ತೂಕದವರಾಗಿದ್ದಾರೆ. ಸಾಮಾಜಿಕ ಮತ್ತು ಆರೋಗ್ಯ ಕಾರ್ಯಕರ್ತರ ಪರಿಭಾಷೆಯಲ್ಲಿ ಸಾಧಾರಣ ತೂಕದ ಮಕ್ಕಳೆಂದರೆ ಸಾವಿನೆಡೆಗೆ ಹೆಜ್ಜೆ ಹಾಕುತ್ತಿರುವ ಮಕ್ಕಳು.  ಪ್ರಸ್ತುತ 71605 ಮಕ್ಕಳು ತಮ್ಮ ಬದುಕಿನ ಅಂತಿಮ ಕ್ಷಣಗಳನ್ನು ಎದುರಿಸುತ್ತಿದ್ದು, ಅವರಲ್ಲಿ 33039 ಗಂಡು ಹಾಗೂ 38566 ಹೆಣ್ಣು ಮಕ್ಕಳಿದ್ದಾರೆ.

ವಾಸ್ತವಿಕವಾಗಿ ಈ ಅಂಕಿ-ಅಂಶಗಳು ರಾಜ್ಯದ ಅಪೌಷ್ಟಿಕ ಮಕ್ಕಳ ಪರಿಪೂರ್ಣ ಮಾಹಿತಿಯನ್ನು ಪ್ರತಿಬಿಂಬಿಸುವುದಿಲ್ಲ. ಬದಲಾಗಿ ರಾಜ್ಯದ 63377 ಅಂಗನವಾಡಿ ಕೇಂದ್ರಗಳಿಗೆ ಹೋಗುತ್ತಿರುವ 6 ವರ್ಷದೊಳಗಿನ ಮಕ್ಕಳಿಗೆ ಮಾತ್ರ ಸಂಬಂಧಿಸಿದ ಮಾಹಿತಿಯನ್ನು ಪ್ರತಿಬಿಂಬಿಸುತ್ತವೆ. 2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ 68 ಲಕ್ಷ 6 ವರ್ಷದೊಳಗಿನ ಮಕ್ಕಳಿದ್ದು, ಅವರಲ್ಲಿ ಶೇ 40 ರಷ್ಟು ಮಕ್ಕಳು ಅಂಗನವಾಡಿ ಕೇಂದ್ರಗಳಿಗೆ ದಾಖಲಾಗೇ ಇಲ್ಲ! ಅಂಗನವಾಡಿ ಕೇಂದ್ರಗಳಿಂದ ಹೊರಗುಳಿದಿರುವ ಈ ಮಕ್ಕಳ ಬೆಳವಣಿಗೆಯ ಗ್ರೇಡನ್ನು ದಾಖಲಿಸಲು ಅಂಗನವಾಡಿ ಕಾರ್ಯಕರ್ತೆಯರು, ಆಕ್ಸಿಲರಿ ನರ್ಸುಗಳು (ಎ.ಎನ್.ಎಮ್.ಗಳು) ಮತ್ತು ಆಶಾ ಕಾರ್ಯಕರ್ತೆಯರು ಆಸಕ್ತಿ ವಹಿಸುತ್ತಿಲ್ಲ ಎನ್ನುವುದಕ್ಕಿಂತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ನಡುವೆ ಸಮರ್ಪಕವಾದ ಸಂಯೋಜನೆ ಇಲ್ಲವೆಂದೇ ಹೇಳಬಹುದು. ಪರಿಣಾಮವಾಗಿ ರಾಜ್ಯದಲ್ಲಿರುವ ಅಪೌಷ್ಟಿಕ ಮಕ್ಕಳ ಸಮಗ್ರ ಮಾಹಿತಿಯೇ ಸರ್ಕಾರದ ಬಳಿ ಇಲ್ಲವಾಗಿದೆ.

ಮತ್ತೊಂದೆಡೆ, ಮಹಾಲಕ್ಷ್ಮಿ, ಆಂಜನೇಯ ಮತ್ತು ನಾಗರಾಜನಂಥ ಮಕ್ಕಳು ಪೌಷ್ಟಿಕ ಆಹಾರದ ಕೊರತೆಯಿಂದಲೇ ಸಾವಿಗೀಡಾಗಿದ್ದಾರೆ ಎನ್ನುವ ಕಹಿ ಸತ್ಯವನ್ನು ಒಪ್ಪಿಕೊಳ್ಳಲು ಸರ್ಕಾರ ಸಿದ್ಧವಿಲ್ಲ. ಬಾಲ್ಯವಿವಾಹ, ರಕ್ತ ಸಂಬಂಧಗಳಲ್ಲಿ ಮದುವೆಯಾಗುವುದು, ಮೂಢನಂಬಿಕೆ ಮತ್ತಿತರ ಕಾಯಿಲೆಗಳಿಂದಲೇ ಮಕ್ಕಳು ಸಾವನ್ನಪ್ಪಿವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳು ಪ್ರತಿಪಾದಿಸುತ್ತಿವೆ. ಮಗದೊಂದೆಡೆ ಬಾಲ ವಿಕಾಸ, ಬಾಲಸಂಜೀವಿನಿ, ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ ಮುಂತಾದ ಯೋಜನೆಗಳ ಕೋಟ್ಯಂತರ ಅನುದಾನವಿದ್ದರೂ ಅರ್ಹ ಮಕ್ಕಳ ಪೋಷಣೆ ಮತ್ತು ವೈದ್ಯಕೀಯ ಚಿಕಿತ್ಸೆಗೆ ಸಕಾಲದಲ್ಲಿ ನೆರವು ದೊರೆಯಲಿಲ್ಲ.

ಹಸಿವು, ಅಪೌಷ್ಟಿಕತೆಗೆ ಕೇವಲ ಮಕ್ಕಳಲ್ಲದೇ ಗರ್ಭಿಣಿಯರು ಮತ್ತು ಬಾಣಂತಿಯರು ಕೂಡ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇವರಲ್ಲಿ ಬಹುಸಂಖ್ಯಾತರು ದಲಿತ, ಆದಿವಾಸಿ ಮತ್ತು ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದವರಾಗಿರುವುದರಿಂದ ಈ ಸಮಸ್ಯೆಯನ್ನು ಸರ್ಕಾರ, ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಯನ್ನಾಗಿ ಪರಿಗಣಿಸಬೇಕಾಗಿದೆ.

ಜಾಗತಿಕ ಹಸಿವಿನ ಸೂಚ್ಯಂಕದ ಪ್ರಕಾರ, ಜಗತ್ತಿನಲ್ಲಿ ಅತೀ ಹೆಚ್ಚು ಕಡುಬಡವರಿರುವ ರಾಷ್ಟ್ರಗಳಲ್ಲಿ ಭಾರತದ ಸ್ಥಾನ 66. ಭಾರತದ ಹಸಿವಿನ ಸೂಚ್ಯಂಕದ ಪ್ರಕಾರ, ತೀವ್ರ ಹಸಿವಿನ ಸಮಸ್ಯೆಯನ್ನು ಎದುರಿಸುತ್ತಿರುವ ರಾಜ್ಯಗಳಲ್ಲಿ ಕರ್ನಾಟಕ 11ನೇ ಸ್ಥಾನದಲ್ಲಿದ್ದು ಉತ್ತರ ಪ್ರದೇಶ, ರಾಜಸ್ಥಾನಗಳಿಗಿಂತಲೂ ಕೆಳಹಂತದಲ್ಲಿದೆ. ರಾಷ್ಟ್ರೀಯ ಮಾದರಿ ಸಮೀಕ್ಷೆ ಸಂಘಟನೆ (ಎನ್.ಎಸ್.ಎಸ್.ಒ.) ಸಮೀಕ್ಷೆಯನ್ವಯ ಭಾರತದ ಶೇ 77 ರಷ್ಟು ಜನರಿಗೆ, ಸರ್ಕಾರ ಒಂದು ದಿನಕ್ಕೆ ಒಬ್ಬ ವ್ಯಕ್ತಿಗೆ ನಿಗದಿಪಡಿಸಿರುವ 2400 ಕ್ಯಾಲೊರಿ ಪೋಷಕಾಂಶವಿರುವ ಆಹಾರವನ್ನು ಒದಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಮ್ಮ ದೇಶದ ಶೇ 65 ರಷ್ಟು ಮಕ್ಕಳ ಸಾವಿಗೆ ಪೌಷ್ಟಿಕ ಆಹಾರದ ಕೊರತೆಯೇ ಕಾರಣವೆಂದು ಹೇಳಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ, ಮಕ್ಕಳ ಆರೋಗ್ಯ ಮತ್ತು ವ್ಯಕ್ತಿತ್ವವನ್ನು ರೂಪಿಸುವ ಪ್ರಕ್ರಿಯೆಯಲ್ಲಿ ಅಂಗನವಾಡಿ ಕೇಂದ್ರಗಳ ಪಾತ್ರ ಮತ್ತು ಜವಾಬ್ದಾರಿ ಮಹತ್ವದ್ದಾಗಿದೆ. ಬಾಲ್ಯದಿಂದಲೇ ಮಕ್ಕಳ ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆಗೆ ಪೂರಕವಾದ ಪೌಷ್ಟಿಕ ಆಹಾರ ಹಾಗೂ ಶಾಲಾ ಪೂರ್ವ ಶಿಕ್ಷಣವನ್ನು ಒದಗಿಸುವುದರ ಮೂಲಕ ಅರಂಭಿಕ ಹಂತದಿಂದಲೇ ಮಕ್ಕಳ ವ್ಯಕ್ತಿತ್ವವನ್ನು ವಿಕಸನಗೊಳಿಸಬೇಕಾಗಿರುವ ಅಂಗನವಾಡಿ ಕೇಂದ್ರಗಳು ಮೂಲಭೂತ ಸೌಲಭ್ಯಗಳ ಕೊರತೆ ಹಾಗೂ ಸಿದ್ಧಪಡಿಸಿದ ಪೊಟ್ಟಣ ಆಹಾರದಿಂದ (ಪ್ರೀ ಪ್ಯಾಕ್ಡ್ ಫುಡ್), ಮಕ್ಕಳ ಬೆಳವಣಿಗೆಗೆ ತಡೆಗೋಡೆಯಾಗಿರುವುದು ವಿಷಾದನೀಯವಾಗಿದೆ.

ಅಂಗನವಾಡಿ ಕೇಂದ್ರಗಳಲ್ಲಿ ಈ ಹಿಂದೆ ಸ್ಥಳೀಯ ಆಹಾರ ಪದಾರ್ಥಗಳು ಮತ್ತು ತರಕಾರಿಗಳಿಂದ ತಯಾರಿಸಿದ ತಾಜಾ ಆಹಾರವನ್ನು ಮಕ್ಕಳಿಗೆ ಬಡಿಸಲಾಗುತ್ತಿತ್ತು. ಕಳೆದ ಎರಡೂವರೆ ವರ್ಷದ ಹಿಂದೆ ಜಾರಿಗೆ ಬಂದ ಸಿಹಿ ಗೋಧಿ ರವೆ, ಕಾರದ ಅಕ್ಕಿ ರವೆ, ಬಿಸಿ ಬೇಳೆಬಾತ್ ಮಸಾಲ ಮಿಶ್ರಣ ಮತ್ತು ಕುರ್‌ಕುರೇಯಂಥ ಸಿದ್ಧಪಡಿಸಿದ ಪೂರಕ ಪೌಷ್ಟಿಕ ಆಹಾರ ಮಕ್ಕಳ ಆರೋಗ್ಯದ ಮೇಲೆ ಕಿರಿಕಿರಿಯನ್ನುಂಟು ಮಾಡುತ್ತಿದೆ.  ಪರಿಣಾಮವಾಗಿ ಲಕ್ಷಾಂತರ ಪೋಷಕರು ತಮ್ಮ ಮಕ್ಕಳನ್ನು ಅಂಗನವಾಡಿ ಕೇಂದ್ರಗಳಿಗೆ ಕಳುಹಿಸಲು ಆತಂಕ ಪಡುತ್ತಿದ್ದಾರೆ. ಮಕ್ಕಳ ಹಕ್ಕುಗಳಿಗಾಗಿ ಶ್ರಮಿಸುತ್ತಿರುವ ಸಾಮಾಜಿಕ ಪರಿವರ್ತನಾ ಜನಾಂದೋಲನ ಎನ್ನುವ ಜನಪರ ಸಂಘ ಸಂಸ್ಥೆಗಳ ಮೈತ್ರಿಯು ಕೋಲಾರ, ಕೆ.ಜಿ.ಎಫ್., ಚಿಕ್ಕಬಳ್ಳಾಪುರ, ದಾವಣಗೆರೆ, ರಾಯಚೂರು, ಬಿಜಾಪುರ ಹಾಗೂ ಗುಲ್ಬರ್ಗಾ ಜಿಲ್ಲೆಗಳಲ್ಲಿ ಸಾರ್ವಜನಿಕ ಅಹವಾಲುಗಳನ್ನು ನಡೆಸಿ, ಅಂಗನವಾಡಿ ಕೇಂದ್ರಗಳ ಪೂರಕ ಪೌಷ್ಟಿಕ ಆಹಾರದ ವಿರುದ್ಧವಿರುವ ಜನಾಭಿಪ್ರಾಯವನ್ನು ಸರ್ಕಾರದ ಗಮನಕ್ಕೆ ತಂದರೂ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ. ಇದೇ ವಿಷಯದ ಕುರಿತು ರಾಜ್ಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗ ಸಲ್ಲಿಸಿದ ವರದಿ ಮತ್ತು ಶಿಫಾರಸ್ಸಿಗೆ ಬೆಲೆ ದೊರೆತಿಲ್ಲ.
ನೆರೆಯ ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೇರಳ ರಾಜ್ಯಗಳಲ್ಲಿನ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಇಂದಿಗೂ ಸ್ಥಳಿಯ ಆಹಾರ ಪದ್ಧತಿಗನುಗುಣವಾಗಿ, ಬೇಯಿಸಿದ ತಾಜಾ ಪೌಷ್ಟಿಕ ಆಹಾರವನ್ನೇ ಒದಗಿಸಲಾಗುತ್ತಿದೆ. ಅಂಗನವಾಡಿ ಕೇಂದ್ರಗಳಲ್ಲಿ ಬೇಯಿಸಿ ತಯಾರಿಸಿದ ತಾಜಾ ಆಹಾರವನ್ನೇ ಕಡ್ಡಾಯವಾಗಿ ಮಕ್ಕಳಿಗೆ ಪೂರೈಸಬೇಕೆಂಬ 2004ರ ಸರ್ವೋಚ್ಚ ನ್ಯಾಯಾಲಯದ ಆಜ್ಞೆಯನ್ನೇ ಧಿಕ್ಕರಿಸಿ. ಕರ್ನಾಟಕ ಸರ್ಕಾರ ತಮಿಳುನಾಡು ಮೂಲದ `ಕ್ರಿಸ್ಟಿಫ್ರೈಡ್ ಗ್ರಾಂ ಇಂಡಸ್ಟ್ರಿ~ ಎನ್ನುವ ಖಾಸಗಿ ಕಂಪೆನಿಯೊಂದಿಗೆ ಸಿದ್ಧಪಡಿಸಿದ ಪೊಟ್ಟಣದ ಆಹಾರವನ್ನು ಪೂರೈಸುವ ಒಪ್ಪಂದ ಮಾಡಿಕೊಂಡಿದೆ.  ರಾಜ್ಯದ ಅಂಗನವಾಡಿ ಕೇಂದ್ರಗಳಿಗೆ 2011-12ನೇ ಸಾಲಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ  102014.06 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದ್ದು, ಪೌಷ್ಟಿಕ ಆಹಾರಕ್ಕೆಂದೇ 61914.30 ಕೋಟಿ ರೂಪಾಯಿ ನಿಗದಿ ಪಡಿಸಲಾಗಿದೆ.

ಮಕ್ಕಳಿಗೆ ವಿತರಿಸುವ ಪೂರಕ ಪೌಷ್ಟಿಕ ಆಹಾರವನ್ನು ಮಾತೃ ಸ್ಥಾನದಲ್ಲಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವ್ಯಾವಹಾರಿಕ ದೃಷ್ಟಿಕೋನದಿಂದ ನೋಡದೆ, ತಾಯಿಯ ಕರುಳಿನ ಮಮತೆಯಿಂದ ಕಾಣಬೇಕಾಗಿದೆ. ಇದೇ ಆಹಾರ ಗರ್ಭಿಣಿ ಮತ್ತು ಬಾಣಂತಿ ಸ್ತ್ರೀಯರಿಗೆ ಹಾಗೂ ವಿಕಲ ಚೇತನ ಮಕ್ಕಳಿಗೂ ಒದಗಿಸುತ್ತಿರುವುದರಿಂದ ಪೌಷ್ಟಿಕ ಆಹಾರ ತಜ್ಞರನ್ನು, ಆರೋಗ್ಯ ಇಲಾಖೆಯ ತಜ್ಞ ವೈದ್ಯಾಧಿಕಾರಿಗಳನ್ನು ಮತ್ತು ಮಕ್ಕಳ ಹಕ್ಕುಗಳಿಗಾಗಿ ಕಾರ್ಯನಿರ್ವಹಿಸುತ್ತಿುವ ಜನಪರ ಸಂಘ ಸಂಸ್ಥೆಗಳ ಪ್ರತಿನಿಧಿಗಳನ್ನೊಳಗೊಂಡ ಸಮಿತಿಯ ಮೂಲಕ ಅಪೌಷ್ಟಿಕತೆಯ ನಿರ್ಮೂಲನೆಗಾಗಿ ಸಮಗ್ರವಾದ ದೀರ್ಘಾವಧಿ ಯೋಜನೆಯನ್ನು ರೂಪಿಸಬೇಕಾಗಿದೆ. ಪ್ರಸ್ತುತ ಒಂದು ದಿನಕ್ಕೆ ಒಂದು ಮಗುವಿಗೆ ಪೂರಕ ಪೌಷ್ಟಿಕ ಆಹಾರವನ್ನು ಪೂರೈಸಲು ಕೇವಲ 4 ರೂಪಾಯಿ ಅನುದಾನವಿದ್ದು, ಅದನ್ನು ಕನಿಷ್ಠ 10 ರೂಪಾಯಿಗೆ ಪರಿಷ್ಕರಿಸಬೇಕಾಗಿದೆ.

ಈ ಪ್ರಕ್ರಿಯೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕೇಂದ್ರಗಳೆರಡೂ ಮುಕ್ತ ಮನಸ್ಸಿನಿಂದ ತೆರೆದುಕೊಂಡು, ಅಮೂಲಾಗ್ರ ಬದಲಾವಣೆಗಾಗಿ ಪರಸ್ಪರ ಕೈ ಜೋಡಿಸಬೇಕು. ಆಗ ಮಾತ್ರ ಅಪೌಷ್ಟಿಕತೆಯನ್ನು ಕ್ರಮೇಣ ನಿರ್ಮೂಲನೆಗೊಳಿಸಿ, ಸದೃಢ ಮಾನವ ಸಂಪನ್ಮೂಲವನ್ನು ಬಾಲ್ಯದ ಹಂತದಿಂದಲೇ ರೂಪಿಸಲು ಸಾಧ್ಯ. ಈಗಲಾದರೂ ಸರ್ಕಾರ ಸಾವಿನ ದವಡೆಯಲ್ಲಿರುವ ಅಪೌಷ್ಟಿಕ ಮಕ್ಕಳ ಆಕ್ರಂದನಕ್ಕೆ ಕಿವಿಗೊಡುವುದೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT